
ಹೊನ್ನೆಕೂಡಿಗೆ ಏತನೀರಾವರಿ ಯೋಜನೆ ಪೂರ್ಣಗೊಳ್ಳದೆ ನೆನೆಗುದಿಗೆ
ಹೊನ್ನೆಕೂಡಿಗೆ (ನರಸಿಂಹರಾಜಪುರ): ತಾಲ್ಲೂಕಿನ ಹೊನ್ನೆಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷಿಗೆ ನೀರಾವರಿ ಸೌಲಭ್ಯ ಒದಗಿಸಲು ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ತರಬೇಕು ಎಂದು ಡಿ.ಬಿ. ಚಂದ್ರೇಗೌಡ ಅವರು ರಾಜ್ಯದ ಸಣ್ಣ ನೀರಾವರಿ ಖಾತೆ ಸಚಿವರಾಗಿದ್ದಾಗಿನಿಂದಲೂ ಮನವಿ ಸಲ್ಲಿಸುತ್ತಾ ಬಂದಿದ್ದು ಇದುವರೆಗೂ ಯೋಜನೆ ಪೂರ್ಣಗೊಳ್ಳದೆ ನನೆಗುದಿಗೆ ಬಿದ್ದಿದೆ ಎಂದು ತಾಲ್ಲೂಕು ಬೋರ್ಡ್ ಮಾಜಿ ಸದಸ್ಯ ಎಚ್.ಎಸ್.ಕೃಷ್ಣಯ್ಯ ಬೇಸರ ವ್ಯಕ್ತಪಡಿಸಿದರು.
ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, 1959– 60ರಲ್ಲಿ ಭದ್ರಾ ಅಣೆಕಟ್ಟಿನಿಂದ ಹಳ್ಳಿಯ ಜಮೀನುಗಳು ಮುಳುಗಡೆಯಾಗಿ ಭತ್ತ ಬೆಳೆಯಲು ಸಾಧ್ಯವಾಗದಿದ್ದರಿಂದ ತಾಲ್ಲೂಕಿನ ಕಸಬಾ ಹೋಬಳಿಯ ಹೊನ್ನೇಕೂಡಿಗೆ, ಸಾಲೂರು, ಹಂದೂರು ಗ್ರಾಮಸ್ಥರ ಪರವಾಗಿ 1979ರ ಜನವರಿ 27ರಂದು ಮನವಿ ಸಲ್ಲಿಸಲಾಗಿತ್ತು. ಹೆಬ್ಬೆ ಸಮೀಪದ ದೋಣಿಗಂಡಿಯ ಹತ್ತಿರ ಭದ್ರಾನದಿಗೆ ಏತನೀರಾವರಿ ಯೋಜನೆ ಕೈಗೊಂಡರೆ 2 ಸಾವಿರ ಎಕರೆ ಜಮೀನಿಗೆ ನೀರಾವರಿ ಸೌಲಭ್ಯವಾಗುತ್ತದೆ. ಇದನ್ನು ಮಾಡಿಸಿಕೊಡಬೇಕೆಂದು ಒತ್ತಾಯಿಸಲಾಗಿತ್ತು.
ನಂತರ ಕಾವೇರಿ ಜಲಾನಯನ ಇಲಾಖೆಯ ಅಧಿಕಾರಿಗಳು ಸರ್ವೆ ಮಾಡಿ ಈ ಏತ ನೀರಾವರಿ ಯೋಜನೆಯಿಂದ 1,200 ಎಕರೆ ಜಮೀನಿಗೆ ಅನುಕೂಲವಾಗುತ್ತದೆ ಎಂದು ವರದಿ ಸಲ್ಲಿಸಿದ್ದರು. ಬಳಿಕ ಈ ಯೋಜನೆಯನ್ನು ಕಾವೇರಿ ಜಲಾನಯ ಇಲಾಖೆಯಿಂದ ಕೃಷ್ಣ ನೀರಾವರಿ ಇಲಾಖೆಗೆ ಸೇರಿಸಿದರು. 1991ರಲ್ಲಿ ಭದ್ರಾ ನದಿಯಿಂದ ನೀರೆತ್ತಲು ಅನುಮತಿ ದೊರೆಯಿತು.
2007– 08ರಲ್ಲಿ ಡಿ.ಎನ್. ಜೀವರಾಜ್ ಶಾಸಕರಾಗಿದ್ದಾಗ ಸರ್ಕಾರದಿಂದ ₹3.5 ಕೋಟಿ ಹಣ ಬಿಡುಗಡೆ ಮಾಡಿಸಿ ಹೆಬ್ಬೆ ದೋಣಿಗಂಡಿ ಹತ್ತಿರ ಪಂಪ್ ಹೌಸ್ ನಿರ್ಮಾಣ ಮಾಡಿಸಿ ಪೈಪ್‌ಗಳನ್ನು ತಂದು ಹಾಕಿಸಿದ್ದರು. ಅರಣ್ಯ ಇಲಾಖೆಯವರು ನೀರು ಸರಬರಾಜಾಗಿಗೆ ಪೈಪ್‌ಲೈನ್ ಅಳವಡಿಸುವ ಜಾಗ ಅರಣ್ಯಕ್ಕೆ ಸೇರಿರುವುದರಿಂದ ಇದರಲ್ಲಿ ಕಾಮಗಾರಿ ಮಾಡುವ ಹಾಗಿಲ್ಲ ಎಂದು ತಡೆ ಹಿಡಿದಿದ್ದರು. ನಂತರ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪೈಪ್‌ಲೈನ್ ಅಳವಡಿಸುವುದರಿಂದ ಅರಣ್ಯಕ್ಕೆ ಸಮಸ್ಯೆಯಿಲ್ಲ ಎಂದು ವರದಿ ಕೊಟ್ಟಿದ್ದಾರೆ. ಹಾಲಿ ಅರಣ್ಯ ಅಧಿಕಾರಿಗಳು ಸಹ ಒಪ್ಪಿಗೆ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಈ ಬಗ್ಗೆ ಹಾಲಿ ಶಾಸಕ ಟಿ.ಡಿ. ರಾಜೇಗೌಡರ ಗಮನಕ್ಕೂ ಅನೇಕ ಬಾರಿ ತರಲಾಗಿದ್ದು, ಯಾವುದೇ ಪ್ರಯೋಜವಾಗಿಲ್ಲ. ಈ ಯೋಜನೆ ಅನೇಕ ವರ್ಷಗಳಿಂದ ಅರಣ್ಯ ಇಲಾಖೆ ಅನುಮತಿ ದೊರೆಯದೆ ಕಾಮಗಾರಿ ನನೆಗುದಿಗೆ ಬಿದ್ದಿರುವ ಬಗ್ಗೆ 2026ರ ಏಪ್ರಿಲ್ 12ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾಲ್ಲೂಕು ಕೇಂದ್ರಕ್ಕೆ ಭೇಟಿ ನೀಡಿದಾಗ ಮನವಿ ಸಲ್ಲಿಸಿ ಯೋಜನೆ ಪೂರ್ಣಗೊಳಿಸುವಂತೆ ಒತ್ತಾಯಿಸಲಾಗಿದೆ ಎಂದರು.
ಹೊನ್ನೇಕೂಡಿಗೆ ಏತನೀರಾವರಿ ಯೋಜನೆಯ ಪೈಪ್ ಲೈನ್ ಅಳವಡಿಕೆಗೆ ಅರಣ್ಯ ಇಲಾಖೆ ಒಪ್ಪಿಗೆ ಬೇಕಾಗಿದೆ. ಸರ್ಕಾರ ಈ ಯೋಜನೆ ಪೂರ್ಣಗೊಳಿಸಿ ಕೃಷಿಗೆ ನೀರಾವರಿ ಸೌಲಭ್ಯ ಒದಗಿಸುವತ್ತ ಆದ್ಯತೆ ನೀಡಬೇಕು. ಎಚ್.ಎಸ್.ಕೃಷ್ಣಯ್ಯ, ತಾಲ್ಲೂಕು ಬೋರ್ಡ್ ಮಾಜಿ ಸದಸ್ಯ, ಹೊನ್ನೇಕೂಡಿಗೆ
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260815-126-405342708