
ರಾಯಚೂರು | ಪ್ರಮುಖ ತರಕಾರಿಗಳ ಬೆಲೆ ಸ್ಥಿರ
ರಾಯಚೂರು: ಜಿಲ್ಲೆ ಹೊರತು ಪಡಿಸಿ ಬೇರೆ ಬೇರೆ ಜಿಲ್ಲೆಗಳಲ್ಲಿ ಮಳೆಯಾಗುತ್ತಿರುವ ಕಾರಣ ಸಮೃದ್ಧವಾಗಿ ಬೆಳೆದ ತರಕಾರಿ ರಾಯಚೂರಿಗೆ ಬರುತ್ತಿದೆ. ಕೈಗೆಟುಕುವ ಬೆಲೆಯಲ್ಲೇ ತರಕಾರಿ ದೊರಕುತ್ತಿದ್ದು, ಪ್ರಮುಖ ತರಕಾರಿಗಳ ಬೆಲೆಯೂ ಸ್ಥಿರವಾಗಿದೆ.
ಎಲ್ಲ ಬಗೆಯ ಸೊಪ್ಪು ಇಲ್ಲಿಯ ಮಾರುಕಟ್ಟೆಗೆ ಬಂದಿದೆ. ಮೆಂತೆ, ಸಬ್ಬಸಗಿ, ಪಾಲಕ್ ಸೊಪ್ಪು ಹೆಚ್ಚು ಮಾರಾಟವಾಗುತ್ತಿದೆ. ಔಷಧ ಗುಣ ಹೊಂದಿರುವ ಹಸಿ ಶುಂಠಿ ಹಾಗೂ ಬೆಳ್ಳುಳ್ಳಿ ಮಾತ್ರ ಪ್ರತಿ ಕೆಜಿಗೆ ₹ 160ಗೆ ಮಾರಾಟವಾಗುತ್ತಿದೆ. ಅಡುಗೆ ಸ್ವಾದ ಹೆಚ್ಚಿಸುವ ಕೊತ್ತಂಬರಿ ₹ 10ಗೆ ಎರಡು ಸಿವುಡು ದೊರಕುತ್ತಿದೆ.
ಮಹಾರಾಷ್ಟ್ರದ ನಾಸಿಕ್‌ನಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ ಬಂದಿದೆ. ನೆರೆಯ ಆಂಧ್ರಪ್ರದೇಶ, ತೆಲಂಗಾಣ ಗಡಿ ಗ್ರಾಮಗಳಿಂದ ಟೊಮೆಟೊ, ಎಲೆಕೋಸು, ಹೂಕೋಸು, ಬದನೆಕಾಯಿ ಇಲ್ಲಿಯ ತರಕಾರಿ ಸಗಟು ಮಾರುಕಟ್ಟೆಗೆ ಬಂದಿದೆ.
‘ನೀರಾವರಿ ಸೌಲಭ್ಯವಿರುವ ಪ್ರದೇಶಗಳಿಂದ ಮಾತ್ರ ತರಕಾರಿ ಬರುತ್ತಿದೆ. ಮಹಾರಾಷ್ಟ್ರ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಮಳೆಯಾಗುತ್ತಿರುವುದರಿಂದ ಅಧಿಕ ಪ್ರಮಾಣದಲ್ಲಿ ತರಕಾರಿ ಇಲ್ಲಿಯ ಮಾರುಕಟ್ಟೆಗೆ ಬಂದಿದೆ’ ಎಂದು ತರಕಾರಿ ವ್ಯಾಪಾರಿಗಳಾದ ಸುನೀಲಕುಮಾರ ಅವರು ಹೇಳುತ್ತಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260811-32-1690809401