
ಶಹಾಪುರ: ತಾಲ್ಲೂಕಿನ 8 ಸರ್ಕಾರಿ ಉರ್ದು ಶಾಲೆಗಳಲ್ಲಿ ಶಿಕ್ಷಕರ ಕೊರತೆ
ಶಹಾಪುರ: ‘ತಾಲ್ಲೂಕಿನ ಎಂಟು ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಗಳಲ್ಲಿ ಉರ್ದು ಶಿಕ್ಷಕರೇ ಇಲ್ಲ. ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಬೇಕು ಎಂದರೂ ಶಿಕ್ಷಕರು ಸಿಗುತ್ತಿಲ್ಲ. ಅಲ್ಲದೆ ಸರ್ಕಾರ ಹೊಸದಾಗಿ 15 ಸಾವಿರ ಶಿಕ್ಷಕರನ್ನು ನೇಮಿಸಿಕೊಳ್ಳುವ ಅಧಿಸೂಚನೆ ಹೊರಡಿಸಿದೆ. ಉರ್ದು ಭಾಷೆಯ ಶಿಕ್ಷಕರ ನೇಮಕಕ್ಕೆ ಒಂದೇ ಒಂದು ಹುದ್ದೆ ಇಟ್ಟಿಲ್ಲ’ ಎಂದು ಅಲ್ಪಸಂಖ್ಯಾತ ಸಮುದಾಯದ ಮುಖಂಡರು ಬೇಸರ ವ್ಯಕ್ತಪಡಿಸಿದ್ದಾರೆ.
ತಾಲ್ಲೂಕಿನಲ್ಲಿ 20 ಕಿರಿಯ ಪ್ರಾಥಮಿಕ 17 ಹಿರಿಯ ಪ್ರಾಥಮಿಕ ಸೇರಿದಂತೆ ಒಟ್ಟು 37 ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಗಳಿವೆ. ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 1,437 ಇದೆ. ಅದರಲ್ಲಿ ತಾಲ್ಲೂಕಿನ ಅಣಬಿ, ತಿಪ್ಪನಹಳ್ಳಿ, ರೋಜಾ(ಎಸ್), ಇಬ್ರಾಹಿಂಪುರ ಹಾಗೂ ವಡಗೇರಾ ತಾಲ್ಲೂಕಿನ ತುಮಕೂರ, ತಡಿಬಿಡಿ, ಟೋಕಾಪುರ, ಕ್ಯಾತನಾಳ ಗ್ರಾಮದ ಶಾಲೆಯಲ್ಲಿ ಒಬ್ಬ ಶಿಕ್ಷಕರು ಇಲ್ಲ. ಅಲ್ಲದೆ ತಾಲ್ಲೂಕಿನಲ್ಲಿ 123 ಹುದ್ದೆ ಮಂಜೂರು ಆಗಿವೆ. ಅದರಲ್ಲಿ 78 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. 45 ಶಿಕ್ಷಕರ ಹುದ್ದೆ ಖಾಲಿ ಇವೆ. ಅಲ್ಲದೆ ನಗರದ ಎರಡು ಉರ್ದು ವಿಭಾಗದ ಪ್ರೌಢಶಾಲೆಯಲ್ಲಿ ಉರ್ದು ಭಾಷೆಯ ಶಿಕ್ಷಕರು ಇಲ್ಲ. 4 ಉರ್ದು ಪ್ರೌಢಶಾಲೆಗಳಿವೆ’ ಎಂದು ಬಿಆರ್‌ಸಿ ಕೇಂದ್ರದ ಮೂಲಗಳು ತಿಳಿಸಿವೆ.
ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದವರು ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಭಾಷೆ ಹಾಗೂ ನಗರ ಪ್ರದೇಶದ ಮಕ್ಕಳು ಇಂಗ್ಲಿಷ್ ಮಾಧ್ಯಮದ ಶಾಲೆಗೆ ಸೇರಿದ್ದಾರೆ. ಉರ್ದು ಭಾಷೆ ಉಳಿಸಿ ಬೆಳೆಸಬೇಕಾದ ಮನಸುಗಳು ಮೌನಕ್ಕೆ ಶರಣಾಗಿವೆ. ಉರ್ದು ಅಕಾಡೆಮಿಗಳು ಕೇವಲ ಗಜಲ್, ಶಾಯರಿ ಕಾರ್ಯಕ್ರಮ ನಡೆಸಿ ಕೈ ತೊಳೆದುಕೊಳ್ಳುತ್ತಿವೆ. ಭಾಷೆಯ ಉಳಿವಿಗೆ ಸರ್ಕಾರದ ಮುಂದೆ ಧ್ವನಿ ಎತ್ತುತ್ತಿಲ್ಲ’ ಎನ್ನುತ್ತಾರೆ ಮಹಮ್ಮದ ಇಸ್ಮಾಯಿಲ್ ಸಾಬ್.
ಕಲ್ಯಾಣ ಕರ್ನಾಟದಲ್ಲಿ ಸಾಕಷ್ಟು ಮುಸ್ಲಿಂ ಸಮುದಾಯದ ಜನತೆ ಇದ್ದಾರೆ. ಹೈದರಾಬಾದ್ ನಿಜಾಮರ ಆಳ್ವಿಕೆಯಲ್ಲಿ ಉರ್ದು ಭಾಷೆ ಶ್ರೀಮಂತವಾಗಿ ಬೆಳೆದಿತ್ತು. ಇಂದಿಗೂ ಇಲ್ಲಿನ ಪ್ರದೇಶದಲ್ಲಿ ಮಾತೃಭಾಷೆಯ ಜತೆಯಲ್ಲಿ ಉರ್ದು ಭಾಷೆ ಮಾತನಾಡುವುದು ಸಾಮಾನ್ಯವಾಗಿದೆ. ಈಗ ಉರ್ದು ಭಾಷೆ ಅವನತಿಯ ಅಂಚಿಗೆ ಬಂದು ನಿಂತಿದೆ. ಕನ್ನಡ ಭಾಷೆಯ ಜತೆಯಲ್ಲಿ ಉರ್ದು ಭಾಷೆಯನ್ನು ಉಳಿಸಿ ಬೆಳೆಸಬೇಕಾಗಿದೆ’ ಎನ್ನುತ್ತಾರೆ ಶಹಾಪುರ ವಕೀಲರ ಸಂಘದ ಅಧ್ಯಕ್ಷ ಯೂಸೂಫ್ ಸಿದ್ದಿಕಿ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260822-30-1121587751