
ಉತ್ತರ ಕನ್ನಡ | ಭಾರತ್ ಜೋಡೋ; 28 ಸಾವಿರ ನೋಂದಣಿ
ಕಾರವಾರ: ಯುವಜನರಲ್ಲಿ ಕ್ರೀಡೆ, ಸಂಸ್ಕೃತಿ, ಸಾಮಾಜಿಕ ಸಾಮರಸ್ಯ ಉತ್ತೇಜಿಸಲು ರಾಜ್ಯ ಸರ್ಕಾರ ರಚಿಸುತ್ತಿರುವ ‘ಭಾರತ್ ಜೋಡೋ ಯುವ ಸಂಘ’ಗಳಿಗೆ ಜಿಲ್ಲೆಯ 28 ಸಾವಿರ ಯುವಕರು ನೋಂದಣಿ ಮಾಡಿಕೊಂಡಿದ್ದಾರೆ.
ಪ್ರತಿ ಗ್ರಾಮ ಪಂಚಾಯಿತಿಗೊಂದು ಸಂಘ, ನಗರ ವ್ಯಾಪ್ತಿಯಲ್ಲಿ ಜನಸಂಖ್ಯೆ ಆಧಾರಿತವಾಗಿ ಸಂಘ ರಚಿಸಲು ಸರ್ಕಾರ ಸೂಚಿಸಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಸ್ತುವಾರಿಯಲ್ಲಿ ಸಂಘಗಳ ರಚನೆ ಕಾರ್ಯ ನಡೆಯುತ್ತಿದೆ. ಭಾರತ್ ಜೋಡೋ ಯುವ ಸಂಘಕ್ಕೆ ಸದಸ್ಯರಾಗಲು ಆ.31ರವರೆಗೆ ಅವಕಾಶವಿದೆ.
ಸಂಘ ರಚನೆಗೆ ಕನಿಷ್ಠ 100 ಸದಸ್ಯರಿರಬೇಕು. ಜಿಲ್ಲೆಯ 229 ಗ್ರಾಮ ಪಂಚಾಯಿತಿಗಳಲ್ಲಿ 102 ಕಡೆಗಳಲ್ಲಿ ಮಾತ್ರ ತಲಾ ಸದಸ್ಯರ ಸಂಖ್ಯೆ 100 ದಾಟಿದೆ. ಇನ್ನೂ 127 ಕಡೆ ಗುರಿ ತಲುಪಿಲ್ಲ.
‘ಆ.12ರಿಂದ ನೋಂದಣಿ ಆರಂಭಗೊಂಡಿದೆ. ಸರ್ಕಾರ ಜಿಲ್ಲೆಗೆ ಕನಿಷ್ಠ 29,600 ಮಂದಿ ಸದಸ್ಯರನ್ನು ಮಾಡಲು ಗುರಿ ನೀಡಿದೆ. ಕೇವಲ ಎರಡು ವಾರಗಳ ಅವಧಿಯಲ್ಲೇ 28,360ಕ್ಕೂ ಹೆಚ್ಚು ಮಂದಿ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಂಡಿದ್ದಾರೆ’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರವಿ ನಾಯಕ್ ‘ಪ್ರಜಾವಾಣಿ’ಗೆ ತಿಳಿಸಿದರು.
‘16ರಿಂದ 35 ವರ್ಷ ವಯಸ್ಸಿನವರು ಸದಸ್ಯತ್ವ ಪಡೆಯಲು ಅವಕಾಶವಿದೆ. ₹10 ಸದಸ್ಯತ್ವ ಶುಲ್ಕ ಪಾವತಿಸಿ, ಭಾರತ್ ಜೋಡೋ ಯುವ ಸಂಘ (ಬಿಜೆವೈಎಸ್) ವೆಬ್‌ಸೈಟ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕಾಗುತ್ತದೆ. ಒಂದು ಸಂಘ ರಚನೆಗೆ ಕನಿಷ್ಠ 100 ಮಂದಿ ಸದಸ್ಯರಾಗಿರಬೇಕು ಎಂಬುದಾಗಿ ನಿಯಮ ಹೇಳುತ್ತದೆ’ ಎಂದು ತಿಳಿಸಿದರು.
‘ಜಿಲ್ಲೆಯಲ್ಲಿ 229 ಗ್ರಾಮ ಪಂಚಾಯಿತಿಗಳ ಪೈಕಿ 102, ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯ 69 ವಲಯಗಳ ಪೈಕಿ 59 ವಲಯಗಳಲ್ಲಿ ಬಿಜೆವೈಎಸ್ ನೋಂದಣಿ ತಲಾ 100ಕ್ಕಿಂತ ಹೆಚ್ಚು ದಾಟಿದೆ. 10 ವಲಯಗಳ ಪೈಕಿ ಹಲವು ಸಂಘಗಳು ತಲಾ 100 ಸದಸ್ಯತ್ವಕ್ಕೆ ಸಮೀಪದಲ್ಲಿವೆ’ ಎಂದೂ ವಿವರಿಸಿದರು.
‘ನೋಂದಣಿ ಪ್ರಕ್ರಿಯೆ ಬಳಿಕ ಸಂಘಗಳ ಕಾರ್ಯಕಾರಿ ಸಮಿತಿ ರಚನೆಯಾಗಲಿದೆ. ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿನ ಉಸ್ತುವಾರಿ ಸಮಿತಿಯ ನಿಗಾದಲ್ಲಿ ಅಧ್ಯಕ್ಷರ ಆಯ್ಕೆ ನಡೆಯುತ್ತದೆ’ ಎಂದು ಮಾಹಿತಿ ನೀಡಿದರು.
ಸಿಬ್ಬಂದಿ ಮೇಲೆ ‘ಸದಸ್ಯತ್ವ’ ಒತ್ತಡ!
‘ಎಸ್‌ಐಆರ್ ಪ್ರಕ್ರಿಯೆಯ ಒತ್ತಡ ಒಂದೆಡೆಯಾದರೆ ಭಾರತ್ ಜೋಡೋ ಯುವ ಸಂಘಗಳಿಗೆ ಸದಸ್ಯತ್ವ ಗುರಿ ನಿಗದಿ ಅವಧಿಯಲ್ಲಿ ಪೂರ್ಣಗೊಳಿಸಲು ಒತ್ತಡ ಹೆಚ್ಚಿದೆ. ಗ್ರಾಮಮಟ್ಟದಲ್ಲಿನ ಯುವಕರನ್ನು ಸಂಪರ್ಕಿಸಿ ಸದಸ್ಯತ್ವ ಮಾಡಿಸಲು ಎಲ್‌ಸಿಆರ್‌ಪಿ, ಪಶು ಸಖಿ, ಕೃಷಿ ಸಖಿ ಸೇರಿದಂತೆ ವಿವಿಧ ಸಿಬ್ಬಂದಿಯನ್ನು ಈ ಕೆಲಸಕ್ಕೆ ನಿಯೋಜಿಸಬೇಕಿದೆ’ ಎಂದು ಪಿಡಿಒ ಒಬ್ಬರು ಸಮಸ್ಯೆ ವಿವರಿಸಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260828-20-669673239