
ಚಿಕ್ಕಣ್ಣ: ನ.27ಕ್ಕೆ ಬರುತ್ತಾನೆ ಲಕ್ಷ್ಮೀಪುತ್ರ
ಚಿಕ್ಕಣ್ಣ ನಾಯಕರಾಗಿ ನಟಿಸಿರುವ, ಎ.ಪಿ.ಅರ್ಜುನ್ ನಿರ್ಮಾಣದ ‘ಲಕ್ಷ್ಮೀಪುತ್ರ’ ಸಿನಿಮಾ ನ.27ರಂದು ತೆರೆಕಾಣಲಿದೆ. ಎ.ಪಿ.ಅರ್ಜುನ್ ಅವರೇ ಕಥೆ ಬರೆದಿದ್ದು, ತಮ್ಮ ಎಪಿ ಅರ್ಜುನ್ ಫಿಲ್ಮ್ ಬ್ಯಾನರ್‌ನಡಿ ಚಿತ್ರ ನಿರ್ಮಿಸಿದ್ದಾರೆ. ವಿಜಯ್ ಸ್ವಾಮಿ ನಿರ್ದೇಶನದ ಈ ಸಿನಿಮಾ, ಚಿಕ್ಕಣ್ಣ ನಾಯಕರಾಗಿ ನಟಿಸಿರುವ ಎರಡನೇ ಚಿತ್ರವಾಗಿದೆ.
ಸಿನಿಮಾ ಬಿಡುಗಡೆ ಕುರಿತು ಮಾಹಿತಿ ನೀಡಿದ ಎ.ಪಿ.ಅರ್ಜುನ್, ‘ಲಕ್ಷ್ಮೀ’ ಎಂದಾಕ್ಷಣ ನಮಗೆ ಮೊದಲು ನೆನಪಾಗುವುದು ಅಮ್ಮ. ಬಳಿಕ ಅಕ್ಕ–ತಂಗಿ, ಪತ್ನಿ ಸೇರಿದಂತೆ ನಮ್ಮ ಬದುಕಿನ ಹೆಣ್ಣುಮಕ್ಕಳನ್ನೆಲ್ಲ ಲಕ್ಷ್ಮೀ ಎಂದೇ ಪರಿಗಣಿಸುತ್ತೇವೆ. ಮಂಡ್ಯದ ಸೊಗಡಿನಲ್ಲಿ ಸಾಗುವ ಈ ಸಿನಿಮಾದಲ್ಲಿ ತಾಯಿ–ಮಗನ ಭಾವನಾತ್ಮಕ ಬಾಂಧವ್ಯದೊಂದಿಗೆ ಹಾಸ್ಯ ಹಾಗೂ ಆಪ್ತವಾದ ಪ್ರೇಮಕಥೆಯೂ ಇದೆ’ ಎಂದರು.
‘ಉಪಾಧ್ಯಕ್ಷ’ ಬಳಿಕ ಚಿಕ್ಕಣ್ಣ ಕೈಗೆತ್ತಿಕೊಂಡಿರುವ ಸಿನಿಮಾ ಇದಾಗಿದೆ. ‘ಕನ್ನಡ ರಾಜ್ಯೋತ್ಸವದ ಸಂಭ್ರಮದ ತಿಂಗಳಿನಲ್ಲಿ ನಮ್ಮ ಸಿನಿಮಾ ಬರುತ್ತಿದೆ. ವೃತ್ತಿಜೀವನದ ಆರಂಭದ ದಿನಗಳಲ್ಲಿ ಗಣೇಶೋತ್ಸವ ಹಾಗೂ ರಾಜ್ಯೋತ್ಸವದ ಕಾರ್ಯಕ್ರಮಗಳ ವೇದಿಕೆಗಳೇ ನನ್ನ ಬದುಕಿಗೆ ಆಸರೆಯಾಗಿದ್ದವು. ಇದೇ 29–30ರಂದು ನನ್ನ ಮದುವೆ ಕಾರ್ಯಕ್ರಮವೂ ನಡೆಯಲಿದೆ. ಉದ್ಯಮಿಯಾಗಿರುವ ಪಾವನಾ ಅವರೂ ಸಿನಿಮಾಪ್ರೇಮಿ. ನಮ್ಮ ವಿವಾಹಕ್ಕೆ ಜನರ ಆಶೀರ್ವಾದ ಇರಲಿ’ ಎಂದು ಚಿಕ್ಕಣ್ಣ ಹೇಳಿದರು.
ವಂದಿತಾ ಗೌಡ ನಾಯಕಿಯಾಗಿ ನಟಿಸಿದ್ದು, ತಾರಾ ಅನುರಾಧ, ಕುರಿ ಪ್ರತಾಪ್, ಧರ್ಮಣ್ಣ ಕಡೂರು, ಮಿತ್ರ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ. v
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260829-51-1699706681