ಹಿರಿಯೂರು | ಸಿಎಂ ಎಚ್ಚರಿಕೆಯ ನಂತರವೂ ನಿಲ್ಲದ ಟಿಕೆಟ್ ಆಕಾಂಕ್ಷೆ: ಗೊಂದಲ ಸೃಷ್ಟಿ

ಹಿರಿಯೂರು | ಸಿಎಂ ಎಚ್ಚರಿಕೆಯ ನಂತರವೂ ನಿಲ್ಲದ ಟಿಕೆಟ್ ಆಕಾಂಕ್ಷೆ: ಗೊಂದಲ ಸೃಷ್ಟಿ

ಹಿರಿಯೂರು | ಸಿಎಂ ಎಚ್ಚರಿಕೆಯ ನಂತರವೂ ನಿಲ್ಲದ ಟಿಕೆಟ್ ಆಕಾಂಕ್ಷೆ: ಗೊಂದಲ ಸೃಷ್ಟಿ

ಚಿತ್ರದುರ್ಗ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಎಚ್ಚರಿಕೆಯ ಬಳಿಕವೂ ಕಾಂಗ್ರೆಸ್‌ ಪಕ್ಷದ ಹಲವು ಮುಖಂಡರು ಹಿರಿಯೂರು ಕ್ಷೇತ್ರದ ಉಪ ಚುನಾವಣೆ ಟಿಕೆಟ್‌ಗಾಗಿ ತೆರೆಮರೆಯಲ್ಲೇ ಕಸರತ್ತು ನಡೆಸುತ್ತಿದ್ದಾರೆ. ಪಕ್ಷ ನಡೆಸಿದೆ ಎನ್ನಲಾದ ಆಂತರಿಕ ಸಮೀಕ್ಷೆಯ ಫಲಿತಾಂಶ ಕ್ಷೇತ್ರದಾದ್ಯಂತ ಹರಿದಾಡುತ್ತಿದ್ದು, ಗೊಂದಲಕ್ಕೆ ಕಾರಣವಾಗಿದೆ.

ಜುಲೈ 26ರಂದು ನಡೆದ ಡಿ. ಸುಧಾಕರ್‌ ನುಡಿ–ನಮನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಡಿ.ಕೆ. ಶಿವಕುಮಾರ್‌, ‘ರಾಜಕಾರಣದಲ್ಲಿ ಹಲವರಿಗೆ ಆಸೆ, ಆಕಾಂಕ್ಷೆಗಳಿರುತ್ತವೆ. ಆದರೆ ಶಿಸ್ತು, ಬದ್ಧತೆ, ಪ್ರಾಮಾಣಿಕತೆ ಇದ್ದರೆ ಮಾತ್ರ ಅವಕಾಶಗಳು ದೊರೆಯುತ್ತವೆ. ಸದ್ಯಕ್ಕೆ ಡಿ. ಸುಧಾಕರ್‌ ಕನಸುಗಳನ್ನು ನನಸು ಮಾಡುವ ಗುರಿ ನಮ್ಮ ಮುಂದಿದೆ’ ಎಂದು ಹೇಳುವ ಮೂಲಕ ಸುಧಾಕರ್‌ ಪುತ್ರ ಸುಹಾಸ್‌ಗೆ ಟಿಕೆಟ್‌ ಖಚಿತ ಎಂಬ ಸಂದೇಶ ನೀಡಿ ಪರೋಕ್ಷವಾಗಿ ಟಿಕೆಟ್‌ ಆಕಾಂಕ್ಷಿಗಳಿಗೆ ಎಚ್ಚರಿಕೆ ನೀಡಿದ್ದರು.

ಇದಾದ ನಂತರ ಕ್ಷೇತ್ರದಾದ್ಯಂತ ಫ್ಲೆಕ್ಸ್‌, ಬ್ಯಾನರ್‌ಗಳನ್ನು ಹಾಕಿ ಮಿಂಚಿನ ಸಂಚಾರ ನಡೆಸುತ್ತಿದ್ದ, ಜಾತಿ ಮತಗಳನ್ನೇ ಆಧಾರವಾಗಿಟ್ಟುಕೊಂಡು ಟಿಕೆಟ್‌ ಕೇಳುತ್ತಿದ್ದ ಮುಖಂಡರ ಯತ್ನ ತಣ್ಣಗಾದಂತೆ ತೋರಿತ್ತು. ಮೇಲ್ನೋಟಕ್ಕೆ ಪ್ರಯತ್ನ ತಗ್ಗಿದಂತೆ ಕಂಡರೂ ಹಲವು ಆಕಾಂಕ್ಷಿಗಳು ಸದ್ದುಗದ್ದಲವಿಲ್ಲದೇ ತಮ್ಮ ಪ್ರಯತ್ನ ಮುಂದುವರಿಸಿದ್ದಾರೆ. ಕ್ಷೇತ್ರದಾದ್ಯಂತ ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಂಡು ಬೆಂಬಲ ಕೋರುತ್ತಿದ್ದಾರೆ. ಹೋದಲ್ಲಿ, ಬಂದಲ್ಲೆಲ್ಲಾ ಅವರ ಬೆಂಬಲಿಗರಿಂದ ಜೈಕಾರ ಹಾಕಿಸಿಕೊಳ್ಳುತ್ತಿದ್ದಾರೆ.

‘ಉಪ ಚುನಾವಣೆ ಸಂಬಂಧ ಪಕ್ಷದ ವತಿಯಿಂದ ಆಂತರಿಕ ಸಮೀಕ್ಷೆ ನಡೆದಿದ್ದು, ಅದರಲ್ಲಿ ಸುಹಾಸ್‌ಗೆ ವಿರುದ್ಧವಾದ ಫಲಿತಾಂಶ ಬಂದಿದೆ’ ಎಂಬ ವಿಚಾರ ಕ್ಷೇತ್ರದಾದ್ಯಂತ ಹರಿದಾಡುತ್ತಿದೆ. ಉಪಚುನಾವಣೆ ವೇಳೆ ಸಮೀಕ್ಷೆಗಳು ಸಾಮಾನ್ಯ. ಫಲಿತಾಂಶವನ್ನು ಕಾಂಗ್ರೆಸ್‌ ಪಕ್ಷ ಬಹಿರಂಗಪಡಿಸಿಲ್ಲ. ಆದರೂ ಕಾಂಗ್ರೆಸ್‌ನ ಕೆಲವು ಮುಖಂಡರೇ ಫಲಿತಾಂಶ ಸುಹಾಸ್‌ ಪರವಾಗಿಲ್ಲ ಎಂಬ ಸುದ್ದಿ ಹರಡಿಸುತ್ತಿದ್ದಾರೆ ಎಂಬ ವದಂತಿಗಳಿವೆ.

ಇದನ್ನೇ ಆಧಾರವಾಗಿಟ್ಟುಕೊಂಡು ಹಲವು ಮುಖಂಡರು ಕ್ಷೇತ್ರದಲ್ಲಿ ಸಂಚರಿಸುತ್ತ, ಶುಭ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿದ್ದು, ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ. ಗಣಪತಿ ಹಬ್ಬಕ್ಕೆ ದಾರಾಳವಾಗಿ ಧನಸಹಾಯ ಮಾಡುತ್ತಿದ್ದಾರೆ. ‘ಕಾಂಗ್ರೆಸ್‌ ಪಕ್ಷ ಸುಹಾಸ್‌ಗೆ ಟಿಕೆಟ್‌ ಕೊಟ್ಟರೂ ಗೆಲುವು ಕಷ್ಟ’ ಎಂಬ ಪ್ರಚಾರಗಳು ನಡೆಯುತ್ತಿವೆ.

ಸಿಎಂಗೆ ಸವಾಲು: ಹಿರಿಯೂರು ಉಪ ಚುನಾವಣೆ ಡಿ.ಕೆ. ಶಿವಕುಮಾರ್‌ ಅವರು ಮುಖ್ಯಮಂತ್ರಿಯಾದ ನಂತರ ನಡೆಯಲಿರುವ ಮೊದಲ ಚುನಾವಣೆ. ಕ್ಷೇತ್ರವನ್ನು ಉಳಿಸಿಕೊಳ್ಳುವುದು ಅವರಿಗೆ ಸವಾಲು. ಈ ಕಾರಣದಿಂದ ಈಚೆಗೆ ಮುಖ್ಯಮಂತ್ರಿ ಅವರು ಜಿಲ್ಲೆಗೆ 4 ಬಾರಿ ಬಂದಿದ್ದಾರೆ. ಬೆಂಗಳೂರು ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯನ್ನು ಜಿಲ್ಲೆಯಲ್ಲೇ ನಡೆಸಿದ್ದಾರೆ. ಹಿರಿಯೂರು ತಾಲ್ಲೂಕು ವ್ಯಾಪ್ತಿಯಲ್ಲಿ ಬರ ಪರಿಶೀಲನೆ ನಡೆಸಿದ್ದಾರೆ. ಇದನ್ನು ಉಪ ಚುನಾವಣೆ ಉದ್ದೇಶಕ್ಕೇ ನಡೆಸಲಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.

ಜಾತಿ ಹಿಂದೆ ಬಿದ್ದ ಮುಖಂಡರು: ಹಿರಿಯೂರು ಕ್ಷೇತ್ರದಲ್ಲಿ ಸುಧಾಕರ್‌ 3 ಚುನಾವಣೆ ಗೆದ್ದಿದ್ದು, ಜಾತ್ಯತೀತ ಧೋರಣೆಯೇ ಅವರ ಗೆಲುವಿಗೆ ಕಾರಣವಾಗಿದ್ದವು. ಬಹುಸಂಖ್ಯಾತರಾದ ಕಾಡುಗೊಲ್ಲ, ಕುಂಚಿಟಿಗ ಒಕ್ಕಲಿಗ ಸಮಾಜಗಳಿಗೆ ಸುಧಾಕರ್‌ ಆಪ್ತವಾಗಿ ನಡೆದುಕೊಂಡು ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗುತ್ತಿದ್ದರು.

ಜಾತ್ಯತೀತ ಪರಿಕಲ್ಪನೆಯ ಮೇಲೆಯೇ ಸುಹಾಸ್‌ ಅವರನ್ನೂ ಗೆಲ್ಲಿಸಿಕೊಳ್ಳಲು ಕಾಂಗ್ರೆಸ್‌ ಚಿಂತನೆ ನಡೆಸಿದೆ. ಆದರೆ, ಕಾಂಗ್ರೆಸ್‌ನ ಹಲವು ಮುಖಂಡರು ಜಾತಿಯ ಹಿಂದೆ ಬಿದ್ದಿದ್ದು, ಅದರ ಆಧಾರದ ಮೇಲೇ ಟಿಕೆಟ್‌ ಕೇಳುತ್ತಿದ್ದಾರೆ. ವಿಶ್ವೇಶ್ವರಯ್ಯ ಜಲ ನಿಗಮದ ನಿವೃತ್ತ ಮುಖ್ಯ ಎಂಜಿನಿಯರ್‌ ಸಣ್ಣಚಿತ್ತಯ್ಯ ಪ್ರಬಲ ಆಕಾಂಕ್ಷಿಯಾಗಿದ್ದು, ಕಾಡುಗೊಲ್ಲ ಸಮುದಾಯದ ಆಧಾರದಲ್ಲೇ ಸಂಚರಿಸುತ್ತಿದ್ದಾರೆ. ಯೂಟ್ಯೂಬ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ವಿಡಿಯೊ ಹಾಕುತ್ತಿದ್ದು, ತಾವು ಬೆಳೆದುಬಂದ ಪರಿಯನ್ನು ಹೇಳಿಕೊಳ್ಳುತ್ತಿದ್ದಾರೆ.

ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಬಿ. ಪಾಪಣ್ಣ, ಬಿಬಿಎಂಪಿ ನಿವೃತ್ತ ಉಪ ಆಯುಕ್ತ ಜೆ. ರಾಜು, ಕೆಪಿಸಿಸಿ ಉಪಾಧ್ಯಕ್ಷ ಆರ್‌. ಮಂಜುನಾಥ್‌, ಕಾಂಗ್ರೆಸ್‌ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಬಿ.ಎಚ್‌. ಮಂಜುನಾಥ್‌ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ.

ಕಾಂಗ್ರೆಸ್‌ನಲ್ಲಿ ಮೃತ ಶಾಸಕರ ಕುಟುಂಬದ ಸದಸ್ಯರಿಗೆ ಟಿಕೆಟ್‌ ನೀಡುವುದು ಸಂಪ್ರದಾಯ. ಇದರಿಂದಾಗಿ ಸುಧಾಕರ್‌ ಪುತ್ರ ಸುಹಾಸ್‌ ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ. ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲೂ 2 ಸುತ್ತು ಸಂಚಾರ ಪೂರ್ಣಗೊಳಿಸಿದ್ದಾರೆ.

ಬಂಡಾಯ ಅಭ್ಯರ್ಥಿಯಾಗಿ ನಿಲ್ಲುವರೇ?

ಕಾಂಗ್ರೆಸ್‌ ಟಿಕೆಟ್‌ ಸಿಗದಿದ್ದರೆ ಒಂದಿಬ್ಬರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದು ಖಚಿತ ಎಂಬ ಸುದ್ದಿಗಳೂ ಇವೆ. ‘ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾತು ಮೀರಿ ಯಾರೂ ಸ್ಪರ್ಧಿಸಲಾರರು, ಅವರ ಚಾಟಿ ಮಾತಿಗೆ ಎಲ್ಲರೂ ಶರಣಾಗಲೇಬೇಕು’ ಎಂದು ಕಾಂಗ್ರೆಸ್‌ ಮುಖಂಡರು ಹೇಳುತ್ತಾರೆ.

ಇನ್ನೊಂದೆಡೆ ಬಿಜೆಪಿ–ಜೆಡಿಎಸ್‌ ಮೈತ್ರಿ ಪಕ್ಷಗಳು ಕೂಡ ಜಾತಿ ಮತಗಳ ಲೆಕ್ಕಾಚಾರದಲ್ಲೇ ಮುಳುಗಿವೆ. ಕಾಡುಗೊಲ್ಲರ ಸಂಘದ ರಾಜ್ಯ ಘಟಕದ ಅಧ್ಯಕ್ಷ ರಾಜಣ್ಣ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಲಾಗಿದ್ದು, ಅವರೇ ಮೈತ್ರಿ ಅಭ್ಯರ್ಥಿಯಾಗುವುದು ಖಚಿತ. ಮೈತ್ರಿ ಅಭ್ಯರ್ಥಿ ಅಂತಿಮಗೊಂಡ ನಂತರ ಸುಧಾಕರ್‌ ಪುತ್ರ ಸುಹಾಸ್‌ ಟಿಕೆಟ್‌ ಭವಿಷ್ಯ ನಿರ್ಣಯವಾಗಲಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260825-44-463177228

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ