ಕತ್ತಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ: ಸಂಚರಿಸಲು ಗಾಬರಿ

ಕತ್ತಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ: ಸಂಚರಿಸಲು ಗಾಬರಿ

ಕತ್ತಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ: ಸಂಚರಿಸಲು ಗಾಬರಿ

ಕಮಲನಗರ: ಪಟ್ಟಣದ ಮಧ್ಯಭಾಗದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ–50ರ ವಿಭಜಕದಲ್ಲಿರುವ ಹಲವು ಬೀದಿ ದೀಪಗಳು ಕಳೆದ ಹಲವು ದಿನಗಳಿಂದ ಬೆಳಗದೆ ಇರುವುದರಿಂದ ರಾತ್ರಿ ವೇಳೆ ಹೆದ್ದಾರಿಯಲ್ಲಿ ಕತ್ತಲೆ ಆವರಿಸಿ ಪಾದಚಾರಿಗಳು ಹಾಗೂ ವಾಹನ ಸವಾರರು ಆತಂಕದಿಂದ ಸಂಚರಿಸುವಂತಾಗಿದೆ.

ಪಟ್ಟಣವು ವ್ಯಾಪಾರ ಚಟುವಟಿಕೆಯ ಪ್ರಮುಖ ಕೇಂದ್ರವಾಗಿದ್ದು, ಹೆದ್ದಾರಿ ಬದಿಯಲ್ಲಿ ನೂರಾರು ಅಂಗಡಿ–ಮುಂಗಟ್ಟುಗಳಿವೆ. ಪ್ರತಿನಿತ್ಯ ಭಾರಿ ವಾಹನಗಳು, ಬಸ್‍ಗಳು ಸೇರಿದಂತೆ ಸಾವಿರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ಇಂತಹ ಪ್ರಮುಖ ರಸ್ತೆಯಲ್ಲಿ ಸಮರ್ಪಕ ಬೆಳಕಿನ ವ್ಯವಸ್ಥೆ ಇಲ್ಲದಿರುವುದು ಆತಂಕಕ್ಕೆ ಕಾರಣವಾಗಿದೆ.

ರಾತ್ರಿಯಾಗುತ್ತಿದ್ದಂತೆ ಹೆದ್ದಾರಿಯ ಹಲವು ಭಾಗಗಳು ಕತ್ತಲಲ್ಲಿ ಮುಳುಗುತ್ತವೆ. ವಿಶೇಷವಾಗಿ ಮಿನಿ ಬಸ್ ನಿಲ್ದಾಣಕ್ಕೆ ತಡರಾತ್ರಿ ಆಗಮಿಸುವ ಪ್ರಯಾಣಿಕರು ಕತ್ತಲಿನ ರಸ್ತೆಯಲ್ಲಿ ನಡೆದುಕೊಂಡು ಮನೆ ತಲುಪಲು ಹರಸಾಹಸ ಪಡಬೇಕಾಗಿದೆ. ಅಪಘಾತಗಳು ಸಂಭವಿಸುವ ಸಾಧ್ಯತೆ ಇರುವ ಕ್ರಾಸ್‍ಗಳಲ್ಲಿಯೂ ಸಮರ್ಪಕ ಬೆಳಕಿನ ವ್ಯವಸ್ಥೆ ಇಲ್ಲದಿರುವುದು ಶೋಚನೀಯ.

‘ರಾಷ್ಟ್ರೀಯ ಹೆದ್ದಾರಿಯ ವಿಭಜಕದ ಬೀದಿದೀಪಗಳ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ಬೆಳಕಿನ ಕೊರತೆ ಸಾರ್ವಜನಿಕರಲ್ಲಿ ಅಸುರಕ್ಷತೆಯ ಭಾವನೆ ಮೂಡಿದೆ. ಕೂಡಲೇ ದುರಸ್ತಿ ಕಾರ್ಯ ಕೈಗೊಳ್ಳಬೇಕು’ ಎನ್ನುತ್ತಾರೆ ಗ್ರಾಮಸ್ಥ ರವಿದಾಸ ಕಾರಬಾರಿ.

‘ಬಹಳ ದಿನಗಳಿಂದ ಬೀದಿದೀಪಗಳು ಕೆಟ್ಟು ಹೋಗಿವೆ. ದುರಸ್ತಿ ಕಾರ್ಯ ಸರಿಯಾಗಿ ನಡೆಯದಿರುವುದರಿಂದ ರಸ್ತೆಯಲ್ಲಿ ಕತ್ತಲಿನಲ್ಲಿಯೇ ಸಂಚಾರ ಮಾಡುವುದು ಸಾಮಾನ್ಯವಾಗಿದೆ’ ಎನ್ನುತ್ತಾರೆ ವಿಕಾಸ ಅಕಾಡೆಮಿ ಅಧ್ಯಕ್ಷ ಯಶವಂತ ಬಿರಾದಾರ.

‘ಬೀದಿ ದೀಪಗಳ ದುರಸ್ತಿ ಕಾರ್ಯವನ್ನು ತಕ್ಷಣ ಕೈಗೊಂಡು ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಖಾನಾಪುರೆ.

ಬೀದಿ ದೀಪಗಳ ದುರುಸ್ತಿಗೆ ಇನ್ನೆಷ್ಟು ದಿನ? ‘ರಾಷ್ಟ್ರೀಯ ಹೆದ್ದಾರಿಯ ವಿಭಜಕದಲ್ಲಿರುವ ಕೆಟ್ಟುಹೋಗಿರುವ ಎಲ್ಲ ಬೀದಿದೀಪಗಳನ್ನು ತಕ್ಷಣ ದುರಸ್ತಿ ಪಡಿಸಬೇಕು. ಪ್ರಮುಖ ಕ್ರಾಸ್‍ಗಳು ಮಿನಿ ಬಸ್ ನಿಲ್ದಾಣ ಹಾಗೂ ಜನನಿಬೀಡ ಪ್ರದೇಶಗಳಲ್ಲಿ ಸಮರ್ಪಕ ಬೆಳಕಿನ ವ್ಯವಸ್ಥೆ ಕಲ್ಪಿಸಬೇಕು. ಸಂಬಂಧಿತ ಹೆದ್ದಾರಿ ಪ್ರಾಧಿಕಾರ ಹಾಗೂ ಸ್ಥಳೀಯ ಆಡಳಿತವು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು’ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ