ಕುದೂರು | ಅನೈತಿಕ ಚಟುವಟಿಕೆ ತಾಣವಾದ ಶಾಲಾ ಕಟ್ಟಡ

ಕುದೂರು | ಅನೈತಿಕ ಚಟುವಟಿಕೆ ತಾಣವಾದ ಶಾಲಾ ಕಟ್ಟಡ

ಕುದೂರು | ಅನೈತಿಕ ಚಟುವಟಿಕೆ ತಾಣವಾದ ಶಾಲಾ ಕಟ್ಟಡ

ಕುದೂರು (ಮಾಗಡಿ): ಹೊಸ ನೀರು ಬಂದಾಗ ಹಳೆ ನೀರು ಕೊಚ್ಚಿ ಹೋದಂತೆ ಎಂಬ ಗಾದೆ ಮಾತಿನ ಅರ್ಥದ ರೀತಿ ಕೆಪಿಎಸ್ ಹೊಸ ಕಟ್ಟಡ ಸಿದ್ಧಗೊಂಡ ಬಳಿಕ ಶಿಕ್ಷಣ ಇಲಾಖೆಯು ಹಳೆಯ ಶಾಲಾ ಕಟ್ಟಡವನ್ನು ಮರೆಯುತ್ತಿದೆ ಎಂಬಂತೆ ಕಂಡುಬರುತ್ತಿದೆ. 

ಹೌದು, ಪಟ್ಟಣದಲ್ಲಿ ಹೊಸ ಕೆಪಿಎಸ್ ಶಾಲೆಯನ್ನು ತೆರೆಯಲಾಗಿದೆ. ಇದರಿಂದಾಗಿ ಹಳೆಯ ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡವು ಅನಾಥವಾಗಿ ಬಿದ್ದಿದೆ. ಹಳೆಯ ಶಾಲೆಯಲ್ಲಿನ 23 ಕೊಠಡಿಗಳು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಶಾಲಾ ಕೊಠಡಿಗಳ ಕಿಟಕಿ, ಬಾಗಿಲು ಮತ್ತು ಬೆಂಚುಗಳು ಮುರಿದಿದ್ದು, ಶಾಲಾ ಕೊಠಡಿಗಳು ಪಾಳು ಬಿದ್ದಿರುವ ಸ್ಥಿತಿಯಲ್ಲಿವೆ ಎಂದು ಹಳೆಯ ವಿದ್ಯಾರ್ಥಿಗಳು ಮತ್ತು ನಿವೃತ್ತ ಶಿಕ್ಷಕರು ಬೇಸರ ವ್ಯಕ್ತಪಡಿಸಿದರು. 

ಪಾಳು ಬಿದ್ದ ಸ್ಥಿತಿಯಲ್ಲಿರುವ ಕುದೂರು ಪಟ್ಟಣದ ಸರ್ಕಾರಿ ಶಾಲೆಯು 105 ವರ್ಷಗಳ ಇತಿಹಾಸ ಹೊಂದಿದೆ. ಶೈಕ್ಷಣಿಕ ಚಟುವಟಿಕೆಗಳಿಗೆ ಈ ಕೊಠಡಿಗಳನ್ನು ಬಳಕೆ ಮಾಡಬೇಕು. ಈ ಮೂಲಕ ಶಾಲೆಯನ್ನು ಮತ್ತೆ ಸುಸ್ಥಿತಿಗೆ ತರಬೇಕು ಎಂದು ಹಳೆಯ ವಿದ್ಯಾರ್ಥಿಗಳು, ಶಿಕ್ಷಣ ಇಲಾಖೆಯನ್ನು ಒತ್ತಾಯಿಸಿದರು.

ಹಳೆಯ ಕಟ್ಟಡವನ್ನು ಬಳಕೆ ಮಾಡದೆ ಹಾಗೆಯೇ ಬಿಟ್ಟಿರುವುದರಿಂದ ಕೊಠಡಿಗಳು ಕಸದ ಅಂಗಡಿಗಳಂತೆ ಭಾಸವಾಗುತ್ತಿದೆ. ದಾಖಲೆಗಳ ಹಾಳೆಗಳು, ಒಡೆದ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಕಿಟಕಿ-ಬಾಗಿಲುಗಳು ಮುರಿದುಹೋಗಿವೆ. ಕಟ್ಟಡದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ರಾತ್ರಿ ಪಾಳಿಯಲ್ಲಿ ಕಾವಲುಗಾರರನ್ನು ನೇಮಿಸಬೇಕು. ಜೊತೆಗೆ ಸಿಸಿಟಿವಿ ಕಣ್ಗಾವಲು ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯರು ಸರ್ಕಾರಕ್ಕೆ ಒತ್ತಾಯಿಸಿದರು. 

ಶತಮಾನದ ಶಾಲೆಯನ್ನು ಉಳಿಸಿ ಶೈಕ್ಷಣಿಕ ಚಟುವಟಿಕೆಗೆ ಮರುಬಳಕೆ ಮಾಡಬೇಕು ಎಂದು ಹಳೆ ವಿದ್ಯಾರ್ಥಿಗಳು, ನಿವೃತ್ತ ಶಿಕ್ಷಕರು, ಪೋಷಕರು ಹಾಗೂ ಎಸ್‌ಡಿಎಂಸಿ ಸದಸ್ಯರು ಒತ್ತಾಯಿಸಿದ್ದಾರೆ. ಪಾಳುಬಿದ್ದಿರುವ ಕೊಠಡಿಗಳನ್ನು ದುರಸ್ತಿಗೊಳಿಸಿ ಗ್ರಂಥಾಲಯ, ತರಬೇತಿ ಕೇಂದ್ರ ಅಥವಾ ಡಿಜಿಟಲ್ ಕಲಿಯುವ ಕೇಂದ್ರವಾಗಿ ಪರಿವರ್ತಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ.

ಕುದೂರು ಠಾಣೆಯಲ್ಲಿ ದೂರು

ಕುದೂರು ಕೆಪಿಎಸ್ ಶಾಲೆಯ ಹೊಸ ಕಟ್ಟಡ ಉದ್ಘಾಟನೆಯಾದ ನಂತರ ಎಲ್ಲ ವಿದ್ಯಾರ್ಥಿಗಳು ಒಂದೇ ಸೂರಿನ ಅಡಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈಗ ಹಳೆ ಶಾಲೆಯ ಕಿಟಕಿ ಬಾಗಿಲುಗಳನ್ನು ಕಿಡಿಗೇಡಿಗಳು ಹಾಳು ಮಾಡಿದ್ದಾರೆ ಎಂದು ಕುದೂರು ಠಾಣೆಯಲ್ಲಿ ದೂರು ದಾಖಲಾಗಿದೆ.  ಜೊತೆಗೆ ಕಟ್ಟಡಕ್ಕೆ ರಾತ್ರಿ ವೇಳೆ ಪೊಲೀಸರ ಕಾವಲು ಇರಿಸಬೇಕು ಎಂದು ಮನವಿ ಮಾಡಲಾಗಿದೆ.  ರಾಜೇಗೌಡ ಕ್ಷೇತ್ರ ಶಿಕ್ಷಣಾಧಿಕಾರಿ ಮಾಗಡಿ

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ