
14ರ ಮಧ್ಯರಾತ್ರಿಯೇ ಗುಡ್ಡದ ಮೇಲೆ ಧ್ವಜಾರೋಹಣ
ಮುಂಡರಗಿ: ನಾಡು, ನುಡಿ ಹಾಗೂ ರಾಷ್ಟ್ರ ಸೇವೆಯಲ್ಲಿ ತೊಡಗಿರುವ ಪಟ್ಟಣದ ಕನ್ನಡ ಕ್ರಾಂತಿ ಸೇನೆಯ ಕಾರ್ಯಕರ್ತರು ಇಲ್ಲಿಯ ಕನಕರಾಯನ ಗುಡ್ಡದ ಮೇಲೆ ಪ್ರತೀ ವರ್ಷ ಆ.14ರಂದು ಮಧ್ಯರಾತ್ರಿ 12ಗಂಟೆಗೆ ಧ್ವಜಾರೋಹಣ ನೆರವೇರಿಸುತ್ತಿದ್ದಾರೆ.
1994ರಲ್ಲಿ ಸಮಾಜ ಸೇವಕ ಮಂಜುನಾಥ ಇಟಗಿ ಅವರ ನೇತೃತ್ವದಲ್ಲಿ ಸಿದ್ದು ಅಂಗಡಿ, ಆನಂದ ರಾಮೇನಹಳ್ಳಿ, ಶಿವು ನವಲಗುಂದ, ಶ್ರೀನಿವಾಸ ಕಟ್ಟಿಮನಿ, ಎನ್.ವಿ.ಹಿರೇಮಠ, ಮಹಾದೇವ ಡೊಣ್ಣಿ ಮೊದಲಾದವರು ಸೇರಿ ಕನ್ನಡ ಕ್ರಾಂತಿ ಸೇನೆ ಎಂಬ ಸಂಘಟನೆಯನ್ನು ಹುಟ್ಟುಹಾಕಿದರು. ಅಂದಿನಿಂದ ಕಾರ್ಯಕರ್ತರು ಹಲವಾರು ಸಮಾಜಮುಖಿ ಕಾರ್ಯ ಕೈಗೊಳ್ಳುತ್ತಿದ್ದಾರೆ.
ಈ ಕ್ರಾಂತಿ ಸೇನೆಯ ಯುವಕರ ಬಳಗವು 30ವರ್ಷಗಳ ಹಿಂದೆ ಒಂದು ದಿನ ಕನಕರಾಯನ ಗುಡ್ಡದ ಮೇಲೆ ಶಿಥಿಲಾವಸ್ಥೆಯಲ್ಲಿದ್ದ ಕೋಟೆಯ ಬುರುಜುಗಳ (ಕಾವಲು ಗೋಪುರ) ಸ್ವಚ್ಛತೆಗೆ ಮುಂದಾದರು. ನಮ್ಮ ದೇಶಕ್ಕೆ ನೈಜವಾಗಿ ಸ್ವಾತಂತ್ರ ದೊರಕಿದ್ದು ಆ.14ರ ಮಧ್ಯರಾತ್ರಿಯಾಗಿದ್ದು, ನಾವು ಆ.14ರ ಮದ್ಯರಾತ್ರಿಯೇ ಏಕೆ ಧ್ವಜಾರೋಹಣ ಮಾಡಬಾರದು ಎನ್ನುವ ವಿಚಾರ ಆಕಸ್ಮಿಕವಾಗಿ ಯುವಕರಲ್ಲಿ ಮೂಡಿತು.
ಅದಕ್ಕೆ ಎಲ್ಲ ಕಾರ್ಯಕರ್ತರೂ ಸಹಮತ ವ್ಯಕ್ತಪಡಿಸಿದರು. ಅಂದು ಕೇವಲ ಏಳು ಜನ ಕಾರ್ಯಕರ್ತರಿಂದ ಆರಂಭವಾದ ಮದ್ಯರಾತ್ರಿಯ ಧ್ವಜಾರೋಹಣವು ಇಂದು ಜನಮನ್ನಣೆ ಗಳಿಸಿದ್ದು, ಇಂದು ನೂರಾರು ಜನರು ಮದ್ಯರಾತ್ರಿ ಜರುಗುವ ಸಮಾರಂಭದಲ್ಲಿ ಪಾಲ್ಗೊಳ್ಳುತಿದ್ದಾರೆ.
ಧ್ವಜಾರೋಹಣದ ನಂತರ ದೇಶಸೇವೆ ಸಲ್ಲಿಸದ ಯೋಧರನ್ನು, ಸೈನಿಕರನ್ನು, ಸಮಾಜ ಸೇವಕರನ್ನು ಗುರುತಿಸಿ ಸ್ವಂತ ಖರ್ಚಿನಿಂದ ಸನ್ಮಾನಿಸತೊಡಗಿದ್ದಾರೆ.
ಯುವಕರಲ್ಲಿ ದೇಶಪ್ರೇಮ ಮೂಡಿಸುವ ಉದ್ದೇಶದಿಂದ ಪ್ರತೀವರ್ಷ ಆ.14ರಂದು ಮಧ್ಯರಾತ್ರಿ ಧ್ವಜಾರೋಹಣ ನೆರವೇರಿಸಲಾಗುತ್ತಿದೆ
ಕನ್ನಡ ಕ್ರಾಂತಿ ಸೇನೆಯ ಸಂಸ್ಥಾಪಕ ಅಧ್ಯಕ್ಷ ಮಂಜುನಾಥ ಇಟಗಿ
ಮಧ್ಯರಾತ್ರಿ ಧ್ವಜಾರೋಹಣವು ಯುವಕರಲ್ಲಿ ನಾಡು, ನುಡಿ ಹಾಗೂ ದೇಶಪ್ರೇಮ ಹೆಚ್ಚಿಸಿದೆ.
ಮಂಜುನಾಥ ಮುಧೋಳ, ಕನ್ನಡ ಕ್ರಾಂತಿ ಸೇನೆ ಅಧ್ಯಕ್ಷ