
ಕಲಬುರಗಿ: ಅಸ್ತಿತ್ವ ಕಾಯ್ದುಕೊಳ್ಳಲು ಉದ್ಯಾನಗಳ ಏದುಸಿರು
ಲಬುರಗಿ: ಆಳೆತ್ತರ ಬೆಳೆದ ಜಾಲಿ ಕಂಟಿಗಳು. ಮುಳ್ಳುಕಂಟಿ ನಡುವೆ ಮುಚ್ಚಿ ಹೋದ ಬೆಂಚ್‌ಗಳು. ಅರ್ಧಕ್ಕೆ ನಿಂತರ ನೀರಿನ ಟ್ಯಾಂಕ್ ಕಾಮಗಾರಿ. ನಡಿಗೆ ಪಥ ಒತ್ತಟ್ಟಿಗಿರಲಿ, ಕಸ ಶುಚಿಗೊಳಿಸುವವರೂ ದಿಕ್ಕಿಲ್ಲ...
ಇದು ನಗರದ ರಿಂಗ್ ರಸ್ತೆಗೆ ಹೊಂದಿಕೊಂಡಿರುವ ರಾಜಾಪುರ ಬಡಾವಣೆಯಲ್ಲಿರುವ ಉದ್ಯಾನದ ದುಸ್ಥಿತಿ. ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ ಕಟ್ಟಿಸಿರುವ ಕಾಂಪೌಂಡ್ ಅದೊಂದು ಉದ್ಯಾನ ಎಂದು ಹೇಳುತ್ತದೆ. ಆದರೆ, ವಸ್ತುಸ್ಥಿತಿಯಲ್ಲಿ ಅದು ನಿರ್ಲಕ್ಷಿತ ‘ತಾಣ’ವಾಗಿ ಬದಲಾಗಿದೆ. ರಿಂಗ್ ರಸ್ತೆಗೆ ಹೊಂದಿಕೊಂಡಿರುವ ಜಯನಗರ, ವೀರೇಂದ್ರ ಪಾಟೀಲ ಬಡಾವಣೆಯಲ್ಲೂ ಹಲವು ಉದ್ಯಾನಗಳು ಅಸ್ತಿತ್ವ ಉಳಿಸಿಕೊಳ್ಳಲು ಏದುಸಿರು ಬಿಡುತ್ತಿವೆ!
ಜಯನಗರದ ಓಂ ಮಹಾಕಾಳೇಶ್ವರ ಮಂದಿರ ಇರುವ ಉದ್ಯಾನದಲ್ಲಿ ಆಟಿಕೆಗಳು ಕಿತ್ತು ಬಿದ್ದಿವೆ. ನಡಿಗೆ ಪಥವೂ ಇಲ್ಲ. ಎನ್‌ಜಿಒ ಕಾಲೊನಿಯ ಸೂರ್ಯ ನಗರ ಸಂಪರ್ಕಿಸುವ ಪ್ರದೇಶ ಲಿಂಗರಾಜ ದೇಸಾಯಿ ವಿವಿಧೋದ್ದೇಶಗಳ ಸಂಘದ ಎದುರಿನ ಉದ್ಯಾನ ಪಾಳು ಬಿದ್ದಿದೆ. ಪುಟ್ಟ ಉದ್ಯಾನದಲ್ಲಿ ಒಂದು ಕೊಳವೆಬಾವಿ, ತೆರೆದಬಾವಿ ಎರಡೂ ಇವೆ. ಆದರೂ, ಮುಳ್ಳುಕಂಟಿ ಬಿಟ್ಟು, ಹಸಿರಿನ ಸೊಲ್ಲಿಲ್ಲ. ಅಲ್ಲದೇ ಅಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ನಿಷ್ಕ್ರಿಯವಾಗಿದೆ.
ಇನ್ನು, ಸೇಡಂ ರಸ್ತೆಗೆ ಹೊಂದಿಕೊಂಡಿರುವ ವೀರೇಂದ್ರ ಪಾಟೀಲ ಬಡಾವಣೆಯ ಲಕ್ಷ್ಮೀ ನಗರದ ಪ್ರವೇಶ ದ್ವಾರದಲ್ಲಿರುವ ಉದ್ಯಾನ ದುಸ್ಥಿತಿಯಲ್ಲಿದೆ. ತ್ಯಾಜ್ಯ ಬಿಸಾಡುವ ತಾಣವಾಗಿದೆ. ಓಂ ಆಸ್ಪತ್ರೆ ಎದುರಿನ ಈ ಉದ್ಯಾನಕ್ಕೆ 2017ರಲ್ಲಿ ಕಾಂಪೌಂಡ್ ಕಟ್ಟಿ ಬಿಡಲಾಗಿದೆ. ಅಲ್ಲಿ ಮುಳ್ಳು–ಕಂಟಿಗಳು ಬಿಟ್ಟರೆ ಮತ್ತೇನೂ ಇಲ್ಲ.
ವೀರೇಂದ್ರ ಪಾಟೀಲ ಬಡಾವಣೆಯ ವೀರಾಂಜನೇಯ ದೇವಸ್ಥಾನ ಇರುವ ಉದ್ಯಾನ ಕಡಿದಾದ ಪ್ರದೇಶದಲ್ಲಿದೆ. ಈ ಉದ್ಯಾನವನ್ನು ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ ಎಂಬಂತೆ ಅಭಿವೃದ್ಧಿಪಡಿಸಲಾಗಿದೆ. ದೇವಸ್ಥಾನ ಇರುವ ಪಾರ್ಶ್ವದಲ್ಲಿ ಕೂರಲು ಆಸನಗಳು, ಮಕ್ಕಳ ಆಟಿಕೆಗಳನ್ನು ಅಳವಡಿಸಲಾಗಿದೆ. ಆದರೆ, ಇನ್ನೊಂದು ಭಾಗದಲ್ಲಿ ಕಾಡಿನಂತೆ ಬೆಳೆದು ನಿಂತಿದೆ. ವರ್ಷಗಳ ಹಿಂದೆ ಅಳವಡಿಸಿದ ಆಟಿಕೆಗಳು ಪಾಳು ಬಿದ್ದಿವೆ. ಸಾಕಷ್ಟು ವಿಶಾಲವಾಗಿದ್ದರೂ ನಡಿಗೆ ಪಥವಿಲ್ಲ. ಸಾಕಷ್ಟು ಆಸನಗಳೂ ಇಲ್ಲ.
ಓಂ ನಗರ ಹಾಗೂ ಸ್ವಸ್ತಿಕ್ ನಗರದ ನಡುವೆ ಇರುವ ಉದ್ಯಾನ ಹಾಳು ಸುರಿಯುತ್ತಿದೆ. ಒಂದು ಭಾಗದಲ್ಲಿ ಮಕ್ಕಳ ಆಟಿಕೆ ಅಳವಡಿಸಿದ್ದರೂ, ನಿರ್ವಹಣೆ ಕೊರತೆಯಿಂದ ಪಾಳು ಬಿದ್ದಿವೆ. ಕಸ–ಮುಳ್ಳುಕಂಟಿಯಲ್ಲಿ ಮುಚ್ಚಿದಂತಿವೆ. ಇನ್ನೊಂದು ಭಾಗದ ಅಲ್ಲಲ್ಲಿ ಆಸನಗಳಿದ್ದರೂ, ಉದ್ಯಾನದಲ್ಲಿ ಜನರು ಕಟ್ಟಡ ತ್ಯಾಜ್ಯ ತಂದು ಸುರಿದಿದ್ದಾರೆ. ಹೀಗಾಗಿ ಉದ್ಯಾನದ ಅಸ್ತಿತ್ವವೇ ಕಳೆದಿದೆ.
‘ಉದ್ಯಾನ ಅಭಿವೃದ್ಧಿಗೆ ಬೇಕಿದೆ ಸರ್ಕಾರದ ನೆರವು’
ಜಯನಗರ ಮುಖ್ಯರಸ್ತೆಯ 2ನೇ ಅಡ್ಡ ರಸ್ತೆಯಲ್ಲಿರುವ ಸಾರ್ವಜನಿಕ ಉದ್ಯಾನ ತಕ್ಕಮಟ್ಟಿಗೆ ಚೆನ್ನಾಗಿದೆ. ಜಯನಗರ ಸಾರ್ವಜನಿಕ ಉದ್ಯಾನ ಅಭಿವೃದ್ಧಿಯ ಟ್ರಸ್ಟ್ ಸದಸ್ಯರ ಶ್ರಮವೇ ಇದಕ್ಕೆ ಕಾರಣ.
‘ಒಂದು ಎಕರೆಯಷ್ಟು ಪ್ರದೇಶದಲ್ಲಿ ವ್ಯಾಪಿಸಿರುವ ಉದ್ಯಾನದ ಜಾಗ ಹಿಂದೊಮ್ಮೆ ಗುಂಡಿಗಳು, ಕೊಳಚೆ ಪ್ರದೇಶವಾಗಿತ್ತು. ಸುತ್ತಲಿನ ನಾಗರಿಕರು ಎಚ್ಚೆತ್ತು ಆಸಕ್ತಿವಹಿಸಿ ನಿರ್ವಹಣೆಗೆ ಟ್ರಸ್ಟ್ ರಚಿಸಿಕೊಂಡೆವು. ಹೊಸ ಮನೆ ಕಟ್ಟುವವರ ಮನವೊಲಿಸಿ ಅವರು ತೆಗೆಯುವ ಪಾಯದ ಮಣ್ಣು ತಂದು ಉದ್ಯಾನದ ತೆಗ್ಗು ಭರ್ತಿ ಮಾಡಿದೆವು. 200ಕ್ಕೂ ಅಧಿಕ ಟ್ರ್ಯಾಕ್ಟರ್ ಮಣ್ಣು ಸುರಿದಿದ್ದೇವೆ. ಇನ್ನೂ 50 ಟ್ರ್ಯಾಕ್ಟರ್‌ನಷ್ಟು ಬೇಕಿದೆ. ಜನಪ್ರತಿನಿಧಿಗಳ ಸಹಕಾರ ಪಡೆದು ನಡಿಗೆ ಪಥ, ಹೈಮಾಸ್ಟ್ ದೀಪ, ಗೇಟ್ ಅಳವಡಿಸಿದ್ದೇವೆ. ದಾನಿಗಳ ನೆರವು ಪಡೆದು ಏಳು ಆಸನ ಅಳವಡಿಸಿದ್ದೇವೆ’ ಎಂದು ಟ್ರಸ್ಟ್ ಕಾರ್ಯದರ್ಶಿ ಬಂಡೆಪ್ಪ ಕೇಸೂರ, ಖಜಾಂಚಿ ನಾಗರಾಜ ಖೂಬಾ ಹೇಳುತ್ತಾರೆ.
‘ಈ ಉದ್ಯಾನದ ಸಮಗ್ರ ಅಭಿವೃದ್ಧಿಗೆ ₹1.10 ಕೋಟಿ ವೆಚ್ಚದ ಯೋಜನೆ ರೂಪಿಸಿ ಪಾಲಿಕೆ, ಕೆಕೆಆರ್‌ಡಿಬಿ ಸೇರಿದಂತೆ ಜನಪ್ರತಿನಿಧಿಗಳಿಗೂ ಸಲ್ಲಿಸಲಾಗಿದೆ. ಈ ತನಕ ನಾವು ಶ್ರಮ ಹಾಕಿದ್ದೇವೆ. ಪಾಲಿಕೆ, ಜನಪ್ರತಿನಿಧಿಗಳು ಸಹಕರಿಸಿ, ಪಾರ್ಕ್‌ನಲ್ಲಿ ಕೂರಲು ಆಸನಗಳು, ಹಿರಿಯ ನಾಗರಿಕರ ಬಳಕೆಗೆ ಶೌಚಾಲಯ, ಮಕ್ಕಳಿಗೆ ಆಟಿಕೆ, ಯುವಕರಿಗೆ ತೆರೆದ ಜಿಮ್, ಯೋಗಾಸನ ಕಟ್ಟೆ ನಿರ್ಮಿಸಿಕೊಡಬೇಕು’ ಎಂದು ಒತ್ತಾಯಿಸಿದರು.