
ವೇಮಗಲ್: ಕೆಂಪು ಸುಂದರಿ ಟೊಮೆಟೊಗೆ ಬಿದರಿನ ಆಸರೆ
ವೇಮಗಲ್: ಏಷ್ಯಾದಲ್ಲೇ ಎರಡನೇ ಅತಿ ದೊಡ್ಡ ಟೊಮೆಟೊ ಮಾರುಕಟ್ಟೆ ಹೊಂದಿರುವ ಕೋಲಾರವನ್ನು ‘ಟೊಮೆಟೊ ಗಣಿ’ ಎಂದು ಕರೆಯಲಾಗುತ್ತದೆ. ದಶಕಗಳ ಕಾಲದಿಂದಲೂ ಟೊಮೆಟೊ ಗಿಡಗಳ ಆಧಾರಕ್ಕಾಗಿ ಈ ಹಿಂದೆ ನೀಲಗಿರಿ ಕಡ್ಡಿಗಳನ್ನು ಬಳಸಲಾಗುತ್ತಿತ್ತು. ಆದರೆ, ಇದೀಗ ರೈತರು ನೀಲಗಿರಿ ಕಡ್ಡಿಗಳ ಬದಲಿಗೆ ದೀರ್ಘಕಾಲ ಬಾಳಿಕೆ ಬರುವ ಬಿದಿರಿನ ಕಡ್ಡಿಗಳ ಮೊರೆ ಹೋಗಿದ್ದಾರೆ.
ವೇಮಗಲ್ ಹೋಬಳಿಯ ಪ್ರಮುಖ ಗ್ರಾಮಗಳಾದ ತಿಪ್ಪೇನಹಳ್ಳಿ, ಚಲ್ದಿಗಾನಹಳ್ಳಿ, ಕ್ಯಾಲನೂರು, ಮಠಪುರ, ಕಾಡಹಳ್ಳಿ, ಸೀತಿ , ವೀರಾಪುರ, ರಾಮಪುರ, ನಾಚಹಳ್ಳಿ ಸೇರಿದಂತೆ ಹೋಬಳಿಯ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ರೈತರು ತಾವು ಬೆಳೆದ ಟೊಮೆಟೊ ಗಿಡಗಳ ಆಧಾರಕ್ಕಾಗಿ ನೀಲಗಿರಿ ಬದಲಿಗೆ ಬಿದಿರನ್ನೇ ಬಳಸುತ್ತಿದ್ದಾರೆ.
ಹೈಬ್ರಿಡ್ ಟೊಮೆಟೊ ಭಾರವಾದ ಕಾಯಿಗಳಿಂದ ಗಿಡಗಳು ನೆಲಕ್ಕೆ ಬಾಗದಂತೆ, ರೋಗಬಾಧೆ ಮತ್ತು ಕೊಳೆತಕ್ಕೆ ತುತ್ತಾಗದಂತೆ ತಡೆಯಲು ನೀಲಗಿರಿ ಕಡ್ಡಿಗಳನ್ನು ನೆಟ್ಟು ತಂತಿ-ದಾರಗಳಿಂದ ಕಟ್ಟಿ ಬೆಳೆಸಲಾಗುತ್ತದೆ. ಹಿಂದೆ ಜಿಲ್ಲೆಯ ಬಹುತೇಕ ರೈತರು ಸ್ಥಳೀಯವಾಗಿ ಲಭ್ಯವಾಗುವ ನೀಲಗಿರಿ ಸಸಿಗಳ ರೆಂಬೆ ಮತ್ತು ಕಡ್ಡಿಗಳನ್ನೇ ಬಳಸುತ್ತಿದ್ದರು. ಅಂತರ್ಜಲ ಕುಸಿತ ಹಾಗೂ ಮಣ್ಣಿನ ಸತ್ವನಾಶಕ್ಕೆ ಕಾರಣವಾಗುತ್ತಿದ್ದ ನೀಲಗಿರಿ ಬೆಳೆಯುವುದಕ್ಕೆ ಸರ್ಕಾರ ನಿರ್ಬಂಧಿಸಿದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ನೀಲಗಿರಿ ಕಡ್ಡಿಗಳ ಲಭ್ಯತೆ ಕಡಿಮೆಯಾಗಿದೆ. ಅಲ್ಲದೆ, ಅವುಗಳ ದರವೂ ಹೆಚ್ಚಾಗಿದೆ. ಜೊತೆಗೆ ನೀಲಗಿರಿ ಕಡ್ಡಿಗಳಿಗೆ ಗರಿಷ್ಠ ಮೂರ್ನಾಲ್ಕು ಬೆಳೆಗಳ ಅವಧಿಯಲ್ಲಿ ಗೆದ್ದಲು ಹಿಡಿದು, ಶಿಲೀಂಧ್ರ ತಗುಲುತ್ತಿತ್ತು ಮತ್ತು ಮಣ್ಣಿನಲ್ಲಿ ಕೊಳೆತು ನಿರುಪಯುಕ್ತವಾಗುತ್ತಿದ್ದವು.
ಈ ನಷ್ಟ ಹಾಗೂ ಅನಿಶ್ಚಿತತೆಗೆ ಪರ್ಯಾಯ ಕಂಡುಕೊಂಡ ಕೋಲಾರದ ರೈತರು ಇದೀಗ ಬಿದಿರಿನ ಮೊರೆ ಹೋಗಿದ್ದಾರೆ. ಬಿದಿರಿನ ಕಡ್ಡಿಗಳು ನೀಲಗಿರಿಗಿಂತ ಹೆಚ್ಚು ಬಲಯುತ, ಹಗುರ ಮತ್ತು ಸ್ಥಿತಿಸ್ಥಾಪಕತ್ವ ಹೊಂದಿವೆ. ಜೋರು ಗಾಳಿ ಮತ್ತು ಮಳೆಗೆ ಗಿಡಗಳು ಮುರಿದು ಬೀಳದಂತೆ ಭದ್ರವಾಗಿ ಹಿಡಿದಿಟ್ಟುಕೊಳ್ಳುತ್ತವೆ. ಆರಂಭಿಕವಾಗಿ ಬಿದಿರಿನ ಕಡ್ಡಿಗಳ ಖರೀದಿ ವೆಚ್ಚ ಹೆಚ್ಚೆನಿಸಿದರೂ, ಇವುಗಳನ್ನು ಸತತ ಐದರಿಂದ ಎಂಟು ಬೆಳೆಗಳಿಗೆ ಅಂದರೆ, ಸುಮಾರು 5–8 ವರ್ಷಗಳವರೆಗೆ ಮರುಬಳಕೆ ಮಾಡಬಹುದು. ಈ ದೀರ್ಘಾವಧಿಯ ಬಾಳಿಕೆಯು ರೈತರ ಬೆಳೆ ವೆಚ್ಚ ತಗ್ಗಿಸಿದೆ.
ಗ್ರಾಮಗಳ ಕೆಲವು ರೈತರು, ಟೊಮೊಟೊ ಬೆಳೆಯಲ್ಲಿ ಬಳಸಿದ ಬಿದುರು ಕಡ್ಡಿಗಳನ್ನು ನೋಡಿ, ಇತರ ರೈತರು ತಮ್ಮ ತೋಟಗಳ ಮೆಣಸಿನಕಾಯಿ ಬೆಳೆಗೂ ಸಹ ಬಿದಿರು ಕಡ್ಡಿಗಳನ್ನು ಬಳಸುತ್ತಿದ್ದಾರೆ. ಒಟ್ಟಾರೆ, ನೀಲಗಿರಿ ಕಡ್ಡಿ ಸ್ಥಾನವನ್ನು ಬಿದಿರು ಕಡ್ಡಿ ತುಂಬುತ್ತಿದೆ.
ಬಿದಿರು ಕಡ್ಡಿಗಳ ವ್ಯಾಪಾರಿ ತಿಪ್ಪೇನಹಳ್ಳಿಯ ನಾಗರಾಜು, ‘ನಮ್ಮ ಜಿಲ್ಲೆಯಲ್ಲಿ ಹೆಚ್ಚು ರೈತರು ಟೊಮೆಟೊ ಬೆಳೆಯುತ್ತಾರೆ. ರೈತರಿಗೆ ಟೊಮೆಟೊ ಗಿಡಕ್ಕಾಗಿ ಕಡ್ಡಿಗಳ ಅವಶ್ಯಕತೆ ಇದೆ. ನೀಲಗಿರಿ ಕಡ್ಡಿಗಳ ಅಭಾವ ಮತ್ತು ನೀಲಗಿರಿ ಕಡ್ಡಿಗಳಿಗಿನಿಂತಲೂ ಉತ್ತಮವಾಗಿರುವ ಬಿದಿರು ಕಡ್ಡಿಗಳತ್ತರೈತರು ಮುಖ ಮಾಡಿದ್ದಾರೆ’ ಎನ್ನುತ್ತಾರೆ.
ಸುತ್ತಮುತ್ತ ಎಲ್ಲಿಯೂ ನೀಲಗಿರಿ ಕಡ್ಡಿ ಸಿಗುತ್ತಿಲ್ಲ; ಸಿಕ್ಕರೂ ಹೆಚ್ಚಿನ ಬೆಲೆ ಇದೆ. ಜೊತೆಗೆ ಒಂದೇ ಬೆಳೆಗೆ ಗೆದ್ದಲು ಹಿಡಿದು, ಮಣ್ಣಿನಲ್ಲಿ ಕೊಳೆತು ಮುರಿದುಹೋಗುತ್ತಿದ್ದವು. ಹಾಗಾಗಿ ಬಿದಿರಿನ ಕಡ್ಡಿಗಳನ್ನು ಬಳಸುತ್ತಿದ್ದೇವೆ ಎಂದು ಸೀತಿ ಗ್ರಾಮದ ರೈತ ಮುನಿಯಪ್ಪ ತಿಳಿಸಿದರು.
ಈಶಾನ್ಯ ರಾಜ್ಯಗಳಿಂದ ಆಮದು
ಜಿಲ್ಲೆಯ ರೈತರು ಅಸ್ಸಾಂ, ತ್ರಿಪುರಾ ಮುಂತಾದ ಈಶಾನ್ಯ ರಾಜ್ಯಗಳಿಂದ ಹಾಗೂ ಪಶ್ಚಿಮ ಘಟ್ಟ ಪ್ರದೇಶಗಳಿಂದ ಗುಣಮಟ್ಟದ ಬಿದಿರಿನ ಸಣ್ಣ ಕಂಬಗಳನ್ನು ತರಿಸಿಕೊಂಡು ಹೊಲಗಳಲ್ಲಿ ಅಳವಡಿಸುತ್ತಿದ್ದಾರೆ. ಬಿದಿರಿನ ಸಮರ್ಪಕ ಆಸರೆಯಿಂದ ಟೊಮೆಟೊ ಗಿಡಗಳು ನೇರವಾಗಿ ಮೇಲ್ಮುಖವಾಗಿ ಹರಡಿಕೊಳ್ಳುವುದರಿಂದ ಪ್ರತಿಯೊಂದು ಹಣ್ಣಿಗೂ ಗಾಳಿ ಮತ್ತು ಸೂರ್ಯನ ಬೆಳಕು ಸಮೃದ್ಧವಾಗಿ ತಲುಪುತ್ತದೆ. ಕಾಯಿಗಳು ಕಲೆಯಿಲ್ಲದೆ ಆಕರ್ಷಕ ಮತ್ತು ಏಕರೂಪವಾಗಿ ಬೆಳೆಯಲು ನೆರವಾಗುತ್ತಿವೆ. ಕೀಟನಾಶಕ ಸಿಂಪಡಣೆ ಮತ್ತು ಕೊಯ್ಲು ಕಾರ್ಯವೂ ಸುಲಭವಾಗುತ್ತಿದೆ. ಮಾರುಕಟ್ಟೆಯಲ್ಲಿ ಇಂತಹ ಉತ್ತಮ ಗುಣಮಟ್ಟದ ಟೊಮೆಟೊಗೆ ಹೆಚ್ಚಿನ ಧಾರಣೆ ದೊರೆಯುತ್ತಿದ್ದು, ರೈತರಿಗೆ ಆರ್ಥಿಕ ಲಾಭವೂ ಹೆಚ್ಚುತ್ತಿದೆ ಎಂದು ಸ್ಥಳೀಯರು ಹೇಳುತ್ತಾರೆ.
ಪ್ರಾರಂಭದಲ್ಲಿ ಬಿದಿರಿನ ಕಡ್ಡಿಗಳನ್ನು ಹೊರರಾಜ್ಯಗಳಿಂದ ತರಿಸಿಕೊಳ್ಳುವುದರಿಂದ ಆರಂಭದಲ್ಲಿ ಖರೀದಿ ವೆಚ್ಚ ಹೆಚ್ಚೆನಿಸುತ್ತದೆ. ಆದರೆ, ಬಿದಿರಿನ ಕಡ್ಡಿಗಳು 6-8 ಬೆಳೆಗಳಿಗೆ ಉಪಯೋಗವಾಗಲಿವೆ. ಪ್ರತಿ ಬಾರಿಯ ಬೆಳೆಗೂ ಹೊಸ ಕಡ್ಡಿ ತರುವುದು, ಅವುಗಳನ್ನು ಸಾಗಾಣಿಕೆ ಮಾಡುವುದು ಮತ್ತು ಹೊಲದಲ್ಲಿ ಅಳವಡಿಸಲು ತಗಲುತ್ತಿದ್ದ ಕೂಲಿ ವೆಚ್ಚವೂ ಉಳಿತಾಯವಾಗಲಿದೆ. ಲೆಕ್ಕಾಚಾರದ ಪ್ರಕಾರ, ಎರಡು ಬೆಳೆಗಳ ನಂತರವೇ ಬಿದಿರಿನ ಮೇಲಿನ ಹೂಡಿಕೆ ಸಂಪೂರ್ಣ ವಾಪಸ್ ಬಂದು, ಮೂರನೇ ಬೆಳೆಯಿಂದ ರೈತನಿಗೆ ನೇರ ಆರ್ಥಿಕ ಲಾಭ ದೊರೆಯುತ್ತದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260827-18-2096995257