ನಾಲ್ಕು ವರ್ಷಗಳ ಹಿಂದೆ ಕಾಮಗಾರಿ ಆರಂಭ: ಕಟ್ಟಡ ಪೂರ್ಣಗೊಳ್ಳುವ ಮೊದಲೇ ಶಿಥಿಲಾವಸ್ಥೆ

ನಾಲ್ಕು ವರ್ಷಗಳ ಹಿಂದೆ ಕಾಮಗಾರಿ ಆರಂಭ: ಕಟ್ಟಡ ಪೂರ್ಣಗೊಳ್ಳುವ ಮೊದಲೇ ಶಿಥಿಲಾವಸ್ಥೆ

ನಾಲ್ಕು ವರ್ಷಗಳ ಹಿಂದೆ ಕಾಮಗಾರಿ ಆರಂಭ: ಕಟ್ಟಡ ಪೂರ್ಣಗೊಳ್ಳುವ ಮೊದಲೇ ಶಿಥಿಲಾವಸ್ಥೆ

ಕುಷ್ಟಗಿ: ಆರೋಗ್ಯ ಇಲಾಖೆಯ ಸಭೆ, ಸಮಾರಂಭ, ತರಬೇತಿ ಇಂಥ ಕಾರ್ಯಕ್ರಮಗಳನ್ನು ನಡೆಸುವುದಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ತಾಲ್ಲೂಕಿನ ಹಿರೇಗೊಣ್ಣಾಗರ ಗ್ರಾಮದ ಆರೋಗ್ಯ ಕೇಂದ್ರದ ಬಳಿ ಸಭಾಭವನ ನಿರ್ಮಾಣಕ್ಕೆ ಸರ್ಕಾರ ಲಕ್ಷಾಂತರ ಹಣ ಬಿಡುಗಡೆ ಮಾಡಿತ್ತು. ಆದರೆ ನಾಲ್ಕು ವರ್ಷ ಕಳೆದರೂ ಕಾಮಗಾರಿ ಮುಗಿದಿಲ್ಲ. ಕಟ್ಟಡದಲ್ಲಿ ಮುಳ್ಳುಕಂಟಿಗಳು ಬೆಳೆದಿದ್ದು ಕಟ್ಟಡ ಪೂರ್ಣಗೊಳ್ಳುವ ಮೊದಲೇ ಶಿಥಿಲಾವಸ್ಥೆ ತಲುಪಿದೆ.

‘ಸರ್ಕಾರಿ ಕಾಮಗಾರಿಯ ಲೆಕ್ಕಾಚಾರವೇ ಹಾಗೆ, ಯಾವುದೇ ಒಂದು ಕಾಮಗಾರಿ ಪೂರ್ಣಗೊಳ್ಳುವುದು ಅಷ್ಟು ಸುಲಭವಾಗಿರುವುದಿಲ್ಲ. ಅನುದಾನ ಬಿಡುಗಡೆಯಾದರೂ ಕೆಲಸ ಆರಂಭಗೊಳ್ಳುವುದು ತಡವಾಗಿ, ಇನ್ನು ಪೂರ್ಣಗೊಳ್ಳುವುದಕ್ಕೆ ಅನೇಕ ವರ್ಷಗಳೇ ಬೇಕು. ಆದರೆ ಅನುದಾನ ಮಾತ್ರ ಖರ್ಚಾಗಿರುತ್ತದೆ. ಇದರಿಂದ ಸರ್ಕಾರದ ನಿರ್ದಿಷ್ಟ ಉದ್ದೇಶ ಈಡೇರುವುದೇ ಇಲ್ಲ. ಅಂಥ ಉದಾಹರಣೆಗಳಲ್ಲಿ ನಮ್ಮೂರಿನಲ್ಲಿ ಕಳೆಬರದಂತೆ ನಿಂತಿರುವ ಆರೋಗ್ಯ ಇಲಾಖೆಯ ಕಟ್ಟಡವೂ ಒಂದು’ ಎಂಬ ಅಸಮಾಧಾನ ಗ್ರಾಮಸ್ಥರದು.

ಯಾವ ಅನುದಾನ?: ತಾಲ್ಲೂಕು ಪಂಚಾಯಿತಿಯ ಅನಿರ್ಬಂಧಿತ ಅನುದಾನದಲ್ಲಿ 2022-23ರಲ್ಲಿ ಈ ಸಭಾಭವನ ನಿರ್ಮಾಣಕ್ಕೆ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ಉಪ ವಿಭಾಗಕ್ಕೆ ₹10 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿತ್ತು. 2022ರ ಡಿ.1ರಂದು ಆರಂಭಗೊಂಡ ಕಾಮಗಾರಿ ಅರ್ಧದಷ್ಟೂ ಆಗದಿರುವುದು ಕಂಡು ಬಂದಿದೆ. ಅರೆಬರೆ ಕಾಮಗಾರಿ ನಡೆಸಿದ ಪಂರಾಎಂ ಉಪ ವಿಭಾಗ ಇತ್ತ ತಿರುಗಿ ನೋಡಿಲ್ಲ. ಸದ್ಯ ಆಗಿರುವ ಕಟ್ಟಡ ಶಿಥಿಲಗೊಂಡಿದ್ದು ಪೂರ್ಣಗೊಳಿಸುವುದಕ್ಕೂ ಸಾಧ್ಯವಾಗದ ಕಾರಣ ಸರ್ಕಾರದ ಅನುದಾನ ವ್ಯರ್ಥವಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

ವೈದ್ಯಾಧಿಕಾರಿ ಅತೃಪ್ತಿ: ಸಭಾಭವನ ಪೂರ್ಣಗೊಳಿಸದಿರುವ ಬಗ್ಗೆ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ 2023ರ ಸೆ.5ರಂದು ತಾಲ್ಲೂಕು ಪಂಚಾಯಿತಿಗೆ ಬರೆದಿರುವ ಪತ್ರದಲ್ಲಿ ಆಕ್ಷೇಪಿಸಿದ್ದರು. ಅಲ್ಲದೆ ನಿರ್ಮಾಣ ಏಜೆನ್ಸಿಯಾಗಿರುವ ಪಂಚಾಯತ್‌ ರಾಜ್‌ ಉಪ ವಿಭಾಗದವರು ಸ್ಥಳ ಪರಿಶೀಲನೆಗೂ ಬಂದಿಲ್ಲ ಎಂದು ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ವೈದ್ಯಾಧಿಕಾರಿ ಪತ್ರಬರೆದು ಎರಡು ವರ್ಷಗಳು ಕಳೆದಿದ್ದು ಇನ್ನೂ ಕಟ್ಟಡದ ಬಾಕಿ ಕೆಲಸ ಆರಂಭಿಸುವ ಯಾವುದೇ ಸೂಚನೆ ಇಲ್ಲ ಎಂದು ಮೂಲಗಳು ತಿಳಿಸಿವೆ.

ಬಾಕಿ ಕೆಲಸಕ್ಕೆ ಶಾಸಕರ ಅನುದಾನ

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಕಾಮಗಾರಿಯ ಜವಾಬ್ದಾರಿ ವಹಿಸಿಕೊಂಡಿದ್ದ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ಉಪ ವಿಭಾಗದ ಕಿರಿಯ ಎಂಜಿನಿಯರ್ ರಾಜಶೇಖರಗೌಡ, ₹10 ಲಕ್ಷ ಅನುದಾನ ಬಿಡುಗಡೆಯಾದರೂ ಖರ್ಚಾಗಿದ್ದು ₹5 ಲಕ್ಷ. ಕೆಲಸ ನಡೆಸದ ಗುತ್ತಿಗೆದಾರ ಹನುಮೇಶ ಕೋಣೆಮನೆ ಅವರಿಗೆ ನೋಟಿಸ್‌ ನೀಡಿದರೂ ಕೆಲಸ ನಡೆಸಿಲ್ಲ. ಆಗಿರುವ ಕೆಲಸಕ್ಕಷ್ಟೇ ಬಿಲ್‌ ಪಾವತಿಸಲಾಗಿದೆ. ಈ ವಿಷಯ ಶಾಸಕರ ಗಮನಕ್ಕೆ ತಂದ ನಂತರ ಶಾಸಕರ ಅನುದಾನದಲ್ಲಿ ₹ 5 ಲಕ್ಷ ಬಿಡುಗಡೆಯಾಗಿದ್ದು ಭವನದ ಬಾಕಿ ಕಾಮಗಾರಿ ಶೀಘ್ರ ಆರಂಭಗೊಳ್ಳಲಿದೆ ಎಂದರು. ಆದರೆ ಮೂಲಗಳ ಪ್ರಕಾರ ಪೂರ್ಣಹಣ ಖರ್ಚು ಮಾಡಲಾಗಿದ್ದು, ಈ ಬಗ್ಗೆ ಜಿಲ್ಲಾ ಪಂಚಾಯಿತಿ ಸಿಇಒ ತನಿಖೆ ನಡೆಸಲು ಮುಂದಾಗಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260812-35-861883266

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ