ಕಾರ್ಯಾರಂಭ ಮಾಡದ ಅಗ್ನಿಶಾಮಕ ಠಾಣೆ

ಕಾರ್ಯಾರಂಭ ಮಾಡದ ಅಗ್ನಿಶಾಮಕ ಠಾಣೆ

ಕಾರ್ಯಾರಂಭ ಮಾಡದ ಅಗ್ನಿಶಾಮಕ ಠಾಣೆ

ಕಾಗವಾಡ: ತಾಲ್ಲೂಕಿನ ಮಂಗಸೂಳಿಯಲ್ಲಿ ಎರಡು ಎಕರೆಯಲ್ಲಿ ಅಗ್ನಿಶಾಮಕ ಠಾಣೆಗೆ ಸ್ವಂತ ಕಟ್ಟಡ ನಿರ್ಮಿಸಿ, ಹಲವು ತಿಂಗಳಾಗಿವೆ. ಆದರೆ, ಉದ್ಘಾಟನೆ ಭಾಗ್ಯ ಕಂಡಿಲ್ಲ. ಅದಕ್ಕೆ ಹೊಸ ಅಗ್ನಿಶಾಮಕ ವಾಹನವನ್ನೂ ಒದಗಿಸಿಲ್ಲ. ಹಾಗಾಗಿ ಠಾಣೆ ಇದ್ದೂ ಇಲ್ಲದಂತಾಗಿದೆ!

ಕಾಗವಾಡ ತಾಲ್ಲೂಕಿನಲ್ಲಿ ಅಗ್ನಿಶಾಮಕ ಠಾಣೆ ಆರಂಭಿಸಬೇಕು ಎಂಬ ಬೇಡಿಕೆ ಇತ್ತು. ಇದಕ್ಕೆ ಸ್ಪಂದಿಸಿದ ಬಿಜೆಪಿ ಸರ್ಕಾರ, 2022-23ನೇ ಸಾಲಿನಲ್ಲಿ ಮಂಗಸೂಳಿಯಲ್ಲಿ ಹೊಸ ಅಗ್ನಿಶಾಮಕ ಠಾಣೆ ಕಟ್ಟಡ ನಿರ್ಮಾಣಕ್ಕೆ ₹3 ಕೋಟಿ ಮಂಜೂರು ಮಾಡಿತ್ತು.

ಆ ಹಣದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿ, ಕಳೆದ ವರ್ಷ ಅಗ್ನಿಶಾಮಕ ಇಲಾಖೆಗೆ ಹಸ್ತಾಂತರಿಸಲಾಗಿದೆ. ಆದರೆ, ಅದು ಕಾರ್ಯಾರಂಭ ಮಾಡದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ತಾಲ್ಲೂಕಿನ ಯಾವುದೇ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದರೆ, 40 ಕಿ.ಮೀ ದೂರದ ಅಥಣಿ ಅಥವಾ ರಾಯಬಾಗ ಅಗ್ನಿಶಾಮಕ ಠಾಣೆಯಿಂದ ವಾಹನ ಬರಬೇಕಿದೆ. ಸಕಾಲಕ್ಕೆ ವಾಹನ ಬಾರದ್ದರಿಂದ ತ್ವರಿತವಾಗಿ ಬೆಂಕಿ ನಂದಿಸಲು ಕಷ್ಟವಾಗುತ್ತಿದೆ.

ಕಾಗವಾಡ ತಾಲ್ಲೂಕು ಕೇಂದ್ರವಾಗಿ ಹಲವು ವರ್ಷ ಕಳೆದರೂ, ಅನೇಕ ಇಲಾಖೆಗಳ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಹೀಗಿರುವಾಗ ಅಗ್ನಿಶಾಮಕ ಠಾಣೆಗೆ ಸ್ವಂತ ಕಟ್ಟಡವಿದ್ದರೂ ಬಳಕೆಗೆ ಬಾರದ ಪರಿಸ್ಥಿತಿ ಇದೆ.

ಇದರಲ್ಲಿ ಶಾಸಕರು ಹಾಗೂ ಸರ್ಕಾರದ ಇಚ್ಛಾಶಕ್ತಿ ಕೊರತೆ ಕಾಡುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿದೆ.

ಕಾಗವಾಡ ತಾಲ್ಲೂಕಿನಲ್ಲಿ ಮೂರು ಸಕ್ಕರೆ ಕಾರ್ಖಾನೆ ಇವೆ. ಈ ಭಾಗದಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಬೆಳೆ ಬೆಳೆಯುತ್ತಾರೆ. ಆಗಾಗ ಶಾರ್ಟ್‌ ಸರ್ಕ್ಯೂಟ್‌ ಮೊದಲಾದ ಕಾರಣಗಳಿಂದ ಕಬ್ಬಿನ ಗದ್ದೆಗಳಿಗೆ ಬೆಂಕಿ ತಗುಲಿ, ಲಕ್ಷಾಂತರ ರೂಪಾಯಿ ಹಾನಿಯಾಗುತ್ತಿದೆ. ಇದಲ್ಲದೆ, ಬೇರೆ ಅಗ್ನಿ ಅವಘಡಗಳೂ ವರದಿಯಾಗುತ್ತಿವೆ. ಆದರೆ, ದೂರದ ಅಥಣಿ ಹಾಗೂ ರಾಯಬಾಗ ಅಗ್ನಿಶಾಮಕ ಠಾಣೆಗಳಿಂದ ವಾಹನ ಬಂದು ಬೆಂಕಿ ನಂದಿಸುವಷ್ಟರಲ್ಲಿ, ಆಸ್ತಿ–ಪಾಸ್ತಿ ಸುಟ್ಟು ಕರಕಲಾಗುತ್ತಿದೆ.

ಈಚೆಗೆ ತಾಲ್ಲೂಕಿನ ಜೂಗುಳ ಗ್ರಾಮದಲ್ಲಿ ಬಜಾರ್‌ ಪೇಟೆಯ ಹಲವು ಅಂಗಡಿಗಳು ಸುಟ್ಟು ಕರಕಲಾದವು. ಸಕಾಲಕ್ಕೆ ಬೆಂಕಿ ನಂದಿಸುವ ವಾಹನ ಬಾರದ್ದೇ ಹಾನಿ ಪ್ರಮಾಣ ಹೆಚ್ಚಲು ಕಾರಣವಾಗಿತ್ತು. ಹೀಗಿದ್ದರೂ ಮಂಗಸೂಳಿಯ ಠಾಣೆ ಕಾರ್ಯಾರಂಭಕ್ಕೆ ಸರ್ಕಾರ ಮನಸ್ಸು ಮಾಡುತ್ತಿಲ್ಲ. ರಾಯಬಾಗ, ಸಂಕೇಶ್ವರ ಮತ್ತು ಅಥಣಿ ಅಗ್ನಿಶಾಮಕ ಠಾಣೆಯ ಸಿಬ್ಬಂದಿಯನ್ನು ಪಾಳೆ ಆಧಾರದಲ್ಲಿ ಕಾವಲಿಗೆ ನಿಯೋಜಿಸಿ ಸುಮ್ಮನಾಗಿದೆ.

‘ಕೈಗೆ ಬಂದ ತುತ್ತು ಬಾರದಂತಾಯಿತು’

‘ಕಳೆದ ವರ್ಷ ಬೇಸಿಗೆಯಲ್ಲಿ ನಾವು ಬೆಳೆದ ಕಬ್ಬು ಬೆಳೆ ಕಟಾವಿಗೆ ಬಂದಿತ್ತು. ಆದರೆ, ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಳೆ ಸುಟ್ಟು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಯಿತು. ಇಂಥ ಘಟನೆ ಆಗಾಗ ನಡೆಯುತ್ತಲೇ ಇವೆ. ಹಾಗಾಗಿ ಮಂಗಸೂಳಿಯಲ್ಲಿರುವ ಠಾಣೆ ಕಾರ್ಯಾರಂಭಕ್ಕೆ ಕ್ರಮ ವಹಿಸಲೇಬೇಕು’ ಎಂಬುದು ರೈತರ ಆಗ್ರಹ.

ಮಂಗಸೂಳಿಯಲ್ಲಿ ನಿರ್ಮಿಸಿದ ಅಗ್ನಿಶಾಮಕ ಠಾಣೆಗೆ ಸಿಬ್ಬಂದಿ ನಿಯೋಜಿಸುವ ಕುರಿತು, ಈಚೆಗೆ ಸದನದಲ್ಲಿ ಸರ್ಕಾರದ ಗಮನ ಸೆಳೆದಿದ್ದೇನೆ. ಶೀಘ್ರವೇ ಸಿಬ್ಬಂದಿ ನೇಮಿಸುವ ಬಗ್ಗೆ ಗೃಹ ಸಚಿವರು ಭರವಸೆ ಕೊಟ್ಟಿದ್ದಾರೆ. ಠಾಣೆ ಸದ್ಬಳಕೆಗೆ ಕ್ರಮ ವಹಿಸಲಾಗುವುದು

–ರಾಜು ಕಾಗೆ‌, ಶಾಸಕ, ಕಾಗವಾಡ

ಉದ್ಘಾಟನೆಯಾಗದೆ ಪಾಳು ಬಿದ್ದಿರುವ ಅಗ್ನಿಶಾಮಕ ಠಾಣೆ ಕಾರ್ಯಾರಂಭಕ್ಕೆ ಕ್ರಮ ಕೈಗೊಳ್ಳಬೇಕು. ತಾಲ್ಲೂಕಿನಲ್ಲಿ ವರದಿಯಾಗುವ ಅಗ್ನಿ ಅವಘಡಗಳನ್ನು ತಪ್ಪಿಸಬೇಕು

–ಧರಿಖಾನ ಸಾವಂತ, ಸಾಮಾಜಿಕ ಕಾರ್ಯಕರ್ತ, ಮೋಳೆ

ಮಂಗಸೂಳಿ ಗ್ರಾಮದ ನೂತನ ಅಗ್ನಿಶಾಮಕ ಠಾಣೆಗೆ ಸರ್ಕಾರ ಕೂಡಲೇ ಸಿಬ್ಬಂದಿ ನಿಯೋಜನೆ ಮಾಡಿ ಅಗತ್ಯ ಸಾಮಗ್ರಿಗಳನ್ನು ಪೊರೈಸಿ ಅಗ್ನಿ ಅವಘಡಗಳನ್ನು ತಡೆಯುವ ಕೆಲಸ ಮಾಡಬೇಕು

–ಶಶಿಕಾಂತ ಜೋಷಿ, ರೈತ ಹೋರಾಟಗಾರ, ಕಾಗವಾಡ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260824-21-2007873091

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ