ಯಲಹಂಕ | ತ್ಯಾಜ್ಯಗಳಿಂದ ದುರ್ವಾಸನೆ: ಜನರ ಪರದಾಟ

ಯಲಹಂಕ | ತ್ಯಾಜ್ಯಗಳಿಂದ ದುರ್ವಾಸನೆ: ಜನರ ಪರದಾಟ

ಯಲಹಂಕ | ತ್ಯಾಜ್ಯಗಳಿಂದ ದುರ್ವಾಸನೆ: ಜನರ ಪರದಾಟ

ಯಲಹಂಕ: ಬೆಂಗಳೂರು ಉತ್ತರ ನಗರಪಾಲಿಕೆ ವ್ಯಾಪ್ತಿಯ ಬ್ಯಾಟರಾಯನಪುರ ಹಾಗೂ ಯಲಹಂಕ ವಿಭಾಗದ ಹಲವು ಬಡಾವಣೆಗಳಲ್ಲಿ ರಸ್ತೆಬದಿ, ರಾಜಕಾಲುವೆ ಹಾಗೂ ಖಾಲಿ ಜಾಗಗಳಲ್ಲಿ ತ್ಯಾಜ್ಯ ಸುರಿಯುತ್ತಿರುವುದರಿಂದ ದುರ್ವಾಸನೆ, ಸೊಳ್ಳೆಗಳ ಕಾಟ ಹೆಚ್ಚಿದೆ. ವಾಹನ ಸಂಚಾರಕ್ಕೂ ತೊಂದರೆಯಾಗಿದ್ದು, ಸಾರ್ವಜನಿಕರು ನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ. ಮಳೆ ಬಂದರೆ ಸಂಚರಿಸುವುದು ದುಸ್ತರವಾಗುತ್ತದೆ.

ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮುಖ್ಯರಸ್ತೆಯ ಬ್ಯಾಟರಾಯನಪುರದ ಕೋದಂಡರಾಮಸ್ವಾಮಿ ದೇವಸ್ಥಾನ ಸಮೀಪದ ಸರ್ವಿಸ್‌ ರಸ್ತೆಯ ಪಕ್ಕ ರಾತ್ರಿ ವೇಳೆಯಲ್ಲಿ ಹೋಟೆಲ್‌, ಸಲೂನ್‌, ಬ್ಯೂಟಿ ಪಾರ್ಲರ್‌, ಹಿಟ್ಟಿನ ಗಿರಣಿಗಳ ತ್ಯಾಜ್ಯ ಹಾಗೂ ‌ಕೋಳಿ ಮಾಂಸದ ತ್ಯಾಜ್ಯವನ್ನು ಸುರಿಯಲಾಗುತ್ತಿದೆ. ಬೀದಿ ದೀಪಗಳು ಕಡಿಮೆ ಇರುವುದೂ ಅಂಥವರಿಗೆ ಅನುಕೂಲವಾಗಿದೆ.

ತ್ಯಾಜ್ಯ ತಿನ್ನಲು ಬರುವ ಬೀದಿನಾಯಿಗಳು, ಅದನ್ನು ರಸ್ತೆಯುದ್ದಕ್ಕೂ ಎಳೆದಾಡುವುದರಿಂದ ದ್ವಿಚಕ್ರವಾಹನ ಸವಾರರು ಅಪಘಾತಕ್ಕೀಡಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಹದ್ದು-ಕಾಗೆಗಳ ಹಾವಳಿಯೂ ಹೆಚ್ಚಾಗಿದ್ದು, ಇಲಿ-ಹೆಗ್ಗಣಗಳ ಆವಾಸ ಸ್ಥಾನವಾಗಿಯೂ ಮಾರ್ಪಟ್ಟಿದೆ.

‘ಜಕ್ಕೂರಿನ ಜಿಕೆವಿಕೆ ಬಡಾವಣೆಯಿಂದ ಯಲಹಂಕ ಹಾಗೂ ನಗರಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಸಮಾನಾಂತರ ರಸ್ತೆಯಲ್ಲಿ ತ್ಯಾಜ್ಯ ಹೆಚ್ಚಾಗಿದ್ದು, ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂಬುದು ಜಿಕೆವಿಕೆ ಬಡಾವಣೆಯ ನಿವಾಸಿ ವಿ.ನಾಗರಾಜಪ್ಪ ಅವರ ಒತ್ತಾಯ.

‘ಅರ್ಕಾವತಿ ಬಡಾವಣೆಯ 7ನೇ ಬ್ಲಾಕ್‌ನ ಜಕ್ಕೂರು ರಾಜಕಾಲುವೆ ಪಕ್ಕದಲ್ಲೂ ಜನ ಮೂಗು ಮುಚ್ಚಿಕೊಂಡು ಓಡಾಡಬೇಕಾಗಿದೆ. ತ್ಯಾಜ್ಯವನ್ನು ರಾಜಕಾಲುವೆಗೂ ಸುರಿಯಲಾಗುತ್ತಿದೆ. ರಾಜಕಾಲುವೆ ಪಕ್ಕದಲ್ಲಿ ತಡೆಗೋಡೆ ನಿರ್ಮಿಸಬೇಕು’ ಎಂದು ನಿವಾಸಿ ಮಂಜುನಾಥ್ ಆಗ್ರಹಿಸಿದರು.

ಯಲಹಂಕ ಉಪನಗರ ಉಪ ವಿಭಾಗದ ನ್ಯಾಯಾಂಗ ಬಡಾವಣೆ ವಾರ್ಡ್ ವ್ಯಾಪ್ತಿಯ ಅಳ್ಳಾಳಸಂದ್ರ–ಚಿಕ್ಕಬೊಮ್ಮಸಂದ್ರ ಸಂಪರ್ಕ ರಸ್ತೆಯಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಅಳ್ಳಾಳಸಂದ್ರ ಕೆರೆಯ ಹಿಂಭಾಗದ ರಸ್ತೆ ಹಾಗೂ ಚರಂಡಿಯಲ್ಲಿ ತ್ಯಾಜ್ಯ ಹೆಚ್ಚಿದೆ. 

‘ಸಮಸ್ಯಾತ್ಮಕ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ, ಸಮರ್ಪಕ ಬೀದಿದೀಪಗಳ ವ್ಯವಸ್ಥೆ, ನಿಯಮಿತವಾಗಿ ಕಸ ತೆರವುಗೊಳಿಸುವುದು ಹಾಗೂ ಕಸ ಸುರಿಯುವವರ ವಿರುದ್ಧ ಕ್ರಮ ಕೈಗೊಳ್ಳುವುದು ಸದ್ಯದ ತುರ್ತು’ ಎಂದು ನಿವಾಸಿಗಳು ಪ್ರತಿಪಾದಿಸಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ