ಎಚ್.ಡಿ.ಕೋಟೆ ಜಲಾಶಯದಲ್ಲಿ ನಿರ್ಬಂಧವಿದ್ದರೂ ಪ್ರವಾಸಿಗರ ಹುಚ್ಚಾಟ; ಆತಂಕ

ಎಚ್.ಡಿ.ಕೋಟೆ ಜಲಾಶಯದಲ್ಲಿ ನಿರ್ಬಂಧವಿದ್ದರೂ ಪ್ರವಾಸಿಗರ ಹುಚ್ಚಾಟ; ಆತಂಕ

ಎಚ್.ಡಿ.ಕೋಟೆ ಜಲಾಶಯದಲ್ಲಿ ನಿರ್ಬಂಧವಿದ್ದರೂ ಪ್ರವಾಸಿಗರ ಹುಚ್ಚಾಟ; ಆತಂಕ

ಎಚ್.ಡಿ.ಕೋಟೆ: ತಾಲ್ಲೂಕಿನ ಪ್ರಮುಖ ತಾರಕ ಜಲಾಶಯದಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧವಿದ್ದರೂ ಪ್ರವಾಸಿಗರು ಹಾಗೂ ಸಾರ್ವಜನಿಕರು ಜಲಾಶಯದ ಮೇಲ್ಭಾಗ, ಕೆಳಭಾಗ ಸೇರಿದಂತೆ ಅಪಾಯಕಾರಿ ಪ್ರದೇಶಗಳಲ್ಲಿ ನಿರ್ಭೀತಿಯಿಂದ ಸಂಚರಿಸುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ

ಜಲಾಶಯದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಜನರ ಸುರಕ್ಷತೆಯ ದೃಷ್ಟಿಯಿಂದ ಪ್ರವೇಶ ನಿರ್ಬಂಧಿಸಲಾಗಿದೆ. ಆದರೆ, ಈ ನಿರ್ಬಂಧ ಗಮನಿಸದೆ ಕೆಲವರು ಜಲಾಶಯದ ವಿವಿಧ ಭಾಗಗಳಿಗೆ ತೆರಳಿ ಕಾಲ ಕಳೆಯುತ್ತಿದ್ದಾರೆ. ಜಲಾಶಯದ ಸಿಬ್ಬಂದಿ ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ ಎಂಬ ಆರೋಪ ಸ್ಥಳೀಯರಿಂದ ಕೇಳಿಬಂದಿದೆ.

ಭದ್ರತೆ ಎಲ್ಲಿದೆ?: ತಾರಕಾ ಜಲಾಶಯದಂತಹ ಪ್ರಮುಖ ಜಲ ಸಂಪನ್ಮೂಲ ಪ್ರದೇಶದಲ್ಲಿ ನೀರಾವರಿ ಇಲಾಖೆ ಹಾಗೂ ಪೊಲೀಸ್ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ. ಜಲಾಶಯಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದರೂ, ನಿರ್ಬಂಧಿತ ಪ್ರದೇಶಗಳಲ್ಲಿ ಜನರು ಮುಕ್ತವಾಗಿ ಸಂಚರಿಸುತ್ತಿರುವುದು ಭದ್ರತಾ ವ್ಯವಸ್ಥೆಯ ಬಗ್ಗೆ ಪ್ರಶ್ನೆ ಮೂಡಿಸಿದೆ. ಇದು ಹೇಗೆ ಸಾಧ್ಯ ಎಂಬುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಕುಡುಕರ ಅಡ್ಡೆ?: ಇನ್ನು ಜಲಾಶಯದ ಕೆಳಭಾಗದಲ್ಲಿರುವ ತಾಳೆ ಮರಗಳ ತೋಟದಲ್ಲೂ ಕೆಲವರು ಮದ್ಯ ಸೇವನೆ ಮಾಡುತ್ತಿದ್ದಾರೆ ಎಂಬ ಆರೋಪ ಇಲ್ಲಿದೆ. ತಾರಕ ಗ್ರಾಮದಲ್ಲಿ ದೊರೆಯುವ ಮೀನು ಖರೀದಿಸಿ ಪಾರ್ಸಲ್‌ ಮಾಡಿಕೊಂಡು, ಮದ್ಯದಂಗಡಿಗಳಿಂದ ಮದ್ಯ ಖರೀದಿಸಿಕೊಂಡು ತೋಟಕ್ಕೆ ತೆರಳಿ ಸೇವಿಸುತ್ತಾರೆ ಎನ್ನಲಾಗಿದೆ. ಮದ್ಯ ಸೇವಿಸಿದ ಬಳಿಕ ಖಾಲಿ ಬಾಟಲಿಗಳು, ಆಹಾರದ ಪಾರ್ಸಲ್‌ ಕವರ್‌ಗಳು ಹಾಗೂ ಪ್ಲಾಸ್ಟಿಕ್‌ ತ್ಯಾಜ್ಯದಿಂದ ಪರಿಸರಕ್ಕೂ ಹಾನಿಯಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

ಯಾರು ಹೊಣೆ ?: ನೀರು ಸಂಗ್ರಹವಾಗಿರುವ ಸಂದರ್ಭದಲ್ಲಿ ಸಾರ್ವಜನಿಕರ ಈ ರೀತಿಯ ಅಕ್ರಮ ಪ್ರವೇಶ ಸಂದರ್ಭದಲ್ಲಿ ಅನಾಹುತ ಸಂಭವಿಸುವ ಸಾಧ್ಯತೆಯಿದೆ. ನಿರ್ಬಂಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.ಜಲಾಶಯದ ಪ್ರವೇಶ ದ್ವಾರಗಳಲ್ಲಿ ಕಟ್ಟುನಿಟ್ಟಿನ ಕಾವಲು, ಅಪಾಯಕಾರಿ ಸ್ಥಳಗಳಲ್ಲಿ ಎಚ್ಚರಿಕೆ ಫಲಕಗಳ ಅಳವಡಿಕೆ, ಅಗತ್ಯವಿದ್ದಲ್ಲಿ ಪೊಲೀಸ್ ಭದ್ರತೆ ಹಾಗೂ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಜತೆಗೆ ಜಲಾಶಯದ ಸುತ್ತ ಸ್ವಚ್ಛತೆ ಕಾಪಾಡಲು ಹಾಗೂ ಮದ್ಯ ಸೇವನೆಗೆ ಕಡಿವಾಣ ಹಾಕಲು ಅಧಿಕಾರಿಗಳು ಮುಂದಾಗಬೇಕು ಎಂದು ಜನರು ಒತ್ತಾಯಿಸಿದ್ದಾರೆ. ನಿರ್ಬಂಧದ ನಡುವೆಯೂ ಸಾರ್ವಜನಿಕರು ಜಲಾಶಯದೊಳಗೆ ಪ್ರವೇಶಿಸುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಬೇಕಾಗಿದೆ.

‘ಜಲಾಶಯದ ಗೇಟ್‌ನಲ್ಲಿ ಸೆಕ್ಯೂರಿಟಿ ಸಿಬ್ಬಂದಿ ಇದ್ದಾರೆ. ಸಾರ್ವಜನಿಕರನ್ನು ಜಲಾಶಯದ ಒಳಗೆ ಬಿಡಬಾರದು ಎಂದು ಸೂಚಿಸಲಾಗಿದೆ. ನಿರ್ಬಂಧವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಿಬ್ಬಂದಿಗೆ ತಿಳಿಸಲಾಗಿದೆ’ ಎಂದು ತಾರಕ ಜಲಾಶಯದ ಕಾರ್ಯಪಾಲಕ ಎಂಜಿನಿಯರ್ ನಟಶೇಖರ್ ತಿಳಿಸಿದರು.

ರೀಲ್ಸ್ ಹುಚ್ಚು: ಅಪಾಯ ಹೆಚ್ಚು

ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡುವ ಹುಚ್ಚು ತಾರಕ ಜಲಾಶಯದಲ್ಲೂ ಅಪಾಯಕ್ಕೆ ಆಹ್ವಾನ ನೀಡುವ ರೀತಿಯಲ್ಲಿ ಮುಂದುವರಿದಿದೆ. ನೀರಿನ ಗೇಟ್‌ಗಳ ಸಮೀಪ, ಅಣೆಕಟ್ಟೆಯ ಕಡಿದಾದ ಪ್ರದೇಶಗಳು, ಜಲಾಶಯದ ಅಂಚಿನಲ್ಲಿ ಕಲ್ಲಿನಿಂದ ನಿರ್ಮಿಸಿರುವ ಏರಿ ಸೇರಿದಂತೆ ಅಪಾಯಕಾರಿ ಸ್ಥಳಗಳಿಗೆ ತೆರಳಿ ಯುವಕರು ಹಾಗೂ ಪ್ರವಾಸಿಗರು ಫೋಟೊ, ವಿಡಿಯೊ ಚಿತ್ರೀಕರಿಸುತ್ತಿದ್ದಾರೆ.

ಜಲಾಶಯದಲ್ಲಿ ನೀರು ಶೇಖರಣೆಯಾಗಿರುವ ಸಂದರ್ಭದಲ್ಲಿ ಇಂತಹ ಸಾಹಸಗಳಿಗೆ ಮುಂದಾಗುವುದು ಜೀವಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆ ಇದೆ. ಜಾರಿ ನೀರಿಗೆ ಬೀಳುವ ಅಥವಾ ಇತರ ರೀತಿಯ ಅವಘಡ ಸಂಭವಿಸುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260824-38-2116855114

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ