ಬೀದರ್‌ | ‘ಮಳಿ ಬಂದುರಷ್ಟೇ ಬೆಳಿ ಉಳಿತಾವ್‌’

ಬೀದರ್‌ | ‘ಮಳಿ ಬಂದುರಷ್ಟೇ ಬೆಳಿ ಉಳಿತಾವ್‌’

ಬೀದರ್‌ | ‘ಮಳಿ ಬಂದುರಷ್ಟೇ ಬೆಳಿ ಉಳಿತಾವ್‌’

ಬೀದರ್‌: ‘ಈ ಸಲ ಮಳಿದ ಏನ್‌ ಹೇಳಕ್‌ ಆಗ್ತಿಲ್ರಿ. ಜುಲೈ ತಿಂಗುಳ್‌ ಕೊನ್ಯಾಗ್‌ ಛಲೋ ಮಳಿ ಆಗ್ಯಾದ ಅಂತ ಬೆಳಿ ಉಳದಾವ್‌. ಈಗ ಮಳಿ ಬಂದುರಷ್ಟೇ ಉಳಿತಾವ್‌. ಇಲ್‌ದುರ್‌ ಎಲ್ಲಾ ಹಾಳಾಗ್ತಾದ ನೋಡ್ರಿ...’

ಇದು ತಾಲ್ಲೂಕಿನ ಚಿಮಕೋಡ್‌ ಗ್ರಾಮದ ಕಾಶಿನಾಥ ಅವರ ಮಾತುಗಳು. ಇದು ಕಾಶಿನಾಥ ಒಬ್ಬರ ಮಾತುಗಳಲ್ಲ. ಬೀದರ್‌ ತಾಲ್ಲೂಕಿನ ಬಹುತೇಕ ರೈತರ ಅಭಿಪ್ರಾಯ ಇದೇ ಆಗಿದೆ. ಎಲ್ಲರೂ ಮಳೆಯ ನಿರೀಕ್ಷೆಯಲ್ಲಿ ಆಕಾಶ ನೋಡುತ್ತಿದ್ದಾರೆ. ಆದರೆ, ಸಮರ್ಪಕವಾಗಿ ಮಳೆ ಸುರಿಯುತ್ತಿಲ್ಲ. ದಿನವಿಡೀ ದಟ್ಟ ಕಾರ್ಮೋಡ ಕವಿದಿರುತ್ತಿದೆ. ಇನ್ನೇನು ಮಳೆ ಬರುತ್ತದೆ ಎನ್ನುವಷ್ಟರಲ್ಲಿ ಮೋಡಗಳು ಚದುರಿ ಆಕಾಶ ಶುಭ್ರವಾಗುತ್ತಿದೆ. ಮಳೆ ಬಂದರೂ ಐದ್ಹತ್ತು ನಿಮಿಷಗಳಿಗೆ ಸೀಮಿತವಾಗಿದೆ. ಮಳೆ ಸಮರ್ಪಕವಾಗಿ ಸುರಿಯದ ಕಾರಣ ರೈತರು ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ.

ಬೀದರ್‌ ತಾಲ್ಲೂಕು ವ್ಯಾಪ್ತಿಯಲ್ಲಿ ಒಟ್ಟು 54,407 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹಾಕಿಕೊಳ್ಳಲಾಗಿತ್ತು. ಈ ಪೈಕಿ 21,200 ಹೆಕ್ಟೇರ್‌ ಪ್ರದೇಶದಲ್ಲಿ ಸೋಯಾ ಅವರೆ, 17,055 ಹೆಕ್ಟೇರ್‌ನಲ್ಲಿ ತೊಗರಿ ಬಿತ್ತನೆಯಾಗಿದೆ. ಇನ್ನುಳಿದ ಪ್ರದೇಶದಲ್ಲಿ ಉದ್ದು, ಹೆಸರು, ಹತ್ತಿ ಸೇರಿದಂತೆ ಇತರೆ ಬೆಳೆಗಳಿವೆ. ಸಕಾಲಕ್ಕೆ ಮಳೆಯಾಗದ ಕಾರಣ ಉದ್ದು, ಹೆಸರು ಬಹುತೇಕ ಈಗಾಗಲೇ ಹಾಳಾಗಿದೆ.

ಜುಲೈ ಕೊನೆಯ ವಾರದಲ್ಲಿ ಸತತ ಒಂದು ವಾರ ಉತ್ತಮ ಮಳೆ ಬಿದ್ದಿರುವ ಕಾರಣ ಸೋಯಾ ಅವರೆ, ತೊಗರಿ, ಹತ್ತಿ ಸಸಿಗಳು ಎಲ್ಲೆಡೆ ನಳನಳಿಸುತ್ತಿವೆ. ಆದರೆ, ಇದಾದ ನಂತರದಲ್ಲಿ ಹೇಳಿಕೊಳ್ಳುವಂತಹ ಮಳೆಯಾಗಿಲ್ಲ. ಆದಕಾರಣ ಬೆಳೆಗಳೆಲ್ಲ ಬಾಡಿ ಹೋಗುತ್ತಿವೆ. ಇದೇ ರೈತರ ಚಿಂತೆಗೆ ಪ್ರಮುಖ ಕಾರಣವಾಗಿದೆ. ಹಾಕಿದ ಬಂಡವಾಳವೂ ಕೈಸೇರುವ ನಿರೀಕ್ಷೆ ಅವರಿಗಿಲ್ಲ.

ನೀರು, ಮೇವಿಗಿಲ್ಲ ಸಮಸ್ಯೆ: ಆಗಸ್ಟ್‌ ತಿಂಗಳು ಮುಗಿಯುವುದರೊಳಗೆ ಒಂದೆರೆಡು ಸಲ ಉತ್ತಮ ಮಳೆಯಾಗಬೇಕು. ಮಳೆಯಾದರಷ್ಟೇ ಬೆಳೆಗಳು ಉಳಿಯಲು ಸಾಧ್ಯ. ಆದರೆ, ಆಗಾಗ ಸಾಧಾರಣ ಮಳೆ ಆಗುತ್ತಿರುವುದರಿಂದ ಎಲ್ಲೆಡೆ ಪರಿಸರ ಹಚ್ಚ ಹಸಿರಾಗಿದೆ. ಸದ್ಯ ಮೇವಿನ ಚಿಂತೆಯಿಲ್ಲ. ಬಾವಿ, ಕೊಳವೆಬಾವಿಗಳಲ್ಲಿ ನೀರಿದ್ದು, ಸದ್ಯಕ್ಕೆ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಇಲ್ಲ. ಆದರೆ, ಕೆರೆ ಕಟ್ಟೆಗಳು ತುಂಬಿಲ್ಲ. ಇದು ಕೂಡ ಚಿಂತೆ ಹೆಚ್ಚಿಸಿದೆ.

ಇದೇ ಪರಿಸ್ಥಿತಿ ಇದ್ದರೆ ಮುಂದಿನ ದಿನಗಳಲ್ಲಿ ನೀರಿಗಾಗಿ ದೊಡ್ಡ ಸಮಸ್ಯೆ ಸೃಷ್ಟಿಯಾಗಬಹುದು. ಇನ್ನು, ತಾಲ್ಲೂಕು ವ್ಯಾಪ್ತಿಯಲ್ಲಿ ಹೇಳಿಕೊಳ್ಳುವಂತಹ ಗುಳೆ ಸಮಸ್ಯೆ ಇನ್ನೂ ಎದುರಾಗಿಲ್ಲ. ವಿಬಿ ಜಿ ರಾಮ್‌ ಜಿ ಅಡಿ ಎಷ್ಟೇ ಜನ ಕೆಲಸ ಕೇಳಿದರೂ ಕೊಡಲಾಗುತ್ತಿದೆ. ಕೂಲಿ ಕಾರ್ಮಿಕರು ಜಿಲ್ಲಾ ಕೇಂದ್ರಕ್ಕೆ ಬಂದು ಕೆಲಸ ನಿರ್ವಹಿಸುತ್ತಿದ್ದಾರೆ.

ಬೀದರ್‌ ತಾಲ್ಲೂಕು ವ್ಯಾಪ್ತಿಯಲ್ಲಿ ಶೇ 48ರಷ್ಟು ಕೊರತೆ ಮಳೆ ದಾಖಲಾಗಿದೆ. ಜೂನ್‌ನಿಂದ ಇದುವರೆಗೆ ಬೀದರ್‌ ತಾಲ್ಲೂಕಿನಲ್ಲಿ 458.9 ಮಿ.ಮೀ ಮಳೆಯಾಗಬೇಕಿತ್ತು. ಆದರೆ, 237.8 ಮಿ.ಮೀ ಮಳೆಯಾಗಿದೆ.

ಆಗಸ್ಟ್‌ ತಿಂಗಳಲ್ಲಿ 125.5 ಮಿ.ಮೀ ಮಳೆಯಾಗಬೇಕಿತ್ತು. ಆದರೆ, 26.4 ಮಿ.ಮೀ ಮಳೆ ಬಿದ್ದಿದೆ. ಶೇ 79ರಷ್ಟು ಕೊರತೆ ಮಳೆಯಾಗಿದೆ. ಜುಲೈನಲ್ಲಿ 195.1 ಮಿ.ಮೀ ಮಳೆಯಾಗಬೇಕಿತ್ತು. ಆದರೆ, 156.5 ಮಿ.ಮೀ ಮಳೆ ಸುರಿದಿದೆ. ಶೇ 20ರಷ್ಟು ಕೊರತೆ ಮಳೆಯಾಗಿದೆ.

ಸಮರ್ಪಕವಾಗಿ ಮಳೆಯಾಗದ ಕಾರಣ ಬೀದರ್‌ ಜಿಲ್ಲೆಯಾದ್ಯಂತ ಬರದ ಛಾಯೆ ಆವರಿಸಿದೆ. ಮಳೆ ಕೊರತೆಯಿಂದ ಜಿಲ್ಲೆಯ ಯಾವ ತಾಲ್ಲೂಕಿನಲ್ಲಿ ಪರಿಸ್ಥಿತಿ ಹೇಗಿದೆ ಎನ್ನುವ ಚಿತ್ರಣ ಕಟ್ಟಿಕೊಡುವ ಪ್ರಯತ್ನ ‘ಬರ ಬರೆ’ ಸರಣಿ ಮೂಲಕ ಮಾಡಲಾಗುತ್ತಿದೆ. ಈ ಸರಣಿಯ ಮೊದಲ ಲೇಖನ ಇಂದು ಪ್ರಕಟಗೊಂಡಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260824-33-1547713295

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ