ಶೃಂಗೇರಿಯ ಸಂತೆ, ಮೀನು ಮಾರುಕಟ್ಟೆ ಅವ್ಯವಸ್ಥೆ

ಶೃಂಗೇರಿಯ ಸಂತೆ, ಮೀನು ಮಾರುಕಟ್ಟೆ ಅವ್ಯವಸ್ಥೆ

ಶೃಂಗೇರಿಯ ಸಂತೆ, ಮೀನು ಮಾರುಕಟ್ಟೆ ಅವ್ಯವಸ್ಥೆ

ಶೃಂಗೇರಿ: ಪಟ್ಟಣದ ಶಾರದಾ ನಗರದಲ್ಲಿರುವ ಸಂತೆ ಹಾಗೂ ಮೀನು ಮಾರುಕಟ್ಟೆಯಲ್ಲಿ ಮೂಲಸೌಕರ್ಯಗಳ ಕೊರತೆ, ಸ್ವಚ್ಛತೆಯ ಅಭಾವ ಮತ್ತು ದುರ್ವಾಸನೆಯ ಸಮಸ್ಯೆಯಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಸೋಮವಾರ ನಡೆಯುವ ವಾರದ ಸಂತೆಗೆ ಗ್ರಾಮೀಣ ಭಾಗದ ಜನರು ಸೇರಿದಂತೆ ವಿವಿಧ ತಾಲ್ಲೂಕುಗಳಿಂದ 300ಕ್ಕೂ ಹೆಚ್ಚು ವ್ಯಾಪಾರಿಗಳು ಬರುತ್ತಾರೆ. ತರಕಾರಿ, ಧಾನ್ಯ, ಹಣ್ಣು, ಗೃಹೋಪಯೋಗಿ ವಸ್ತುಗಳು, ಕರಕುಶಲ ವಸ್ತುಗಳು ಸೇರಿದಂತೆ ವಿವಿಧ ವಸ್ತುಗಳ ವ್ಯಾಪಾರ ನಡೆಯುತ್ತದೆ. ಸ್ಥಳೀಯ ವ್ಯಾಪಾರಿಗಳೂ ಮಳಿಗೆಗಳನ್ನು ತೆರೆಯುತ್ತಾರೆ. ಇದರಿಂದ ಪಟ್ಟಣ ಪಂಚಾಯಿತಿಗೆ ಉತ್ತಮ ಆದಾಯ ಬರುತ್ತಿದ್ದರೂ, ಮಾರುಕಟ್ಟೆಯ ಮೂಲಸೌಕರ್ಯ ಸುಧಾರಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.

23 ವರ್ಷಗಳ ಹಿಂದೆ ಸರ್ಕಾರದ ವಿಶೇಷ ಅನುದಾನದಲ್ಲಿ ನಿರ್ಮಿಸಲಾದ ಮಾರುಕಟ್ಟೆ ಕಟ್ಟಡ ಈಗಿನ ವ್ಯಾಪಾರ ವಹಿವಾಟಿಗೆ ಸಾಕಾಗುತ್ತಿಲ್ಲ. ಪರಿಣಾಮ, ವ್ಯಾಪಾರಿಗಳು ರಸ್ತೆ ಬದಿಯಲ್ಲಿ ತಾತ್ಕಾಲಿಕ ಮಳಿಗೆಗಳನ್ನು ನಿರ್ಮಿಸಿ ವ್ಯಾಪಾರ ನಡೆಸುತ್ತಿದ್ದಾರೆ. ಇದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ.

ಮಾರುಕಟ್ಟೆ ಪಕ್ಕದ ಚರಂಡಿ ತ್ಯಾಜ್ಯದಿಂದ ತುಂಬಿ ಗಬ್ಬೆದ್ದು ನಾರುತ್ತಿದೆ. ಮಳೆಗಾಲದಲ್ಲಿ ಚರಂಡಿ ನೀರು ರಸ್ತೆಗೆ ಹರಿದು ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ನಾಯಿ, ದನಗಳು ಮಾರುಕಟ್ಟೆಯಲ್ಲೇ ಓಡಾಡುತ್ತಿರುವುದು ಸ್ವಚ್ಛತೆಗೆ ಧಕ್ಕೆಯಾಗಿದೆ.

ಸಂತೆಯ ಪಕ್ಕದಲ್ಲಿರುವ ಮಿನಿ ಬಸ್ ನಿಲ್ದಾಣದ ಶೌಚಾಲಯವೂ ಸಮರ್ಪಕ ನಿರ್ವಹಣೆ ಇಲ್ಲದೆ ದುರ್ವಾಸನೆ ಬೀರುತ್ತಿದೆ. ಮೀನು ಮಾರುಕಟ್ಟೆಯಲ್ಲಿ ಮೀನನ್ನು ಸಮರ್ಪಕವಾಗಿ ವಿಲೇವಾರಿ ಮಾಡದ ಕಾರಣ ಸುತ್ತಮುತ್ತಲಿನ ಪ್ರದೇಶ ದುರ್ಗಂಧದಿಂದ ಕೂಡಿದೆ. ಬಾಕ್ಸ್ ಚರಂಡಿಯ ಮೇಲೆ ಲಾರಿ ಸಂಚರಿಸಿದ್ದರಿಂದ ಚರಂಡಿ ಮುರಿದು ಹೊಂಡ ಬಿದ್ದಿದ್ದು, ಅಲ್ಲಿಯೇ ಮೀನಿನ ತ್ಯಾಜ್ಯ ಸೇರುವುದರಿಂದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ.

ಮಾರುಕಟ್ಟೆಯಲ್ಲಿರುವ ಹಳೆಯ ಏಳು ಮಳಿಗೆಗಳು ವ್ಯಾಪಾರಕ್ಕೆ ಸಾಕಾಗುತ್ತಿಲ್ಲ. ವ್ಯಾಪಾರಿಗಳು ತಮ್ಮ ಸರಕುಗಳನ್ನು ತೆರೆದ ಜಾಗದಲ್ಲೇ ಇಡುತ್ತಿರುವುದರಿಂದ ಪರಿಸರ ಅಸ್ವಚ್ಛವಾಗಿದೆ. ಕೆಲವರು ಮಳಿಗೆಗಳ ಮುಂದೆ ಮೀನನ್ನು ಒಣಗಿಸುತ್ತಿದ್ದು, ಕಾಗೆಗಳು ಮೀನುಗಳನ್ನು ಸಮೀಪದ ಮನೆಗಳ ಅಂಗಳ ಹಾಗೂ ಬಾವಿಗಳಿಗೆ ಎಸೆಯುತ್ತಿರುವುದಾಗಿ ಸ್ಥಳೀಯರು ದೂರಿದ್ದಾರೆ.

ಒಮ್ಮೆ ಊರಿನ ಹೊರವಲಯದಲ್ಲಿದ್ದ ಮೀನು ಮಾರುಕಟ್ಟೆ ಈಗ ಜನವಸತಿ ಪ್ರದೇಶದ ಮಧ್ಯಭಾಗಕ್ಕೆ ಬಂದಿದೆ. ಮಾರುಕಟ್ಟೆ ಎದುರಲ್ಲೇ ಇಂದಿರಾ ಕ್ಯಾಂಟಿನ್, ಅಂಚೆ ಕಚೇರಿ, ಸಮುದಾಯ ಭವನ ಹಾಗೂ ಅಂಗನವಾಡಿ ಕೇಂದ್ರಗಳಿದ್ದು, ದುರ್ವಾಸನೆಯಿಂದ ಸಾರ್ವಜನಿಕರು ಪರದಾಡುತ್ತಿದ್ದಾರೆ.

ಶಾರದಾ ನಗರದಲ್ಲಿ ಖಾಸಗಿ ಜಾಗದಲ್ಲಿ ಮಣ್ಣು ಮತ್ತು ಜಲ್ಲಿ ಸುರಿಯುತ್ತಿರುವುದರಿಂದ ಕರ್ಕಶ ಶಬ್ದ ಉಂಟಾಗಿ ನಿವಾಸಿಗಳ ನೆಮ್ಮದಿಗೂ ಧಕ್ಕೆಯಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಮನವಿ ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ

‘ಮಾರುಕಟ್ಟೆ ಪ್ರದೇಶದಲ್ಲಿ ಸ್ವಚ್ಛತೆಯ ಕೊರತೆ ಇದೆ. ಮಾರುಕಟ್ಟೆಗೆ ಮೀಸಲಿಟ್ಟ ಕಟ್ಟಡವನ್ನು ವಿಸ್ತರಣೆ ಮಾಡಿ, ಗ್ರಾಹಕರಿಗೆ ಉತ್ತಮ ಸೇವೆ ದೊರಕುವಂತೆ ಮಾಡಬೇಕು. ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವಂತೆ ಪಟ್ಟಣ ಪಂಚಾಯಿತಿಗೆ, ಜಿಲ್ಲಾಧಿಕಾರಿಗೆ ಮತ್ತು ಪರಿಸರ ನಿಯಂತ್ರಣಾ ಇಲಾಖೆಗೆ ಮನವಿ ಸಲ್ಲಿಸಿದರೂ ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿಯಾದ ತಹಶೀಲ್ದಾರ್ ಅನೂಪ್ ಸಂಜೋಗ್ ಮತ್ತು ಮುಖ್ಯಾಧಿಕಾರಿ ಸರಸ್ವತಿ ಶಣ್ಮುಗ ಸುಂದರಿ ಇದುವರೆಗೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ’ ಎಂದು ಪರಿಸರ ಜಾಗೃತಿ ವೇದಿಕೆಯ ಅಧ್ಯಕ್ಷ ಕಲ್ಕುಳಿ ವಿಠಲ್ ಹೆಗ್ಗಡೆ ಆರೋಪಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260808-126-1622703008

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ