ಜಮ್ಮು ಮತ್ತು ಕಾಶ್ಮೀರ: ಮೂರು ದಶಕಗಳ ಹಿಂದಿನ ಹತ್ಯೆ ಪ್ರಕರಣಗಳ ತನಿಖೆಗೆ ಮರುಜೀವ

ಜಮ್ಮು ಮತ್ತು ಕಾಶ್ಮೀರ: ಮೂರು ದಶಕಗಳ ಹಿಂದಿನ ಹತ್ಯೆ ಪ್ರಕರಣಗಳ ತನಿಖೆಗೆ ಮರುಜೀವ

ಜಮ್ಮು ಮತ್ತು ಕಾಶ್ಮೀರ: ಮೂರು ದಶಕಗಳ ಹಿಂದಿನ ಹತ್ಯೆ ಪ್ರಕರಣಗಳ ತನಿಖೆಗೆ ಮರುಜೀವ

ಶ್ರೀನಗರ: ಮೂರು ದಶಕಗಳ ಹಿಂದೆ ಕಾಶ್ಮೀರ ಕಣಿವೆಯನ್ನು ಹಿಂಸಾಚಾರಕ್ಕೆ ದೂಡಿದ್ದ ಹಾಗೂ ಕಾಶ್ಮೀರಿ ಪಂಡಿತರು ವಲಸೆ ಹೋಗುವಂತೆ ಮಾಡಿದ್ದ ಭಯೋತ್ಪಾದಕ ಕೃತ್ಯಗಳ ನಂತರ ಇತ್ಯರ್ಥವಾಗದೇ ಉಳಿದಿರುವ ಹಲವು ಪ್ರಮುಖ ಪ್ರಕರಣಗಳ ಕುರಿತು ಪುನಃ ತನಿಖೆ ನಡೆಸಲು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಮುಂದಾಗಿದೆ.

ನ್ಯಾಯಾಧೀಶ ನೀಲಕಂಠ ಗಂಜು ಮತ್ತು ಬಿಜೆಪಿ ನಾಯಕ ಟೀಕಾ ಲಾಲ್‌ ಟಪ್ಲೂ, ವನಧಾಮದಲ್ಲಿ ನಡೆದ 23 ಪಂಡಿತರ ಹತ್ಯೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಮಹತ್ವದ ಪ್ರಗತಿ ಸಾಧಿಸಿರುವುದಾಗಿ ರಾಜ್ಯ ತನಿಖಾ ಸಂಸ್ಥೆ (ಎಸ್‌ಐಎ) ಹೇಳಿದೆ. ಎಸ್‌ಐಎ ಜಮ್ಮು ಮತ್ತು ಕಾಶ್ಮೀರದ ವಿಶೇಷ ಭಯೋತ್ಪಾದನಾ ನಿಗ್ರಹ ತನಿಖಾ ಸಂಸ್ಥೆಯಾಗಿದೆ.

1990ರಲ್ಲಿ ನಡೆದ ಶುಶ್ರೂಷಕಿ ಸರಳಾ ಭಟ್‌ ಹತ್ಯೆಗೆ ಸಂಬಂಧಿಸಿದಂತೆ 737 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದೆ. ಅದೇ ವರ್ಷ ನಡೆದ ಬರಹಗಾರ ಸರ್ವಾನಂದ್‌ ಕೌಲ್‌ ಪ್ರೇಮಿ ಹಾಗೂ ಅವರ ಪುತ್ರ ವೀರೇಂದ್ರ ಕೌಲ್‌ ಹತ್ಯೆಗೆ ಸಂಬಂಧಿಸಿದಂತೆ ಎಸ್‌ಐಎ 9 ಸ್ಥಳಗಳಲ್ಲಿ ಇತ್ತೀಚೆಗೆ ಶೋಧ ಕಾರ್ಯಾಚರಣೆ ನಡೆಸಿದೆ.

ಹತ್ಯೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಭಯೋತ್ಪಾದಕರು, ಕೃತ್ಯಕ್ಕೆ ನೆರವಾದವರು ಮತ್ತು ಇತರರನ್ನು ಗುರುತಿಸಲಾಗಿದೆ. ಅವರಲ್ಲಿ ಕೆಲವರು ಮೃತಪಟ್ಟಿದ್ದಾರೆ. ಆದರೆ, ಇನ್ನೂ ಕೆಲವರು ಜೀವಂತವಾಗಿದ್ದು, ತಲೆಮರೆಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಲಿಬರೇಷನ್‌ ಫ್ರಂಟ್‌ (ಜೆಕೆಎಲ್‌ಎಫ್‌) ಸಂಘಟನೆಯ ಸಂಸ್ಥಾಪಕ ಮಕ್ಬೂಲ್‌ ಭಟ್‌ನನ್ನು ದೆಹಲಿಯ ತಿಹಾರ್‌ ಜೈಲಿನಲ್ಲಿ 1984ರ ಫೆಬ್ರುವರಿ 11ರಂದು ಗಲ್ಲಿಗೇರಿಸಲಾಗಿತ್ತು. ಭಟ್‌ ಪ್ರಕರಣದ ವಿಚಾರಣೆಯ ನೇತೃತ್ವ ವಹಿಸಿದ್ದ ಗಂಜು ಅವರನ್ನು 1989ರ ನವೆಂಬರ್ 4ರಂದು ಶ್ರೀನಗರದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

ಅದಕ್ಕಿಂತ ಸ್ವಲ್ಪ ದಿನಗಳ ಮೊದಲು, ಅಂದರೆ 1989ರ ಸೆಪ್ಟೆಂಬರ್‌ 13ರಂದು, ಕಾಶ್ಮೀರದಲ್ಲಿ ಬಿಜೆಪಿ ನಾಯಕರಾಗಿದ್ದ ಟಪ್ಲೂ ಅವರನ್ನು ಶ್ರೀನಗರದಲ್ಲಿದ್ದ ಅವರ ಮನೆಯಲ್ಲಿಯೇ ಕೊಲೆ ಮಾಡಲಾಗಿತ್ತು.

ಗಂದರ್‌ಬಲ್‌ ಜಿಲ್ಲೆಯ ವಂಧಮಾದಲ್ಲಿ ಒಂಬತ್ತು ಮಹಿಳೆಯರು, ನಾಲ್ಕು ಮಕ್ಕಳು ಸೇರಿದಂತೆ 23 ಕಾಶ್ಮೀರಿ ಪಂಡಿತರನ್ನು 1998ರ ಜನವರಿ 23ರಂದು ಹತ್ಯೆ ಮಾಡಲಾಗಿತ್ತು.

ಗಂಜು ಪ್ರಕರಣದ ತನಿಖೆ ಹೊಸ ವಿಚಾರವೇನಲ್ಲ. ಎಸ್‌ಐಎ 2023ರಲ್ಲಿ ಹತ್ಯೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಮಾಹಿತಿ ಕೋರಿತ್ತು. ಸದ್ಯದ ಕ್ರಮವು, ಇತ್ಯರ್ಥವಾಗದ ಭಯೋತ್ಪಾದನಾ ಪ್ರಕರಣಗಳನ್ನು ಪುನಃ ಪರಿಶೀಲಿಸುವ ಸಮಗ್ರ ಪ್ರಯತ್ನವಾಗಿದೆ.

ತನಿಖಾಧಿಕಾರಿಗಳು ಹಳೇ ಪ್ರಕರಣವನ್ನು ಸಾಕ್ಷಿಗಳ ಹೇಳಿಕೆಗಳು, ಸಂಗ್ರಹಿಸಿರುವ ದಾಖಲೆಗಳು, ವಿಧಿವಿಜ್ಞಾನ ಮತ್ತು ಶಸ್ತ್ರಾಸ್ತ್ರ ಬಳಕೆ ಸಂಬಂಧಿತ ವರದಿಗಳು, ವೈದ್ಯಕೀಯ ಹಾಗೂ ಎಲೆಕ್ಟ್ರಾನಿಕ್‌ ಸಾಕ್ಷ್ಯಗಳೊಂದಿಗೆ ಹೇಗೆ ನಿರ್ವಹಿಸುತ್ತಿದ್ದಾರೆ ಎಂಬುದನ್ನು ಸರಳಾ ಭಟ್‌ ಪ್ರಕರಣ ತೋರಿಸುತ್ತದೆ.

ಸರಳಾ ಪ್ರಕರಣವನ್ನು 2024ರ ಮಾರ್ಚ್‌ನಲ್ಲಿ ಎಸ್‌ಐಎಗೆ ವರ್ಗಾಯಿಸಲಾಗಿದೆ. ಈ ವರ್ಷದ ಜೂನ್‌ನಲ್ಲಿ, ಜೈಲಿನಲ್ಲಿರುವ ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ ಸೇರಿದಂತೆ ಜೆಕೆಎಲ್‌ಎಫ್‌ನ ಐವರು ಕಾರ್ಯಕ್ರರ್ತರ ವಿರುದ್ಧ ಎಸ್‌ಐಎ ಚಾರ್ಜ್‌ಶೀಟ್‌ ದಾಖಲಿಸಿತ್ತು. ಇತರ ಆರೋಪಿಗಳಲ್ಲಿ ಮೂವರು ಮೃತಪಟ್ಟಿದ್ದು, ಒಬ್ಬ ತಲೆಮರೆಸಿಕೊಂಡಿದ್ದಾನೆ.

ಈ ಪ್ರಕರಣಗಳ ವಿಚಾರಣಾ ಪ್ರಕ್ರಿಯೆ ಸುಲಭವಾಗಿರದೇ ಇದ್ದರೂ, ಮತ್ತೆ ನ್ಯಾಯಾಲಯದಲ್ಲಿ ಪ್ರಕರಣಗಳು ಬರುವುದನ್ನು ನೋಡಲು ಸಂತ್ರಸ್ತರ ಕುಟುಂಬಗಳಿಗೆ ಒಂದು ಅವಕಾಶವಂತೂ ನೀಡಲಿದೆ. ಮರು ತನಿಖೆಯ ಸಮಯವೂ ಮಹತ್ವದ್ದಾಗಿದೆ.

ಆದಾಗ್ಯೂ, ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುವುದು ಕಠಿಣವೂ ಹೌದು. ಹಲವು ಶಂಕಿತರು ಈಗಾಗಲೇ ಮೃತಪಟ್ಟಿದ್ದಾರೆ. ಸಾಕ್ಷಿಗಳನ್ನು ಸಂಗ್ರಹಿಸುವುದು ಅಷ್ಟು ಸುಲಭವೂ ಅಲ್ಲ. ದಾಖಲೆಗಳು, ವಿಧಿವಿಜ್ಞಾನ ವರದಿಗಳು ತುಂಬಾ ಹಳೆಯವೆನಿಸಿವೆ. ಹಾಗಾಗಿ, ತನಿಖಾಧಿಕಾರಿಗಳು ದಶಕಗಳ ಹಿಂದಿನ ಗುಪ್ತಚರ ಮಾಹಿತಿಯನ್ನೇ ಸಾಕ್ಷ್ಯವಾಗಿ ಪರಿವರ್ತಿಸಬೇಕಿದೆ.

ಎಸ್‌ಐಎ ಮತ್ತೆ ತೆರೆದಿರುವ ಪ್ರಕರಣಗಳಲ್ಲಿ ಹಲವನ್ನು ಜಿಲ್ಲಾ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ