
2026ರ ಆ.10: ಸಂಪುಟಕ್ಕೆ ಸರ್ಜರಿ, ಬಿಡದಿ ಹೋರಾಟ ಸೇರಿ ದಿನದ ಪ್ರಮುಖ ಸುದ್ದಿಗಳು
ರಾಜ್ಯ, ರಾಷ್ಟ್ರೀಯ, ವಿದೇಶ, ಸಂಪಾದಕೀಯ, ಆಲ–ಅಗಲ ಹಾಗೂ ಕ್ರೀಡೆಗೆ ಸಂಬಂಧಿಸಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
ಖರ್ಗೆ ಜತೆಗೆ ಡಿಕೆಶಿ ಸಮಾಲೋಚನೆ: ಸಂಪುಟಕ್ಕೆ ಸಣ್ಣ ಸರ್ಜರಿ ನಡೆಸಲು ಕಸರತ್ತು
ಸಚಿವ ಸಂಪುಟದಲ್ಲಿ ಕೆಲವು ಬದಲಾವಣೆ ಹಾಗೂ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡುವ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭಾನುವಾರ ರಾತ್ರಿ ನವದೆಹಲಿಯಲ್ಲಿ ಭೇಟಿ ಮಾಡಿ ಸಮಾಲೋಚಿಸಿದರು.
ಜಾರ್ಖಂಡ್ ಪರೀಕ್ಷಾ ಅಕ್ರಮ: ಸಿಬಿಐ ತನಿಖೆಗೆ ವಿದ್ಯಾರ್ಥಿಗಳ ಪಟ್ಟು
ಜಾರ್ಖಂಡ್ ಸ್ಟಾಫ್ ಸೆಲೆಕ್ಷನ್ ಕಮಿಷನ್ (ಜೆಎಸ್‌ಎಸ್‌ಸಿ) ನಡೆಸಿದ ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ (ಸಿಜಿಎಲ್) ಪರೀಕ್ಷಾ ಅಕ್ರಮಗಳ ಕುರಿತು ಸಿಬಿಐ ತನಿಖೆಯ ಬೇಡಿಕೆ ಹೊರತುಪಡಿಸಿ ವಿದ್ಯಾರ್ಥಿಗಳ ಶೇ 98ರಷ್ಟು ಬೇಡಿಕೆಗಳನ್ನು ಒಪ್ಪಿಕೊಂಡಿರುವುದಾಗಿ ಜಾರ್ಖಂಡ್ ಸರ್ಕಾರ ತಿಳಿಸಿದೆ. ಆದರೆ ಸಿಬಿಐ ತನಿಖೆಗೆ ಪಟ್ಟು ಹಿಡಿದಿರುವ ವಿದ್ಯಾರ್ಥಿಗಳು ಪ್ರತಿಭಟನೆ ಮುಂದುವರಿಸುವುದಾಗಿ ಘೋಷಿಸಿದ್ದಾರೆ.
ಸಂವಿಧಾನ ಬಿಕ್ಕಟ್ಟು ಸೃಷ್ಟಿಸಲು ವಿಪಕ್ಷಗಳ ಸಂಚು: ಸಿಎಂ ಡಿ.ಕೆ. ಶಿವಕುಮಾರ್
'ವಿಧಾನ ಪರಿಷತ್ತಿನ ನೂತನ ಸಭಾಪತಿ ಸ್ಥಾನಕ್ಕೆ ಸಲೀಂ ಅಹಮದ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡುವಂತೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದೆ' ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಆಳ–ಅಗಲ: ಆಹಾರ ಸುರಕ್ಷತೆ; ಬೇಕಿದೆ ಖಾತರಿ ವ್ಯವಸ್ಥೆ
ರಾಜ್ಯದ ಹಲವು ಪಂಚತಾರಾ ಹೋಟೆಲ್‌ಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ದಾಳಿ ಮಾಡಿದಾಗ ಅವಧಿ ಮೀರಿದ ಆಹಾರ ಹಾಗೂ ಕೊಳೆತ ತರಕಾರಿ ಪತ್ತೆಯಾಗಿವೆ. ಕರ್ನಾಟಕ ಅಷ್ಟೇ ಅಲ್ಲದೇ ಮಹಾರಾಷ್ಟ್ರ, ತೆಲಂಗಾಣ, ದೆಹಲಿ ಸೇರಿದಂತೆ ದೇಶದ ಬಹುತೇಕ ರಾಜ್ಯಗಳಲ್ಲಿಯೂ ಇಂಥದೇ ಸ್ಥಿತಿ ಇದೆ. ಹೋಟೆಲ್‌ಗಳಲ್ಲಿ ಸಿಗುವ ಆಹಾರ ಪದಾರ್ಥಗಳು, ಅಂಗಡಿಗಳಲ್ಲಿ ಸಿಗುವ ತಿಂಡಿ ತಿನಿಸುಗಳ ಗುಣಮಟ್ಟವನ್ನು ಖಾತರಿಪಡಿಸುವ ವ್ಯವಸ್ಥೆ ಸಮರ್ಪಕವಾಗಿಲ್ಲದಿರುವುದೂ ಇದಕ್ಕೆ ಕಾರಣವಾಗಿದೆ. ಜನರಲ್ಲಿ ಬೊಜ್ಜು, ಮಧುಮೇಹದಂಥ ಕಾಯಿಲೆಗಳು ಹೆಚ್ಚಾಗುತ್ತಿದ್ದು, ಅಸುರಕ್ಷಿತ ಆಹಾರವು ಸಾರ್ವಜನಿಕ ಆರೋಗ್ಯದ ಗಂಭೀರ ಸಮಸ್ಯೆಯೂ ಆಗಿದೆ
'ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ’ ಎಂದು ವಿವರಿಸಿದ್ದ ಸ್ಪರ್ಧೆ: ಶಿಕ್ಷಕ ಅಮಾನತು
ಕೇರಳಂನ ಶಾಲೆಗಳಲ್ಲಿ ಆಯೋಜಿಸಿದ್ದ ರಸಪ್ರಶ್ನೆಯಲ್ಲಿ ಹಿಂದುತ್ವವಾದಿ ವಿನಾಯಕ ದಾಮೋದರ್ ಸಾವರ್ಕರ್ ಅವರನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ವಿವರಿಸಿದ್ದ ಪ್ರಶ್ನೆಗೆ ಸಂಬಂಧಿಸಿದಂತೆ, ಶಿಕ್ಷಕರೊಬ್ಬರನ್ನು ಅಮಾನತು ಮಾಡಲಾಗಿದೆ.
ಭೂಸ್ವಾಧೀನಕ್ಕೆ ಸಮಾನ ಪರಿಹಾರ: ಮುಧೋಳದ ಅರ್ಜಿದಾರರ ಪರ ಸುಪ್ರೀಂ ಕೋರ್ಟ್ ತೀರ್ಪು
ಸಮಾನ ಸಾರ್ವಜನಿಕ ಉದ್ದೇಶಕ್ಕಾಗಿ ಒಂದೇ ಅಧಿಸೂಚನೆ ಅಡಿ ವಶಪಡಿಸಿಕೊಂಡ ಎಲ್ಲ ಭೂಮಿಗೂ ಸಮಾನ ಪರಿಹಾರ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
ಬಿಡದಿ ಟೌನ್‌ಶಿಪ್ ವಿರುದ್ಧ ರಣಕಹಳೆ: ಸಿಎಂ ಡಿಕೆಶಿ ವಿರುದ್ಧ ಎಚ್‌ಡಿಕೆ ವಾಗ್ದಾಳಿ
ರಾಮನಗರ ತಾಲ್ಲೂಕಿನ ಬಿಡದಿಯಲ್ಲಿ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ (ಜಿಬಿಐಟಿ) ವಿರುದ್ಧ ರಣಕಹಳೆ ಊದಿರುವ ಜೆಡಿಎಸ್, ಟೌನ್‌ಶಿಪ್ ವಿರೋಧಿಸಿ ಬೈರಮಂಗಲದಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದವರೆಗೆ ಹಮ್ಮಿಕೊಂಡಿರುವ ಮೂರು ದಿನಗಳ ಪಾದಯಾತ್ರೆಗೆ ಭಾನುವಾರ ಚಾಲನೆ ಸಿಕ್ಕಿತು.
ಕೌಟುಂಬಿಕ ಕಲಹ: ಮಕ್ಕಳಲ್ಲಿ ಹೆಚ್ಚುತ್ತಿದೆ ಮಾನಸಿಕ ಒತ್ತಡ
ಬೆಂಗಳೂರಿನ ವಿದ್ಯಾರ್ಥಿಗಳಲ್ಲಿ ಮಾನಸಿಕ ಒತ್ತಡ ಹೆಚ್ಚಾಗುತ್ತಿದ್ದು, ಇದಕ್ಕೆ ಕೌಟುಂಬಿಕ ಕಲಹ ಹಾಗೂ ಮನೆಗಳಲ್ಲಿನ ವಾತಾವರಣವೇ ಪ್ರಮುಖ ಕಾರಣ ಎನ್ನುವುದು ಅಧ್ಯಯನದಿಂದ ದೃಢಪಟ್ಟಿದೆ.
ಸಂಪಾದಕೀಯ: ರೆಪೊ ದರದಲ್ಲಿ ಯಥಾಸ್ಥಿತಿ ನಿರೀಕ್ಷಿತ; ಬೆಳವಣಿಗೆಯ ಕಡೆ ಆರ್‌ಬಿಐ ಗಮನ
ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡದಿರುವ ಆರ್‌ಬಿಐ ಕಾದು ನೋಡುವ ನೀತಿ ಅನುಸರಿಸುತ್ತಿದೆ. ಮುಂಬರುವ ವಾರಗಳಲ್ಲಿ ಎಲ್ಲ ವಲಯಗಳಲ್ಲಿ ಹಣದುಬ್ಬರ ಹೆಚ್ಚಾಗಬಹುದು.