ಮಲೆನಾಡಿನಲ್ಲಿ ಹೆಚ್ಚಿದ ಪ್ರಾಣಿ-ಮಾನವ ಸಂಘರ್ಷ; ಹಾಸನ ಜಿಲ್ಲೆಯಲ್ಲಿ ಆತಂಕ

ಮಲೆನಾಡಿನಲ್ಲಿ ಹೆಚ್ಚಿದ ಪ್ರಾಣಿ-ಮಾನವ ಸಂಘರ್ಷ; ಹಾಸನ ಜಿಲ್ಲೆಯಲ್ಲಿ ಆತಂಕ

ಮಲೆನಾಡಿನಲ್ಲಿ ಹೆಚ್ಚಿದ ಪ್ರಾಣಿ-ಮಾನವ ಸಂಘರ್ಷ; ಹಾಸನ ಜಿಲ್ಲೆಯಲ್ಲಿ ಆತಂಕ

ಹಾಸನ: ಪಶ್ಚಿಮಘಟ್ಟದ ತಪ್ಪಲಿನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಪ್ರಾಣಿ–ಮಾನವ ಸಂಘರ್ಷ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಕಾಡಾನೆ ಸೇರಿ ವನ್ಯಜೀವಿಗಳ ಹಾವಳಿಯಿಂದ ಗ್ರಾಮೀಣ ಜನರು ನಿತ್ಯ ಭಯದಲ್ಲೇ ಬದುಕುವಂತಾಗಿದೆ.

ಸಕಲೇಶಪುರ, ಆಲೂರು, ಬೇಲೂರು, ಅರಕಲಗೂಡು ತಾಲ್ಲೂಕುಗಳ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಪ್ರಮುಖ ಸಮಸ್ಯೆಯಾಗಿದೆ. 20 ವರ್ಷಗಳಲ್ಲಿ ಹಾಸನ ಜಿಲ್ಲೆಯಲ್ಲಿ ಕಾಡಾನೆ ದಾಳಿಯಿಂದ 71 ಮಂದಿ ಮೃತಪಟ್ಟಿದ್ದು, 250ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 2022ರಿಂದ 2025ರವರೆಗೆ ನಾಲ್ಕು ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ 19 ಮಂದಿ ಆನೆ ದಾಳಿಗೆ ಬಲಿಯಾಗಿದ್ದಾರೆ.

ರಾಜ್ಯದಲ್ಲಿ ಇದೇ ಅವಧಿಯಲ್ಲಿ ಸಂಭವಿಸಿದ 203 ಆನೆ ದಾಳಿ ಸಾವುಗಳಲ್ಲಿ ಶೇ 60ರಷ್ಟು ಸಾವುಗಳು ಮೈಸೂರು, ಚಾಮರಾಜನಗರ, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲೇ ಸಂಭವಿಸಿರುವುದು ಆತಂಕಕ್ಕೆ ಕಾರಣವಾಗಿದೆ.

ಸಕಲೇಶಪುರ, ಆಲೂರು, ಬೇಲೂರು ಭಾಗದಲ್ಲಿ 70ಕ್ಕೂ ಹೆಚ್ಚು ಕಾಡಾನೆಗಳು ನಿರಂತರವಾಗಿ ಸಂಚರಿಸುತ್ತಿವೆ. ಅರಣ್ಯ ಪ್ರದೇಶದ ವ್ಯಾಪ್ತಿ ಕುಗ್ಗುತ್ತಿರುವುದು, ಸಾಂಪ್ರದಾಯಿಕ ಆನೆ ಕಾರಿಡಾರ್‌ಗಳಿಗೆ ಅಡ್ಡಿಯಾಗಿರುವುದು, ಕಾಫಿ ತೋಟಗಳ ವಿಸ್ತರಣೆ ಹಾಗೂ ಭತ್ತ, ಬಾಳೆ ಸೇರಿದಂತೆ ಆಹಾರ ಬೆಳೆಗಳ ಲಭ್ಯತೆ ಆನೆಗಳು ನಾಡಿನತ್ತ ಬರುವ ಪ್ರಮುಖ ಕಾರಣಗಳಾಗಿವೆ.

ಕಾಡಿನಲ್ಲಿ ನೀರು ಮತ್ತು ಆಹಾರದ ಕೊರತೆ ಉಂಟಾದಾಗ ಆನೆಗಳು ಗ್ರಾಮಗಳತ್ತ ಬರುವ ಪ್ರಮಾಣ ಹೆಚ್ಚುತ್ತಿದೆ. ಜಮೀನಿಗೆ ತೆರಳುವ ರೈತರು, ಕಾರ್ಮಿಕರು ಹಾಗೂ ಕಾಫಿ ತೋಟಗಳಲ್ಲಿ ಕೆಲಸ ಮಾಡುವವರು ಆನೆಗಳ ದಾಳಿಗೆ ತುತ್ತಾಗುವ ಆತಂಕ ಎದುರಿಸುತ್ತಿದ್ದಾರೆ. ಕೆಲ ಗ್ರಾಮಗಳಲ್ಲಿ ಬೆಳಿಗ್ಗೆ ಮನೆಯಿಂದ ಹೊರಬರುವುದಕ್ಕೂ ಜನರು ಹಿಂಜರಿಯುವ ಸ್ಥಿತಿ ನಿರ್ಮಾಣವಾಗಿದೆ.

ಕಾಫಿ ತೋಟದ ಮಾಲೀಕರಲ್ಲೂ ಆತಂಕ: ಕಾಡಾನೆಗಳ ನಿರಂತರ ಓಡಾಟದಿಂದ ಕಾಫಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಫಿ ತೋಟಗಳಲ್ಲಿನ ಕಾರ್ಮಿಕರ ಸುರಕ್ಷತೆ, ಬೆಳೆ ಹಾನಿ ಹಾಗೂ ರಾತ್ರಿ ವೇಳೆ ತೋಟಗಳಿಗೆ ಆನೆಗಳು ನುಗ್ಗುವುದರಿಂದ ಬೆಳೆಗಾರರಿಗೆ ಆರ್ಥಿಕ ನಷ್ಟ ಉಂಟಾಗುತ್ತಿದೆ.

ಹಿಂದೆ ಆಗೊಮ್ಮೆ, ಈಗೊಮ್ಮೆ ಕಾಡಾನೆಗಳು ತೋಟದತ್ತ ಬರುತ್ತಿದ್ದವು. ಈಗ ಅವುಗಳ ಓಡಾಟ ನಿರಂತರವಾಗಿದೆ. ಆನೆಗಳ ಭಯದಿಂದ ಕಾರ್ಮಿಕರು ಬೆಳಗಿನ ಜಾವ ತೋಟಕ್ಕೆ ತೆರಳಲು ಹಿಂದೇಟು ಹಾಕುತ್ತಾರೆ. ಕಾಫಿ ಗಿಡಗಳ ಜತೆಗೆ ಬಾಳೆ, ಅಡಿಕೆ ಸೇರಿದಂತೆ ಇತರ ಬೆಳೆಗಳಿಗೂ ಹಾನಿಯಾಗುತ್ತಿದೆ. ಸರ್ಕಾರ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಸಕಲೇಶಪುರ ತಾಲ್ಲೂಕಿನ ಕಾಫಿ ಬೆಳೆಗಾರ ಎನ್‌.ಎಸ್. ಮಂಜುನಾಥ್ ಒತ್ತಾಯಿಸಿದರು.

ಚಿರತೆ, ಕರಡಿಯಿಂದಲೂ ಭೀತಿ: ಕಾಡಾನೆಗಳ ಜೊತೆಗೆ ಚಿರತೆಗಳ ಹಾವಳಿಯೂ ಮಲೆನಾಡು ಭಾಗದಲ್ಲಿ ಜನರನ್ನು ಆತಂಕಕ್ಕೀಡು ಮಾಡಿದೆ. ರಾತ್ರಿ ವೇಳೆ ಗ್ರಾಮಗಳ ಸಮೀಪ ಕಾಣಿಸಿಕೊಳ್ಳುವ ಚಿರತೆಗಳು, ಕುರಿ, ಮೇಕೆ, ನಾಯಿ, ಕರು ಸೇರಿದಂತೆ ಸಾಕುಪ್ರಾಣಿಗಳನ್ನು ಬೇಟೆಯಾಡುತ್ತಿವೆ. ಇದರಿಂದ ಮಕ್ಕಳು ಹಾಗೂ ಮಹಿಳೆಯರು ಸಂಜೆ ನಂತರ ಮನೆಯಿಂದ ಹೊರಗೆ ಬರಲು ಭಯಪಡುವಂತಾಗಿದೆ.

ಕರಡಿ ದಾಳಿಯ ಪ್ರಕರಣಗಳೂ ಆಗಾಗ ವರದಿಯಾಗುತ್ತಿವೆ. ಜೇನು, ಹಣ್ಣು ಹಾಗೂ ಆಹಾರ ಹುಡುಕಿಕೊಂಡು ಗ್ರಾಮಗಳ ಸಮೀಪಕ್ಕೆ ಬರುವ ಕರಡಿಗಳು ಮನುಷ್ಯರನ್ನು ಎದುರುಗೊಂಡಾಗ ದಾಳಿ ಮಾಡುವ ಅಪಾಯವಿದೆ.

ಕಾಡುಹಂದಿಗಳ ಹಾವಳಿ ರೈತರ ಮತ್ತೊಂದು ದೊಡ್ಡ ಸಮಸ್ಯೆ. ರಾಗಿ, ಜೋಳ, ಭತ್ತ, ಆಲೂಗಡ್ಡೆ ಸೇರಿ ವಿವಿಧ ಬೆಳೆಗಳನ್ನು ಕಾಡುಹಂದಿಗಳು ರಾತ್ರಿ ವೇಳೆ ನಾಶಪಡಿಸುತ್ತಿವೆ. ಬೆಳೆ ಉಳಿಸಿಕೊಳ್ಳಲು ರೈತರು ರಾತ್ರಿ ವೇಳೆ ಹೊಲಗಳಲ್ಲಿ ಕಾವಲು ಕಾಯಬೇಕಾದ ಪರಿಸ್ಥಿತಿ ಹಲವು ಗ್ರಾಮಗಳಲ್ಲಿ ನಿರ್ಮಾಣವಾಗಿದೆ.

ಅರಣ್ಯ ಪ್ರದೇಶದ ಒತ್ತುವರಿ, ವಸತಿ ಪ್ರದೇಶಗಳ ವಿಸ್ತರಣೆ, ಅರಣ್ಯಕ್ಕೆ ಹೊಂದಿಕೊಂಡ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆ ಹೆಚ್ಚಳ, ವನ್ಯಜೀವಿಗಳ ಸಾಂಪ್ರದಾಯಿಕ ಸಂಚಾರ ಮಾರ್ಗಗಳಿಗೆ ಅಡ್ಡಿಯಾಗಿರುವುದು, ನೀರಿನ ಮೂಲಗಳ ಕೊರತೆ ಹಾಗೂ ಹವಾಮಾನ ಬದಲಾವಣೆ ವನ್ಯಜೀವಿ -ಮಾನವ ಸಂಘರ್ಷ ಹೆಚ್ಚಳಕ್ಕೆ ಪ್ರಮುಖ ಕಾರಣಗಳಾಗಿವೆ.

ಸುಮಾರು 40 ವರ್ಷಗಳ ಹಿಂದೆ ಮಲೆನಾಡಿನ ಕೆಲವು ಪ್ರದೇಶಗಳಿಗೆ ಬಾರದಿದ್ದ ಕಾಡಾನೆಗಳು ಈಗ ನಿತ್ಯ ನಾಡಿನತ್ತ ಬರುತ್ತಿವೆ ಎಂಬುದು ವನ್ಯಜೀವಿ ತಜ್ಞರ ಆತಂಕ. ಅರಣ್ಯದಲ್ಲಿನ ಆಹಾರ ಮತ್ತು ನೀರಿನ ಲಭ್ಯತೆ ಹೆಚ್ಚಿಸುವುದು, ಆನೆ ಕಾರಿಡಾರ್‌ಗಳನ್ನು ಸಂರಕ್ಷಿಸುವುದು, ಅರಣ್ಯ ಒತ್ತುವರಿ ತಡೆಯುವುದು ಹಾಗೂ ವೈಜ್ಞಾನಿಕವಾಗಿ ತಡೆಗೋಡೆಗಳನ್ನು ನಿರ್ಮಿಸುವುದರ ಮೂಲಕ ಸಂಘರ್ಷ ಕಡಿಮೆ ಮಾಡಬೇಕಿದೆ. ಕಾಡಾನೆ ದಾಳಿಯಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ನೀಡುವುದರ ಜೊತೆಗೆ, ಬೆಳೆ ಹಾನಿಗೆ ಸಮರ್ಪಕ ಪರಿಹಾರ, ತುರ್ತು ಎಚ್ಚರಿಕೆ ವ್ಯವಸ್ಥೆ ಹಾಗೂ ಗ್ರಾಮ ಮಟ್ಟದಲ್ಲಿ ಕ್ಷಿಪ್ರ ಕಾರ್ಯಪಡೆ ರೂಪಿಸಬೇಕು ಎಂಬುದು ಮಲೆನಾಡಿನ ಜನರ ಒತ್ತಾಯವಾಗಿದೆ.

ಆನೆಗಳ ಸಂಚಾರಕ್ಕೆ ಅಡ್ಡಿಯಾದ ಅಭಿವೃದ್ಧಿ ಕಾಮಗಾರಿ

ಅರಣ್ಯ ಪ್ರದೇಶದ ಒತ್ತುವರಿ ಮತ್ತು ಕೃಷಿ ಚಟುವಟಿಕೆಗಳ ವಿಸ್ತರಣೆಯ ಜೊತೆಗೆ ಎತ್ತಿನಹೊಳೆ ಯೋಜನೆ, ಕಿರು ಜಲವಿದ್ಯುತ್ ಘಟಕಗಳು ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳು ಕೂಡ ಕಾಡಾನೆಗಳ ವಾಸಸ್ಥಳ ಹಾಗೂ ಸಾಂಪ್ರದಾಯಿಕ ಸಂಚಾರ ಮಾರ್ಗಗಳ ಮೇಲೆ ಪರಿಣಾಮ ಬೀರುತ್ತಿವೆ ಎಂದು ಮಲೆನಾಡು ಜನಪರ ಹೋರಾಟ ಸಮಿತಿಯ ಕಿಶೋರ್ ಕುಮಾರ್ ಹಾಗೂ ಕೆಲ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ದಶಕಗಳಿಂದ ಕಾಡಾನೆಗಳು ಸಂಚರಿಸುತ್ತಿದ್ದ ಮಾರ್ಗಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆದಿರುವುದರಿಂದ ಅವುಗಳ ಸಾಂಪ್ರದಾಯಿಕ ದಾರಿಗಳು ಬಂದ್ ಆಗಿವೆ. ಇದರಿಂದ ಆನೆಗಳು ಸಹಜ ವಾಸಸ್ಥಳದಿಂದ ಬೇರೆಡೆಗೆ ತೆರಳುವ ಅನಿವಾರ್ಯತೆ ಎದುರಾಗಿದೆ. ಆನೆಗಳ ವಾಸಸ್ಥಳ ಮತ್ತು ಸಾಂಪ್ರದಾಯಿಕ ಸಂಚಾರ ಮಾರ್ಗಗಳನ್ನು ಗುರುತಿಸಿ, ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವಾಗ ವನ್ಯಜೀವಿಗಳ ಚಲನವಲನಕ್ಕೆ ತೊಂದರೆ ಆಗದಂತೆ ವೈಜ್ಞಾನಿಕ ಯೋಜನೆ ರೂಪಿಸಬೇಕು. ಇಲ್ಲದಿದ್ದರೆ ಆನೆಗಳು ಪರ್ಯಾಯ ಮಾರ್ಗ ಹುಡುಕಿಕೊಂಡು ಜನವಸತಿ ಪ್ರದೇಶಗಳತ್ತ ಬರುವ ಸಾಧ್ಯತೆ ಹೆಚ್ಚುತ್ತದೆ ಎಂದು ಎಚ್ಚರಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260824-36-1263952270

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ