ಗ್ರಾಮೀಣ ಸರ್ಕಾರಿ ಶಾಲೆಗಳ ಸುಧಾರಣೆಗೆ CJPಯಿಂದ ರಾಷ್ಟ್ರವ್ಯಾಪಿ ಅಭಿಯಾನ: ದೀಪ್ಕೆ

ಗ್ರಾಮೀಣ ಸರ್ಕಾರಿ ಶಾಲೆಗಳ ಸುಧಾರಣೆಗೆ CJPಯಿಂದ ರಾಷ್ಟ್ರವ್ಯಾಪಿ ಅಭಿಯಾನ: ದೀಪ್ಕೆ

ಗ್ರಾಮೀಣ ಸರ್ಕಾರಿ ಶಾಲೆಗಳ ಸುಧಾರಣೆಗೆ CJPಯಿಂದ ರಾಷ್ಟ್ರವ್ಯಾಪಿ ಅಭಿಯಾನ: ದೀಪ್ಕೆ

ನವದೆಹಲಿ: ಗ್ರಾಮಗಳಲ್ಲಿನ ಸರ್ಕಾರಿ ಶಾಲೆಗಳನ್ನು ಸುಧಾರಿಸಲು ರಾಷ್ಟ್ರವ್ಯಾಪಿ ಅಭಿಯಾನ ನಡೆಸಲಾಗುವುದು ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ ಘೋಷಿಸಿದ್ದಾರೆ.

ಈ ನಿಟ್ಟಿನಲ್ಲಿ ಪೋಷಕರು ಮತ್ತು ಗ್ರಾಮದ ಮುಖಂಡರು ಒಟ್ಟಾಗಿ ಕೆಲಸ ಮಾಡುವಂತೆ ಸಿಜೆಪಿ ಕರೆ ನೀಡಿದೆ. ಪೋಷಕರು ಶಾಲೆಗಳಲ್ಲಿನ ಮೂಲ ಸೌಕರ್ಯಗಳನ್ನು ಪರಿಶೀಲಿಸುವಂತೆ ಮತ್ತು ಮುಖಂಡರು ಶಾಲಾ ಅಭಿವೃದ್ಧಿಯ ಜವಾಬ್ದಾರಿ ವಹಿಸಿಕೊಳ್ಳುವಂತೆ ಮನವಿ ಮಾಡಿದೆ.

ತಮ್ಮ ಸ್ವಗ್ರಾಮ ಮಹಾರಾಷ್ಟ್ರದ ಹಿಂಗೋಲಿಯಲ್ಲಿ ಆಗಸ್ಟ್ 15ರಂದು (80ನೇ ಸ್ವಾತಂತ್ರ್ಯ ದಿನಾಚರಣೆ) ದೀಪ್ಕೆ ಈ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.

ಈ ಬಗ್ಗೆ ವಿಡಿಯೊ ಸಂದೇಶ ಬಿಡುಗಡೆ ಮಾಡಿದ ಅವರು, ಇದೇ ಆಗಸ್ಟ್ 15ರಂದು ನಾವು 80ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದ್ದೇವೆ. ಈ 80 ವರ್ಷಗಳಲ್ಲಿ ಹಳ್ಳಿಗಳಲ್ಲಿರುವ ಸರ್ಕಾರಿ ಶಾಲೆಗಳನ್ನು ನಿರ್ಲಕ್ಷಿಸುತ್ತಾ ಬಂದಿದ್ದೇವೆ. ಹೊಸ ಸಂಸತ್ ಭವನ, ಹೊಸ ಪ್ರಧಾನಿ ನಿವಾಸ ಕಟ್ಟಿದೆವು. ಆದರೆ ನಮ್ಮ ಹಳ್ಳಿಗಳಲ್ಲಿ ಹೊಸ ಶಾಲೆಗಳನ್ನು ಕಟ್ಟಲು ನಮಗೆ ಏಕೆ ಸಾಧ್ಯವಾಗಲಿಲ್ಲ?, ರೈತರು ಮತ್ತು ಕೂಲಿ ಕಾರ್ಮಿಕರ ಮಕ್ಕಳನ್ನು ನಾವು ಈ ದೇಶದ ಭವಿಷ್ಯ ಎಂದು ಪರಿಗಣಿಸುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಹಳ್ಳಿಯ ಮಕ್ಕಳು ಇಂದಿಗೂ ಶಾಲೆಗೆ ಹೋಗಲು ಬಹುದೂರ ನಡೆದುಕೊಂಡೇ ಹೋಗಬೇಕು. ಶಾಲೆಗೆ ಹೋದ ಮೇಲಾದರೂ ಅಲ್ಲಿ ಅವರಿಗೆ ನೀರು ಅಥವಾ ಶೌಚಾಲಯದ ಸೌಲಭ್ಯ ಸಿಗುತ್ತಿದೆಯೇ ಎಂದರೆ ಅದೂ ಇಲ್ಲ. ವಿಶೇಷವಾಗಿ ಹೆಣ್ಣುಮಕ್ಕಳು ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ.

ಹೀಗಾಗಿ ಆಗಸ್ಟ್ 15ರಂದು ನಾವು ಹೊಸ ಅಭಿಯಾನವನ್ನು ಆರಂಭಿಸಲಿದ್ದೇವೆ. ಆ ಅಭಿಯಾನ ಸರ್ಕಾರಿ ಶಾಲೆಗಳನ್ನು ಸುಧಾರಿಸುವುದರ ಮೂಲಕವೇ ಆಗಬೇಕು ಎಂಬುದು ನನ್ನ ಅನಿಸಿಕೆ ಎಂದೂ ದೀಪ್ಕೆ ಹೇಳಿದ್ದಾರೆ.

ತಮ್ಮ ಹಳ್ಳಿಗಳಲ್ಲಿರುವ ಸರ್ಕಾರಿ ಶಾಲೆಗಳ ಮೂಲಸೌಕರ್ಯ ಸರಿಪಡಿಸುವ ಗ್ರಾಮದ ಮುಖಂಡರಿಗೆ ಸಿಜೆಪಿ ಗೌರವ ಸಲ್ಲಿಸಲಿದೆ. ಶಾಲೆಗಳ ಸುಧಾರಣೆಗೆ ಮುನ್ನ ಹಾಗೂ ನಂತರದ ಚಿತ್ರಗಳನ್ನು ತಮ್ಮ ಜಾಲತಾಣಗಳಲ್ಲಿ ಹಂಚಿಕೊಂಡು ಇತರ ಗ್ರಾಮಗಳ ಮುಖಂಡರಿಗೆ ಸ್ಪೂರ್ತಿ ತುಂಬುವುದು ಇದರ ಉದ್ದೇಶ ಎಂದಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಪೋಷಕರು ನೇರವಾಗಿ ಶಾಲೆಗೆ ಭೇಟಿ ನೀಡಿ ವಿದ್ಯುತ್, ಶುದ್ಧ ಕುಡಿಯುವ ನೀರು, ಶೌಚಾಲಯ ಹಾಗೂ ಮಧ್ಯಾಹ್ನದ ಬಿಸಿಯೂಟದ ವ್ಯವಸ್ಥೆಗಳನ್ನು ಪರಿಶೀಲಿಸಬೇಕು. ಸೌಲಭ್ಯಗಳಿಲ್ಲದಿದ್ದರೆ ವಿಡಿಯೊ ಮಾಡಿ ಹಂಚಿಕೊಳ್ಳುವಂತೆ ದೀಪ್ಕೆ ಮನವಿ ಮಾಡಿದ್ದಾರೆ.

ಸಾರ್ವಜನಿಕರು ಶಾಲೆಯ ಕೊರತೆಗಳನ್ನು ದಾಖಲಿಸಲು 'ಡಿಜಿಟಲ್ ಆಡಿಟ್ ಫಾರ್ಮ್' ಒಂದನ್ನು ಬಿಡುಗಡೆ ಮಾಡಲಾಗುತ್ತಿದ್ದು, ಪೂರ್ಣಗೊಳಿಸಿದ ಫಾರ್ಮ್ ಹಾಗೂ ವಿಡಿಯೊ ಸಾಕ್ಷ್ಯಗಳನ್ನು contact@cockroachjantaparty.org ಗೆ ಇಮೇಲ್ ಮಾಡುವುಂತೆಯೂ ಕೋರಲಾಗಿದೆ.

ಪರೀಕ್ಷಾ ಅಕ್ರಮಗಳ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ 36 ದಿನಗಳ ಸುದೀರ್ಘ ಧರಣಿ ನಡೆಸಿದ ಸಿಜೆಪಿ ರಾಷ್ಟ್ರದ ಗಮನ ಸೆಳೆದಿತ್ತು. ಹೋರಾಟದ ಫಲವಾಗಿ ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡಿದ್ದರು.

‘ಸಾರ್ವಜನಿಕರೇ, ಏನಂತೀರಿ?’ ಅಭಿಯಾನ

'ದೇಶದಾದ್ಯಂತ ಜನರ ಜೊತೆ ಸಂವಾದ ನಡೆಸಿ, ಅವರ ಸಮಸ್ಯೆಯನ್ನು ತಿಳಿದುಕೊಳ್ಳಲು ಮುಂದಿನ ತಿಂಗಳಿನಿಂದ 'ಕಾಕ್ರೋಚ್‌ ಜನತಾ ಪಕ್ಷ'ವು 'ಕ್ಯಾ ಬೋಲ್ತಿ ಪಬ್ಲಿಕ್' (ಸಾರ್ವಜನಿಕರೇ, ಏನಂತೀರಿ?) ಅಭಿಯಾನ ನಡೆಸಲಿದೆ' ಎಂದು ಅಭಿಜಿತ್‌ ದೀಪ್ಕೆ ಇತ್ತೀಚೆಗೆ ಹೇಳಿದ್ದರು.

ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ್ದ ಅವರು, 'ಅಭಿಯಾನದ ವೇಳೆ ದೇಶದ ಈಗಿನ ಸ್ಥಿತಿಗತಿ ಕುರಿತು ಜನರು ಏನು ಯೋಚಿಸುತ್ತಾರೆ, ಅವರು ಯಾವ ಸಮಸ್ಯೆಯನ್ನು ಎದುರಿಸುತ್ತಿದ್ದಾರೆಂದು ತಿಳಿದುಕೊಳ್ಳುತ್ತೇನೆ' ಎಂದು ಹೇಳಿದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ