
ಮೇಲುಕೋಟೆ ಪ್ರೀ ವೆಡ್ಡಿಂಗ್ ಶೂಟ್‌ಗಳಿಗೆ ನೆಚ್ಚಿನ ತಾಣ, ಆದಾಯ ಹೆಚ್ಚಳ
ಮೇಲುಕೋಟೆ: ಪುರಾಣ ಪ್ರಸಿದ್ಧ ಮೇಲುಕೋಟೆ ಈಗ ಧಾರ್ಮಿಕ ಕ್ಷೇತ್ರ ಮಾತ್ರವಲ್ಲ, ಸಿನಿಮಾ, ಧಾರಾವಾಹಿ, ಜಾಹೀರಾತು ಜೊತೆಗೆ ‘ಪ್ರೀ ವೆಡ್ಡಿಂಗ್’ ಶೂಟ್‌ಗಳಿಗೂ ಹಾಟ್‌ಸ್ಪಾಟ್ ಆಗಿದೆ.
ಇಲ್ಲಿನ ಚೆಲುವನಾರಾಯಣಸ್ವಾಮಿ ದೇವಸ್ಥಾನ, ಅಕ್ಕತಂಗಿ ಕೊಳ, ಪಂಚಕಲ್ಯಾಣಿ, ರಾಯಗೋಪುರ, ಧನುಷ್ಕೋಟೆ ಸೇರಿದಂತೆ ಐತಿಹಾಸಿಕ ಸ್ಥಳಗಳಲ್ಲಿ ನಡೆಯುತ್ತಿರುವ ಚಿತ್ರೀಕರಣದಿಂದ ದೇವಸ್ಥಾನದ ಆದಾಯಕ್ಕೂ ಹೊಸ ಮೂಲ ಸೃಷ್ಟಿಯಾಗಿದೆ.
ಮೇಲುಕೋಟೆಯ ವಿಶಿಷ್ಟ ವಾಸ್ತುಶಿಲ್ಪ, ಪುರಾತನ ದೇವಾಲಯಗಳು, ಬೆಟ್ಟ-ಗುಡ್ಡಗಳ ಸುಂದರ ಪರಿಸರ ಹಾಗೂ ಧಾರ್ಮಿಕ ಹಿನ್ನೆಲೆ ಚಿತ್ರತಂಡಗಳು ಮತ್ತು ಜಾಹೀರಾತು ಸಂಸ್ಥೆಗಳನ್ನು ಆಕರ್ಷಿಸುತ್ತಿವೆ. ಕನ್ನಡ ಮತ್ತು ತೆಲುಗು ಚಿತ್ರರಂಗದ ನಿರ್ಮಾಪಕರು, ಧಾರಾವಾಹಿ ತಂಡಗಳು ಹಾಗೂ ವಿವಿಧ ಕಂಪನಿಗಳು ಚಿತ್ರೀಕರಣಕ್ಕಾಗಿ ಮೇಲುಕೋಟೆಯನ್ನು ಆಯ್ಕೆ ಮಾಡುತ್ತಿವೆ.
ಮೇಲುಕೋಟೆಯ ಪ್ರವಾಸಿ ತಾಣಗಳಲ್ಲಿ ಪ್ರತಿದಿನವೂ ಮದುವೆ ನಿಶ್ಚಯವಾಗಿರುವ ಹಲವು ಜೋಡಿಗಳು ‘ಪ್ರೀ ವೆಡ್ಡಿಂಗ್’ ಶೂಟ್ ಮಾಡಿಸಿಕೊಳ್ಳಲು ಬರುತ್ತಿದ್ದಾರೆ. ಪ್ರತಿ ಜೋಡಿಯಿಂದ ₹5,000 ಶುಲ್ಕ ಪಡೆಯಲಾಗುತ್ತಿದ್ದು, ಇದು ದೇವಸ್ಥಾನದ ಆದಾಯ ಹೆಚ್ಚಳಕ್ಕೆ ನೆರವಾಗುತ್ತಿದೆ.
ಸುಂದರ ಪರಿಸರ, ಪುರಾತನ ದೇವಾಲಯಗಳ ಹಿನ್ನೆಲೆ ಮತ್ತು ವಿಶಿಷ್ಟ ವಾಸ್ತುಶಿಲ್ಪದಿಂದಾಗಿ ಮದುವೆ ಪೂರ್ವ ಚಿತ್ರೀಕರಣಕ್ಕೆ ಮೇಲುಕೋಟೆ ಯುವ ಜೋಡಿಗಳ ನೆಚ್ಚಿನ ತಾಣವಾಗುತ್ತಿದೆ.
₹9.23 ಲಕ್ಷ ಆದಾಯ: ದೇವಸ್ಥಾನದ ಹುಂಡಿ ಆದಾಯದ ಜತೆಗೆ ಚಿತ್ರೀಕರಣಕ್ಕೆ ಅನುಮತಿ ನೀಡುವುದರಿಂದಲೂ ದೇಗುಲಕ್ಕೆ ಉತ್ತಮ ಆದಾಯ ಹರಿದುಬರುತ್ತಿದೆ. ಕಳೆದ ಮೂರು ಹಣಕಾಸು ವರ್ಷಗಳಲ್ಲಿ ಚಿತ್ರೀಕರಣ ಶುಲ್ಕದ ರೂಪದಲ್ಲಿ ಒಟ್ಟು ₹9.23 ಲಕ್ಷ ಆದಾಯ ಸಂಗ್ರಹವಾಗಿದೆ. 2022-23ರಲ್ಲಿ ₹4.83 ಲಕ್ಷ, 2023-24ರಲ್ಲಿ ₹2.37 ಲಕ್ಷ, 2024-25ರಲ್ಲಿ ₹2.03 ಲಕ್ಷ ಆದಾಯ ಸಂಗ್ರಹವಾಗಿದೆ.
ಮೇಲುಕೋಟೆಯ ಪುರಾತನ ಸ್ಮಾರಕಗಳು ಹಾಗೂ ದೇವಾಲಯಗಳು ಸಿನಿಮಾ ಮತ್ತು ಪ್ರವಾಸೋದ್ಯಮಕ್ಕೆ ಆಕರ್ಷಣೆಯ ಕೇಂದ್ರಗಳಾಗುತ್ತಿರುವ ಬೆನ್ನಲ್ಲೇ, ಚಿತ್ರೀಕರಣದಿಂದ ಬರುವ ಆದಾಯವನ್ನು ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿ ಮತ್ತು ಪಾರಂಪರಿಕ ತಾಣಗಳ ಸಂರಕ್ಷಣೆಗೆ ಬಳಸುವ ಅಗತ್ಯವೂ ಇದೆ. ಧಾರ್ಮಿಕ ಕ್ಷೇತ್ರದ ಪಾವಿತ್ರ್ಯ ಕಾಪಾಡಿಕೊಂಡೇ ಚಿತ್ರೀಕರಣಕ್ಕೆ ಅವಕಾಶ ಕಲ್ಪಿಸುವ ಮೂಲಕ ಆದಾಯ ಹಾಗೂ ಪ್ರವಾಸೋದ್ಯಮ ಎರಡನ್ನೂ ಸಮತೋಲನಗೊಳಿಸುವ ಸವಾಲು ದೇವಸ್ಥಾನ ಆಡಳಿತದ ಮುಂದಿದೆ ಎನ್ನುತ್ತಾರೆ ಭಕ್ತರು.
‘ಪ್ರಾಧಿಕಾರ ರಚನೆಗೆ ಆದಾಯ ಹೆಚ್ಚಳ ಪ್ರಯತ್ನ’
ದೇವಾಲಯ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಅಗತ್ಯವಿರುವ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಕ್ಷೇತ್ರದ ಸಮಗ್ರ ಅಭಿವೃದ್ಧಿ ಹಾಗೂ ಆದಾಯ ವೃದ್ಧಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮತ್ತು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಶೀಲಾ ಪ್ರಯತ್ನ ನಡೆಸುತ್ತಿದ್ದಾರೆ. ದೇವಾಲಯದ ಅಭಿವೃದ್ಧಿ, ಪ್ರವಾಸೋದ್ಯಮ ಉತ್ತೇಜನ ಹಾಗೂ ಆದಾಯ ವೃದ್ಧಿಗೆ ಒತ್ತು ನೀಡಲಾಗುತ್ತಿದ್ದು, ಪ್ರಾಧಿಕಾರ ರಚನೆಗೆ ಇದು ಪೂರಕವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ದೇವಾಲಯ ಆಸ್ತಿ ರಕ್ಷಣೆಗೆ ಕ್ರಮ
‘ದೇವಾಲಯಕ್ಕೆ ಸೇರಿದ ಕೋಟ್ಯಂತರ ಮೌಲ್ಯದ ಜಮೀನು ಅಕ್ರಮ ಪರಭಾರೆ ಆಗಿರುವ ಪ್ರಕರಣಗಳ ಬಗ್ಗೆಯೂ ಗಮನ ಹರಿಸಲಾಗಿದೆ. ಶ್ರೀರಂಗಪಟ್ಟಣ ಪಟ್ಟಣದ ಹೆದ್ದಾರಿ ಪಕ್ಕದಲ್ಲಿರುವ ಬೆಲೆ ಬಾಳುವ ಜಮೀನು ಕಳೆದ ಎರಡು ದಶಕಗಳಿಂದ ಖಾಸಗಿ ವ್ಯಕ್ತಿಗಳ ಪಾಲಾಗಿತ್ತು ಎನ್ನಲಾಗಿದ್ದು, ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೂಚನೆಯ ಮೇರೆಗೆ ಸರ್ವೆ ನಡೆಸಿ ಜಮೀನನ್ನು ದೇವಸ್ಥಾನದ ಹೆಸರಿಗೆ ಮರುಖಾತೆ ಮಾಡಲಾಗಿದೆ’ ಎಂದು ಉಪವಿಭಾಗಾಧಿಕಾರಿ ಶ್ರೀನಿವಾಸ್ ತಿಳಿಸಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260824-40-2122260529