
ಚಿಕ್ಕಮಗಳೂರು: ಕಿರು ವಿಮಾನ ನಿಲ್ದಾಣಕ್ಕೆ ಭೂಸ್ವಾಧೀನ, ರೈತರಿಂದ ವಿರೋಧ
ಚಿಕ್ಕಮಗಳೂರು: ನಗರದ ಹೊರ ವಲಯದಲ್ಲಿ ಕಿರು ವಿಮಾನ ನಿಲ್ದಾಣಕ್ಕೆ ಹೆಚ್ಚುವರಿ ಭೂಸ್ವಾಧೀನ ಪ್ರಕ್ರಿಯೆಯನ್ನು ಕಂದಾಯ ಇಲಾಖೆ ಆರಂಭಿಸಿದೆ. ಆದರೆ, ಭೂಮಿ ಬಿಟ್ಟುಕೊಡಲು ರೈತರಿಂದ ವಿರೋಧ ವ್ಯಕ್ತವಾಗುತ್ತಿದ್ದು, ಸಾಮಾನ್ಯ ಜನರಿಗೆ ಉಪಯೋಗವಿಲ್ಲದ ಯೋಜನೆಗೆ ರೈತರ ಫಲವತ್ತಾದ ಭೂಮಿ ಕೊಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
2023–24ನೇ ಸಾಲಿನ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಈ ಯೋಜನೆಯನ್ನು ಘೋಷಣೆ ಮಾಡಿದೆ. ವಿಮಾನ ನಿಲ್ದಾಣಕ್ಕೆ ಜಿಲ್ಲಾಡಳಿತ 120 ಎಕರೆ ಜಾಗವನ್ನೂ ಮೀಸಲಿರಿಸಿದ್ದು, ಹೆಚ್ಚುವರಿಯಾಗಿ ಇನ್ನೂ 17 ಎಕರೆ ಭೂಮಿ ಸ್ವಾಧೀನವಾಗಬೇಕಿದೆ. ಸರ್ವೆ ನಡೆಸಲು ಬಂದ ಕಂದಾಯ ಇಲಾಖೆ ಅಧಿಕಾರಿಗಳನ್ನು ರೈತರು ವಾಪಸ್ ಕಳುಹಿಸಿದ್ದಾರೆ. ಭೂಸ್ವಾಧೀನದ ವಿರುದ್ಧ ಹೋರಾಟ ರೂಪಿಸಲು ಸಜ್ಜಾಗಿದ್ದಾರೆ.
ಅಂಬಳೆ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ 120 ಎಕರೆ ಜಾಗದಲ್ಲಿ ಕಿರು ವಿಮಾನ ನಿಲ್ದಾಣ ನಿರ್ಮಿಸುವ ಉದ್ದೇಶ ಇದೆ. ಪಕ್ಕದ ಕೋಟೆ, ಹಿರೇಮಗಳೂರು, ಲಕ್ಷ್ಮೀಪುರ ಸರ್ವೆ ನಂಬರ್‌ನಲ್ಲಿ ಹಲವು ರೈತರ 17 ಎಕರೆ ಜಾಗ ಸ್ವಾಧೀನಕ್ಕೆ ಕಂದಾಯ ಇಲಾಖೆ ಮುಂದಾಗಿದೆ. ಈ ಹಿಂದೆ 19 ಎಕರೆ ಬೇಕಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ 17 ಎಕರೆ 1 ಗುಂಟೆ ಜಾಗ ಸಾಕು ಎಂದು ತೀರ್ಮಾನಿಸಲಾಗಿದೆ. ಒಟ್ಟಾರೆ ₹24 ಕೋಟಿ ಬೇಕಾಗಲಿದೆ ಎಂದು ಉಪವಿಭಾಗಾಧಿಕಾರಿ ಅಂದಾಜಿಸಿದ್ದಾರೆ.
ಕಿರು ವಿಮಾಣ ನಿಲ್ದಾಣದಲ್ಲಿ 12 ಆಸನ ಸಾಮರ್ಥ್ಯದ ಸಣ್ಣ ವಿಮಾನಗಳನ್ನು ಇಳಿಸಲು ಮಾತ್ರ ಸಾಧ್ಯವಾಗಲಿದೆ. ಲಭ್ಯವಾಗುವ 137 ಎಕರೆ ಜಾಗದಲ್ಲಿ 1200 ಮೀಟರ್ ಉದ್ದದ ರನ್ ವೇ ನಿರ್ಮಿಸಲಷ್ಟೇ ಸಾಧ್ಯ. 20 ಆಸನ ಅಥವಾ ಅದಕ್ಕಿಂತ ದೊಡ್ಡ ವಿಮಾನ ಇಳಿಸಲು ಕನಿಷ್ಠ 400 ಎಕರೆ ಜಾಗ ಬೇಕಾಗಲಿದೆ. ಆದ್ದರಿಂದ 12 ಆಸನ ಸಾಮರ್ಥ್ಯದ ವಿಮಾನ ಇಳಿಸಲು ಸಾಧ್ಯವಾಗುವ ರನ್‌ವೇ ನಿರ್ಮಿಸಲಾಗುವುದು ಅಧಿಕಾರಿಗಳು ಹೇಳುತ್ತಾರೆ.
ದೊಡ್ಡ ವಿಮಾನ ನಿಲ್ದಾಣಗಳ ಮಾದರಿಯಲ್ಲಿ ವೇಳಾಪಟ್ಟಿಯಂತೆ ವಿಮಾನಗಳು ಕಾರ್ಯಾಚರಣೆ ಮಾಡುವುದಿಲ್ಲ. 12 ಆಸನ ಸಾಮರ್ಥ್ಯದ ವಿಮಾನ ಇದ್ದವರು ಅಥವಾ ಬಾಡಿಗೆಗೆ ಪಡೆದವರು ವಿಮಾನ ಇಳಿಸಬಹುದು. ವಿಮಾನ ಇಳಿಸಿ, ನಿಲ್ಲಿಸಲು ಬಾಡಿಗೆ ನೀಡಬೇಕಾಗುತ್ತದೆ. ವಿಮಾನ ಬಾಡಿಗೆ ಪಡೆದು ಬರುವ ಶ್ರೀಮಂತರಿಗೆ ಮಾತ್ರ ಈ ಕಿರು ವಿಮಾನ ನಿಲ್ದಾಣ ಅನುಕೂಲವಾಗಲಿದೆ. ಸಾಮಾನ್ಯ ಜನರಿಗೆ ಏನೇನೂ ಪ್ರಯೋಜನವಿಲ್ಲದ ಈ ಯೋಜನೆಗೆ ರೈತರ ಭೂಮಿ ಪಡೆಯುವ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು ಎಂಬುದು ರೈತರ ಅಭಿಪ್ರಾಯ.
‘ಬರಗಾಲದಲ್ಲೂ ಬೆಳೆ ಬೆಳೆಯಲು ಸಾಧ್ಯವಿರುವ ಭೂಮಿ ಇದಾಗಿದ್ದು, ಬಹುತೇಕರು ಅಡಕೆ ಬೆಳೆಯುತ್ತಿದ್ದಾರೆ. ಇಂತಹ ಭೂಮಿ ಕಸಿದುಕೊಳ್ಳುವ ಪ್ರಯತ್ನವನ್ನು ಸರ್ಕಾರ ಮಾಡಬಾರದು’ ಎಂದು ರೈತ ಸಂಜಯ್ ಆಗ್ರಹಿಸಿದರು.
‘ಮುಂದಿನ ದಿನಗಳಲ್ಲಿ ರನ್‌ವೇ ವಿಸ್ತರಿಸುವ ಸ್ವಲ್ಪ ದೊಡ್ಡ ವಿಮಾನ ಇಳಿಸಲು ಬಯಸಿದರೆ ಉಂಡಾಡಿಹಳ್ಳಿ ಎಂಬ ಊರಿಗೇ ತೊಂದರೆಯಾಗಲಿದೆ. ಪಕ್ಕದಲ್ಲೇ ಯಗಚಿ ಹಳ್ಳ ಹರಿಯುತ್ತಿದೆ. ವಿಮಾನ ನಿಲ್ದಾಣ ನಿರ್ಮಿಸಲು ಮುಂದಾದರೆ ಇವುಗಳಿಗೂ ತೊಂದರೆಯಾಗಲಿದೆ’ ಎಂದರು.
‘ಶ್ರೀಮಂತರ ಉಪಯೋಗಕ್ಕೆ ರೈತರ ಭೂಮಿ ಬೇಕೆ’
‘ಶ್ರೀಮಂತರು, ಖಾಸಗಿ ವ್ಯಕ್ತಿಗಳ ಉಪಯೋಗಕ್ಕೆ ಸರ್ಕಾರ ರೈತರ ಭೂಮಿ ಕಸಿದುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಬರಡು ಭೂಮಿ ಹುಡುಕಿ ವಿಮಾನ ನಿಲ್ದಾಣ ಮಾಡಿಕೊಳ್ಳಲಿ’ ಎಂದು ಲಕ್ಷ್ಮೀಪುರದ ರೈತ ಆದರ್ಶ ಹೇಳಿದರು.
12 ಸೀಟುಗಳ ಸಣ್ಣ ವಿಮಾನ ಇಳಿಸುವುದರಿಂದ ರೈತರಿಗಾಗಲಿ, ಸರ್ಕಾರಕ್ಕಾಗಲಿ, ಪ್ರವಾಸೋದ್ಯಮಕ್ಕಾಗಲಿ ಯಾವುದೇ ಪ್ರಯೋಜನ ಆಗುವುದಿಲ್ಲ. ಮುಂದಿನ ದಿನಗಳಲ್ಲಿ ವಿಸ್ತರಣೆ ಮಾಡಲು ಇಲ್ಲಿ ಅವಕಾಶ ಇಲ್ಲ. ಪಕ್ಕದಲ್ಲೇ ನಗರ ಇದೆ, ಮತ್ತೊಂದೆಡೆ ಅಂಬಳೆ ಕೈಗಾರಿಕಾ ಪ್ರದೇಶ ಇದೆ. ಮಗದೊಂದು ಕೊಡೆ ಉಂಡಾಡಿಹಳ್ಳಿ ಎಂಬ ಊರಿದೆ. ಇದರ ಮಧ್ಯದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಹೊರಟಿರುವುದು ಸರಿಯಲ್ಲ. ರೈತರು ಯಾವುದೇ ಕಾರಣಕ್ಕೂ ಭೂಮಿ ಬಿಟ್ಟುಕೊಡುವುದಿಲ್ಲ ಎಂದು ತಿಳಿಸಿದರು.
‘ಖಾಸಗಿ ವಿಮಾನ ಇಳಿಸಿಕೊಳ್ಳಲು ಸರ್ಕಾರ ರೈತರ ಭೂಸ್ವಾಧೀನ ಮಾಡಿಕೊಡಲು ಹೊರಟಿದೆ. ಇದು ಸರಿಯಾದ ಕ್ರಮವಲ್ಲ. ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತೇವೆ. ಒಪ್ಪದಿದ್ದರೆ ಹೋರಾಟ ರೂಪಿಸುತ್ತೇವೆ’ ಎಂದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260822-126-840384850