
ಸದನದಲ್ಲಿ ಹಲವು ಮಸೂದೆಗಳ ಮಂಡನೆ, ಅಂಗೀಕಾರ: ಇಲ್ಲಿದೆ ಸಂಪೂರ್ಣ ವಿವರ
ಬೆಂಗಳೂರು: ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಪಟ್ಟು ಹಿಡಿದು ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸುತ್ತಿರುವ ನಡುವೆಯೇ ರಾಜ್ಯ ಸರ್ಕಾರ ಹಲವು ಮಸೂದೆಗಳನ್ನು ಮಂಡಿಸಿದ್ದು, ಅಂಗೀಕಾರವೂ ಪಡೆದಿದೆ.
ಯಾವ ಮಸೂದೆಯಲ್ಲಿ ಏನಿದೆ?
ಕರ್ನಾಟಕ ಸರ್ಕಾರಿ ಉದ್ಯಾನವನಗಳ (ಸಂರಕ್ಷಣೆ) (ತಿದ್ದುಪಡಿ) ಮಸೂದೆ -2026
ಸರ್ಕಾರದ ಇಲಾಖೆಗಳು, ಶಾಸನಬದ್ಧ ಪ್ರಾಧಿಕಾರಗಳು, ಸರ್ಕಾರಿ ಕಂಪನಿಗಳು ಅಥವಾ ಸಾರ್ವಜನಿಕ ಉಪಯುಕ್ತತೆಯ ಯೋಜನೆಗಳಿಗಾಗಿ ಸ್ಥಳೀಯ ಪ್ರಾಧಿಕಾರಗಳ ಪರವಾಗಿ ಮಾತ್ರ, ಉದ್ಯಾನವನದ ಒಟ್ಟು ವಿಸ್ತೀರ್ಣದ ಗರಿಷ್ಠ ಶೇಕಡ 5ರಷ್ಟು ಭೂಮಿಯನ್ನು ಮಾರಾಟ, ಗೇಣಿ, ಕೊಡುಗೆ, ವಿನಿಮಯ, ಅಡಮಾನ ಅಥವಾ ಇನ್ನಿತರ ಯಾವುದೇ ರೀತಿಯಲ್ಲಿ ಪರಭಾರೆ ಮಾಡಲು ರಾಜ್ಯ ಸರ್ಕಾರಕ್ಕೆ ಅನುಮತಿ ನೀಡುವ ಮಸೂದೆ ಇದಾಗಿದೆ.
ರಾಜ್ಯ ಸರ್ಕಾರಕ್ಕೆ ಯಾವುದೇ ಶಿಫಾರಸು ಮಾಡುವ ಮೊದಲು, ಪ್ರಸ್ತಾಪಿತ ಭೂ ಬಳಕೆಯನ್ನು ಕೂಲಂಕಷವಾಗಿ ಮೌಲ್ಯಮಾಪನ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ, ನಿಯೋಜಿತ ಅಧಿಕಾರಿಗಳು ಮತ್ತು ತಜ್ಞ ಕ್ಷೇತ್ರ ವೃತ್ತಿಪರರನ್ನೊಳಗೊಂಡ ಅಧಿಕೃತ ಮೌಲ್ಯಮಾಪನ ವ್ಯವಸ್ಥೆಯನ್ನು ರೂಪಿಸಲಾಗಿದೆ.
ಶೇಕಡ 5ರ ಗರಿಷ್ಠ ಮಿತಿಯು ಇದುವರೆಗೆ ಪರಭಾರೆ ಮಾಡಲಾದ ಎಲ್ಲಾ ಜಮೀನುಗಳನ್ನು ಕಡ್ಡಾಯವಾಗಿ ಒಳಗೊಂಡಿರಲಿದೆ. ಆ ಮೂಲಕ ಉಳಿದಿರುವ ನೈಸರ್ಗಿಕ ಪರಿಸರ ವ್ಯವಸ್ಥೆಯನ್ನು ರಕ್ಷಿಸಲಿದೆ. ಜತೆಗೆ, ತೋಟಗಾರಿಕೆ ಇಲಾಖೆಯು ತನ್ನ ಆಡಳಿತಾತ್ಮಕ ಮತ್ತು ಸಂಬಂಧಿತ ಬಳಕೆಗಾಗಿ ಕೈಗೊಳ್ಳುವ ಸಾಮಾನ್ಯ ಅಭಿವೃದ್ಧಿ ಕಾರ್ಯಗಳು ಈ ನಿರ್ಬಂಧದ ವ್ಯಾಪ್ತಿಯಿಂದ ಸಂಪೂರ್ಣವಾಗಿ ಹೊರಗಿರಲಿದೆ.
ತೋಟಗಾರಿಕೆ ಫಾರಂಗಳಲ್ಲಿ ತೋಟಗಾರಿಕೆ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅತ್ಯಂತ ಕನಿಷ್ಠ ವಿಸ್ತೀರ್ಣವನ್ನು ಬಳಸಿಕೊಳ್ಳಲು ಇದು ಅನುವು ಮಾಡಿಕೊಡಲಿದೆ. ಇದು ಕೊಯ್ಲೋತ್ತರ ಸಂಸ್ಕರಣಾ ಸೌಲಭ್ಯಗಳು, ಶೀತಲ ಶೇಖರಣಾ ಘಟಕಗಳು (ಕೋಲ್ಡ್ ಸ್ಟೋರೇಜ್), ಸುಧಾರಿತ ತಳಿಗಳ ಉತ್ಪಾದನೆ ಮತ್ತು ಸ್ಥಳೀಯ ರೈತ ಸಮುದಾಯಕ್ಕೆ ನೇರವಾಗಿ ಪ್ರಯೋಜನಕಾರಿಯಾಗುವ ಕೃಷಿ-ಆಧಾರಿತ ಕೈಗಾರಿಕೆಗಳನ್ನು ಒಳಗೊಂಡಿರಲಿದೆ. ಹಾಗೂ ಇದಕ್ಕೆ ಸಾರ್ವಜನಿಕ ಹಿತಾಸಕ್ತಿ ಮತ್ತು ಅತ್ಯಗತ್ಯತೆಯನ್ನು ನಿರೂಪಿಸುವ ದಾಖಲಿತ ಕಾರಣಗಳು ಇರಬೇಕು ಎಂಬ ಅಂಶವನ್ನು ಸೇರಿಸಲಾಗಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಮಸೂದೆ- 2026
ಅನುಮೋದನೆ ಇಲ್ಲದ ಲೇಔಟ್‌ಗಳ ಬೆಳವಣಿಗೆಯನ್ನು ತಡೆಯಲು ಮತ್ತು ಗ್ರಾಮ ಪಂಚಾಯಿತಿಗಳ ಸಂಪನ್ಮೂಲಗಳನ್ನು ಸುಧಾರಿಸಲು, ಈ ಸ್ವತ್ತುಗಳ ಮೇಲೆ ತೆರಿಗೆಯನ್ನು ವಿಧಿಸಲು ಹಾಗೂ ಸಂಗ್ರಹಿಸಲು ಉದ್ದೇಶಿಸಲಾಗಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಕಾಯ್ದೆ–2025ರ (2025ರ ಕರ್ನಾಟಕ ಕಾಯ್ದೆ 27) ಮೂಲಕ ಪ್ರಕರಣ 199-ಸಿ ಅನ್ನು ಸೇರ್ಪಡೆಗೊಳಿಸಲಾಗಿದೆ.
ಇದು ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸಲಾದ ಕಟ್ಟಡ, ಭೂ ಪರಿವರ್ತನೆಯಾಗದ ಜಮೀನು, ಅಥವಾ ಕಂದಾಯ ಜಮೀನಿನಲ್ಲಿ ಭೂ ಪರಿವರ್ತನೆ ಆಗಿದ್ದರೂ ಅನುಮೋದನೆಯಿಲ್ಲದ ಲೇಔಟ್‌ನಲ್ಲಿರುವ ಜಮೀನು, ಕಟ್ಟಡ ಮತ್ತು ಸ್ವಾಧೀನ ಪ್ರಮಾಣಪತ್ರ ಅಥವಾ ಪೂರ್ಣಗೊಳಿಸುವಿಕೆ ಪ್ರಮಾಣಪತ್ರವನ್ನು ಪಡೆಯದೇ ಆಕ್ರಮಿಸಿಕೊಂಡಿರುವ ಕಟ್ಟಡ ಸೇರಿದಂತೆ, ಪ್ರತಿಯೊಂದು ಕಟ್ಟಡ, ಖಾಲಿ ಜಾಗ ಅಥವಾ ಎರಡರ ಮೇಲೆಯೂ ಆಸ್ತಿ ತೆರಿಗೆಯನ್ನು ವಿಧಿಸಲು ಮತ್ತು ಸಂಗ್ರಹಿಸಲು ಗ್ರಾಮ ಪಂಚಾಯಿತಿಗೆ ಅಧಿಕಾರ ನೀಡಲಿದೆ. ಈ ಅಧಿಕಾರ 2025ರ ಏಪ್ರಿಲ್ 7ಕ್ಕಿಂತ ಮೊದಲು ಸೃಷ್ಟಿಯಾದ ಆಸ್ತಿಗಳಿಗೆ ಮಾತ್ರ ಅನ್ವಯಿಸಲಿದೆ.
ಈ ಮಸೂದೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ಬಡಾವಣೆಗಳಲ್ಲಿನ ರಸ್ತೆಗಳು ಮತ್ತು ಒಳಚರಂಡಿಗಳನ್ನು ಪಂಚಾಯತಿ ವಶಕ್ಕೆ ಪಡೆಯುವ ಅಧಿಕಾರ ನೀಡಲಿದೆ. ಬಡಾವಣೆಗಳಲ್ಲಿ ಕೆಲ ರಸ್ತೆಗಳು ಮಾಲೀಕತ್ವ ಖಾಸಗಿ ವ್ಯಕ್ತಿಗಳ ಹೆಸರಿನಲ್ಲಿರುತ್ತದೆ. ಜನರ ಆರೋಗ್ಯ ಹಾಗೂ ಅನುಕೂಲದ ದೃಷ್ಟಿಯಿಂದ ಇಂತಹ ರಸ್ತೆಗಳು ಮತ್ತು ಚರಂಡಿಗಳ ದುರಸ್ತಿ ಅಗತ್ಯವೆಂದು ಕಂಡುಬಂದರೆ ಅವುಗಳನ್ನು ಸರ್ಕಾರದ ವಶಕ್ಕೆ ಪಡೆಯಲು ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ.
ಈ ಮಸೂದೆಯ ಸೆಕ್ಷನ್ 165 ಅನ್ನು ಸೇರ್ಪಡೆಗೊಳಿಸಲಾಗಿದ್ದು, ರಾಜ್ಯ ಚುನಾವಣಾ ಆಯೋಗದಿಂದ ನೇಮಕಗೊಂಡ ಮತದಾರರ ನೋಂದಣಿ ಅಧಿಕಾರಿಯು ಗ್ರಾಮ ಪಂಚಾಯಿತಿಯ ಪ್ರತಿಯೊಂದು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮತದಾರರ ಪಟ್ಟಿಯನ್ನು ತಯಾರಿಸಬೇಕು ಮತ್ತು ನವೀಕರಿಸುವ ಅಂಶ ಸೇರಿಸಲಾಗಿದೆ.
ಮತದಾರರ ನೋಂದಣಿ ಅಧಿಕಾರಿಯು, ಕ್ಷೇತ್ರಗಳ ಮತದಾರರ ಪಟ್ಟಿಯನ್ನು ತಯಾರಿಸಲು ಮತ್ತು ಪರಿಷ್ಕರಿಸಲು ಅರ್ಹ ಅಧಿಕಾರಿಗಳನ್ನು ಅಥವಾ ಸರ್ಕಾರಿ ನೌಕರರನ್ನು ಅಥವಾ ಸ್ಥಳೀಯ ಪ್ರಾಧಿಕಾರಗಳ ನೌಕರರನ್ನು ಬೂತ್ ಮಟ್ಟದ ಅಧಿಕಾರಿ / ಬೂತ್ ಮಟ್ಟದ ಅಧಿಕಾರಿಯ ಮೇಲ್ವಿಚಾರಕರನ್ನಾಗಿ ನಿಯೋಜಿಸಬಹುದು.
ಕರ್ನಾಟಕ ಅಂಗಡಿಗಳು ಹಾಗೂ ವಾಣಿಜ್ಯ ಸಂಸ್ಥೆಗಳ (ತಿದ್ದುಪಡಿ) ಮಸೂದೆ- 2026
ವೃತ್ತಿಪರ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ–2020ರ (ಕೇಂದ್ರ ಕಾಯ್ದೆ 37/2020) ಅಡಿಯಲ್ಲಿ ಈಗಾಗಲೇ ನೋಂದಾಯಿತವಾಗಿರುವ ಸಂಸ್ಥೆಗಳಿಗೆ ಮರು ನೋಂದಣಿಯಿಂದ ವಿನಾಯಿತಿ ನೀಡುವ ಮಸೂದೆ ಇದಾಗಿದೆ.
ಎಲೆಕ್ಟ್ರಾನಿಕ್ ಅಥವಾ ಡಿಜಿಟಲ್ ಮಾದರಿಯ ಶುಲ್ಕ ಪಾವತಿ ವಿಧಾನವನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ. ಮೂಲ ಕಾಯ್ದೆ ಪ್ರಕರಣ 6ಬಿಮತ್ತು 6ಸಿಅನ್ನು ಸೇರ್ಪಡೆಗೊಳಿಸುವ ಮೂಲಕ ಸೇವಾ ಪ್ರಮಾಣಪತ್ರ ನೀಡುವುದು ಮತ್ತು ದಾಖಲೆಗಳನ್ನು ತಡೆಹಿಡಿಯುವುದನ್ನು ನಿಷೇಧಿಸಲು ಪ್ರಸ್ತಾಪಿಸಲಾಗಿದೆ.
ಅಪರಾಧಗಳನ್ನು ಅಪರಾಧಮುಕ್ತಗೊಳಿಸುವುದು ಹಾಗೂ ಸುಗಮಗೊಳಿಸುವುದು ಮತ್ತು ಸುಲಭ ಜೀವನ ಹಾಗೂ ಸುಲಭ ವ್ಯಾಪಾರಕ್ಕಾಗಿ ವಿಶ್ವಾಸಾರ್ಹ ಆಡಳಿತವನ್ನು ಮತ್ತಷ್ಟು ಹೆಚ್ಚಿಸಲು ಉದ್ದೇಶಿಸಲಾಗಿದೆ. ಅಪರಾಧಗಳ ರಾಜಿ ಸಂಧಾನಕ್ಕೆ ಸಂಬಂಧಿಸಿದ ನಿಬಂಧನೆಗಳನ್ನು ವಿಧಿಸಲು ಪ್ರಸ್ತಾಪಿಸಲಾಗಿದೆ.
ಕರ್ನಾಟಕ ನೋಂದಣಿ ತಿದ್ದುಪಡಿ ಮಸೂದೆ–2026
ಉಪ ನೋಂದಣಿ ಕಚೇರಿಗಳಲ್ಲಿ ಭೌತಿಕ ಉಪಸ್ಥಿತಿ ಇಲ್ಲದೇ ಇ-ನೋಂದಣಿಗೆ ಅವಕಾಶ ಕಲ್ಪಿಸುವ ಮಸೂದೆ ಇದಾಗಿದೆ. ಆ ಮೂಲಕ ನೋಂದಣಿ ಪ್ರಕ್ರಿಯೆಯನ್ನು ಸರಳೀಕರಿಸಲು ಉದ್ದೇಶಿಸಲಾಗಿದೆ.
ಆಸ್ತಿ ನೋಂದಣಿ ಸಮಯದಲ್ಲಿ ಉಪ-ನೋಂದಣಾಧಿಕಾರಿಗಳು (ಸಬ್ ರಿಜಿಸ್ಟ್ರಾರ್) ಸಾರ್ವಜನಿಕ ಹಿತಾಸಕ್ತಿಯಲ್ಲಿ ಸೂಕ್ತ ಪರಿಶೀಲನೆ ನಡೆಸುವುದನ್ನು ಖಚಿತಪಡಿಸಿಕೊಳ್ಳುವ ಮಸೂದೆಯಾಗಿದೆ.
ನಗರ ಪ್ರದೇಶಗಳಲ್ಲಿ ಅಕ್ರಮ ಆಸ್ತಿ ನೋಂದಣಿಯನ್ನು ತಡೆಯಲು ಮತ್ತು ಆಸ್ತಿ ನೋಂದಣಿ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಲು ಆಸ್ತಿ ತಂತ್ರಾಂಶಗಳನ್ನು ಸಂಯೋಜಿಸುವ ಅಂಶವನ್ನು ಮಸೂದೆಯಲ್ಲಿ ಸೇರ್ಪಡೆಗೊಳಿಸಲಾಗಿದೆ.
ಈ ಮಸೂದೆಯಲ್ಲಿ ಉಪ-ನೋಂದಣಾಧಿಕಾರಿಗಳ ಕಚೇರಿಯಲ್ಲಿ ಖರೀದಿದಾರ/ಮಾರಾಟಗಾರ ಭೌತಿಕ ಉಪಸ್ಥಿತಿಯಿಲ್ಲದೆ ಕಡ್ಡಾಯವಾಗಿ ನೋಂದಾಯಿಸಬೇಕಾದ ಕೆಲವು ದಾಖಲೆಗಳ ಇ-ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಆ ಮೂಲಕ ಖರೀದಿದಾರ ಅಥವಾ ಮಾರಾಟಗಾರ ಉಪನೋಂದಾಣಿ ಕಚೇರಿಗೆ ಹೋಗಬೇಕಾಗಿಲ್ಲ. ತಾವಿರುವ ಸ್ಥಳದಿಂದಲೇ ರಿಮೋಟ್ ಏರಿಯಾದಿಂದ ದಾಖಲೆಗಳ ನೋಂದಣಿ ಮಾಡಬಹುದಾಗಿದೆ.
ಇಲಾಖೆಯ ಪೋರ್ಟಲ್ ಅಥವಾ ತಂತ್ರಾಂಶವನ್ನು ವಂಚನೆಯಿಂದ ತಿರುಚುವುದು ಅಥವಾ ಹ್ಯಾಕ್ ಮಾಡುವುದಕ್ಕೆ ದಂಡ ವಿಧಿಸುವ ಅಂಶವನ್ನೂ ಮಸೂದೆಯಲ್ಲಿ ಸೇರಿಸಲಾಗಿದೆ.
* 2026ನೇ ಸಾಲಿನ ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ತಿದ್ದುಪಡಿ ಮಸೂದೆ
* 2026ನೇ ಸಾಲಿನ ಕರ್ನಾಟಕ ಕೈಗಾರಿಕೆ ಸೌಲಭ್ಯ ತಿದ್ದುಪಡಿ ಮಸೂದೆ
* 2026ನೇ ಸಾಲಿನ ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ಮಸೂದೆ
* 2026ನೇ ಸಾಲಿನ ಕರ್ನಾಟಕ ಅಂಗಡಿಗಳ ಮತ್ತು ವಾಣಿಜ್ಯ ಕಾರ್ಯ ಸಂಸ್ಥೆಗಳ ತಿದ್ದುಪಡಿ ಮಸೂದೆ
* 2026ನೇ ಸಾಲಿನ ಕರ್ನಾಟಕ ನೋಂದಣಿ ತಿದ್ದುಪಡಿ ಮಸೂದೆ
* 2026ನೇ ಸಾಲಿನ ಕರ್ನಾಟಕ ಭೂ ಕಂದಾಯ ತಿದ್ದುಪಡಿ ಮಸೂದೆ
* 2026ನೇ ಸಾಲಿನ ಕರ್ನಾಟಕ ಗ್ರಾಮ ಸ್ವಾರಾಜ್ ಪಂಚಾಯತ್ ರಾಜ್ (ಎರಡನೇ ತಿದ್ದುಪಡಿ) ವಿಧೇಯಕ
* 2026ನೇ ಸಾಲಿನ ಕರ್ನಾಟಕ ಸರ್ಕಾರಿ ಉದ್ಯಾನಗಳ ಸಂರಕ್ಷಣೆ ತಿದ್ದುಪಡಿ ಮಸೂದೆ.