
ಮಹಾಲಿಂಗಪುರ: ಅವ್ಯವಸ್ಥೆಯ ಆಗರ ಬಿಎಸ್‍ಎನ್‍ಎಲ್ ಕೇಂದ್ರ
ಮಹಾಲಿಂಗಪುರ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿರುವ ಕೇಂದ್ರ ಸರ್ಕಾರದ ಬಿಎಸ್‍ಎನ್‍ಎಲ್ ದೂರವಾಣಿ ಕೇಂದ್ರವು ಸಮರ್ಪಕ ನಿರ್ವಹಣೆಯ ಕೊರತೆಯಿಂದ ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿದೆ.
ಅಂದಾಜು 25 ವರ್ಷಗಳ ಹಿಂದೆ ಇಲ್ಲಿಗೆ ಸ್ಥಳಾಂತರಗೊಂಡಿರುವ ಈ ಪ್ರಮುಖ ಕಚೇರಿಯು, ಮೂಲಸೌಲಭ್ಯಗಳ ಕೊರತೆ ಮತ್ತು ಸಮರ್ಪಕ ನಿರ್ವಹಣೆ ಇಲ್ಲದೆ ಅಧೋಗತಿಗೆ ತಲುಪಿದೆ.ಎಪಿಎಂಸಿ ಆವರಣದ ವಿಶಾಲ ಜಾಗದಲ್ಲಿ ತಲೆ ಎತ್ತಿರುವ ಈ ಬಿಎಸ್‍ಎನ್‍ಎಲ್ ಕೇಂದ್ರದ ಸುತ್ತಕಾಡಿನ ವಾತಾವರಣ ನಿರ್ಮಾಣವಾಗಿದೆ.
ಆವರಣದಾದ್ಯಂತ ಪಾರ್ಥೇನಿಯಂ ಸೇರಿದಂತೆ ಹಲವು ಕಳೆ ಗಿಡಗಳು ಎತ್ತರವಾಗಿ ಬೆಳೆದು ನಿಂತಿವೆ. ಕಟ್ಟಡದ ಕಿಟಕಿಗಳ ಒಳಗೆ, ಗೋಡೆಗಳ ಮೇಲೆ ಹಾಗೂ ಟವರ್‌ಗೆ ಸಂಪರ್ಕ ಕಲ್ಪಿಸಿರುವ ಪ್ರಮುಖ ತಂತಿಗಳ ಮೇಲೂ ಹಸಿರು ಬಳ್ಳಿಗಳು ಆವರಿಸಿಕೊಂಡಿದ್ದು, ಅಪಾಯ ಸಂಭವಿಸುವ ಆತಂಕವಿದೆ.
ಇರುವ ಒಟ್ಟು 8 ಕೋಣೆಗಳಲ್ಲಿ 3 ಕೋಣೆಗಳಿಗೆ ಬೀಗ ಹಾಕಲಾಗಿದೆ. ನೀರಿನ ಸಂಪರ್ಕವೇ ಇಲ್ಲದೇ ಶೌಚಾಲಯದ ಎರಡು ಕೋಣೆಗಳಿಗೂ ಬೀಗ ಹಾಕಲಾಗಿದೆ. ಸುಣ್ಣ-ಬಣ್ಣ ಕಾಣದ ಕಟ್ಟಡವು ಅಕ್ಷರಶಃ ಶಿಥಿಲಾವಸ್ಥೆ ತಲುಪಿದೆ.
ಕಚೇರಿ ಆವರಣದಲ್ಲಿ ವಿದ್ಯುತ್ ದೀಪ ಇದ್ದರೂ ಇಲ್ಲದಂತಾಗಿದೆ. ಮುಂಭಾಗದ ಚರಂಡಿ ಹೂಳಿನಿಂದ ತುಂಬಿಕೊಂಡಿದ್ದು, ಕಸ-ಕಡ್ಡಿಗಳು ಕೊಳೆತು ವಿಷಜಂತುಗಳ ಆಶ್ರಯ ತಾಣವಾಗಿ ಮಾರ್ಪಟ್ಟಿದೆ. ಕಟ್ಟಡದ ಮೇಲ್ಭಾಗಕ್ಕೆ ತೆರಳುವ ಮೆಟ್ಟಿಲುಗಳ ಮೇಲೆ ನಿಷ್ಪ್ರಯೋಜಕ ವಸ್ತುಗಳ ರಾಶಿ ಹಾಕಲಾಗಿದೆ. ಜನರೇಟರ್ ಕೊಠಡಿಯೂ ಹಾಳಾಗಿದೆ.
ಕಚೇರಿ ಸಹಾಯಕರಾಗಿ ಒಬ್ಬರೇ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆಧಾರ್ ಕಾರ್ಡ್ ತಿದ್ದುಪಡಿ, ಕರೆನ್ಸಿ ಹಾಗೂ ಸಿಮ್ ಜೋಡಣೆ ಮುಂತಾದ ತುರ್ತು ಸೇವೆಗಳಿಗಾಗಿ ಫ್ರಾಂಚೈಸಿ ಮೂಲಕ ಇಬ್ಬರು ಸಿಬ್ಬಂದಿ ಇದ್ದಾರೆ. ಕಿರಿಯ ತಾಂತ್ರಿಕ ಅಧಿಕಾರಿ (ಜೆಟಿಒ) ಅಗತ್ಯವಿದ್ದಾಗ ಬಂದು ಹೋಗುತ್ತಾರೆ. ರಾತ್ರಿಯಷ್ಟೇ ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ.
ಈ ಕೇಂದ್ರಕ್ಕೆ ಪ್ರತಿದಿನ ನೂರಾರು ಸಾರ್ವಜನಿಕರು ಆಧಾರ್ ತಿದ್ದುಪಡಿ ಸೇರಿದಂತೆ ಸಿಮ್ ಸಂಬಂಧಿತ ವಿವಿಧ ಕೆಲಸಗಳಿಗಾಗಿ ಬರುತ್ತಾರೆ. ಅಲ್ಲದೆ, ಸ್ಥಳೀಯವಾಗಿ 150ಕ್ಕೂ ಹೆಚ್ಚು ಫೈಬರ್ ಇಂಟರ್ನೆಟ್ ಸಂಪರ್ಕಗಳಿವೆ. ಗ್ರಾಹಕರು ಬಿಲ್ ಪಾವತಿಸಲು ಇಲ್ಲಿಗೆ ಆಗಮಿಸುತ್ತಾರೆ. ಆದರೆ ಇಲ್ಲಿ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಇಲ್ಲದಿರುವುದರಿಂದ ಗ್ರಾಹಕರು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
‘ಸಮಯ ಸಿಕ್ಕಾಗ ನಿರ್ವಹಣೆ’
‘ಒಂದು ವಾರದ ಹಿಂದೆಯಷ್ಟೇ ಅಧಿಕಾರ ಸ್ವೀಕರಿಸಿದ್ದೇನೆ. ಮುಧೋಳ ಹಾಗೂ ಜಮಖಂಡಿ ಎರಡೂ ತಾಲ್ಲೂಕು ವ್ಯಾಪ್ತಿ ನನಗೆ ಇದೆ. ಎರಡೂ ತಾಲ್ಲೂಕುಗಳನ್ನು ಒಬ್ಬರಿಗೆ ನೀಡಿದರೆ ಕೆಲಸ ಮಾಡುವುದು ಹೇಗೆ? ಇರುವ ತಾಂತ್ರಿಕ ಕೆಲಸಗಳೇ ಅಧಿಕವಾಗಿದ್ದು, ಕೇಂದ್ರದ ನಿರ್ವಹಣೆ ಮಾಡುತ್ತ ಕುಳಿತರೆ ಕೆಲಸಗಳೇ ಆಗುವುದಿಲ್ಲ. ಸಮಯ ಸಿಕ್ಕಾಗ ನಿರ್ವಹಣೆ ಮಾಡುತ್ತೇನೆ’ ಎಂದು ತಾಂತ್ರಿಕ ಅಧಿಕಾರಿ (ಜೆಟಿಒ) ಅನೀಲ ಟಂಕಸಾಲಿ ತಿಳಿಸಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260827-19-2055360140