
ವೇಮಗಲ್: ರಸ್ತೆ ಅಭಿವೃದ್ಧಿಗೆ ಮರಗಳ ಹನನ ಆತಂಕ
ವೇಮಗಲ್: ದೇವನಹಳ್ಳಿಯಿಂದ ಕೋಲಾರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಯೋಜನೆ ರೂಪುಗೊಂಡಿದ್ದು, ಇದರಿಂದ ಈ ಮಾರ್ಗದಲ್ಲಿದ್ದ ನೂರಾರು ಬೃಹತ್ ಮರಗಳನ್ನು ಕಡಿಯುವ ಆತಂಕ ಎದುರಾಗಿದೆ.
ದೇವನಹಳ್ಳಿ- ವಿಜಯಪುರ-ಎಚ್ ಕ್ರಾಸ್-ವೇಮಗಲ್ ಮಾರ್ಗವಾಗಿ ಕೋಲಾರ ತಲುಪುವ ಒಟ್ಟು 48.20 ಕಿ. ಮೀ. ರಸ್ತೆ ಅಭಿವೃದ್ಧಿ ಕಾಮಗಾರಿಗೆ ಹಸಿರು ನಿಶಾನೆ ಸಿಕ್ಕಿದ್ದು, ಕಾಮಗಾರಿ ಭರದಿಂದ ಸಾಗುತ್ತಿದೆ.
ವೇಮಗಲ್–ಕೋಲಾರ ಮಾರ್ಗದಲ್ಲಿ ಕಣ್ಣಿಗೆ ತಂಪು ಎರೆಯುತ್ತಿದ್ದ ಬೃಹತ್ ಸಾಲುಮರಗಳನ್ನು ಇನ್ನು ಕೆಲವೇ ದಿನಗಳಲ್ಲಿ ಕಡಿಯುವ ಸಾಧ್ಯತೆ ಇದೆ.
ಈ ಬೃಹತ್ ಮಟ್ಟದ ಮರಗಳ ಮಾರಣಹೋಮದಿಂದ ಸ್ಥಳೀಯ ಪರಿಸರ ಮತ್ತು ಹವಾಮಾನದ ಮೇಲೆ ತೀವ್ರ ಪರಿಣಾಮ ಬೀರಲಿದೆ. ದಟ್ಟವಾದ ನೆರಳು ನೀಡುತ್ತಿದ್ದ ಶತಮಾನದ ಮರಗಳು ನಾಶವಾಗುವುದರಿಂದ ಈ ಭಾಗದಲ್ಲಿ ತಾಪಮಾನ ಹೆಚ್ಚಾಗುವ ಭೀತಿ ಇದೆ. ಅಲ್ಲದೆ, ವರ್ಷಗಳಿಂದ ಈ ಮರಗಳನ್ನೇ ನೆಚ್ಚಿಕೊಂಡು ಜೀವನ ನಡೆಸುತ್ತಿದ್ದ ಸಾವಿರಾರು ಪಕ್ಷಿ ಸಂಕುಲ ಮತ್ತು ಸೂಕ್ಷ್ಮ ಜೀವಿಗಳು ತಮ್ಮ ಆಶ್ರಯ ತಾಣಗಳನ್ನು ಕಳೆದುಕೊಂಡು ಅನಾಥವಾಗಲಿವೆ.
ಈ ಆತಂಕಕಾರಿ ಬೆಳವಣಿಗೆ ಬಗ್ಗೆ ಪರಿಸರ ಪ್ರೇಮಿಗಳು ಮತ್ತು ಸಾರ್ವಜನಿಕರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಅಭಿವೃದ್ಧಿ ಬೇಕು. ಆದರೆ ಅದು ಪರಿಸರವನ್ನು ಬಲಿಕೊಡುವಂತಾಗಬಾರದು ಎಂಬುದು ಸ್ಥಳೀಯರ ವಾದ.
ರಸ್ತೆ ಅಭಿವೃದ್ಧಿ ಕಾಮಗಾರಿ ಮುಗಿದ ತಕ್ಷಣವೇ ನೂತನ ರಸ್ತೆಯ ಇಕ್ಕೆಲಗಳಲ್ಲಿ ಹೊಸದಾಗಿ ಸಾಲು ಮರ ನೆಡಬೇಕು. ಬೃಹತ್ ವೃಕ್ಷಗಳಾಗಿ ಬೆಳೆಯುವವರೆಗೆ ನೀರು ಹಾಗೂ ರಕ್ಷಣೆ ನೀಡಿ ಪೋಷಿಸಬೇಕು. ಕೇವಲ ಸಸಿಗಳನ್ನು ನೆಟ್ಟು ಕೈತೊಳೆದುಕೊಳ್ಳದೆ, ಅವುಗಳ ನಿರಂತರ ಉಸ್ತುವಾರಿ ನೋಡಿಕೊಳ್ಳುವ ಸ್ಪಷ್ಟ ಜವಾಬ್ದಾರಿಯನ್ನು ಸಂಬಂಧಪಟ್ಟ ಇಲಾಖೆ ವಹಿಸಿಕೊಳ್ಳಬೇಕು ಎಂದು ಪರಿಸರ ಪ್ರೇಮಿ ಹರ್ಷ ಒತ್ತಾಯಿಸಿದರು.