
ಶ್ರೀರಂಗಪಟ್ಟಣ ಜಾಮಿಯಾ ಮಸೀದಿಯಲ್ಲಿ ಪೈಗಂಬರ್ ಪಾದ ಅಚ್ಚು ವೀಕ್ಷಣೆಗೆ ಅವಕಾಶ
ಶ್ರೀರಂಗಪಟ್ಟಣ: ಪ್ರವಾದಿ ಮಹಮದ್ ಪೈಗಂಬರ್ ಅವರ ಬಲ ಪಾದದ ಅಚ್ಚು ಮತ್ತು ಗಡ್ಡದ ಕೇಶವೆಂದು (ಮೊಯಿ-ಎ-ಮುಕ್‌ಕದ್ದಸ್) ನಂಬಲಾದ ಪವಿತ್ರ ಅವಶೇಷಗಳನ್ನು ಈದ್ ಮಿಲಾದ್ ದಿನ ಪಟ್ಟಣದ ಜಾಮಿಯಾ ಮಸೀದಿಯಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತದೆ.
ಟಿಪ್ಪು ಸುಲ್ತಾನ್‌ನಿಗೆ ಟರ್ಕಿ ಸುಲ್ತಾನ್ ಉಡುಗೊರೆಯಾಗಿ ನೀಡಿದ್ದಾನೆ ಎಂದು ಹೇಳಲಾದ ಪ್ರವಾದಿಯ ಪಾದದ ಅಚ್ಚು ಮತ್ತು ಕೇಶಗಳನ್ನು ಪ್ರತ್ಯೇಕ ಗಾಜಿನ ಪೆಟ್ಟಿಗೆಗಳಲ್ಲಿ ಸಂರಕ್ಷಿಸಿ ಇಡಲಾಗಿದೆ. ವರ್ಷದಲ್ಲಿ ಈದ್ ಮಿಲಾದ್‌ನ ಒಂದು ದಿನ ಮಾತ್ರ ಈ ವಸ್ತುಗಳು ಸಾರ್ವಜನಿಕರ ದರ್ಶನಕ್ಕೆ ಲಭ್ಯ ವಿರುತ್ತವೆ.
ಇಸ್ಲಾಂ ಧರ್ಮದ ಚಂದ್ರಮಾನ ಕ್ಯಾಲೆಂಡರ್‌ನ ಮೂರನೇ ತಿಂಗಳಾದ ‘ರಬ್ಬಿ ಉಲ್ ಅವುಲ್’ ದಿನದಂದು ಈದ್– ಮಿಲಾದ್ ಆಚರಿಸಲಾಗುತ್ತದೆ. ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಈ ಬಾರಿ ಆ. 26ರಂದು ಈ ಹಬ್ಬ ಆಚರಿಸಲಾಗುತ್ತಿದೆ. ಮಧ್ಯಾಹ್ನದ ಪ್ರಾರ್ಥನೆ ಮುಗಿದ ಬಳಿಕ ಪಾದುಕೆಯ ಅಚ್ಚು ಮತ್ತು ಕೇಶ ಇರುವ ಪೆಟ್ಟಿಗೆಗಳನ್ನು ಮಸೀದಿಯ ಮೊದಲ ಅಂತಸ್ತಿನಲ್ಲಿರುವ ಪ್ರಾರ್ಥನಾ ಸಭಾಂಗಣದ ಮುಂದೆ ಪ್ರದರ್ಶನಕ್ಕೆ ಇಡಲಾಗುತ್ತದೆ.
ಟಿಪ್ಪು ಸುಲ್ತಾನ್ ಮತ್ತು ಟರ್ಕಿ ದೇಶದ ಸುಲ್ತಾನ್ ನಡುವೆ ವಾಣಿಜ್ಯ ವಹಿವಾಟು ನಡೆಯುತ್ತಿತ್ತು. ಆ ಬಾಂಧವ್ಯದ ಗುರುತಾಗಿ ಟರ್ಕಿ ಸುಲ್ತಾನ್ ಟಿಪ್ಪುವಿಗೆ ಪೈಗಂಬರ್ ಅವರ ಪಾದದ ಅಚ್ಚು ಮತ್ತು ಅವರ ಗಡ್ಡದ ಕೇಶವನ್ನು ಉಡುಗೊರೆಯಾಗಿ ನೀಡಿದ್ದ.
ಟಿಪ್ಪು ಸುಲ್ತಾನ್ ಕ್ರಿ.ಶ. 1787ರಲ್ಲಿ ನಿರ್ಮಿಸಿದ ಮಸ್ಜಿದ್–ಇ–ಅಲಾ (ಜಾಮಿಯಾ ಮಸೀದಿ)ದಲ್ಲಿ ಈ ಎರಡು ವಸ್ತುಗಳ ಜತೆಗೆ ಮೆಕ್ಕಾ, ಮದೀನಾದಿಂದ ತರಿಸಿದ ಪವಿತ್ರ ವಸ್ತ್ರಗಳನ್ನೂ ಇರಿಸಿದ್ದ. ಟಿಪ್ಪು ಸುಲ್ತಾನ್ ಪ್ರತಿದಿನ ಈ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ ಕಾರಣಕ್ಕೆ ಇದು ‘ಟಿಪ್ಪು ಮಸೀದಿ’ ಎಂದೇ ಪ್ರಸಿದ್ಧವಾಗಿದೆ. ‘ಪ್ರವಾದಿ ಸ್ನಾನ ಮಾಡುವಾಗ ಅಥವಾ ಮುಖ ತೊಳೆಯುವಾಗ ಉದುರುತ್ತಿದ್ದ ಕೂದಲುಗಳನ್ನು ಅನುಯಾಯಿಗಳು ಸಂಗ್ರಹಿಸುತ್ತಿದ್ದರು. ಧರ್ಮ ಪ್ರಚಾರಕ್ಕೆ ಹೋದಾಗ ಪ್ರಮುಖ ವ್ಯಕ್ತಿಗಳಿಗೆ ಉಡುಗೊರೆ ನೀಡುತ್ತಿದ್ದರು’ ಎಂಬುದು ಮುಖಂಡ ಗುಲ್ಜಾರ್ ಪಾಷಾ ಹೇಳಿದರು.
ಯುದ್ಧ ತಂತ್ರ ವಿವರಿಸುವ ಶಾಸನ
ನಾಲ್ಕನೇ– ಆಂಗ್ಲೋ ಮೈಸೂರು ಯುದ್ಧ (ಕ್ರಿ.ಶ.1799)ದಲ್ಲಿ ಟಿಪ್ಪು ಹತನಾದ ಬಳಿಕವೂ ಈ ಮಸೀದಿಯಲ್ಲಿ ಪ್ರಾರ್ಥನೆ ಮುಂದುವರಿದಿದೆ. ಮಸೀದಿಯ ದಕ್ಷಿಣ ಗೋಡೆ ಮೇಲಿರುವ ಅರೇಬಿಕ್ ಭಾಷೆಯ ಶಾಸನ ಪ್ರವಾದಿ ಪೈಗಂಬರ್ ಅವರು ಮದೀನ ಸಮೀಪ, ಖೈಬರ್ ಬಳಿ ಯಹೂದಿಗಳ ಜತೆ ಯುದ್ಧ ಮಾಡಿದ ಪ್ರಸಂಗವನ್ನು ತಿಳಿಸುತ್ತದೆ. ಯುದ್ಧದ ತಂತ್ರಗಳು ಮತ್ತು ಗೆಲುವಿನ ನಂತರ ಶತ್ರುಗಳಿಂದ ವಶಪಡಿಸಿಕೊಂಡ ಸಂಪತ್ತನ್ನು ಹಂಚಿಕೆ ಮಾಡುವ ಕ್ರಮಗಳನ್ನು ಈ ಶಾಸನ ವಿವರಿಸುತ್ತದೆ ಎಂದು ಮಹಮದ್ ಉಮರ್ ಫಾರೂಕ್ ತಿಳಿಸಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260825-40-1311733721