ಖರ್ಗೆ ಜತೆಗೆ ಡಿಕೆಶಿ ಸಮಾಲೋಚನೆ: ಸಂಪುಟಕ್ಕೆ ಸಣ್ಣ ಸರ್ಜರಿ ನಡೆಸಲು ಕಸರತ್ತು

ಖರ್ಗೆ ಜತೆಗೆ ಡಿಕೆಶಿ ಸಮಾಲೋಚನೆ: ಸಂಪುಟಕ್ಕೆ ಸಣ್ಣ ಸರ್ಜರಿ ನಡೆಸಲು ಕಸರತ್ತು

ಖರ್ಗೆ ಜತೆಗೆ ಡಿಕೆಶಿ ಸಮಾಲೋಚನೆ: ಸಂಪುಟಕ್ಕೆ ಸಣ್ಣ ಸರ್ಜರಿ ನಡೆಸಲು ಕಸರತ್ತು

ನವದೆಹಲಿ: ಸಚಿವ ಸಂಪುಟದಲ್ಲಿ ಕೆಲವು ಬದಲಾವಣೆ ಹಾಗೂ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡುವ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭಾನುವಾರ ರಾತ್ರಿ ಇಲ್ಲಿ ಭೇಟಿ ಮಾಡಿ ಸಮಾಲೋಚಿಸಿದರು. 

ಸಂಪುಟ ವಿಸ್ತರಣೆಯಾದ ಕೂಡಲೇ ಕೆಲವು ಹಿರಿಯ ಶಾಸಕರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಅವರನ್ನು ಶಿವಕುಮಾರ್‌ ಹಾಗೂ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಭೇಟಿ ಮಾಡಿ ಮನವೊಲಿಸುವ ಪ್ರಯತ್ನ ಮಾಡಿದ್ದರು. ತಾವು ಸೂಚಿಸಿದ ಶಾಸಕರಿಗೆ ಸಚಿವ ಸ್ಥಾನ ನೀಡದ ಕಾರಣ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುನಿಸಿಕೊಂಡಿದ್ದರು. ಕುರುಬ ಕೋಟಾದಡಿ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ್‌ ಅವರಿಗೆ ಅವಕಾಶ ಕಲ್ಪಿಸಲೇಬೇಕೆಂದು ಸಿದ್ದರಾಮಯ್ಯ ಹಟ ಹಿಡಿದಿದ್ದಾರೆ. 

ಇದಕ್ಕೆ ಸಂಬಂಧಿಸಿದಂತೆ ನವದೆಹಲಿಗೆ ಧಾವಿಸಿದ ಶಿವಕುಮಾರ್‌ ಅವರು ಹೈಕಮಾಂಡ್‌ ನಾಯಕರನ್ನು ಭೇಟಿ ಸಂಪುಟದಲ್ಲಿ ಸಣ್ಣ ಬದಲಾವಣೆ ಮಾಡುವ ಬಗ್ಗೆ ಚರ್ಚಿಸಿದರು. ಇದೇ ೧೩ರಿಂದ ವಿಧಾನಮಂಡಲದ ಅಧಿವೇಶನ ನಡೆಯಲಿದ್ದು, ಅದಕ್ಕೂ ಮುನ್ನವೇ ಸಚಿವರಿಗೆ ಖಾತೆ ಹಂಚಿಕೆ ಮಾಡಲು ಮುಖ್ಯಮಂತ್ರಿ ನಿಶ್ಚಯಿಸಿದ್ದಾರೆ. ಹಲವು ಸಚಿವರು ಪ್ರಭಾವಿ ಖಾತೆಗಳ ಮೇಲೆ ಕಣ್ಣಿಟ್ಟಿರುವುದರಿಂದ ಕಗ್ಗಂಟು ಬಗೆಹರಿದಿಲ್ಲ. 

ಮುಖ್ಯಮಂತ್ರಿಯವರು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್‌ ಅವರನ್ನು ಭಾನುವಾರ ತಡ ರಾತ್ರಿ ಅಥವಾ ಸೋಮವಾರ ಬೆಳಿಗ್ಗೆ ಭೇಟಿ ಮಾಡಲಿದ್ದಾರೆ. ಕಾಂಗ್ರೆಸ್‌ ವರಿಷ್ಠ ನಾಯಕ ರಾಹುಲ್‌ ಗಾಂಧಿ ಅವರ ಭೇಟಿಗೆ ಕಾಲಾವಕಾಶ ಸಿಕ್ಕಿಲ್ಲ. ಶಿವಕುಮಾರ್‌ ಅವರು ಸೋಮವಾರ ಬೆಂಗಳೂರಿಗೆ ನಿರ್ಗಮಿಸಲಿದ್ದಾರೆ. 

ಸಚಿವ ಸ್ಥಾನ ಸಿಗಲಿಲ್ಲವೆಂದು ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಆಕ್ರೋಶ ಹೊರಹಾಕಿದ್ದು, ಸಂಪುಟದಲ್ಲಿ ಸ್ಥಾನ ಕೊಡಲೇಬೇಕೆಂದು ಪಟ್ಟು ಹಿಡಿದಿದ್ದಾರೆ. ಗೋವಿಂದರಾಜನಗರದ ಶಾಸಕ ಪ್ರಿಯಕೃಷ್ಣ ಅವರನ್ನು ವರಿಷ್ಠರು ಕರೆಸಿಕೊಂಡು ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ. ಅಪ್ಪ-ಮಗ ಪಟ್ಟು ಸಡಿಲಿಸಿಲ್ಲ. 

ಬಿಕ್ಕಟ್ಟು ಬಗೆಹರಿಯದ ಕಾರಣಕ್ಕೆ ಕೃಷ್ಣಪ್ಪ ಹಾಗೂ ಶಿವಣ್ಣನವರ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ವರಿಷ್ಠರೊಂದಿಗೆ ಮುಖ್ಯಮಂತ್ರಿ ಸಮಾಲೋಚಿಸಿದರು. ಸಚಿವ ಸಂಪುಟದಲ್ಲಿ ಮಹಿಳೆಗೆ ಸ್ಥಾನ ನೀಡದಿರುವುದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಒಬ್ಬ ಮಹಿಳೆಗೂ ಸಂಪುಟದಲ್ಲಿ ಪ್ರಾತಿನಿಧ್ಯ ನೀಡುವ ಬಗ್ಗೆಯೂ ಸಮಾಲೋಚನೆ ನಡೆಸಿದರು. ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಅವರನ್ನು ಸಂಪುಟದಿಂದ ಕೈಬಿಟ್ಟು ಅವರ ಪುತ್ರಿಯೂ ಆಗಿರುವ ಕೆಜಿಎಫ್‌ ಶಾಸಕಿ ರೂಪಕಲಾ ಶಶಿಧರ್‌ ಅವರನ್ನು ಸಂಪುಟಕ್ಕೆ ಸೇರಿಸುವ ಬಗ್ಗೆ ಚರ್ಚೆಗಳು ನಡೆದಿದ್ದವು. ಈ ಪ್ರಸ್ತಾಪಕ್ಕೆ ಮುನಿಯಪ್ಪ ಸುತಾರಾಂ ಒಪ್ಪಿರಲಿಲ್ಲ. ಮತ್ತೊಂದೆಡೆ, ಪತ್ನಿ ಅನ್ನಪೂರ್ಣ ತುಕಾರಾಂ ಅವರಿಗೆ ಸಚಿವ ಸ್ಥಾನ ನೀಡಲೇಬೇಕೆಂದು ಸಂಸದ ಇ.ತುಕಾರಾಂ ಹಟ ಹಿಡಿದಿದ್ದಾರೆ. ಬಳ್ಳಾರಿ ಲೋಕಸಭಾ ಚುನಾವಣೆ ಹಾಗೂ ಸಂಡೂರು ಉಪಚುನಾವಣೆಯ ಸಮಯದಲ್ಲಿ ತಮಗೆ ನೀಡಿದ ವಾಗ್ದಾನವನ್ನು ನೆನಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ಬಳ್ಳಾರಿ ಜಿಲ್ಲೆಯ ಸಚಿವರೊಬ್ಬರಿಂದ ರಾಜೀನಾಮೆ ಪಡೆದು ಅನ್ನಪೂರ್ಣ ಅವರನ್ನು ಸಚಿವರನ್ನಾಗಿ ಮಾಡುವ ಪ್ರಸ್ತಾಪವಿದೆ. ಈ ವಿಷಯದ ಬಗ್ಗೆ ಹೈಕಮಾಂಡ್‌ ನಾಯಕರೊಂದಿಗೆ ಮುಖ್ಯಮಂತ್ರಿ ಚರ್ಚಿಸಿದರು. ಕೃಷ್ಣಪ್ಪ ಅವರಿಗೆ ಅವಕಾಶ ಮಾಡಿಕೊಡಲು ಒಕ್ಕಲಿಗ ಸಮುದಾಯದ ಸಚಿವರೊಬ್ಬರು ಸಚಿವ ತ್ಯಾಗ ಮಾಡಲು ಮುಂದಾಗಿದ್ದಾರೆ. 

‘ಸಮಾಜ ಕಲ್ಯಾಣ’ದ ಮೇಲೆ ಕಣ್ಣು

ಸಮಾಜ ಕಲ್ಯಾಣ ಖಾತೆ ಮೇಲೆ ಮೂವರು ಸಚಿವರು ಕಣ್ಣಿಟ್ಟಿದ್ದು, ಹೈಕಮಾಂಡ್‌ ಮಟ್ಟದಲ್ಲಿ ಲಾಬಿ ನಡೆಸಿದ್ದಾರೆ.

ಸಿದ್ದರಾಮಯ್ಯ ಸರ್ಕಾರದಲ್ಲಿ ಆಹಾರ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಸಚಿವ ಕೆ.ಎಚ್.ಮುನಿಯಪ್ಪ ಅವರಿಗೆ ಡಿ.ಕೆ. ಶಿವಕುಮಾರ್‌ ಸಂಪುಟದಲ್ಲಿ ಅದೇ ಖಾತೆ ನೀಡಲಾಗಿತ್ತು. ಅದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ಸಮಾಜ ಕಲ್ಯಾಣ ಖಾತೆ ನೀಡಬೇಕು ಎಂದು ಪಟ್ಟು ಹಿಡಿದಿದ್ದರು. ಅದಕ್ಕೆ ಹೈಕಮಾಂಡ್‌ ನಾಯಕರು ಒಪ್ಪಿರಲಿಲ್ಲ. ಬಲಗೈ ಸಮುದಾಯದ ಡಾ.ಜಿ.ಪರಮೇಶ್ವರ ಹಾಗೂ ಪ್ರಿಯಾಂಕ್‌ ಖರ್ಗೆ ಅವರಿಗೆ ಎರಡೆರಡು ಖಾತೆಗಳನ್ನು ನೀಡಿ, ಎಡಗೈ ಸಮುದಾಯದ ಮುನಿಯಪ್ಪ ಅವರಿಗೆ ಒಂದೇ ಖಾತೆ ನೀಡಿದ ಬಗ್ಗೆ ಎಡಗೈ ಸಮುದಾಯದ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದರು.

‘ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನ ನಿಶ್ಚಿತ’

‘ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನ ನೀಡುವುದು ನಿಶ್ಚಿತ. ನಾಳೆಯೇ ಸ್ಥಾನ ಕೊಡಬೇಕೆಂದೇನಿಲ್ಲ. ಯಾವತ್ತು ಬೇಕಿದ್ದರೂ ಸಂಪುಟಕ್ಕೆ ಸೇರಿಸಿಕೊಳ್ಳಬಹುದು’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಮಾಡಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಖಾತೆ ಹಂಚಿಕೆಯನ್ನೂ ತಕ್ಷಣವೇ ಮಾಡುವುದು ಕಡ್ಡಾಯವೇನಲ್ಲ. ಹಂಚಿಕೆಯಾಗದ ಎಲ್ಲ ಖಾತೆಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ವಿಧಾನಮಂಡಲ ಅಧಿವೇಶನದಲ್ಲಿ ನಾನೇ ಉತ್ತರ ನೀಡಬಹುದು’ ಎಂದರು. ‘ಬಸವರಾಜ ಹೊರಟ್ಟಿ ಅವರು ಸಭಾಪತಿ ಸ್ಥಾನಕ್ಕೆ ಸ್ವಯಂ ರಾಜೀನಾಮೆ ನೀಡಿದ್ದಾರೆ. ಈ ವಿಷಯದಲ್ಲಿ ಬಿಜೆಪಿಯವರು ರಾಜಭವನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ದೂರಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ