
ಬಾಗಲಕೋಟೆ | ಸಕ್ಕರೆ, ಬೆಲ್ಲದ ಬೆಲೆ ಏರಿಕೆ: ಗ್ರಾಹಕರಿಗೆ ಹೊರೆ
ಬಾಗಲಕೋಟೆ: ಶ್ರಾವಣ ಮಾಸದೊಂದಿಗೆ ಸಾಲು, ಸಾಲು ಹಬ್ಬಗಳು ಬರುತ್ತೇವೆ. ಸಿಹಿ ಅಡುಗೆ ಮನೆಯಲ್ಲಿ ಸಾಮಾನ್ಯ. ಆದರೆ, ಸಕ್ಕರೆ ಹಾಗೂ ಬೆಲ್ಲದ ಬೆಲೆ ಏರಿಕೆ ಬಿಸಿ ಗ್ರಾಹಕರಿಗೆ ತಟ್ಟಿದೆ.
ಶ್ರಾವಣ ಮಾಸ ಆರಂಭಗೊಂದಿಗೆ ವರಮಹಾಲಕ್ಷ್ಮಿ ಪೂಜೆ, ನಾಗರ ಪಂಚಮಿ, ಗಣೇಶ ಸೇರಿದಂತೆ ಹಲವು ಹಬ್ಬಗಳು ಬರುತ್ತವೆ. ಮುಂದಿನ ತಿಂಗಳುಗಳಲ್ಲಿ ದಸರಾ, ದೀಪಾವಳಿ ಹಬ್ಬಗಳಿವೆ. ಸಿಹಿ ಅಡುಗೆ ಹೆಚ್ಚು ಮಾಡುವ ಹೊತ್ತಿನಲ್ಲಿಯೇ ಸಕ್ಕರೆ ಬೆಲೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿ 14 ಸಕ್ಕರೆ ಕಾರ್ಖಾನೆಗಳಿದ್ದು, 1.10 ಲಕ್ಷ ಹೆಕ್ಟೇರ್‌ನಷ್ಟು ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತದೆ. ನಿತ್ಯ ಬೆಳಿಗ್ಗೆಯ ಚಹಾದೊಂದಿಗೆ ಆರಂಭವಾಗುವ ಸಕ್ಕರೆ ಬಳಕೆ ವಿವಿಧ ಅಡುಗೆಗಳಿಗೆ ಬಳಕೆಯಾಗುತ್ತಲೇ ಇರುತ್ತದೆ. ಬೆಲ್ಲದಿಂದಲೂ ಹಲವು ಸಿಹಿ ತಿಂಡಿಗಳನ್ನು ಮಾಡಲಾಗುತ್ತದೆ. ಅದರ ಬೆಲೆಯೂ ಹೆಚ್ಚಾಗಿದೆ.
ಪ್ರತಿ ಕೆಜಿಗೆ ₹40 ರಿಂದ ₹45ರ ಆಸುಪಾಸಿನಲ್ಲಿದ್ದ ಸಕ್ಕರೆ ಬೆಲೆಯೂ ದಿಢೀರ್‌ನೇ ಕೆಜಿಗೆ ₹60 ರಿಂದ ₹65ಕ್ಕೆ ಹೆಚ್ಚಾಗಿದೆ. ಕಳೆದ ಎರಡು, ಮೂರು ವರ್ಷಗಳಿಂದ ಸಕ್ಕರೆ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿರಲಿಲ್ಲ. ಮುಂದಿನ ಕಬ್ಬಿನ ಹಂಗಾಮಿನಲ್ಲಿ ಕಡಿಮೆ ಪ್ರಮಾಣದಲ್ಲಿ ಸಕ್ಕರೆ ಉತ್ಪಾದನೆಯಾಗಲಿದೆ ಎನ್ನುವುದೂ ಬೆಲೆ ಹಚ್ಚಳಕ್ಕೆ ಕಾರಣ ಎನ್ನಲಾಗುತ್ತಿದೆ. ನವೆಂಬರ್‌ನಿಂದ ಫೆಬ್ರುವರಿಯವರೆಗೆ ಕಬ್ಬು ಅರೆಯುವ ಕಾರ್ಖಾನೆಗಳು ಕೇಂದ್ರ ಸರ್ಕಾರದ ನಿರ್ದೇಶನದಂತೆ ಸಕ್ಕರೆ ಮಾರಾಟ ಮಾಡುತ್ತಿವೆ. ಈಗಾಗಲೇ ಬಹುತೇಕ ಸಕ್ಕರೆ ಮಾರಾಟ ಮಾಡಿರುವುದರಿಂದ ಬೆಲೆ ಹೆಚ್ಚಳದ ಲಾಭ ಸಕ್ಕರೆ ಕಾರ್ಖಾನೆಗಳಿಗೂ ಪೂರ್ಣ ಪ್ರಮಾಣದಲ್ಲಿ ದೊರೆಯುತ್ತಿಲ್ಲ ಎನ್ನುವುದು ಕಾರ್ಖಾನೆಗಳ ಅಧಿಕಾರಿಗಳು ಹೇಳುತ್ತಾರೆ. ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಕೆ ಮಾಡುವಾಗ ಸಕ್ಕರೆ ಬೆಲೆ ಕಡಿಮೆ ಇದ್ದದ್ದರಿಂದ ಪ್ರತಿ ಟನ್ ಕಬ್ಬಿಗೆ ಹೆಚ್ಚಿನ ಬೆಲೆ ದೊರೆತಿಲ್ಲ.
‘ಪೆಟ್ರೋಲ್‌ನಲ್ಲಿ ಶೇ20ರಷ್ಟು ಎಥೆನಾಲ್ ಮಿಶ್ರಣಕ್ಕೆ ಮುಂದಾಗಿರುವ ಹಿನ್ನಲೆಯಲ್ಲಿಯೂ ಸಕ್ಕರೆ ಬೆಲೆ ಹೆಚ್ಚಾಗಿರಬಹುದು. ಕಬ್ಬನ್ನು ಎಥೆನಾಲ್ ಉತ್ಪಾದನೆಗೆ ಕೆಲವು ಕಾರ್ಖಾನೆಗಳು ಬಳಸುತ್ತಿವೆ. ಇದರಿಂದ ಸಕ್ಕರೆ ಉತ್ಪಾದನೆ ಪ್ರಮಾಣ ಕಡಿಮೆಯಾಗಿದೆ’ ಎಂದು ರೈತ ಮುಖಂಡರು ದೂರುತ್ತಾರೆ.
ಮಾರುಕಟ್ಟೆಯಲ್ಲಿ ಸಾವವಯ ಬೆಲ್ಲ ಹೊರತುಪಡಿಸಿದರೆ ಸಾಮಾನ್ಯ ಬೆಲ್ಲವೂ ಪ್ರತಿ ಕೆಜಿಗೆ ₹45 ರಿಂದ ₹55ರವರೆಗೆ ಮಾರಾಟವಾಗುತ್ತಿತ್ತು. ಆದರೆ, ಈಗ ಸಕ್ಕರೆಯೊಂದಿಗೆ ಅದರ ಬೆಲೆಯೂ ಹೆಚ್ಚಳವಾಗಿದ್ದು, ಈಗ ಪ್ರತಿ ಕೆಜಿಗೆ ₹65 ರಿಂದ ₹70ಕ್ಕೆ ಹೆಚ್ಚಳವಾಗಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260827-19-1754817555