ರಕ್ಷಾಬಂಧನ: ಆ. 27-29ರವರೆಗೆ ಉತ್ತರ ಪ್ರದೇಶದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ

ರಕ್ಷಾಬಂಧನ: ಆ. 27-29ರವರೆಗೆ ಉತ್ತರ ಪ್ರದೇಶದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ

ರಕ್ಷಾಬಂಧನ: ಆ. 27-29ರವರೆಗೆ ಉತ್ತರ ಪ್ರದೇಶದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ

ಲಖನೌ: ರಕ್ಷಾಬಂಧನ ಹಬ್ಬದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ. ಕಳೆದ ಬಾರಿಯೂ ಈ ಅವಧಿಯಲ್ಲೂ ಉಚಿತ ಪ್ರಯಾಣದ ಅವಕಾಶ ನೀಡಲಾಗಿತ್ತು.

ಆಗಸ್ಟ್‌ 27ರಂದು ಬೆಳಿಗ್ಗೆ 6ರಿಂದ ಆಗಸ್ಟ್‌ 29ರ ಮಧ್ಯರಾತ್ರಿವರೆಗೆ ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಯು.ಪಿ.ಎಸ್.ಆರ್.ಟಿ.ಸಿ) ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು. ಮಹಿಳಾ ಪ್ರಯಾಣಿಕರೊಂದಿಗೆ ಒಬ್ಬ ಸಹ ಪ್ರಯಾಣಿಕರಿಗೂ ಉಚಿತ ಪ್ರಯಾಣದ ಸೌಲಭ್ಯ ಇರಲಿದೆ.

ಹಬ್ಬದ ಸಂದರ್ಭದಲ್ಲಿ ಮಹಿಳೆಯರು ಸುರಕ್ಷಿತವಾಗಿ, ಸುಗಮವಾಗಿ ತಮ್ಮ ಊರುಗಳಿಗೆ ತೆರಳಿ ಮರಳುವಂತೆ ಅಗತ್ಯ ವ್ಯವಸ್ಥೆಗಳನ್ನು ಮಾಡುವಂತೆ ಸಾರಿಗೆ ಇಲಾಖೆ, ಪೊಲೀಸ್‌ ಮತ್ತು ಜಿಲ್ಲಾಡಳಿತ ಸೇರಿದಂತೆ ಸಂಬಂಧಿತ ಇಲಾಖೆಗಳ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ.

900ಕ್ಕೂ ಹೆಚ್ಚು ನಗರ ಬಸ್‌ಗಳಲ್ಲೂ ಉಚಿತ ಪ್ರಯಾಣ

ನಗರಾಭಿವೃದ್ಧಿ ಇಲಾಖೆಯು ನಿರ್ವಹಿಸುವ 900ಕ್ಕೂ ಹೆಚ್ಚು ಬಸ್‌ಗಳಲ್ಲೂ ಈ ಉಚಿತ ಪ್ರಯಾಣದ ಸೌಲಭ್ಯವನ್ನು ಜಾರಿಗೊಳಿಸುವಂತೆ ಆದಿತ್ಯನಾಥ ಸೂಚಿಸಿದ್ದಾರೆ.

ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಖಾಸಗಿ ಬಸ್‌, ಆಟೊ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರ ದಾಖಲೆಗಳನ್ನು ಪರಿಶೀಲಿಸುವಂತೆಯೂ ಸೂಚಿಸಲಾಗಿದೆ. ಆಗಸ್ಟ್‌ 25ರೊಳಗೆ ಎಲ್ಲ ಜಿಲ್ಲೆಗಳಲ್ಲಿ ಬಸ್‌, ಟ್ಯಾಕ್ಸಿ ಮತ್ತು ಆಟೊ–ಟೆಂಪೊ ಸಂಘಟನೆಗಳೊಂದಿಗೆ ಸಮನ್ವಯ ಸಭೆ ನಡೆಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಪ್ರಯಾಣಿಕರಿಂದ ನಿಗದಿತ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡದಂತೆ, ಬಸ್‌ಗಳಲ್ಲಿ ಮಿತಿ ಮೀರಿ ಪ್ರಯಾಣಿಕರನ್ನು ಕರೆದೊಯ್ಯದಂತೆ ಮತ್ತು ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ಪ್ರಮುಖ ನಗರಗಳಲ್ಲಿ ವಿಶೇಷ ವ್ಯವಸ್ಥೆ

ರಕ್ಷಾ ಬಂಧನದ ವೇಳೆ ಹೆಚ್ಚಿನ ಜನದಟ್ಟಣೆ ನಿರೀಕ್ಷಿಸಿರುವ ಮಥುರಾ–ವೃಂದಾವನ, ಅಯೋಧ್ಯೆ, ವಾರಾಣಸಿ, ಪ್ರಯಾಗರಾಜ್, ಚಿತ್ರಕೂಟ, ವಿಂಧ್ಯಾಚಲ–ಮಿರ್ಜಾಪುರ ಮತ್ತು ಗೋರಖಪುರ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಕಾರ್ಯಯೋಜನೆ ರೂಪಿಸುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ.

ಬಸ್‌ ನಿಲ್ದಾಣಗಳು, ರೈಲು ನಿಲ್ದಾಣಗಳು, ಮಾರುಕಟ್ಟೆಗಳು ಹಾಗೂ ನಗರಗಳ ಪ್ರವೇಶ–ನಿರ್ಗಮನ ಸ್ಥಳಗಳಲ್ಲಿ ಹೆಚ್ಚುವರಿ ಸಂಚಾರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ವ್ಯವಸ್ಥೆ ಕಲ್ಪಿಸುವಂತೆ ಹೇಳಿದ್ದಾರೆ.

ಬಸ್‌ ನಿಲ್ದಾಣಗಳಲ್ಲಿ ಸಿಸಿಟಿವಿ ನಿಗಾ, ಕುಡಿಯುವ ನೀರು, ಸ್ವಚ್ಛತೆ ಮತ್ತು ಪ್ರಥಮ ಚಿಕಿತ್ಸಾ ವ್ಯವಸ್ಥೆ ಖಚಿತಪಡಿಸುವಂತೆಯೂ ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ.

ಸಂಚಾರ ನಿಯಮ ಉಲ್ಲಂಘನೆಗೆ ಕಡಿವಾಣ

ಹಬ್ಬದ ಸಂದರ್ಭದಲ್ಲಿ ಓವರ್‌ಲೋಡಿಂಗ್‌, ಅತಿವೇಗದ ಚಾಲನೆ, ಹೆಚ್ಚಿನ ದರ ವಸೂಲಿ ಸೇರಿದಂತೆ ಅಕ್ರಮಗಳ ವಿರುದ್ಧ ನಿರಂತರ ಕ್ರಮ ಕೈಗೊಳ್ಳುವಂತೆ ಆದಿತ್ಯನಾಥ ನಿರ್ದೇಶಿಸಿದ್ದಾರೆ.

ಹೆಲ್ಮೆಟ್‌ ಇಲ್ಲದೆ ದ್ವಿಚಕ್ರ ವಾಹನ ಚಲಾಯಿಸುವುದು, ಸೀಟ್‌ಬೆಲ್ಟ್‌ ಧರಿಸದೆ ವಾಹನ ಓಡಿಸುವುದು, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದು ಹಾಗೂ ಸರಕು ಸಾಗಣೆ ವಾಹನಗಳು ಮತ್ತು ಟ್ರ್ಯಾಕ್ಟರ್‌ಗಳಲ್ಲಿ ಅನಧಿಕೃತವಾಗಿ ಪ್ರಯಾಣಿಕರನ್ನು ಸಾಗಿಸುವುದರ ವಿರುದ್ಧವೂ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಿದ್ದಾರೆ.

ಅಪಘಾತ ಸಂಭವಿಸಿದ ಸಂದರ್ಭದಲ್ಲಿ ‘ಗೋಲ್ಡನ್‌ ಅವರ್‌’ ಅನ್ನು ಗರಿಷ್ಠವಾಗಿ ಬಳಸಿಕೊಳ್ಳುವಂತೆ ಹಾಗೂ ಪರಿಹಾರ ಮತ್ತು ರಕ್ಷಣಾ ಕೇಂದ್ರಗಳನ್ನು ತಂತ್ರಜ್ಞಾನದೊಂದಿಗೆ ಸಂಪರ್ಕಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಪಘಾತದ ಮಾಹಿತಿ ಬಂದ ತಕ್ಷಣ ಸಮೀಪದ ಪರಿಹಾರ ಕೇಂದ್ರ, ಟ್ರಾಮಾ ಕೇರ್‌ ಘಟಕ ಮತ್ತು ಆಂಬುಲೆನ್ಸ್ ಸೇವೆ ಲಭ್ಯವಾಗುವಂತೆ ವ್ಯವಸ್ಥೆ ಕಲ್ಪಿಸುವಂತೆ ತಿಳಿಸಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ