
ಅಲ್ಪಾವಧಿ ತಳಿ ರಾಗಿ ಬಿತ್ತನೆಗೆ ಮನವಿ, ಮಳೆ ಕೊರತೆ ಹಿನ್ನೆಲೆ
ಚಿಕ್ಕಬಳ್ಳಾಪುರ: ಪ್ರಸ್ತುತ ಮುಂಗಾರಿನಲ್ಲಿ ಜಿಲ್ಲೆಯಲ್ಲಿ ಜೂನ್ ಮತ್ತು ಜುಲೈನಲ್ಲಿ ವಾಡಿಕೆ ಮಳೆ ಸುರಿದಿಲ್ಲ. ಆಗಸ್ಟ್ ಪ್ರಾರಂಭದಿಂದ ಚದುರಿದಂತೆ ಅಲ್ಪ ಪ್ರಮಾಣದಲ್ಲಿ ಮಳೆ ಆಗುತ್ತಿದೆ. ಆದ ಕಾರಣ ಜಿಲ್ಲೆಯಾದ್ಯಂತ ರೈತರು ಈಗಾಗಲೇ ರೈತ ಸಂಪರ್ಕ ಕೇಂದ್ರಗಳಿಂದ ಅಥವಾ ತಮ್ಮಲ್ಲೇ ದಾಸ್ತಾನಿರುವ ಎಂಆರ್ ತಳಿಯ ರಾಗಿಯಿಂದ ಬಿತ್ತನೆ ಮಾಡುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ.
ಆದರೆ ಈ ತಳಿಗಳು ದೀರ್ಘಾವಧಿಯ (125 ದಿನಗಳು) ತಳಿಯಾಗಿದೆ. ಮುಂಗಾರಿನ ಅಂತ್ಯದಲ್ಲಿ ಬಿತ್ತನೆಗೆ ಸೂಕ್ತವಲ್ಲ. ಬೆಳೆಯ ಸಂದಿಗ್ಧ ಹಂತಗಳಲ್ಲಿ ತೇವಾಂಶದ ಕೊರತೆ ಹಾಗೂ ಕಡಿಮೆ ಉಷ್ಣಾಂಶದ ಕಾರಣ ಇಳುವರಿಯಲ್ಲಿ ಗಣನೀಯ ಪ್ರಮಾಣದಲ್ಲಿ ಕುಂಠಿತವಾಗುವ ಸಂಭವವಿದೆ. ಆದ ಕಾರಣ ತಡವಾದ ಮುಂಗಾರಿಗೆ ಸೂಕ್ತವಾದ ಮಧ್ಯಮಾವಧಿ (105 ರಿಂದ 110 ದಿನಗಳು) ರಾಗಿ ತಳಿಗಳಾದ ಜಿಪಿಯು 28, ಕೆಎಂಆರ್ 301, ಎಂಎಲ್ 365 ಅಥವಾ ಅಲ್ಫಾವಧಿ (95 ರಿಂದ 105 ದಿನಗಳು) ತಳಿಗಳಾದ ಜಿಪಿಯು 45, ಜಿಪಿಯು 48, ಜಿಪಿಯು 26, ಕೆಎಂಆರ್ 204 ತಳಿಯ ರಾಗಿಯನ್ನು ಬಿತ್ತನೆಗೆ ಉಪಯೋಗಿಸಬೇಕು. ಸದರಿ ತಳಿಗಳು ಮಳೆಯಾಶ್ರಿತದಲ್ಲಿ ಪ್ರತಿ ಎಕರೆಗೆ 8 ರಿಂದ 10 ಕ್ವಿಂಟಲ್ ಇಳುವರಿ ನೀಡುವ ಸಾಮರ್ಥ್ಯ ಹೊಂದಿರುತ್ತವೆ ಎಂದು ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260815-16-789834512