
ರಾಮದುರ್ಗ | ತರಗತಿ ಕೊಠಡಿ ಅಭಾವ: ವರಾಂಡದಲ್ಲೇ ಪಾಠ!
ರಾಮದುರ್ಗ: ಇಲ್ಲಿನ ಹಳೇ ಬಸ್ ನಿಲ್ದಾಣ ಮುಂಭಾಗದಲ್ಲೇ ಇರುವ ಸರ್ಕಾರಿ ಮೌಲಾನಾ ಆಜಾದ್ ಮಾದರಿ ಶಾಲೆ ಕನಿಷ್ಠ ಮೂಲಸೌಕರ್ಯ ಇಲ್ಲದೆ ಬಳಲುತ್ತಿದೆ. ಬೇಡಿಕೆಯಷ್ಟು ತರಗತಿ ಕೊಠಡಿ ಇಲ್ಲದ್ದರಿಂದ ವರಾಂಡದಲ್ಲೇ ಮಕ್ಕಳಿಗೆ ಪಾಠ–ಪ್ರವಚನ ನಡೆದಿವೆ.
ರಾಮದುರ್ಗ ಪಟ್ಟಣಕ್ಕೆ 2020ರಲ್ಲಿ ಸರ್ಕಾರಿ ಮೌಲಾನಾ ಆಜಾದ್ ಮಾದರಿ ಶಾಲೆ ಮಂಜೂರಾಗಿತ್ತು. ಒಂದೇ ಸೂರಿನಲ್ಲಿ ಎಲ್‌ಕೆಜಿಯಿಂದ ಪಿಯುಸಿ ದ್ವಿತೀಯ ವರ್ಷದವರೆಗೆ ಮಕ್ಕಳಿಗೆ ಶಿಕ್ಷಣ ನೀಡುವುದು ಇದರ ಉದ್ದೇಶವಾಗಿತ್ತು.
ಆದರೆ, ತರಗತಿ ಕೊಠಡಿಗಳ ಅಭಾವದ ಹಿನ್ನೆಲೆಯಲ್ಲಿ ಈಗ 6ರಿಂದ 10ನೇ ತರಗತಿಯವರೆಗೆ ಮಾತ್ರ ಶಿಕ್ಷಣ ನೀಡಲಾಗುತ್ತಿದೆ. 230ಕ್ಕೂ ಅಧಿಕ ವಿದ್ಯಾರ್ಥಿಗಳು ಓದುತ್ತಿದ್ದಾರೆ.
ಕೊಠಡಿಗಳ ಕೊರತೆಯಿಂದ ಪೂರ್ಣಪ್ರಮಾಣದ ಶಾಲೆ ಆರಂಭಕ್ಕೆ ಗ್ರಹಣ ಹಿಡಿದಿದೆ. ಬೇಡಿಕೆಯಷ್ಟು ಶಿಕ್ಷಕರ ನೇಮಕಾತಿಯೂ ಆಗಿಲ್ಲ. ಶಾಲೆಗೆ ಅಗತ್ಯ ಮೂಲಸೌಕರ್ಯ ಸಿಕ್ಕ ನಂತರ, ಪೂರ್ವ ಪ್ರಾಥಮಿಕ ಮತ್ತು ಪಿಯು ತರಗತಿಗೆ ಶಿಕ್ಷಕರನ್ನು ನೇಮಿಸಿಕೊಳ್ಳಲು ಮುಖ್ಯಶಿಕ್ಷಕರು ಯೋಜಿಸಿದ್ದಾರೆ.
6ರಿಂದ 10ನೇ ತರಗತಿ ಮಕ್ಕಳಿಗೆ ಬೋಧಿಸಲು ಪೂರಕ ತರಗತಿ ಕೊಠಡಿಗಳಿಲ್ಲ. ಒಂದೇ ಕಡೆ ಕುರಿ ಹಿಂಡಿನಂತೆ ಮಕ್ಕಳನ್ನು ಕೂಡ್ರಿಸುತ್ತಿರುವುದು ಕಂಡುಬರುತ್ತಿದೆ. ಶಾಲೆಯಲ್ಲಿ ಇರುವ ಕೊಠಡಿಗಳ ಕೊರತೆ ನೀಗಿಸುವಂತೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯ ಶಾಸಕ ಅಶೋಕ ಪಟ್ಟಣ ಅವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಹಾಗಾಗಿ ಈ ಶಾಲೆ ಗೋಳು ಕೇಳುವವರು ಇಲ್ಲದಂತಾಗಿದೆ.
ಶೌಚಗೃಹವೂ ಇಲ್ಲ: 230ಕ್ಕೂ ಅಧಿಕ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಶೌಚಗೃಹ ವ್ಯವಸ್ಥೆಯೇ ಇಲ್ಲ. ಹಾಗಾಗಿ ನೈಸರ್ಗಿಕ ಕರೆ ಬಂದರೆ ಅವರ ಎದೆಯಲ್ಲಿ ನಡುಕ ಶುರುವಾಗುತ್ತದೆ. ಶೌಚಕ್ಕಾಗಿ ಹಳೇ ಬಸ್ ನಿಲ್ದಾಣದಲ್ಲಿ ಇರುವ ಶೌಚಗೃಹವನ್ನೇ ಅವರು ಬಳಸುವಂತಾಗಿದೆ. ಶೌಚಗೃಹ ನಿರ್ಮಾಣಕ್ಕೆ ಬೇಡಿಕೆ ಇಟ್ಟರೂ ಪ್ರಯೋಜನವಾಗಿಲ್ಲ.
‘ವಿದ್ಯಾಚೇತನ ಶಾಲೆ ಆವರಣದಲ್ಲಿ ವಿವಿಧ ಸ್ತರಗಳ ಶಾಲೆಗಳಿವೆ. ಅವುಗಳಿಗಾಗಿ ಒಂದೊಂದು ಶೌಚಗೃಹ ಇವೆ. ಆದರೆ, ಸಂಬಂಧಿಸಿದವರು ಅವುಗಳಿಗೆ ಬೀಗ ಹಾಕಿಕೊಂಡು ಹೋಗುತ್ತಾರೆ. ಹಾಗಾಗಿ ನಾವು ಹಳೇ ಬಸ್ ನಿಲ್ದಾಣದತ್ತ ಹೋಗುವುದು ಅನಿವಾರ್ಯವಾಗಿದೆ’ ಎಂದು ಶಿಕ್ಷಕರು ಅಸಹಾಯಕತೆ ತೋಡಿಕೊಳ್ಳುತ್ತಾರೆ.
‘ಮೌಲಾನಾ ಆಜಾದ್ ಮಾದರಿ ಶಾಲೆಯಲ್ಲಿ ಶುದ್ಧ ಕುಡಿಯುವ ನೀರು, ಶೌಚಗೃಹ, ವಿದ್ಯುತ್, ತರಗತಿ ಕೊಠಡಿಗಳ ಕೊರತೆ ಹೀಗೆ... ಸಾಲು ಸಾಲು ಸಮಸ್ಯೆಗಳಿವೆ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ’ ಎಂದು ಪಾಲಕರು ದೂರುತ್ತಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260808-21-1226534224