ಕೊಪ್ಪಳ: ಕ್ರೆಸ್ಟ್‌ಗೇಟ್‌ ಕಳಚಿ ಹೋಗಿದ್ದ ದುರಂತದ ನೆನಪು, ನೀರು ಬಂದ ಸಮಾಧಾನ

ಕೊಪ್ಪಳ: ಕ್ರೆಸ್ಟ್‌ಗೇಟ್‌ ಕಳಚಿ ಹೋಗಿದ್ದ ದುರಂತದ ನೆನಪು, ನೀರು ಬಂದ ಸಮಾಧಾನ

ಕೊಪ್ಪಳ: ಕ್ರೆಸ್ಟ್‌ಗೇಟ್‌ ಕಳಚಿ ಹೋಗಿದ್ದ ದುರಂತದ ನೆನಪು, ನೀರು ಬಂದ ಸಮಾಧಾನ

ಕೊಪ್ಪಳ: ತಾಲ್ಲೂಕಿನ ತುಂಗಭದ್ರಾ ಜಲಾಶಯದ 19ನೇ ಕ್ರೆಸ್ಟ್‌ಗೇಟ್‌ ಕಳಚಿ ಹೋಗಿದ್ದ ದುರಂತಕ್ಕೆ ಇಂದಿಗೆ (ಆ.10) ಎರಡು ವರ್ಷಗಳಾಗಲಿದ್ದು, ಈಗ ಅದೇ ಜಲಾಶಯದಲ್ಲಿ ಉತ್ತಮವಾಗಿ ನೀರು ಬಂದು ಕೃಷಿ ಕಾಯಕಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವ ರೈತರಲ್ಲಿ ಸಮಾಧಾನ ಮೂಡಿದೆ.

2024ರ ಆಗಸ್ಟ್‌ 10ರಂದು ಜಲಾಶಯದ 19ನೇ ಕ್ರೆಸ್ಟ್‌ಗೇಟ್ ಕಳಚಿ ಹೋಗಿತ್ತು. ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ಹರಿದು ಹೋಗಿತ್ತು. ಸಾಕಷ್ಟು ಟೀಕೆಗಳು ಮತ್ತು ಪ್ರಯತ್ನಗಳ ನಂತರ ಒಂದು ವಾರದಲ್ಲಿ ತಾತ್ಕಾಲಿಕವಾಗಿ ಸ್ಟಾಫ್‌ಲಾಗ್‌ ಗೇಟ್ ಅಳವಡಿಸಲಾಗಿತ್ತು. ಜಲಾಶಯದ ಸುರಕ್ಷತಾ ತಜ್ಞ ಕನ್ನಯ್ಯನಾಯ್ಡು ಏಳು ದಶಕಗಳಷ್ಟು ಹಳೆಯದಾದ ಅಣೆಕಟ್ಟೆಯ ಎಲ್ಲಾ ಗೇಟ್‌ಗಳನ್ನು ಬದಲಾವಣೆ ಮಾಡಬೇಕು ಎಂದು ಸಲಹೆ ನೀಡಿದ್ದರು. ಇದಾದ ಕೆಲವು ತಿಂಗಳಗಳಲ್ಲಿ ನೀರಿನ ಪಾಲುದಾರ ರಾಜ್ಯಗಳಾದ ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣ ಸಮಾಲೋಚಿಸಿ ತುಂಗಭದ್ರಾ ಮಂಡಳಿ ನೇತೃತ್ವದಲ್ಲಿ ಗೇಟ್‌ ಅಳವಡಿಸಲಾಯಿತು.

ಜಲಾಶಯದ ಎಲ್ಲ 33 ಗೇಟ್‌ಗಳನ್ನು ಹೊಸದಾಗಿ ಅಳವಡಿಸಲಾಗಿದ್ದು, ಜೂನ್‌ 25ರಂದು ಮೂರೂ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಜಲಶಕ್ತಿ ಖಾತೆ ಸಚಿವರ ಸಮ್ಮುಖದಲ್ಲಿ ಲೋಕಾರ್ಪಣೆಯಾಗಿದ್ದು ಈಗ ಇತಿಹಾಸ. ಗೇಟ್ ಅಳವಡಿಕೆಗೆ ಕಾರಣಕ್ಕೆ ಕಳೆದ ವರ್ಷ ಕಾಲುವೆಗಳಿಗೆ ಜಲಾಶಯದಿಂದ ನೀರು ಹರಿಸಿರಲಿಲ್ಲ. ಹೀಗಾಗಿ ವರ್ಷದಲ್ಲಿ ಎರಡು ಬೆಳೆ ಪಡೆಯುತ್ತಿದ್ದ ರೈತರು ಕಳೆದ ವರ್ಷ ಒಂದು ಬೆಳೆಗೆ ತೃಪ್ತಿಪಡಬೇಕಾಯಿತು. ರಾಜ್ಯದ ಕೊಪ್ಪಳ, ಬಳ್ಳಾರಿ, ವಿಜಯನಗರ, ರಾಯಚೂರು, ಆಂಧ್ರ ಮತ್ತು ತೆಲಂಗಾಣ ರಾಜ್ಯಗಳ ರೈತರಿಗೆ ಇದರಿಂದ ತೀವ್ರ ತೊಂದರೆಯಾಗಿತ್ತು. ಈ ಬಾರಿಯ ಮುಂಗಾರಿನ ಆರಂಭದಲ್ಲಿ ಮಳೆಯ ಕೊರತೆಯಾಗಿದ್ದರಿಂದ ಕನಿಷ್ಠ ಒಂದು ಬೆಳೆಗೂ ನೀರು ಲಭಿಸುವ ಅನುಮಾನ ವ್ಯಕ್ತವಾಗಿತ್ತು.

ರಾಜ್ಯದ ದಕ್ಷಿಣ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿ ನೀರು ಹರಿದು ಬರುತ್ತಿದ್ದು ರೈತರಲ್ಲಿ ಆಶಾಭಾವ ಮೂಡಿಸಿದೆ. ಒಟ್ಟು 105.788 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಒಂದು ತಿಂಗಳ ಹಿಂದೆ 13.688 ಟಿಎಂಸಿ ನೀರು ಮಾತ್ರ ಇತ್ತು. ಹಿಂದಿನ 30 ದಿನಗಳಲ್ಲಿ 61.956 ಟಿಎಂಸಿ ಅಡಿ ಬಂದಿದ್ದು ಭಾನುವಾರದ ಬೆಳಿಗ್ಗೆಯ ಅಂತ್ಯಕ್ಕೆ ಒಟ್ಟು 75.644 ಟಿಎಂಸಿ ಅಡಿ ನೀರು ಇತ್ತು. 40,500 ಕ್ಯುಸೆಕ್ ಒಳಹರಿವು ಇರುವುದರಿಂದ ನೀರು ಬರುವ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಭರವಸೆ ಮೂಡಿದೆ.

ನಾಳೆ ಸಭೆ, ಒಂದು ಬೆಳೆಗೆ ನೀರು ನಿಶ್ಚಿತ?

ಕೃಷಿ ಚಟುವಟಿಕೆಗೆ ನೀರು ಹರಿಸುವ ಕುರಿತು ಚರ್ಚಿಸಲು ತುಂಗಭದ್ರಾ ಯೋಜನೆಯ ಮತ್ತು ವಿಜಯನಗರ ಕಾಲುವೆಗಳ 126ನೇ ನೀರಾವರಿ ಸಲಹಾ ಸಮಿತಿ ಆ. 11ರಂದು ಮಧ್ಯಾಹ್ನ 3.30ಕ್ಕೆ ತಾಲ್ಲೂಕಿನ ಮುನಿರಾಬಾದ್‌ನಲ್ಲಿರುವ ಕಾಡಾ ಕಚೇರಿಯಲ್ಲಿ ಜರುಗಲಿದೆ.

ಸಭೆಯ ದಿನದಂದು ಜಲಾಶಯದಲ್ಲಿ ಇರುವ ನೀರಿನ ಒಟ್ಟು ಲಭ್ಯತೆ, ಡೆಡ್‌ ಸ್ಟೋರೇಜ್‌, ಆವಿಯಾಗುವ ಪ್ರಮಾಣ, ಕುಡಿಯಲು ಬೇಕಾಗುವ ನೀರು, ಕರ್ನಾಟಕ, ಆಂಧ್ರ, ತೆಲಂಗಾಣ ರಾಜ್ಯಗಳ ಪಾಲು ಹಂಚಿಕೆ ಈ ಎಲ್ಲಾ ಲೆಕ್ಕಾಚಾರದ ಬಳಿಕ ಕೃಷಿ ಚಟುವಟಿಕೆಗೆ ನೀರು ಹರಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ಈಗಿರುವ ನೀರಿನ ಪ್ರಕಾರ ಒಂದು ಬೆಳೆಗೆ ನೀರು ಹರಿಸಬಹುದು ಎಂದು ಮೂಲಗಳು ತಿಳಿಸಿವೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ