ಅವೈಜ್ಞಾನಿಕ ಆಸ್ತಿ ತೆರಿಗೆಯ ಆರೋಪ: ‘ಮೌಲ್ಯ’ ಮರುಪರಿಶೀಲನೆಗೆ ಉಪ ಸಮಿತಿ

ಅವೈಜ್ಞಾನಿಕ ಆಸ್ತಿ ತೆರಿಗೆಯ ಆರೋಪ: ‘ಮೌಲ್ಯ’ ಮರುಪರಿಶೀಲನೆಗೆ ಉಪ ಸಮಿತಿ

ಅವೈಜ್ಞಾನಿಕ ಆಸ್ತಿ ತೆರಿಗೆಯ ಆರೋಪ: ‘ಮೌಲ್ಯ’ ಮರುಪರಿಶೀಲನೆಗೆ ಉಪ ಸಮಿತಿ

ಮಂಗಳೂರು: ಆಸ್ತಿ ತೆರಿಗೆಯನ್ನು ಮಾರ್ಗಸೂಚಿ ದರದ ಆಧಾರದಲ್ಲಿ ನಿರ್ಧರಿಸಲು ಆರಂಭಿಸಿದ ಬಳಿಕ ‘ಅವೈಜ್ಞಾನಿಕ ಆಸ್ತಿ ತೆರಿಗೆ’ ನಿಗದಿ ಮಾಡಲಾಗಿದೆ ಎಂಬ ಆರೋಪವನ್ನು ಮಹಾನಗರ ಪಾಲಿಕೆ ಎದುರಿಸುತ್ತಿದೆ. ಈ ಆರೋಪ ಮುಕ್ತವಾಗಲು ಪಾಲಿಕೆ ಆಯುಕ್ತ ರಾಹುಲ್‌ ರತ್ನಂ ಪಾಂಡೆ ಕ್ರಮ ವಹಿಸಿದ್ದಾರೆ. ಪಾಲಿಕೆ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯ (ಮಾರ್ಗಸೂಚಿ ಮೌಲ್ಯ) ಮರುಪರಿಶೀಲನೆ ಮತ್ತು ಪರಿಷ್ಕರಣೆಗಾಗಿ ಅವರು ಉಪಸಮಿತಿ ರಚಿಸಿದ್ದಾರೆ.

ಚಾಲ್ತಿಯಲ್ಲಿರುವ ಮಾರುಕಟ್ಟೆ ಮೌಲ್ಯಗಳು ಮಾರುಕಟ್ಟೆಯ ವಸ್ತುಸ್ಥಿತಿಗೆ ಅನುಗುಣವಾಗಿರುವುದನ್ನು ಖಚಿತಪಡಿಸಿಕೊಳ್ಳುವ ಹಾಗೂ ಆಸ್ತಿಗಳ ಮೌಲ್ಯನಿರ್ಣಯದಲ್ಲಿ ಏಕರೂಪತೆ, ಪಾರದರ್ಶಕತೆ ಮತ್ತು ತಾರ್ಕಿಕತೆ ಕಾಪಾಡುವ ಉದ್ದೇಶದಿಂದ ಹೊಸ ಉಪಸಮಿತಿಯನ್ನು ರಚಿಸಲಾಗಿದೆ. ಇದರಲ್ಲಿ ಸರ್ಕಾರಿ ಇಲಾಖೆಗಳು ಹಾಗೂ ಸಂಬಂಧಿತ ಪಾಲುದಾರ ಸಂಸ್ಥೆಗಳ ಪ್ರತಿನಿಧಿಗಳು ಇದ್ದಾರೆ ಎಂದು ರಾಹುಲ್‌ ರತ್ನಂ ಪಾಂಡೆ ‘ಪ್ರಜಾವಾಣಿ‘ಗೆ ತಿಳಿಸಿದರು.

ಪಾಲಿಕೆಯು 2022-23ನೇ ಸಾಲಿನಲ್ಲಿ ಆಸ್ತಿ ತೆರಿಗೆಯನ್ನು ಆಯಾ ಪ್ರದೇಶದ ಪ್ರಚಲಿತ ಮಾರ್ಗಸೂಚಿ ದರಕ್ಕೆ ಅನುಗುಣವಾಗಿ ನಿರ್ಧರಿಸಲು ಆರಂಭಿಸಿತ್ತು. ನಗರದ ಭೌಗೋಳಿಕತೆಗೆ ಅನುಗುಣವಾಗಿ ಮಾರ್ಗಸೂಚಿ ಮೌಲ್ಯ ವೈಜ್ಞಾನಿಕವಾಗಿ ಪರಿಷ್ಕರಣೆಗೊಂಡಿರಲಿಲ್ಲ. ಆದ ಕಾರಣ ಕೆಲವೆಡೆ ಆಸ್ತಿಗಳ ತೆರಿಗೆ ಭಾರಿ ಪ್ರಮಾಣದಲ್ಲಿ (ಶೇ 70ವರೆಗೂ) ಹೆಚ್ಚಳವಾಗಿತ್ತು.

ಆಯುಕ್ತರು ರಚಿಸಿರುವ ಉಪ ಸಮಿತಿಯಲ್ಲಿ ಆಸ್ತಿ ಮೌಲ್ಯಮಾಪನ, ಭೂ ಆಡಳಿತ, ನಗರ ಯೋಜನೆ, ನೋಂದಣಿ, ಕಾನೂನು ವಿಷಯಗಳು ಅಥವಾ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಉತ್ತಮ ಜ್ಞಾನ ಮತ್ತು ಅನುಭವ ಹೊಂದಿರುವ ಪ್ರತಿನಿಧಿಗಳು ಸ್ಥಾನಪಡೆದಿದ್ದಾರೆ. ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್‌ ಸಂಸ್ಥೆಯಿಂದ ಇಬ್ಬರು, ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಿಂದ ಇಬ್ಬರು, ಮಂಗಳೂರು ವಕೀಲರ ಸಂಘದಿಂದ ಇಬ್ಬರು ವಕೀಲರು, ಕ್ರೆಡೈನ ಮಂಗಳೂರು ಘಟಕದಿಂದ ನಾಲ್ವರು, ದಿ ಇಂಡಿಯನ್ಸ್ ಇನ್‌ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಟ್ಸ್‌ನ ಮಂಗಳೂರು– ಮಣಿಪಾಲ ಕೇಂದ್ರದಿಂದ ನಾಲ್ವರು ಪ್ರತಿನಿಧಿಗಳು ಹಾಗೂ ಸರ್ಕಾರಿ ನೋಂದಾಯಿತ ಮೌಲ್ಯಮಾಪಕರ ಸಂಘಟನೆಯ ಒಬ್ಬ ಪ್ರತಿನಿಧಿ ಈ ಉಪಸಮಿತಿಯಲ್ಲಿದ್ದಾರೆ.

‘ಮಾರ್ಗಸೂಚಿ ದರಕ್ಕೆ ಅನುಗುಣವಾಗಿ ಆಸ್ತಿ ತೆರಿಗೆ ನಿಗದಿ ಪಡಿಸುವಲ್ಲಿ ಲೋಪಗಳಿರುವ ಬಗ್ಗೆ ದೂರುಗಳು ಬಂದಿದ್ದವು. ಇದನ್ನು ಸರಿಪರಿಸಲು ಈ ಹಿಂದೆ ಅಕ್ಷಯ್ ಶ್ರೀಧರ್ ಆಯುಕ್ತರಾಗಿದ್ದಾಗ ಸಮಿತಿ ರಚಿಸಿ ವರದಿ ಸಿದ್ಧಪಡಿಸಲಾಗಿತ್ತು. ಅದೀಗ ನಾಲ್ಕು ವರ್ಷಗಳಷ್ಟು ಹಳೆಯದು. ಹಾಗಾಗಿ ಮತ್ತೊಮ್ಮೆ ಸಂಬಂಧಪಟ್ಟ ಪಾಲುದಾರ ಸಂಸ್ಥೆಗಳ ಪ್ರತಿನಿಧಿಗಳ ಅಭಿಪ್ರಾಯ ಪಡೆಯಬೇಕಿದೆ. ಮಾರ್ಗಸೂಚಿ ಮೌಲ್ಯವನ್ನು ವೈಜ್ಞಾನಿಕವಾಗಿ ನಿರ್ಧರಿಸುವ ಬಗ್ಗೆ ಉಪಸಮಿತಿ 15 ದಿನಗಳಲ್ಲಿ ವರದಿ ಸಲ್ಲಿಸಲಿದೆ. ಮಾರ್ಗಸೂಚಿ ಮೌಲ್ಯ ನಿಗದಿಯಲ್ಲಿರುವ ಲೋಪಗಳನ್ನು ಸರಿದೂಗಿಸಲು ಉಪಸಮಿತಿಯ ವರದಿ ಆಧಾರದಲ್ಲಿ ಸರ್ಕಾರಕ್ಕೆ ಪ್ರಸ್ತಾವವನ್ನು ಸಲ್ಲಿಸಲಿದ್ದೇನೆ’ ಎಂದು ಪಾಲಿಕೆ ಆಯುಕ್ತರು ತಿಳಿಸಿದರು.

‘ಉಪ ಸಮಿತಿ ವರದಿ ಆಧರಿಸಿ ಸರ್ಕಾರಕ್ಕೆ ಪ್ರಸ್ತಾವ’

‘ಮಾರ್ಗಸೂಚಿ ಮೌಲ್ಯವನ್ನು ವೈಜ್ಞಾನಿಕವಾಗಿ ನಿರ್ಧರಿಸುವ ಬಗ್ಗೆ 15 ದಿನಗಳಲ್ಲಿ ವರದಿ ಸಲ್ಲಿಸುವಂತೆ ಉಪಸಮಿತಿಗೆ ನಿರ್ದೇಶನ ನೀಡಿದ್ದೇವೆ. ಮಾರ್ಗಸೂಚಿ ಮೌಲ್ಯ ನಿಗದಿಯಲ್ಲಿರುವ ಲೋಪಗಳನ್ನು ಸರಿದೂಗಿಸಲು ಉಪಸಮಿತಿಯ ವರದಿ ಆಧಾರದಲ್ಲಿ ಸರ್ಕಾರಕ್ಕೆ ಪ್ರಸ್ತಾವವನ್ನು ಸಲ್ಲಿಸಲಿದ್ದೇವೆ’ ಎಂದು ಪಾಲಿಕೆ ಆಯುಕ್ತ ರಾಹುಲ್‌ ರತ್ನಂ ಪಾಂಡೆ ‘ಪ್ರಜಾವಾಣಿ’ಗೆ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260827-29-1252312145

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ