
ಹುಬ್ಬಳ್ಳಿ ವಲಯಕ್ಕೆ ಕಲಬುರಗಿ ಸೇರ್ಪಡೆ ಯಾವಾಗ?
ಕಲಬುರಗಿ: ಇದುವರೆಗೆ ಕೇರಳದ ಪಾಲಕ್ಕಾಡ್ ರೈಲ್ವೆ ವಿಭಾಗದಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಉಳ್ಳಾಲ ಮತ್ತಿತರ ರೈಲ್ವೆ ನಿಲ್ದಾಣಗಳನ್ನು ಜಿಲ್ಲೆಯ ಜನರು, ಸಾರ್ವಜನಿಕರ ನಿರಂತರ ಒತ್ತಡದ ಮೇರೆಗೆ ನೈರುತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆ ಮಾಡಲಾಗಿದೆ.
ವಿವಿಧ ವಿಭಾಗಗಳಲ್ಲಿ ಹರಿದು ಹಂಚಿ ಹೋಗಿರುವ ಕಲಬುರಗಿ, ವಾಡಿ, ಶಹಾಬಾದ್, ಸೇಡಂ, ಬೀದರ್ ಸೇರಿದಂತೆ ವಿವಿಧ ನಿಲ್ದಾಣಗಳನ್ನು ಹುಬ್ಬಳ್ಳಿಯ ನೈರುತ್ಯ ರೈಲ್ವೆ ವಲಯಕ್ಕೆ ಸೇರ್ಪಡೆ ಮಾಡಬೇಕು ಎಂಬ ಒತ್ತಡ ಕ್ರಮೇಣ ಬಿರುಸು ಪಡೆದುಕೊಳ್ಳುತ್ತಿದೆ.
1980ರ ದಶಕದಲ್ಲಿ ಸರೀನ್ ಸಮಿತಿ ನೀಡಿದ ವರದಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಹಿಂದಿನ ಮನಮೋಹನ್ ಸಿಂಗ್ ಸರ್ಕಾರದಲ್ಲಿ ರೈಲ್ವೆ ಸಚಿವರಾಗಿದ್ದ ಸಂದರ್ಭದಲ್ಲಿ ಬಜೆಟ್‌ನಲ್ಲಿ ಘೋಷಿಸಿದ್ದಂತೆ ಕಲಬುರಗಿಗೆ ರೈಲ್ವೆ ವಿಭಾಗೀಯ ಸ್ಥಾನ ನೀಡಬೇಕು ಎಂಬ ಬೇಡಿಕೆಗೆ ಮತ್ತೆ ಜೀವ ಬಂದಿದೆ.
ಕಲಬುರಗಿ–ವಾಡಿ ನಿಲ್ದಾಣಗಳು ಮುಂಬೈನ ಕೇಂದ್ರ ವಲಯದ (ಸೆಂಟ್ರಲ್ ರೈಲ್ವೆ) ಸೋಲಾಪುರ ವಿಭಾಗದ ವ್ಯಾಪ್ತಿಗೆ ಬರುತ್ತದೆ. ಪ್ರತಿ ವರ್ಷ ನೂರಾರು ಕೋಟಿ ವರಮಾನ ವಾಡಿ, ಚಿತ್ತಾಪುರ, ಸೇಡಂ ಭಾಗದಲ್ಲಿನ ಸಿಮೆಂಟ್ ಕಾರ್ಖಾನೆಗಳ ಸರಕು ಸಾಗಣೆಯಿಂದಲೇ ಬರುತ್ತದೆ. ಜೊತೆಗೆ, ಕಲಬುರಗಿ ಮೂಲಕ ಸಂಚರಿಸುವ ಪ್ರಯಾಣಿಕ ರೈಲುಗಳಿಂದಲೂ ಹೆಚ್ಚಿನ ವರಮಾನ ಬರುತ್ತದೆ. ಇದೆಲ್ಲವೂ ಸೋಲಾಪುರ ವಿಭಾಗದ ಪಾಲಾಗುತ್ತಿದ್ದು, ವರಮಾನಕ್ಕೆ ತಕ್ಕಂತೆ ಕಲಬುರಗಿಯಿಂದ ಬಹುಬೇಡಿಕೆ ಇರುವ ಸ್ಥಳಗಳಿಗೆ ರೈಲ್ವೆ ಸೇವೆಯನ್ನು ನೀಡಲು ಹಿಂದೇಟು ಹಾಕುತ್ತಿದೆ. ಹೀಗಾಗಿಯೇ, ಕಲಬುರಗಿಗೆ ರೈಲ್ವೆ ವಿಭಾಗ ಬರಬೇಕು ಎಂಬುದು ದಶಕಗಳ ಹಕ್ಕೊತ್ತಾಯವಾಗಿದೆ. ವಿಭಾಗ ರಚನೆಯಾಗುವವರೆಗೆ ತಾತ್ಕಾಲಿಕವಾಗಿ ಹುಬ್ಬಳ್ಳಿ ವಲಯಕ್ಕೆ ಸೇರಿಸಬೇಕು ಎಂಬ ಬೇಡಿಕೆಯನ್ನು ಜಿಲ್ಲೆಯ ಜನಪ್ರತಿನಿಧಿಗಳು, ಉದ್ಯಮಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಮಂಡಿಸುತ್ತಿದ್ದಾರೆ.
ಕಳೆದ ವರ್ಷ ಕಲಬುರಗಿ, ಶಹಾಬಾದ್, ವಾಡಿ ನಿಲ್ದಾಣದಲ್ಲಿ ಸಂಗ್ರಹವಾಗುವ ಟಿಕೆಟ್ ಮಾರಾಟದಿಂದಲೇ ₹ 500 ಕೋಟಿ ವರಮಾನ ರೈಲ್ವೆಗೆ ಹರಿದು ಬಂದಿದ್ದು, ಕಲಬುರಗಿ ನಿಲ್ದಾಣವೊಂದರಲ್ಲೇ ₹ 110 ಕೋಟಿ ಟಿಕೆಟ್‌ನಿಂದ ವರಮಾನ ಬಂದಿತ್ತು. ಪ್ರತಿನಿತ್ಯ 30 ಸಾವಿರಕ್ಕೂ ಅಧಿಕ ಪ್ರಯಾಣಿಕರು ಕಲಬುರಗಿ ನಿಲ್ದಾಣದ ಮೂಲಕ ವಿವಿಧೆಡೆ ತೆರಳುತ್ತಾರೆ. ಬೇರೆಡೆಯಿಂದ ನಗರಕ್ಕೆ ಬರುತ್ತಾರೆ. ಹೀಗಾಗಿ, ಕಲಬುರಗಿ, ಶಹಾಬಾದ್, ವಾಡಿ ನಿಲ್ದಾಣಗಳನ್ನು ಸೋಲಾಪುರ ವಿಭಾಗದಿಂದ ಪ್ರತ್ಯೇಕಿಸಿ ರಾಜ್ಯದ ರೈಲ್ವೆ ವಿಭಾಗಕ್ಕೆ ಸೇರಿಸಬೇಕು ಎನ್ನುತ್ತಾರೆ ಕಲಬುರಗಿಯ ನಿವೃತ್ತ ಎಂಜಿನಿಯರ್ ವೆಂಕಟೇಶ ಮುದ್ಗಲ್.
ಯಾವ ನಿಲ್ದಾಣಗಳು ಯಾವ ವಿಭಾಗದಲ್ಲಿ?
lಮಧ್ಯ ರೈಲ್ವೆ: ಗಾಣಗಾಪುರ–ಕಲಬುರಗಿ–ಶಹಾಬಾದ್–ವಾಡಿ
lನೈರುತ್ಯ ರೈಲ್ವೆ: ವಾಡಿ–ರಾಯಚೂರು ಮಾರ್ಗ
lದಕ್ಷಿಣ ಮಧ್ಯ ರೈಲ್ವೆ: ವಾಡಿ–ಸೇಡಂ ಮಾರ್ಗ
‘ರೈಲ್ವೆ ಸಚಿವರು ಸಮಯ ನೀಡಿಲ್ಲ’
‘ಕಲಬುರಗಿಯಲ್ಲಿ ರೈಲ್ವೆ ವಿಭಾಗ ಹಾಗೂ ಕಲ್ಯಾಣ ಕರ್ನಾಟಕದ ರೈಲು ನಿಲ್ದಾಣಗಳನ್ನು ರಾಜ್ಯಕ್ಕೆ ಸೇರ್ಪಡೆ ಮಾಡುವ ಕುರಿತಂತೆ ಚರ್ಚಿಸಲು ಸಂಸದ ರಾಧಾಕೃಷ್ಣ ದೊಡ್ಡಮನಿ ಹಾಗೂ ನಾನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಭೇಟಿಗೆ ಮೂರು ಬಾರಿ ಸಮಯ ಕೇಳಿದ್ದೇವೆ. ಅವರಿನ್ನೂ ಸಮಯ ನೀಡಿಲ್ಲ’ ಎಂದು ಗೃಹ, ಐಟಿ, ಬಿಟಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಕಲಬುರಗಿ ಜಿಲ್ಲೆಯ ಕೆಲ ನಿಲ್ದಾಣಗಳನ್ನು ಸಿಕಂದರಾಬಾದ್‌ನ ದಕ್ಷಿಣ ಮಧ್ಯ ರೈಲ್ವೆಯಿಂದ ವಿಶಾಖಪಟ್ಟಣ ವಲಯಕ್ಕೆ ಸೇರಿಸಲು ಪ್ರಯತ್ನಗಳು ನಡೆದಿದ್ದವು. ಈ ಬಗ್ಗೆ ನಾವು ಪ್ರತಿಭಟನೆ ನಡೆಸಿದ್ದೆವು. ರೈಲ್ವೆ ಸಚಿವರಾಗಿದ್ದ ಅವಧಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರಗಿಯಲ್ಲಿ ರೈಲ್ವೆ ವಿಭಾಗ ರಚನೆಗೆ ಆದೇಶ ಹೊರಡಿಸಿದ್ದರು. ಆ ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಅದನ್ನು ರದ್ದುಗೊಳಿಸಿತು. ಹಿಂದಿನ ಬಿಜೆಪಿ ಸಂಸದರೂ ವಿಭಾಗ ತರುವ ಪ್ರಯತ್ನ ಮಾಡಲಿಲ್ಲ’ ಎಂದು ಕುಟುಕಿದರು.
‘ಅಶ್ವಿನಿ ವೈಷ್ಣವ್ ಅವರೇ ನನಗೆ ಕರೆ ಮಾಡಿ ಭೇಟಿಗೆ ಉದ್ದೇಶವನ್ನು ಕೇಳಿದಾಗ ಕಲಬುರಗಿ ರೈಲ್ವೆ ವಿಭಾಗದ ಕುರಿತು ಚರ್ಚಿಸಬೇಕಿದೆ ಎಂದಿದ್ದೇವೆ. ಸಮಯ ಕೊಟ್ಟ ಬಳಿಕ ಪಾಲಕ್ಕಾಡ್ ವಿಭಾಗದಿಂದ ಮಂಗಳೂರನ್ನು ಮೈಸೂರಿಗೆ ಸೇರ್ಪಡೆ ಮಾಡಿದ ಮಾದರಿಯಲ್ಲಿ ಕಲಬುರಗಿ ಜಿಲ್ಲೆಯ ನಿಲ್ದಾಣಗಳನ್ನು ರಾಜ್ಯದ ವಿಭಾಗಕ್ಕೆ ಸೇರಿಸಲು ಒತ್ತಾಯ ಮಾಡುತ್ತೇವೆ’ ಎಂದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260824-34-2085074841