ಕನ್ನಡ ಅಧ್ಯಯನ ಕೇಂದ್ರಕ್ಕೆ ಹೊಸ ರೂಪ ನೀಡಿದ ಜಿ.ಎಸ್. ಶಿವರುದ್ರಪ್ಪ

ಕನ್ನಡ ಅಧ್ಯಯನ ಕೇಂದ್ರಕ್ಕೆ ಹೊಸ ರೂಪ ನೀಡಿದ ಜಿ.ಎಸ್. ಶಿವರುದ್ರಪ್ಪ

ಕನ್ನಡ ಅಧ್ಯಯನ ಕೇಂದ್ರಕ್ಕೆ ಹೊಸ ರೂಪ ನೀಡಿದ ಜಿ.ಎಸ್. ಶಿವರುದ್ರಪ್ಪ

ಬೆಂಗಳೂರು: ‘ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿ ಕಾರ್ಯನಿರ್ವಹಣೆ ಮಾಡಿದ ಜಿ.ಎಸ್. ಶಿವರುದ್ರಪ್ಪ ಅವರು, ಆ ವಿಭಾಗವನ್ನು ಉಚ್ಛ್ರಾಯ ಸ್ಥಿತಿಗೆ ಕೊಂಡೊಯ್ದರು. ಇದರಿಂದಾಗಿ ಹಲವು ಬಗೆಯ ವಿಚಾರಧಾರೆಗಳು ರೂಪುಗೊಂಡವು...’

ಜಿ.ಎಸ್. ಶಿವರುದ್ರಪ್ಪ ಅವರ ಶಿಷ್ಯರು ಹಾಗೂ ಒಡನಾಡಿಗಳ ಮನದಾಳದ ಮಾತುಗಳಿವು. ಬುಕ್ ಬ್ರಹ್ಮ ಸಂಸ್ಥೆ ಹಮ್ಮಿಕೊಂಡಿದ್ದ ‘ಬುಕ್ ಬ್ರಹ್ಮ ಸಾಹಿತ್ಯ ಉತ್ಸವ’ದ ‘ರಾಷ್ಟ್ರಕವಿ ಜಿಎಸ್‌ಎಸ್ ನೂರು ನಮನ’ ಗೋಷ್ಠಿಯಲ್ಲಿ ವಿಮರ್ಶಕರಾದ ನಟರಾಜ್ ಬೂದಾಳು, ಬಸವರಾಜ ಕಲ್ಗುಡಿ ಹಾಗೂ ಲೇಖಕಿ ಕೆ.ಎಂ. ವಸುಂಧರಾ ಅವರು ಜಿಎಸ್‌ಎಸ್ ಅವರ ಬಗ್ಗೆ ವಿಚಾರ ಮಂಡಿಸಿದರು. ಲೇಖಕ ಸುಭಾಷ್ ರಾಜಮಾನೆ ಅವರು ಗೋಷ್ಠಿ ನಿರ್ವಹಿಸಿದರು. 

‘ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಜಿಎಸ್‌ಎಸ್ ಅವರು ಪ್ರಾಧ್ಯಾಪಕರಾಗಿ ಬಂದ ಬಳಿಕ ಕನ್ನಡ ವಿಮರ್ಶೆಯಲ್ಲಿ ದೊಡ್ಡ ಜಿಗಿತವಾಯಿತು’ ಎಂದು ಸುಭಾಷ್ ರಾಜಮಾನೆ ಅಭಿಪ್ರಾಯಪಟ್ಟರು.

ಇದಕ್ಕೆ ಸಹಮತ ವ್ಯಕ್ತಪಡಿಸಿದ ಬಸವರಾಜ ಕಲ್ಗುಡಿ, ‘ಕಾವ್ಯ, ಕಾವ್ಯ ಮೀಮಾಂಸೆ ಕುರಿತು ಶಿಸ್ತುಬದ್ಧವಾಗಿ ಬೋಧನೆ ಮಾಡುವ ಮೂಲಕ ಅನೇಕ ಪ್ರತಿಭಾವಂತರನ್ನು ಅವರು ಮುಂಚೂಣಿಗೆ ತಂದರು. ಅವರನ್ನು ಮಾತೃ ಹೃದಯದ ವ್ಯಕ್ತಿಯಾಗಿ ನಾನು ಕಂಡೆ. ಆಗಾಗ ಕೋಪ ಮಾಡಿಕೊಂಡರೂ, ಆ ಕೋಪ ಕೆಲವೇ ಕ್ಷಣದಲ್ಲಿ ಮಾಯವಾಗುತ್ತಿತ್ತು. 1970–80ರ ದಶಕದ ಬೆಂಗಳೂರು ವಿಶ್ವವಿದ್ಯಾಲಯದ ಚಿಂತನೆಗಳು ಕರ್ನಾಟಕದ ಹೊಸ ಚಿಂತನೆಗೆ ದಾರಿಯಾಗಿತ್ತು’ ಎಂದು ಹೇಳಿದರು. 

‘ಜಿಎಸ್‌ಎಸ್‌ ಅವರ ಕಾವ್ಯದ ಬಹುಮುಖ್ಯ ಧೋರಣೆ ಮುನುಷ್ಯ ಸಂಬಂಧದ ಕುರಿತದ್ದಾಗಿದೆ. ಆದರೆ, ಮನುಷ್ಯ ಸಂಬಂಧಗಳು ಅರ್ಥಪೂರ್ಣವಾಗುತ್ತಿಲ್ಲ ಎಂಬ ವಿಷಾದವನ್ನು ಅವರ ಕಾವ್ಯದಲ್ಲಿ ಕಾಣಬಹುದು. ಸಾಮಾನ್ಯ ಜನರ ವಿಷಾದ, ಸಂಕಟ, ದ್ವೇಷ, ಪ್ರೀತಿ, ಅಸೂಯೆ ಎಲ್ಲವೂ ಅವರ ಕಾವ್ಯದ ಭಾಷೆ’ ಎಂದು ಕಲ್ಗುಡಿ ಅಭಿಪ್ರಾಯಪಟ್ಟರು.

ಜಿಎಸ್‌ಎಸ್‌ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ನಟರಾಜ್ ಬೂದಾಳು, ‘ಜಾತ್ಯತೀತತೆ, ಬಹುತ್ವ, ವೈಚಾರಿಕತೆ ಮತ್ತು ಎಲ್ಲರನ್ನೂ ಒಳಗೊಳ್ಳುವ ನಿಲುವಿನ ಮೂಲಕ ಕನ್ನಡ ಕಟ್ಟುವ ಮಾದರಿಯನ್ನು ಜಿಎಸ್‌ಎಸ್ ರೂಪಿಸಿದರು. ಅವರು ಹತ್ತಾರು ದಾರಿಗಳ ಸಂಧಿಭೂಮಿ’ ಎಂದರು.  

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ