
ಕಾರು ರೇಸಿಂಗ್ ವೇಳೆ ಅಪಘಾತ: ಪ್ರಾಣಾಪಾಯದಿಂದ ಪಾರಾದ ಅಜಿತ್ ಕುಮಾರ್ ಹೇಳಿದ್ದಿಷ್ಟು
ತಮಿಳಿನ ಸೂಪರ್ ಸ್ಟಾರ್ ಅಜಿತ್ ಕುಮಾರ್ ಅವರಿಗೆ ಬೈಕ್ ರೈಡಿಂಗ್ ಮತ್ತು ಕಾರು ರೇಸಿಂಗ್ ಮೇಲೆ ಒಲವು ಜಾಸ್ತಿ. ಆಗಾಗ ಬೈಕ್ ರೈಡಿಂಗ್ ಮತ್ತು ಕಾರು ರೇಸಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಲೇ ಇರುತ್ತಾರೆ. ಹೀಗೆ ಯುರೋಪ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಅತಿ ವೇಗದ ಕಾರು ರೇಸಿಂಗ್ ವೇಳೆ ಅಪಘಾತ ಸಂಭವಿಸಿದ್ದು, ನಟ ಅಜಿತ್ ಕುಮಾರ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಯುರೋಪ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ‘ಮೈಕೆಲಿನ್ ಲೆ ಮ್ಯಾನ್ಸ್ ಕಪ್’ (Michelin Le Mans Cup) ರೇಸಿಂಗ್ ಸ್ಪರ್ಧೆಯಲ್ಲಿ ನಟ ಅಜಿತ್ ಭಾಗಿಯಾಗಿದ್ದರು. ಅದೇ ವೇಳೆ ಟ್ರ್ಯಾಕ್‌ನ ತಿರುವಿನಲ್ಲಿ ಏಕಾಏಕಿ ಕಾರು ನಿಯಂತ್ರಣ ಕಳೆದುಕೊಂಡಿದೆ. ಇದರಿಂದ ಕಾರು ಸ್ಥಳದಲ್ಲೇ ನಿಂತು ಹೋಗಿದೆ. ಕಾರಿನಿಂದ ಹೊಗೆ ಆವರಿಸಿದೆ. ವರದಿಯ ಪ್ರಕಾರ, ಅಪಘಾತದ ತೀವ್ರತೆ ಹೆಚ್ಚಾಗಿದ್ದರೂ ಅಜಿತ್‌ಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ.
ಇನ್ನು, ನಟ ಅಜಿತ್ ಕುಮಾರ್ ಅವರಿಗೆ ಕಾರು, ಬೈಕ್ ರೇಸಿಂಗ್ ವೇಳೆ ಅಪಘಾತ ಸಂಭವಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಇಟಲಿಯಲ್ಲಿ ನಡೆದ ಜಿಟಿ4 ಯುರೋಪಿಯನ್ ಸರಣಿಯಲ್ಲೂ ಅವರಿದ್ದ ಕಾರು ಅಪಘಾತಕ್ಕೀಡಾಗಿತ್ತು. ಸ್ಪೇನ್‌ನ ವೇಲೆನ್ಸಿಯಾದಲ್ಲಿ ನಡೆದ ಪೋರ್ಷೆ ಸ್ಪ್ರಿಂಟ್ ಚಾಲೆಂಜ್ ವೇಳೆ ಕಾರು ಪಲ್ಟಿ ಹೊಡೆದಿದ್ದರೂ ನಟ ಅಜಿತ್ ಪಾರಾಗಿದ್ದರು. ದುಬೈ 24H ಎಂಡ್ಯುರೆನ್ಸ್ ರೇಸ್‌ನ ಅಭ್ಯಾಸದ ವೇಳೆ ಪೋರ್ಷೆ ಕಾರು ಅಪಘಾತಕ್ಕೀಡಾಗಿತ್ತು.
ರೇಸಿಂಗ್‌ನಲ್ಲಿ ಸಂಭವಿಸುವ ಅಪಘಾತಗಳ ಕುರಿತು ಮಾತನಾಡಿದ ಅಜಿತ್ ಕುಮಾರ್, ‘ಕಾರು ಅಪಘಾತವಾದಾಗ ನನಗೆ ಗಾಯವಾಗಿದೆಯೇ? ಕಾರನ್ನು ಮತ್ತೆ ಚಲಾಯಿಸಬಹುದೇ? ಎಂಬುದಷ್ಟೇ ತಕ್ಷಣದ ಆಲೋಚನೆಯಾಗಿರುತ್ತದೆ. ಆದರೆ, ರೇಸ್‌ಗಿಂತ ಹೆಚ್ಚಾಗಿ ಕುಟುಂಬದ ಬಗ್ಗೆ ಭಯವಾಗುತ್ತದೆ. ನಮ್ಮಿಂದಾಗಿ ಅವರು ಕಷ್ಟವನ್ನು ಅನುಭವಿಸುವುದು ಸರಿಯಲ್ಲ. ನಾನು ನಟ ಆಗಿರುವುದರಿಂದ ಈ ಅಪಘಾತಗಳು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತವೆ. ಸಿನಿಮಾ ರಂಗದಲ್ಲಿದ್ದಾಗ ನಾನು ಬರೋಬ್ಬರಿ 29 ಸಲ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೆ’ ಎಂದರು.
ಇತ್ತೀಚೆಗಷ್ಟೇ ‘ವಿಡಾಮುಯರ್ಚಿ’ ಹಾಗೂ ‘ಗುಡ್ ಬ್ಯಾಡ್ ಅಗ್ಲಿ’ ಬಿಡುಗಡೆ ಬೆನ್ನಲ್ಲೇ ಅಜಿತ್, ಪ್ರಸ್ತುತ ಅಧಿಕ್ ರವಿಚಂದ್ರನ್ ನಿರ್ದೇಶನದ ‘ಡೇರ್‌ಡೆವಿಲ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಅಜಿತ್ ಅವರ ಈ ಅಪಾಯಕಾರಿ ಮೋಟಾರ್ ಸ್ಪೋರ್ಟ್ಸ್ ಪಯಣ ಮತ್ತು ರೇಸಿಂಗ್ ಜೀವನದ ಕುರಿತು ‘ಗ್ಲಾಡಿಯೇಟರ್ಸ್’ ಎಂಬ ವಿಶೇಷ ಸಾಕ್ಷ್ಯಚಿತ್ರ ಸಿದ್ಧವಾಗುತ್ತಿದ್ದು, ಇತ್ತೀಚೆಗಷ್ಟೇ ಇದರ ಪೋಸ್ಟರ್ ಬಿಡುಗಡೆಯಾಗಿ ಸಾಕಷ್ಟು ಸದ್ದು ಮಾಡಿತ್ತು.