ಮಂಡ್ಯ | ದುಡ್ಡಿದ್ರೆ ಬಿಂದಾಸ್ ಲೈಫ್: ಜೈಲಿನ ಕೈದಿಗಳಿಂದಲೇ ಸ್ಫೋಟಕ ಮಾಹಿತಿ

ಮಂಡ್ಯ | ದುಡ್ಡಿದ್ರೆ ಬಿಂದಾಸ್ ಲೈಫ್: ಜೈಲಿನ ಕೈದಿಗಳಿಂದಲೇ ಸ್ಫೋಟಕ ಮಾಹಿತಿ

ಮಂಡ್ಯ | ದುಡ್ಡಿದ್ರೆ ಬಿಂದಾಸ್ ಲೈಫ್: ಜೈಲಿನ ಕೈದಿಗಳಿಂದಲೇ ಸ್ಫೋಟಕ ಮಾಹಿತಿ

ಮಂಡ್ಯ: ಜಿಲ್ಲಾ ಕಾರಾಗೃಹದಲ್ಲಿ ಲಂಚ ಕೊಟ್ಟರೆ ‘ರಾಜಾತಿಥ್ಯ’ ಮತ್ತು ‘ಪಂಚಭಕ್ಷ್ಯ ಭೋಜನ’ ಸಿಗುತ್ತದೆ ಎಂದು ಆರೋಪಿಸಿರುವ, ವಿಚಾರಣಾ ಬಂದಿಗಳದು ಎನ್ನಲಾದ ಪತ್ರವೊಂದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಇದರಲ್ಲಿ, ಪತ್ರ ಬರೆದವರ ಸಹಿ ಮತ್ತು ಹೆಬ್ಬೆಟ್ಟಿನ ಗುರುತು ಇದೆ.

ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಮಹಮ್ಮದ್‌ ಹುಸೇನ್‌ ಎರಡು ದಿನಗಳ ಹಿಂದೆ ಮಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ನೆಪದಲ್ಲಿ ಪ್ರತ್ಯೇಕ ಕೋಣೆಯಲ್ಲಿ ಗೆಳತಿ ಜೊತೆ ಕಾಲ ಕಳೆಯುತ್ತಿದ್ದಾಗ ನ್ಯಾಯಾಧೀಶರಿಗೆ ‘ರೆಡ್‌ಹ್ಯಾಂಡ್‌’ ಆಗಿ ಸಿಕ್ಕಿಬಿದ್ದಿದ್ದ. ಈ ಘಟನೆಯ ಬೆನ್ನಲ್ಲೇ ಬಹಿರಂಗಗೊಂಡಿರುವ ಈ ಪತ್ರವು ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ.

‘ಸ್ಪೆಷಲ್‌ ಸೆಲ್‌’ಗಳಿಗೆ ₹5 ಸಾವಿರದಿಂದ ₹15 ಸಾವಿರ ಹಾಗೂ ‘ಪನಿಷ್ಮೆಂಟ್‌ ಸೆಲ್‌’ನಿಂದ ಹೊರಬರಲು ₹10 ಸಾವಿರ ಲಂಚವನ್ನು ಕಾರಾಗೃಹದ ಅಧಿಕಾರಿಗಳಿಗೆ ಕೊಡಬೇಕು. ತಿಂಗಳಿಗೆ ಸೆಲ್‌ ಸಂಖ್ಯೆ 5ರಿಂದ ₹5 ಸಾವಿರ, ಸೆಲ್‌ ಸಂಖ್ಯೆ 6ರಿಂದ ₹8 ಸಾವಿರ, ಸೆಲ್‌ ಸಂಖ್ಯೆ 1ರಿಂದ ₹10 ಸಾವಿರ, ಸೆಲ್‌ ಸಂಖ್ಯೆ 3, 4ರಿಂದ ತಲಾ ₹15 ಸಾವಿರ ಲಂಚ ವಸೂಲಿ ಮಾಡುತ್ತಿದ್ದಾರೆ ಎಂದು ಪತ್ರದಲ್ಲಿ ಬರೆಯಲಾಗಿದೆ.

ಮಟನ್‌ ಕೆ.ಜಿ.ಗೆ ₹1,250: ಮಟನ್ ಕೆ.ಜಿ.ಗೆ ₹1,250, ಚಿಕನ್ ಕೆ.ಜಿ.ಗೆ ₹700ರಂತೆ ಮಾರಾಟ ಮಾಡುತ್ತಿದ್ದಾರೆ. ಒಂದು ಚಪಾತಿಗೆ ₹25 ಹಾಗೂ ಒಂದು ಮೊಟ್ಟೆಗೆ ₹15 ತೆಗೆದುಕೊಳ್ಳುತ್ತಾರೆ. ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣಕ್ಕೆ ಕೊಟ್ಟ ಲಾಡು ಒಂದಕ್ಕೆ ₹25ರಂತೆ 200 ಲಾಡು ಮಾರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಇಲ್ಲಿ ಎಲ್ಲದಕ್ಕೂ ಲಂಚ ನಿಗದಿ ಮಾಡಲಾಗಿದೆ. ಕೊಠಡಿ ಬದಲಾವಣೆಗೆ ₹2 ಸಾವಿರ ಕೊಡಬೇಕು. ಪ್ರತಿ ಬ್ಯಾರಕ್‌ನಿಂದಲೂ ಮಾಮೂಲಿ ಕೊಡಬೇಕು. ಪ್ರತಿ ತಿಂಗಳು ಕೊಡಬೇಕಾದ ಬ್ರಷ್‌, ಪೇಸ್ಟ್‌, ಸೋಪು ಎಲ್ಲವನ್ನೂ ಆರು ತಿಂಗಳಿಗೆ ಒಂದು ಬಾರಿ ಮಾತ್ರ ಕೊಡುತ್ತಾರೆ ಎಂದು ಆಪಾದನೆ ಮಾಡಲಾಗಿದೆ.

ಜಿಲ್ಲಾ ಕಾರಾಗೃಹ ಅಧೀಕ್ಷಕಿ ಕಾನೂನುಬಾಹಿರ ಚಟುವಟಿಕೆ ನಡೆಸುತ್ತಿದ್ದಾರೆ. ಸಿಬ್ಬಂದಿ ಮೂಲಕ ಲಂಚ ವಸೂಲಿ ಮಾಡುತ್ತಿದ್ದಾರೆ. ಕೈದಿಗಳ ಬೇಡಿಕೆಗೆ ಅನುಗುಣವಾಗಿ ಹಣ ಪಡೆದು ಅಡುಗೆ ಮಾಡಿಸಿಕೊಡುತ್ತಾರೆ.ಹಣ ನೀಡದಿದ್ದರೆ ‘ಲಾಳ ಕಟ್ಟಿ ಕಮಾನು ಎತ್ತುವ’ ಶಿಕ್ಷೆ ನೀಡುವುದಾಗಿ ಬೆದರಿಕೆ ಹಾಕುತ್ತಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

‘ಕೈದಿಗಳ ಸಹಿ ಇದ್ದ ಪತ್ರ ದುರುಪಯೋಗ’

ಕಾರಾಗೃಹದಲ್ಲಿ ಬೀಡಿ, ಸಿಗರೇಟ್‌, ಚಪಾತಿ ಒದಗಿಸಬೇಕು ಮತ್ತು ಕ್ಯಾಂಟೀನ್‌ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಸಲ್ಲಿಸಲು ವಿಚಾರಣಾ ಬಂದಿಗಳಿಂದ ಖಾಲಿ ಹಾಳೆಯಲ್ಲಿ ಸಹಿ ಸಂಗ್ರಹಿಸಿದ್ದರು. ಈ ಸಹಿಗಳುಳ್ಳ ಪತ್ರವನ್ನು ದುರುಪಯೋಗ ಪಡಿಸಿಕೊಂಡ ಕೆಲವರು, ಕಾರಾಗೃಹದಲ್ಲಿ ಅಕ್ರಮ ನಡೆಯುತ್ತಿದೆ ಎಂದು ಬಿಂಬಿಸಿದ್ದಾರೆ. ಈ ಆರೋಪ ಸತ್ಯಕ್ಕೆ ದೂರವಾದುದು ಎಂದು ಮಂಡ್ಯ ಜಿಲ್ಲಾ ಕಾರಾಗೃಹ ಅಧೀಕ್ಷಕಿ ಎಂ. ಶಾಂತಮ್ಮ ಸ್ಪಷ್ಟನೆ ನೀಡಿದ್ದಾರೆ.

ಇಬ್ಬರು ರೌಡಿಶೀಟರ್‌ಗಳು ಜೈಲಿನಲ್ಲಿ ಅಮಾಯಕರ ಮೇಲೆ ದಬ್ಬಾಳಿಕೆ ನಡೆಸುತ್ತಾ, ಸದಾ ಗದ್ದಲ ಎಬ್ಬಿಸುತ್ತಿದ್ದರು. ಈ ಕಾರಣದಿಂದ ಅವರನ್ನು ಧಾರವಾಡ ಮತ್ತು ಬಳ್ಳಾರಿ ಕಾರಾಗೃಹಕ್ಕೆ ಈಚೆಗೆ ಸ್ಥಳಾಂತರ ಮಾಡಿದ್ದೆವು. ಇದನ್ನು ಸಹಿಸದ ಆ ರೌಡಿಶೀಟರ್‌ಗಳ ಅನುಯಾಯಿಗಳು ಈ ಪತ್ರ ಸೃಷ್ಟಿಸಿರುವ ಅನುಮಾನವಿದೆ ಎಂದು ಹೇಳಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260828-51-1464659917

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ