
ದೇವದುರ್ಗದಲ್ಲಿ ನಿಲ್ಲದ ಮರಳು ಅಕ್ರಮ ಸಾಗಣೆ
ದೇವದುರ್ಗ: ಜಿಲ್ಲೆಯ ದೇವದುರ್ಗ ತಾಲ್ಲೂಕಿನಾದ್ಯಂತ ನಡೆಯುತ್ತಿರುವ ಮರಳು ಅಕ್ರಮ ಗಣಿಗಾರಿಕೆ ತಡೆಯುವಲ್ಲಿ ಜಿಲ್ಲಾಡಳಿತ ಸಂಪೂರ್ಣವಾಗಿ ಸೋತಿದೆ.
ಇಲಾಖೆಗಳ ನಡುವಿನ ಸಮನ್ವಯ ಕೊರತೆಯೇ ಇದಕ್ಕೆ ಕಾರಣ. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ದಂಧೆಕೋರರು ಹಗಲು-ರಾತ್ರಿ ಎನ್ನದೆ ಮರಳು ಸಾಗಣೆಯಲ್ಲಿ ನಿರತರಾಗಿದ್ದಾರೆ.
ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಮರುಳು ಸಾಗಣೆ ಮಾಡುವ ಭಾರತ್ ಬೆಂಜ್ ಟಿಪ್ಪರ್ ಗಳಿಂದಾಗಿ ಗ್ರಾಮೀಣ ರಸ್ತೆ ಸೇರಿದಂತೆ ಪಟ್ಟಣದ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟು ಹೋಗಿವೆ. ತಾಲ್ಲೂಕಿನ ಗ್ರಾಮಗಳಾದ ಕೋಣಚಪ್ಪಳಿ, ಮೇದರಗೋಳ, ಕುರ್ಕಿಹಳ್ಳಿ, ಕೊಪ್ಪರ, ಗೂಗಲ್, ಲಿಂಗದಳ್ಳಿ, ನವಿಲುಗುಡ್ಡ, ಹೇರುಂಡಿ, ಭಾಗೂರು, ಜೋಳದಹೆಡಗಿ, ಹೂವಿನಹೆಡಗಿ, ಗೋಪಾಳಾಪುರ, ನಗರಗುಂಡ ಮತ್ತು ದೇವದುರ್ಗದಿಂದ ಶಹಾಪುರಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಸೇರಿದಂತೆ ತಾಲ್ಲೂಕಿನ ಕೃಷ್ಣಾ ನದಿ ತೀರದ ಬಹುತೇಕ ಹಳ್ಳಿಯ ರಸ್ತೆಯ ಪರಿಸ್ಥಿತಿ ಇದೆ ಸ್ಥಿತಿಯಲ್ಲಿದೆ.
20 ರಿಂದ 25 ಟನ್ ತೂಕವಿರುವ ಈ ಗಾಡಿಗಳು 35 ರಿಂದ 40 ಟನ್ ಮರಳು ಸಾಗಣೆ ಮಾಡುತ್ತಿವೆ. ಅಂದರೆ 50 ರಿಂದ 60 ಟನ್ ತೂಕದ ಈ ಗಾಡಿಗಳ ಓಡಾಟದಿಂದಾಗಿ ರಸ್ತೆಗಳು ಸಂಪೂರ್ಣವಾಗಿ ಹದಗೆಡುತ್ತಿವೆ. ಇದರಿಂದ ರಸ್ತೆ ಮಧ್ಯದಲ್ಲಿ ಎಲ್ಲೆಂದರಲ್ಲಿ ತೆಗ್ಗು ಬಿದ್ದಿವೆ. ಲಾರಿಗಳ ಸಾಮರ್ಥ್ಯಕ್ಕೂ ಮೀರಿ ಓವರ್ ಲೋಡ್ ಮಾಡಿಕೊಂಡು ಬರುವ ಗಾಡಿಗಳು ದೇವದುರ್ಗ ಪಟ್ಟಣದ ಮೂಲಕ ಹಾದು ಯಾದಗಿರಿ, ಕಲಬುರ್ಗಿ, ಬೀದರ್ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಮರಳು ಸಾಗಣೆ ಮಾಡುತ್ತಿವೆ.
ಅತಿಯಾದ ಮರಳು ಸಾಗಾಣಿಕೆ ವಾಹನಗಳಿಂದ ದೇವದುರ್ಗ ಪಟ್ಟಣ ದೂಳಿನ ಪಟ್ಟಣವಾಗುತ್ತಿದೆ. ರಸ್ತೆಯ ಮೇಲೆ ಎಲ್ಲೆಂದರಲ್ಲಿ ಮರಳು ಬಿದ್ದಿದ್ದು ಸಾರ್ವಜನಿಕರಿಗೆ ದೂಳಿನ ಸಮಸ್ಯೆ ಎದುರಾಗುತ್ತಿದೆ . ಪಟ್ಟಣದ ಪುರಸಭೆಯ ಸಿಬ್ಬಂದಿಗೆ ಮರಳು ತೆರವುಗೊಳಿಸುವುದೆ ದೊಡ್ಡ ಕೆಲಸವಾಗಿದೆ.
ಅಕ್ರಮ ಮರಳು ದಂಧೆಗೆ ಪೊಲೀಸರೇ ರಕ್ಷಕರು: ಆರೋಪ–ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಅಕ್ರಮ ಮರಳು ದಂಧೆ ದೇವದುರ್ಗ ತಾಲ್ಲೂಕಿನಲ್ಲಿ ನಡೆಯುತ್ತದೆ. ಅಕ್ರಮ ಮರಳು ದಂಧೆಗೆ ಪೊಲೀಸರೇ ರಕ್ಷಕರಾಗಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಯಾಗುತ್ತಿದೆ.
ಕಳೆದ ಒಂದು ವರ್ಷದಲ್ಲಿ ತಾಲ್ಲೂಕಿನಲ್ಲಿ ನದಿ ತೀರದ ಸುಮಾರು 40 ಬ್ಲಾಕ್ ಗಳಲ್ಲಿ ಸುಮಾರು 28,863 ಮೆಟ್ರಿಕ್ ಟನ್ ಮರಳು ಜಪ್ತಿ ಮಾಡಿದ್ದಾರೆ. ಜಪ್ತಿ ಮಾಡಿದ ಮರಳು ನಿಯಮಾನುಸಾರ ಟೆಂಡರ್ ಮೂಲಕ ವಿಲೇವಾರಿ ಮಾಡಿ ಸ್ಥಳೀಯ ಸರ್ಕಾರಿ ಕಾಮಗಾರಿಗಳಿಗೆ ಒದಗಿಸಬೇಕೆಂಬ ನಿಯಮವಿದೆ. ಆದರೆ, ಅನೇಕ ಸಂದರ್ಭಗಳಲ್ಲಿ ಜಪ್ತಿ ಮಾಡಿದ ಬಹುತೇಕ ಮರಳು ರಾತ್ರೋ ರಾತ್ರಿ ಪೊಲೀಸರ ರಕ್ಷಣೆಯಲ್ಲಿ ದಂಧೆ ಕೋರರು ವಿಲೇಮಾರಿ ಮಾಡಿರುವುದು ಗಟ್ಟಾಗಿ ಉಳಿದಿಲ್ಲ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಯಾವುದೇ ರಾಯಲ್ಟಿ ಪಾವತಿಸಿಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನಿ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. 5-6 ಪೊಲೀಸ್ ಕಾನ್‌ಸ್ಟೆಬಲ್‌ಗಳು ರಾತ್ರೋರಾತ್ರಿ ನದಿ ತೀರದ ಗ್ರಾಮಗಳಲ್ಲಿ ಅಕ್ರಮ ಮರಳು ದಂಧೆ ಕೋರರೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಕರ್ಕಿಹಳ್ಳಿ ಮತ್ತು ನಗರಗುಂಡ ಗ್ರಾಮಸ್ಥರ ಆರೋಪವಾಗಿದೆ. ಅಲ್ಲದೆ ಪೊಲೀಸ್ ಇಲಾಖೆಯ ಅಧಿಕಾರಿಗಳೂ ಅಕ್ರಮ ಮರಳು ದಂಧೆ ಕೋರರಿಂದ ಹಣ ಸಂಗ್ರಹಕ್ಕೆ ಜಿಲ್ಲೆಯ ಸಿಂಧನೂರು ಮತ್ತು ಮಸ್ಕಿ ಪೊಲೀಸ್ ಠಾಣೆಯ ಸಿಬ್ಬಂದಿ ನೇಮಕ ಮಾಡಿಕೊಂಡಿದ್ದಾರೆ ಎಂದು ನದಿ ದಂಡೆ ಗ್ರಾಮಗಳ ಜನ ಆಡಿಕೊಳ್ಳುತ್ತಿದ್ದಾರೆ.
ಅಕ್ರಮ ಮರಳು ಸಾಗಾಣಿಕೆಯಲ್ಲಿ ಬರುವ ಲಾಭದಲ್ಲಿ ಶೇಕಡ 50ರಷ್ಟು ಪೊಲೀಸ್ ಇಲಾಖೆಗೆ ಲಂಚ ಹೋಗುತ್ತದೆ ಎಂದು ಟಿಪ್ಪರ್ ಮಾಲೀಕರು ಮತ್ತು ಟ್ರ್ಯಾಕ್ಟರ್ ಮಾಲೀಕರು ಹೋಟೆಲ್‌ಗಳಲ್ಲಿ ಚರ್ಚೆ ಮಾಡುತ್ತಿದ್ದಾರೆ. ಒಬ್ಬೊಬ್ಬ ಅಧಿಕಾರಿಯು ಒಬ್ಬೊಬ್ಬ ಕಾನ್‌ಸ್ಟೆಬಲ್ ಗಳನ್ನು ನೇಮಕ ಮಾಡಿಕೊಂಡಿದ್ದಾರೆ ಹಗಲು ರಾತ್ರಿ ಎನ್ನದೆ ಅಕ್ರಮ ಮರಳು ದಂಧೆ ಕೋರರನ್ನು ಹಿಡಿಯುತ್ತಾರೆ ಹಣ ಕೊಟ್ಟವರನ್ನು ಅಲ್ಲೇ ಬಿಡುತ್ತಾರೆ. ಹಣ ಕೊಡದವರನ್ನು ಠಾಣೆಗೆ ಕರೆತಂದು ಕೇಸು ದಾಖಲಿಸುತ್ತಾರೆ. ಇವರು ಯಾವುದೇ ಅಕ್ರಮ ತಡೆಯುತ್ತಿಲ್ಲ ಬದಲಿಗೆ ಅಕ್ರಮ ಮಾಡಿ ನಮಗೆ ತಿಂಗಳಿಗೆ ಹಣ ನೀಡಿ ಎಂದು ಒತ್ತಾಯಿಸುತ್ತಾರೆ ಎಂದು ಹೆಸರು ಹೇಳಲಿಚ್ಚಿಸದ ಟಿಪ್ಪರ್ ಚಾಲಕರು ಹೇಳುತ್ತಾರೆ.
ಮರಳು ದಂಧೆ ನಡೆಸುವವರ ಹಾಗೂ ಪೊಲೀಸರ ನಡುವಿನ ವ್ಯವಹಾರದ ಆಡಿಯೊ, ವಿಡಿಯೊ ಮತ್ತು ಕರೆ ಮಾಡಿದ ಕಾಲ್ ಲಿಸ್ಟ್ ಮಾಹಿತಿ ಪಡೆದು ಹಿರಿಯ ಅಧಿಕಾರಿಗಳು ಇಲಾಖೆಯ ಅಕ್ರಮಗಳಿಗೆ ಬೆಂಬಲಿಸುವ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಸೂಚಿಸಬೇಕು ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸರೆ ಅಕ್ರಮದಲ್ಲಿ ಭಾಗಿಯಾದರೆ ಜನಸಾಮಾನ್ಯರ ಗತಿ ಏನು? ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಂಧೆ ಕೊರರಿಗೆ ಸಹಕರಿಸುವ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ವಕೀಲ ಮರೀಲಿಂಗಪ್ಪ ಕೋಳೂರು ಒತ್ತಾಯಿಸುತ್ತಾರೆ
ನಂಬರ್ ಪ್ಲೇಟ್ ಇಲ್ಲದ ವಾಹನ
ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಣೆ ನಿಂತಿಲ್ಲ. ಪೊಲೀಸರು, ಗಣಿ ಮತ್ತು ಭೂವಿಜ್ಞಾನ, ಕಂದಾಯ ಇಲಾಖೆ ಅಧಿಕಾರಿಗಳಿಗೆ ದಂಧೆಕೋರರು ಮಾಮೂಲು ಕೊಟ್ಟು ಅಕ್ರಮ ದಂಧೆ ಮುಂದುವರಿಸಿದ್ದಾರೆ. ದಂಧೆಕೋರರು ವಾಹನದ ದಾಖಲೆಗಳು ಸಿಗದಂತಾಗಲು ಟಿಪ್ಪರ್ ಹಾಗೂ ಲಾರಿಗಳ ನಂಬರ್ ಪ್ಲೇಟ್‌ಗಳನ್ನೇ ತೆಗೆದು ಹಾಕಿದ್ದಾರೆ. ಆರ್ ಟಿ ಓ ತಾಲ್ಲೂಕಿಗೆ ಭೇಟಿ ನೀಡಿದರು ನಂಬರ್ ಪ್ಲೇಟ್ ಇಲ್ಲದ ಗಾಡಿಗಳಿಗೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ.ಅಪರೂಪಕ್ಕೆ ಒಂದೆರಡು ಲಾರಿಗಳನ್ನು ಹಿಡಿದು ಕಾಟಚಾರಕ್ಕೆ ದಂಡ ವಿಧಿಸುತ್ತಾರೆ. ನಂಬರ್ ಪ್ಲೇಟ್ ಇಲ್ಲದ ಗಾಡಿಗಳನ್ನು ಸೀಜ್ ಮಾಡಿ ನೋಂದಣಿ ರದ್ದು ಮಾಡಿದಾಗ ಮಾತ್ರ ಅಕ್ರಮಗಳಿಗೆ ಕಡಿವಾಣ ಬೀಳಲಿದೆ.
ವಾಹನಗಳಿಗೆ ನಂಬರ್ ಪ್ಲೇಟ್ ಇಲ್ಲದೆ ಓವರ್ ಲೋಡ್ ಮರಳು ಸಾಗಿಸುವ ವಾಹನಗಳಿಗೆ ಪೋಲಿಸ್ ಇಲಾಖೆ ಮತ್ತು ಆರ್‌ಟಿಒ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಇರುವುದು ದುರಂತ' ಎನ್ನುತ್ತಾರೆ ಕೃಷಿ ಕೂಲಿ ಕಾರ್ಮಿಕರ ಸಂಘಟನೆ ದೇವದುರ್ಗ ತಾಲ್ಲೂಕು ಘಟಕ ಅಧ್ಯಕ್ಷ ಲಿಂಗಣ್ಣ ಮಕಾಶಿ.
ನಂಬರ್ ಪ್ಲೇಟ್ ಇಲ್ಲದ ಟಿಪ್ಪರ್ ಹಾಗೂ ಲಾರಿಗಳಿಗೆ ₹ 300 ದಂಡ ವಿಧಿಸಲಾಗುತ್ತಿದೆ. ಸಿಬ್ಬಂದಿಯ ಕೊರತೆ ಇದೆ. ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗೆ ನಾನು ಒಬ್ಬನೇ ಅಧಿಕಾರಿ ಇದ್ದೇನೆ. ಈಚೆಗಷ್ಟೇ ರಾಯಚೂರು ಜಿಲ್ಲೆಯ ಹೆಚ್ಚುವರಿ ಕಾರ್ಯಭಾರ ವಹಿಸಿಕೊಂಡಿರುವೆ. ಸಿಬ್ಬಂದಿ ಕೊರತೆ ಇದ್ದರೂ ನಂಬರ್ ಪ್ಲೇಟ್ ಇಲ್ಲದ ವಾಹನಗಳಿಗೆ ದಂಡ ವಿಧಿಸುವ ಪ್ರಕ್ರಿಯೆ ಮುಂದುವರಿದಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿ ಹೇಳುತ್ತಾರೆ.
ಚಿನ್ನದ ಗಣಿ ಕಂಪನಿ ನಿರ್ಲಕ್ಷ್ಯ: ಆರೋಪ
ಸರ್ಕಾರಿ ಸೌಮ್ಯದ ಹಟ್ಟಿ ಚಿನ್ನದ ಗಣಿ ಕಂಪನಿಗೆ ರಾಜ್ಯದ ಮರಳು ಗಣಿಗಾರಿಕೆ ಜವಾಬ್ದಾರಿಯನ್ನು ಸರ್ಕಾರ ವಹಿಸಿದೆ. ಆದರೆ ಹಟ್ಟಿ ಚಿನ್ನದ ಗಣಿ ಕಂಪನಿಯ ಕೆಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಮರಳು ದಂದೆಕೋರರಿಗೆ ಪರೋಕ್ಷ ಸಹಕಾರ ನೀಡುವ ದೂರುಗಳು ಇವೆ.
ಅಕ್ರಮ ತಡೆಯಲು ವಿಜಿಲೆನ್ಸ್ ತಂಡ ರಚಿಸಲಾಗಿದೆ. ನಿಯಮಾನುಸಾರ ಅಕ್ರಮಕ್ಕೆ ಕಡಿವಾಣ ಹಾಕುತ್ತೇವೆ. ಕರ್ಕಿಹಳ್ಳಿಯಲ್ಲಿ ಜಪ್ತಿ ಮಾಡಿದ್ದ ₹70 ಲಕ್ಷ ಬೆಲೆ ಬಾಳುವ ಮರಳು ವಿಲೇವಾರಿ ಮಾಡಿದ್ದು ನಿಯಮಬಾಹಿರ
ಜಿಲ್ಲಾ ಮರಳು ಸಮಿತಿ ಅಧ್ಯಕ್ಷೆ, ಜಿಲ್ಲಾಧಿಕಾರಿ
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260824-32-478038140