ಬ್ರಿಟಿಷರ ನಿದ್ದೆಗೆಡಿಸಿದ್ದ ಕೋಗನೂರಿನ ವೀರರು..

ಬ್ರಿಟಿಷರ ನಿದ್ದೆಗೆಡಿಸಿದ್ದ ಕೋಗನೂರಿನ ವೀರರು..

ಬ್ರಿಟಿಷರ ನಿದ್ದೆಗೆಡಿಸಿದ್ದ ಕೋಗನೂರಿನ ವೀರರು..

ಶಿರಹಟ್ಟಿ: 1942ರಲ್ಲಿ ನಡೆದ ಕ್ವಿಟ್‌ ಇಂಡಿಯಾ ಚಳವಳಿ ವೇಳೆ ದೇಶದಾದ್ಯಂತ 550 ಅಂಚೆ ಕಚೇರಿಗಳು, 250 ರೈಲು ನಿಲ್ದಾಣಗಳು, 70ಕ್ಕೂ ಹೆಚ್ಚು ಪೊಲೀಸ್‌ ಠಾಣೆಗಳು, 83ಕ್ಕೂ ಹೆಚ್ಚು ಸರ್ಕಾರಿ ಕಚೇರಿಗಳು ಸ್ವಾತಂತ್ರ್ಯ ಹೋರಾಟಗಾರರ ಆಕ್ರೋಶಕ್ಕೆ ತುತ್ತಾದವು. ಇದರಿಂದ ಬ್ರಿಟಿಷರ ಬಂದೂಕಿನ ಗುಂಡಿಗೆ ನೂರಾರು ಸ್ವಾತಂತ್ರ್ಯ ಹೋರಾಟಗಾರರು ಪ್ರಾಣತೆತ್ತರು. ಅಂತಹದೇ ಘಟನೆಗೆ ಸಾಕ್ಷಿಯಾಗಿದೆ ತಾಲ್ಲೂಕಿನ ಕೋಗನೂರು ಗ್ರಾಮ.

ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಮೈಲಾರ ಮಹಾದೇವ ಮತ್ತವರ ಸಹಚರರಾಗಿದ್ದ ಕೋಗನೂರ ಗ್ರಾಮದ ತಿರಕಪ್ಪ ಮಡಿವಾಳರ ಮತ್ತು ವೀರಯ್ಯ ಹಿರೇಮಠ 1943ರ ಏಪ್ರಿಲ್‌ 1ರಂದು ಹೊಸರಿತ್ತಿ ಕಂದಾಯ ಕಚೇರಿಯ ಮೇಲೆ ದಾಳಿ ಮಾಡುವ ವೇಳೆ ಬ್ರಿಟಿಷರ ಗುಂಡಿಗೆ ಬಲಿಯಾಗಿ, ಹುತಾತ್ಮರಾದರು.

ಮಹದೇವಪ್ಪನವರ ಪ್ರಭಾವ: 1942ರಲ್ಲಿ ಗಾಂಧೀಜಿ ನೇತೃತ್ವದಲ್ಲಿ ನಡೆದ ಚಲೇ ಜಾವ್ ಚಳವಳಿ ಹಾಗೂ 1930ರಲ್ಲಿ ನಡೆದ ಉಪ್ಪಿನ ಸತ್ಯಾಗ್ರಹದಲ್ಲಿ ರಾಜ್ಯದಿಂದ ಭಾಗವಹಿಸಿದ್ದ ಏಕೈಕ ಪ್ರತಿನಿಧಿ ಮೈಲಾರ ಮಹಾದೇವಪ್ಪನವರು. ತಾಲ್ಲೂಕಿನ ಕೊಗನೂರು, ಹೆಬ್ಬಾಳ ಹಾಗೂ ವಡವಿ ಗ್ರಾಮದ 22 ಸ್ವಾತಂತ್ರ್ಯ‌ ಹೋರಾಟಗಾರರನ್ನು ಒಗ್ಗೂಡಿಸಿಕೊಂಡು, ಮಾಗಡಿ–ಮುಳುಗುಂದ ಮಾರ್ಗ ಮಧ್ಯೆ ಮತ್ತು ಗುಡಗೇರಿಯಲ್ಲಿ ಬಸ್ ತಡೆದು ಟಪಾಲು ಅಪಹರಣ ಮಾಡುತ್ತಿದ್ದರು.

ಬ್ರಿಟಿಷರು ಕಂದಾಯ ವಸೂಲಿ ಮಾಡುತ್ತಿದ್ದನ್ನು ಕೊಗನೂರಿನ 18 ಮಂದಿ ಹೋರಾಟಗಾರರು ತಡೆಯುತ್ತಿದ್ದರು. ಬ್ರಿಟಿಷರಿಗೆ ಸಂಬಂಧಿಸಿದ ಗೋವಿನಕೊಪ್ಪ, ಹೊನ್ನತ್ತಿ, ಬಿಜ್ಜೂರಿನಲ್ಲಿದ್ದ ಚಾವಡಿ ಹಾನಿ ಮಾಡುತ್ತಿದ್ದರು. ಮೈಲಾರ ಮಹಾದೇವಪ್ಪ ಹಾಗೂ ಗ್ರಾಮದ ಯೋಧರ ಉಪಟಳ ತಾಳಲಾರದೆ ಬ್ರಿಟಿಷ್ ಸಮೂಹ ಸಂಪೂರ್ಣ ಹೈರಾಣಾಗಿತ್ತು.

1943ರಲ್ಲಿ ಕೊಗನೂರಿನ ಗೊಣೆಪ್ಪ ಕಮತ ಮತ್ತು ಯಲ್ಲಮ್ಮ ಕಮತ ದಂಪತಿ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡಿದ್ದರು. ಅವರಿಬ್ಬರನ್ನೂ ಬಂಧಿಸಿದ ಬ್ರಿಟಿಷರು ಜೈಲಿಗೆ ಹಾಕಿದ್ದರು. ಯಲ್ಲಮ್ಮ ಕಮತ ಅವರು ಜೈಲಿನಲ್ಲಿಯೇ ಮಗುವಿಗೆ ಜನ್ಮ ನೀಡಿದ್ದರು.

ಶಿರಹಟ್ಟಿ ತಾಲ್ಲೂಕಿನಲ್ಲಿ 22 ಯೋಧರು

ಕೊಗನೂರಿನ ವೀರಯ್ಯ ಹಿರೇಮಠ, ತಿರಕಪ್ಪ ಮಡಿವಾಳರ, ಗೋಣೆಪ್ಪ ಕಮತ, ಯಲ್ಲವ್ವ ಕಮತ, ಗುಡ್ಡಪ್ಪ ಡಿಳ್ಳೆಪ್ಪನವರ, ನಿಂಗಪ್ಪ ಕೂರಗುಂದ, ವೀರಪ್ಪ ಅಂಗಡಿ, ನೀಲಪ್ಪ ಡಿಳ್ಳೆಪ್ಪನವರ, ವೀರಭದ್ರಗೌಡಪಾಟೀಲ, ನಸೀಮಪ್ಪ ಚನ್ನೂರ, ಫಕ್ಕೀರಡ್ಡಿ ರಡ್ಡೇರ, ಫಕ್ಕೀರಪ್ಪ ಕೂರಗುಂದ, ಭಗವಂತಪ್ಪ ಬೂದನೂರ, ಶಿವಯ್ಯ ಹಿರೇಮಠ, ವಾಸುರಡ್ಡಿ ರಡ್ಡೇರ, ರಾಮಣ್ಣ ಕೂರಗುಂದ, ಚನ್ನಪ್ಪ ಕೂರಗುಂದ, ತಿಪ್ಪಣ್ಣ ಮಡಿವಾಳರ ಹೀಗೆ 18 ಯೋಧರು ಕೋಗನೂರ ಗ್ರಾಮದವರಾಗಿದ್ದಾರೆ.

ವಡವಿ ಗ್ರಾಮದ ವೆಂಕಣ್ಣಾಚಾರ್ಯ ವಾಯಿ, ನಾಗರಮಡುವು ಗ್ರಾಮದ ಮುದುಕಪ್ಪ ಹಡಪದ, ಹೆಬ್ಬಾಳ ಗ್ರಾಮದ ಇಷ್ಟಲಿಂಗಯ್ಯ, ಹಾಲಪ್ಪ ಉಡಚಣ್ಣವರು ಸೇರಿದಂತೆ ಶಿರಹಟ್ಟಿ ತಾಲ್ಲೂಕಿನಲ್ಲಿ 22 ಮಂದಿ ಸ್ವಾತಂತ್ರ್ಯ ಯೋಧರು ಮೈಲಾರಪ್ಪನವರ ನೇತೃತ್ವದ ಚಳವಳಿಯಲ್ಲಿ ಪಾಲ್ಗೊಂಡಿದ್ದರು. ಕೆಚ್ಚೆದೆಯ ಹೋರಾಟಗಾರರನ್ನು ಕೊಡುಗೆಯಾಗಿ ನೀಡಿದ ಶಿರಹಟ್ಟಿ ಇತಿಹಾಸದ ಪುಟಗಳಲ್ಲಿ ದಾಖಲಾಗದೆ ಇರುವುದಕ್ಕೆ ಹಲವರು ವಿಷಾದ ವ್ಯಕ್ತಪಡಿಸುತ್ತಾರೆ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260815-23-1889618135

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ