
ಪರದೆಯ ಹಿಂದೆ ಸರಿದ ನಾಟಕದ ಮೇಸ್ಟ್ರು: ಕೈಗೂಡದ ಸುಸಜ್ಜಿತ ರಂಗ ನಿರ್ಮಾಣದ ಕನಸು
ಮರಿಯಮ್ಮನಹಳ್ಳಿ: ರಂಗಭೂಮಿ ಕಲಾವಿದರ ತವರೂರು ಎಂದೇ ಖ್ಯಾತಿಯಾಗಿರುವ ಮರಿಯಮ್ಮನಹಳ್ಳಿಯಲ್ಲಿ ಕಲಾವಿದರಿಗೆ ಒಂದು ಸುಸಜ್ಜಿತವಾದ ರಂಗಮಂದಿರ ನಿರ್ಮಾಣದ ಕನಸು ಹೊಂದಿದ್ದ ರಂಗಕರ್ಮಿ ಮ.ಬ.ಸೋಮಣ್ಣ ಅವರ ಆಸೆ ಕೊನೆಗೂ ನನಸಾಗಲಿಲ್ಲ.
ನಾಟಕದ ಮೇಸ್ಟ್ರು ಎಂದೇ ಹೆಸರಾಗಿದ್ದ ಗ್ರಾಮೀಣ ಪ್ರದೇಶದ ರಂಗ ನಿರ್ದೇಶಕ ಸೋಮಣ್ಣ ಅವರು ಕೊನೆಯವರೆಗೆ ರಂಗಭೂಮಿಗೇ ತಮ್ಮ ತನುಮನವನ್ನು ಅರ್ಪಿಸಿಕೊಂಡು ಉಸಿರಾಡುತ್ತಿದ್ದರು.
ಲಲಿತ ಕಲಾರಂಗದ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದ ಅವರು ಕಳೆದ 37 ವರ್ಷಗಳಿಂದ ಕಲಾರಂಗದ ಚಟುವಟಿ ಕೆಯಲ್ಲಿ ತೊಡಗಿಸಿಕೊಂಡಿದ್ದರು. ಸದ್ಯ ಗೌರವಾಧ್ಯಕ್ಷರಾಗಿದ್ದ ಅವರ ಗರಡಿಯಲ್ಲಿ ರಂಗದ ಪಟ್ಟುಗಳನ್ನು ಕಲಿತ ಹಲವಾರು ಕಲಾವಿದರು ನಾಡಿನಾದ್ಯಂತ ಹೆಸರು ಮಾಡಿದ್ದಾರೆ.
ರಂಗಭೂಮಿಯ ಚಟುವಟಿಕೆಯಲ್ಲಿ ಬರುವ ಪ್ರತಿಯೊಂದನ್ನು ಕರಗತಮಾಡಿದ್ದ ಅವರು, ನಾಟಕದ ನಿರ್ದೇಶನದಿಂದ ಹಿಡಿದು, ರಂಗ ಸಜ್ಜಿಕೆ, ಬೆಳಕು ಸಂಯೋಜನೆ, ಹೊಸ ಹೊಸ ನಾಟಕಗಳ ನಿರ್ದೇಶನ, ಅಗತ್ಯಕ್ಕೆ ತಕ್ಕಂತೆ ನಟನೆ, ಸಂಗೀತ, ಸಾಹಿತ್ಯ ರಚನೆ, ಹಾಡುಗಳ ಬರವಣಿಗೆ, ತಬಲ, ಡೋಲಕ್ ಬಾರಿಸುವುದು, ರಂಗಗೀತೆಗಳ ಗಾಯನ, ವಸ್ತ್ರ ವಿನ್ಯಾಸ ಸೇರಿದಂತೆ ಎಲ್ಲವನ್ನು ಬಲ್ಲವರಾಗಿದ್ದರು, ಪರದೆಯ ಮೇಲೆ ತರುತ್ತಿದ್ದರು.
ಆದರೆ ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ಸಂಜೆ ನಿಧನರಾದ ಅವರು ಕಳೆದ ಆರು ತಿಂಗಳಿನಿಂದ ಅನಾರೋಗ್ಯದ ಕಾರಣ ರಂಗಭೂಮಿಯ ಚಟುವಟಿಕೆಯಿಂದ ದೂರ ಉಳಿದಿದ್ದರು. ಆದರೆ ಕುಟುಂಬದ ಬೆಂಬಲದಿಂದ ಸದಾ ಶಿಸ್ತಿಗೆ ಹೆಸರಾಗಿದ್ದರು.
ಖಾದಿ ಜುಬ್ಬಾ, ಪೈಜಾಮದ ಜೊತೆಗೆ ಹೆಗಲ ಮೇಲೊಂದು ಚೀಲವನ್ನು ಹಾಕಿಕೊಂಡ ಸಂತನಂತೆ ಅವರು ಸದಾ ರಂಗಚಟುವಟಿಕೆಯಲ್ಲಿ ತಲ್ಲೀನರಾಗಿರುತ್ತಿದ್ದರು. ಸದಾ ಹೊಸತನ, ನವನವೀನ ಪ್ರಯೋಗ, ಹೊಸ ಹೊಸ ತಂತ್ರಜ್ಞಾನ, ಇರುವ ವಸ್ತುಗಳನ್ನೇ ಬಳಸಿಕೊಂಡು ನಾಟಕಗಳು ಪ್ರೇಕ್ಷಕರ ಮನಮುಟ್ಟುವಂತೆ ಮಾಡುವುದನ್ನು ಕರಗತ ಮಾಡಿದ್ದರು.
ರಂಗಭೂಮಿಯ ತುಡಿತದಲ್ಲಿದ್ದ ಅವರು ಶಿಕ್ಷಕ ವೃತ್ತಿಯಿಂದ ನಿವೃತ್ತರಾದ ನಂತರ ತಮ್ಮನ್ನು ತಾವು ಸಂಪೂರ್ಣವಾಗಿ ಬಣ್ಣದ ಬದುಕಿಗೆ ಅರ್ಪಿಸಿಕೊಂಡಿದ್ದರು. ಅವರ ನಿಧನದಿಂದ ರಂಗಭೂಮಿಯ ಭಾಗದ ಹಿರಿಯ ಕೊಂಡಿಯೊಂದು ಪರದೆಯ ಹಿಂದೆ ಸರಿದಂತಾಗಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260809-25-1675307985