ನಿಮ್ಮ ಮೇಲೆ ಕಣ್ಣಿಟ್ಟಿದ್ದೇವೆ: ಜಮ್ಮುವಿನಲ್ಲಿರುವ ಕಾಶ್ಮೀರಿ ಪಂಡಿತರಿಗೆ ಬೆದರಿಕೆ

ನಿಮ್ಮ ಮೇಲೆ ಕಣ್ಣಿಟ್ಟಿದ್ದೇವೆ: ಜಮ್ಮುವಿನಲ್ಲಿರುವ ಕಾಶ್ಮೀರಿ ಪಂಡಿತರಿಗೆ ಬೆದರಿಕೆ

ನಿಮ್ಮ ಮೇಲೆ ಕಣ್ಣಿಟ್ಟಿದ್ದೇವೆ: ಜಮ್ಮುವಿನಲ್ಲಿರುವ ಕಾಶ್ಮೀರಿ ಪಂಡಿತರಿಗೆ ಬೆದರಿಕೆ

ಶ್ರೀನಗರ: ಸರ್ಕಾರಿ ಉದ್ಯೋಗ ಹಾಗೂ ಪುನರ್ವಸತಿ ಕಾರ್ಯಕ್ರಮಗಳ ಅಡಿಯಲ್ಲಿ ಕಣಿವೆಗೆ ವಾಪಸ್‌ ಆಗಿರುವವರಿಗೆ ಮಾತ್ರವಲ್ಲದೆ ಜಮ್ಮುವಿನಲ್ಲಿ ನೆಲೆಸಿರುವ ಕಾಶ್ಮೀರಿ ಪಂಡಿತರಿಗೂ ಬೆದರಿಕೆ ಒಡ್ಡಲಾಗಿದೆ.

ಪ್ರತ್ಯೇಕತಾವಾದಿ ಸಂಘಟನೆ ‘ಯುನೈಟೆಡ್ ಲಿಬರೇಷನ್ ಕೌನ್ಸಿಲ್’ (ಯುಎಲ್‌ಸಿ) ಹೆಸರಿನಲ್ಲಿ ಇತ್ತೀಚೆಗೆ ಬಹಿರಂಗ ಬೆದರಿಕೆ ಪತ್ರ ಬರೆಯಲಾಗಿದೆ. ಅದರಲ್ಲಿ, ಜಮ್ಮುವಿನ ವಿವಿಧೆಡೆ ನೆಲೆಸಿರುವ ಕಾಶ್ಮೀರಿ ಪಂಡಿತ ಸಮುದಾಯದ ಹಲವರ ಹೆಸರುಗಳು, ವಿಳಾಸವನ್ನೂ ಉಲ್ಲೇಖಿಸಲಾಗಿದೆ.

ಕಾಶ್ಮೀರಿ ಪಂಡಿತರನ್ನು ‘ವೈಟ್‌ ಕಾಲರ್‌ ಉಗ್ರರು’ ಎಂಬುದಾಗಿ ಮತ್ತು ಅವರೆಲ್ಲರು ದೆಹಲಿಯಲ್ಲಿರುವ ‘ನಾಯಕರಿಗಾಗಿ’ ಕೆಲಸ ಮಾಡುತ್ತಿರುವ ‘ದೇಶದ್ರೋಹಿಗಳು’ ಎಂದು ಆರೋಪಿಸಲಾಗಿದೆ. ಹಾಗೆಯೇ, ಅವರೆಲ್ಲರ ಚಲನವಲನಗಳ ಮೇಲೆ ಕಣ್ಣಿಟ್ಟಿರುವುದಾಗಿ ಬೆದರಿಸಲಾಗಿದೆ.

‘ನೀವು ಎಲ್ಲಿದ್ದರೂ, ಎಲ್ಲಿಗೆ ಹೋದರೂ, ನಿಮ್ಮ ಪ್ರತಿಯೊಂದು ಹೆಜ್ಜೆಯನ್ನೂ ನಾವು ಗಮನಿಸುತ್ತಿದ್ದೇವೆ’ ಎಂದು ಬರೆಯಲಾಗಿದೆ. ಪತ್ರದ ಮೇಲೆ ಅಹ್ಮದ್‌ ಬಿಲಾಲ್‌ ಎಂಬವರ ಸಹಿ ಇದೆ.

‘ಕಾಶ್ಮೀರದಲ್ಲೇ ಉಳಿದಿರುವವರು ಸುರಕ್ಷಿತವಾಗಿದ್ದಾರೆ. ಆದರೆ, ಕಣಿವೆಯನ್ನು ತೊರೆದವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್‌ಎಸ್‌ಎಸ್‌ ಕಾರ್ಯಸೂಚಿಯನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿರುವವರು ನಮ್ಮ ಗುರಿ’ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಈ ಬೆಳವಣಿಗೆ, ಸ್ಥಳಾಂತರಗೊಂಡ ಸಮುದಾಯದವರ ಮಾಹಿತಿ ಬಹಿರಂಗವಾಗುತ್ತಿರುವುದು ಹೇಗೆ ಎಂಬ ಭದ್ರತಾ ಕಳವಳಗಳನ್ನು ಹುಟ್ಟುಹಾಕಿವೆ.

ಅಂದಹಾಗೆ, ಈ ಪತ್ರವು ಇದೇ ತಿಂಗಳ ಆರಂಭದಲ್ಲಿ ಹೊರಬಿದ್ದ ಬಹಿರಂಗ ಪತ್ರಕ್ಕಿಂತ ಭಿನ್ನವಾಗಿದೆ. ಹಳೇ ಪತ್ರದಲ್ಲಿ, ಕಣಿವೆಯಲ್ಲಿ ಸರ್ಕಾರಿ ನೌಕರಿಯಲ್ಲಿರುವ ಕಾಶ್ಮಿರಿ ಪಂಡಿತರಿಗೆ ಬೆದರಿಕೆ ಒಡ್ಡಲಾಗಿತ್ತು. ನಿರ್ದಿಷ್ಟ ವ್ಯಕ್ತಿಗಳ ಫೋನ್‌ ನಂಬರ್‌ ಮತ್ತು ಅವರ ಚಟುವಟಿಕೆಗಳನ್ನು ಪತ್ರದಲ್ಲಿ ದಾಖಲಿಸಲಾಗಿತ್ತು.

ಹೊಸ ಪತ್ರದಲ್ಲಿ, ಜಮ್ಮುವಿನಲ್ಲಿ ನೆಲೆಸಿರುವವರನ್ನೂ ಗುರಿ ಮಾಡಲಾಗಿದೆ.

ಜಮ್ಮುವಿಗೆ ಸ್ಥಳಾಂತರಗೊಂಡಿರುವವರ ಮಾಹಿತಿ ಆಗಂತುಕರಿಗೆ ಸಿಕ್ಕಿರುವುದು ಹೇಗೆ? ಎಂಬ ಬಗ್ಗೆ ಭದ್ರತಾ ಸಂಸ್ಥೆಗಳು ಪರಿಶೀಲನೆ ನಡೆಸುತ್ತಿವೆ. ಸದ್ಯಕ್ಕೆ ಅಧಿಕೃತವಾದ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಬೇರೆಡೆಗೆ ಸ್ಥಳಾಂತರಗೊಂಡಿರುವವರನ್ನು ವಾಪಸ್‌ ಕರೆತರುವ ಪ್ರಯತ್ನದ ಭಾಗವಾಗಿ ಉದ್ಯೋಗ ಮತ್ತು ಪುನರ್ವಸತಿ ಕ್ರಮಗಳನ್ನು ಸರ್ಕಾರ ಮುಂದುವರಿಸುತ್ತಿರುವ ಹೊತ್ತಿನಲ್ಲಿ ಈ ಬೆದರಿಕೆಗಳು ಬಂದಿವೆ.

ಕೇಂದ್ರ ಸರ್ಕಾರವು ಕಾಶ್ಮೀರಿ ವಲಸಿಗ ಯುವಕರಿಗೆ 6,000 ಹುದ್ದೆಗಳನ್ನು ಮೀಸಲಿಟ್ಟಿದೆ. 2026ರ ಮಾರ್ಚ್‌ ವೇಳೆಗೆ 5,896 ಅಭ್ಯರ್ಥಿಗಳಿಗೆ ಅಂದರೆ, ಶೇ 98.26ರಷ್ಟು ಮಂದಿಗೆ ನೇಮಕ ಪತ್ರ ನೀಡಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

2022ರ ನಂತರ ಹೆಚ್ಚಾದ ಕಳವಳ
ಬುದಗಾಮ್‌ನಲ್ಲಿ 2022ರ ರಾಹುಲ್‌ ಭಟ್‌ ಎಂಬವರ ಹತ್ಯೆಯಾದ ನಂತರ, ಕಾಶ್ಮೀರಿ ಪಂಡಿತರ ಸಮುದಾಯದ ನೌಕರರ ಕುರಿತಾದ ಭದ್ರತಾ ಕಳವಳ ತೀವ್ರಗೊಂಡಿದೆ.

ಕಾಶ್ಮಿರ ಕಣಿವೆಯ ಮೂಲ ನಿವಾಸಿಗಳಾಗಿರುವ ಹಿಂದೂ ಸಮುದಾಯದ ಕಾಶ್ಮೀರಿ ಪಂಡಿತರು, 1989ರ ನಂತರ ಸಶಸ್ತ್ರ ದಂಗೆಯಿಂದ ತೀವ್ರಗೊಂಡ ಹಿಂಸಾಚಾರದಿಂದಾಗಿ ಸುರಕ್ಷಿತ ಸ್ಥಳಗಳತ್ತ ಮುಖಮಾಡಿದರು. ಹೆಚ್ಚಿನವರು ಜಮ್ಮು ಮತ್ತು ದೆಹಲಿಯಲ್ಲಿ ನೆಲೆಸಿದ್ದಾರೆ. ದೇಶದ ಇತರ ಭಾಗಗಳಿಗೂ ಹೋದವರು ಇದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ