
ಮಹಿಳಾ ಏಷ್ಯಾ ಕಪ್ ಥಾಯ್ಲೆಂಡ್ ತಂಡ ಶುಭಾರಂಭ
ದುಬೈ (ಪಿಟಿಐ): ಬೌಲಿಂಗ್‌ನಲ್ಲಿ ಪರಿಣಾಮಕಾರಿ ದಾಳಿ ಸಂಘಟಿಸಿದ ಥಾಯ್ಲೆಂಡ್ ತಂಡವು ಮಹಿಳಾ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ 6 ರನ್‌ಗಳಿಂದ ಹಾಂಗ್‌ಕಾಂಗ್ ತಂಡವನ್ನು ಮಣಿಸಿ ಶುಭಾರಂಭ ಮಾಡಿತು.
ಶುಕ್ರವಾರ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಟಾಸ್ ಗೆದ್ದ ಹಾಂಗ್‌ಕಾಂಗ್ ಫೀಲ್ಡಿಂಗ್ ಆಯ್ದುಕೊಂಡಿತು. ನಾಯಕಿ ನರುಯೆಮೋಲ್ ಚೈವೈ (43;31ಎ) ಅವರ ಬ್ಯಾಟಿಂಗ್ ನೆರವಿನಿಂದ ಥಾಯ್ಲೆಂಡ್ ತಂಡವು 9 ವಿಕೆಟ್‌ಗೆ 120 ರನ್ ಗಳಿಸಿತು. ಹಾಂಗ್‌ಕಾಂಗ್‌ನ ಮರೀನಾ ಲ್ಯಾಂಪ್ಲೌ ನಾಲ್ಕು ವಿಕೆಟ್ ಪಡೆದರೆ, ಅಲಿಸನ್ ಸಿಯು ಮೂರು ವಿಕೆಟ್ ಕಬಳಿಸಿದರು.
ಗುರಿ ಬೆನ್ನಟ್ಟಿದ ಹಾಂಗ್‌ಕಾಂಗ್ ತಂಡವು 7 ವಿಕೆಟ್‌ಗೆ 114 ರನ್ ಗಳಿಸಿ ಓವರ್‌ಗಳನ್ನು ಮುಗಿಸಿತು. ಕ್ಯಾರಿ ಚಾನ್ (28) ಮತ್ತು ಯಾಸ್ಮಿನ್ ದಾಸ್ವಾನಿ (28) ಹೊರತುಪಡಿಸಿ ಉಳಿದವರು ಕ್ರೀಸ್‌ನಲ್ಲಿ ಹೆಚ್ಚುಹೊತ್ತು ನಿಲ್ಲಲಿಲ್ಲ. ಒನ್ನಿಚಾ ಕಾಮ್ಚೊಂಫು (27ಕ್ಕೆ 3) ಮತ್ತು ಫನ್ನಿತಾ ಮಾಯಾ (22ಕ್ಕೆ 2) ಎದುರಾಳಿ ತಂಡವನ್ನು ಕಟ್ಟಿಹಾಕಲು ನೆರವಾದರು.
ಹಾಂಗ್‌ಕಾಂಗ್ ತಂಡವು ಹದಿನಾಲ್ಕು ವರ್ಷಗಳ ನಂತರ ಏಷ್ಯಾ ಕಪ್ ಟೂರ್ನಿಯಲ್ಲಿ ಕಣಕ್ಕಿಳಿಯಿತು. ಈ ತಂಡಕ್ಕೆ ಕರ್ನಾಟಕದ ಮಮತಾ ಮಾಬೆನ್ ಕೋಚ್ ಆಗಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260829-4-414142630