
ಕಾಲುವೆ ಕೊನೆ ಭಾಗದ ಸಮಸ್ಯೆಗೆ ಸಿಗದ ಪರಿಹಾರ: ಅದೇ ರಾಗ ಅದೇ ಹಾಡಿನಂತಾದ ಸ್ಥಿತಿ
ಸುರಪುರ: ತಾಲ್ಲೂಕಿನ ಕಾಲುವೆ ಕೊನೆ ಭಾಗದ ನೀರಿನ ಸಮಸ್ಯೆಗೆ ದಶಕಗಳೇ ಕಳೆದರೂ ಪರಿಹಾರ ದೊರಕುತ್ತಿಲ್ಲ. ಈ ಕುರಿತು ಆ ಭಾಗದ ರೈತರು ಪ್ರತಿ ವರ್ಷ ಮಾಡುತ್ತಿರುವ ಹೋರಾಟಗಳು ಕೃಷ್ಣೆಯ ಪಾಲಾಗುತ್ತಿವೆ. ಹೀಗಾಗಿ ಈ ತೊಂದರೆ ಅದೇ ರಾಗ ಅದೇ ಹಾಡಿನಂತೆ ಶಾಶ್ವತವಾಗಿ ಉಳಿದು ಬಿಟ್ಟಿದೆ.
ವಿತರಣಾ ಕಾಲುವೆ ಸಂಖ್ಯೆ 6 ಶಹಾಪುರ ತಾಲ್ಲೂಕಿನ ವನದುರ್ಗದಿಂದ ಸುರಪುರ ತಾಲ್ಲೂಕಿನ ನದಿ ತೀರ ಸೂಗೂರ ಗ್ರಾಮದವರೆಗೆ ವಿಸ್ತಾರ ಹೊಂದಿದೆ. ತಾಲ್ಲೂಕಿನ ಉಪ ವಿತರಣಾ ಕಾಲುವೆ ಸಂಖ್ಯೆ 20 ಕವಡಿಮಟ್ಟಿಯವರೆಗೆ ಮಾತ್ರ ನೀರು ದೊರಕುತ್ತದೆ.
21 ರಿಂದ 36ರ ವ್ಯಾಪ್ತಿಯಲ್ಲಿ ಬರುವ ರುಕ್ಮಾಪುರ, ಮುಷ್ಠಳ್ಳಿ, ಶೆಳ್ಳಗಿ, ಅಡ್ಡೊಡಗಿ, ಲಿಂಗದಳ್ಳಿ, ಚಂದಲಾಪುರ, ಚೌಡೇಶ್ವರಿಹಾಳ, ಬೇವಿನಾಳ, ಕರ್ನಾಳ, ಹೆಮ್ಮಡಗಿ, ಕುಪಗಲ್ ಇತರ ಕೆಲ ಗ್ರಾಮಗಳು ಕಾಲುವೆ ಕೊನೆ ಭಾಗಕ್ಕೆ ಬರುತ್ತವೆ. ಅಂದಾಜು 6 ಸಾವಿರ ಹೆಕ್ಟೇರ್ ಜಮೀನು ಇದೆ. 12 ವರ್ಷದ ಹಿಂದೆ ಉಪ ಕಾಲುವೆಗಳನ್ನು ದುರಸ್ತಿ ಮಾಡಿದ್ದರೂ ನಿರ್ವಹಣೆ ಕೊರತೆ ಮತ್ತು ಮೇಲ್ಭಾಗದ ರೈತರು ನೀರು ಅಡ್ಡಗಟ್ಟುವುದರಿಂದ ಕೊನೆ ಭಾಗಕ್ಕೆ ನೀರು ತಲುಪುತ್ತಿಲ್ಲ.
ಹೀಗಾಗಿ ದಾಖಲಾತಿಯಲ್ಲಿ ಮಾತ್ರ ಈ ಪ್ರದೇಶ ನೀರಾವರಿಗೆ ಒಳಪಟ್ಟಿದೆ. ಉಳಿದ ಪ್ರದೇಶದಲ್ಲಿ ಭತ್ತ ಬೆಳೆಯುತ್ತಿದ್ದರೂ, ಈ ಭಾಗದಲ್ಲಿ ಹತ್ತಿ, ತೊಗರಿ, ಸಜ್ಜೆ, ಶೇಂಗಾ ಉಳುಮೆ ಮಾಡುತ್ತಾರೆ. ಇದೇ ಕಾರಣದಿಂದ ಇಲ್ಲಿಯ ರೈತರ ಆರ್ಥಿಕ ಸ್ಥಿತಿ ಮೂರಕ್ಕೆ ಇಳಿಯದ ಆರಕ್ಕೆ ಏರದ ಸ್ಥಿತಿಯಲ್ಲಿ ಉಳಿದುಬಿಟ್ಟಿದೆ.
ಕಾಲುವೆಗಳ ಅಸಮರ್ಪಕ ನಿರ್ವಹಣೆಯಿಂದ ಅಲ್ಲಲ್ಲಿ ಸೋರಿಕೆಯಾಗುತ್ತಿದೆ. ಹೂಳು ತುಂಬಿಕೊಂಡಿದೆ. ಜಾಲಿ ಗಿಡ ಬೆಳೆದಿವೆ. ಹೀಗಾಗಿ ನೀರು ಸರಾಗವಾಗಿ ಹರಿಯುತ್ತಿಲ್ಲ. ರೈತರು ನೀರನ್ನು ನೆಚ್ಚಿಕೊಳ್ಳದೇ ಮಳೆಯಾಶ್ರಿತ ಬೆಳೆ ಬೆಳೆಯುವಂತಾಗಿದೆ.
ಅವೈಜ್ಞಾನಿಕ ಬೋನ್ಹಾಳ ಏತ ನೀರಾವರಿ
ಕಾಲುವೆ ಕೊನೆ ಭಾಗಕ್ಕೆ ನೀರು ಲಭಿಸಬೇಕೆನ್ನುವ ಉದ್ದೇಶದಿಂದ ದಶಕಗಳ ಹಿಂದೆ ಬೋನ್ಹಾಳ ಏತ ನೀರಾವರಿ ಆರಂಭಿಸಲಾಗಿತ್ತು. ಆ ನೀರನ್ನು ತಾಲ್ಲೂಕಿನ ವಾಗಣಗೇರಿ ಹತ್ತಿರದ ನಾಲೆಗೆ ಜೋಡಿಸಲಾಗಿದೆ. ಅದನ್ನು ಕುಂಬಾರಪೇಟೆಯ ಹತ್ತಿರದ ನಾಲೆಗೆ ಜೋಡಿಸಿದ್ದರೆ ನೀರು ವಂಚಿತ ಪ್ರದೇಶಕ್ಕೆ ಅನುಕೂಲವಾಗುತ್ತಿತ್ತು ಎನ್ನುವುದು ರೈತರ ವಾದ.
ಮುಂಗಾರು ಹಂಗಾಮಿಗಾಗಿ ಈಗಾಗಲೇ ಕಾಲುವೆಗೆ ನೀರು ಹರಿಸಲಾಗುತ್ತಿದೆ. ಆದರೆ ಇದುವರೆಗೂ ಕಾಲುವೆಯ ಹೂಳು, ಸೋರಿಕೆಯ ರಿಪೇರಿ, ಜಂಗಲ್ ಕಟಿಂಗ್ ಕಾಮಗಾರಿ ಕೈಗೊಂಡಿಲ್ಲ. ಇದರಿಂದ ಕಾಲುವೆಗಳಲ್ಲಿ ನೀರು ಸಮರ್ಪಕವಾಗಿ ಹರಿಯುತ್ತಿಲ್ಲ.
₹ 16 ಕೋಟಿ ನೀರಿನ ಕರ ಬಾಕಿ
ಉಪ ವಿತರಣಾ ಕಾಲುವೆ 13 ರಿಂದ 26 ರವರೆಗಿನ ನಿರ್ವಹಣೆಯ ಜವಾಬ್ದಾರಿ ಹಸನಾಪುರದ ಕೆಬಿಜೆಎನ್‍ಎಲ್ ಉಪ ವಿಭಾಗ ಸಂಖ್ಯೆ 10 ಕ್ಕೆ ಬರುತ್ತದೆ. 11 ಸಾವಿರ ಹೆಕ್ಟೇರ್ ಜಮೀನು ವ್ಯಾಪ್ತಿ ಇದೆ. ನೀರಾವರಿ ಆರಂಭದಿಂದಲೂ ಇಲ್ಲಿಯವರೆಗೆ ರೈತರು ಕರ ಪಾವತಿಸಿಲ್ಲ. ಈ ವ್ಯಾಪ್ತಿಯಲ್ಲಿ ರೂ. 16 ಕೋಟಿ ನೀರಿನ ಬಾಕಿ ಇದೆ. ರೈತರು ನಮಗೆ ಸಮರ್ಪಕ ನೀರು ಕೊಡಿ ಕರ ತೆಗೆದುಕೊಂಡು ಹೋಗಿ ಎಂದು ಪಟ್ಟು ಹಿಡಿದಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260825-30-322125939