
ಚಾಮರಾಜನಗರ: ಮಳೆಗಾಲದಲ್ಲೇ ಬರಿದಾದ ಕೆರೆ ಒಡಲು
ಚಾಮರಾಜನಗರ: ಜುಲೈ ಕೊನೆಯ ವಾರ ಹಾಗೂ ಆಗಸ್ಟ್ ಆರಂಭದಲ್ಲಿ ರಾಜ್ಯದ ಹಲವೆಡೆ ಉತ್ತಮ ಮಳೆ ಸುರಿದಿದ್ದರೂ ಜಿಲ್ಲೆಯಲ್ಲಿ ಮಾತ್ರ ಮಳೆಯ ಕೊರತೆ ಮುಂದುವರಿದಿದೆ.
ಪ್ರತಿದಿನ ದಟ್ಟವಾದ ಮೋಡ ಕವಿದು ವರುಣನ ಆಗಮನದ ನಿರೀಕ್ಷೆ ಮೂಡಿದರೂ ಬಿರುಸು ಮಳೆ ಬೀಳುತ್ತಿಲ್ಲ. ತುಂತುರು ಮಳೆ ಕೆಲಹೊತ್ತಿನಲ್ಲೇ ಮಾಯವಾಗಿ ನಿರಾಶೆ ಮೂಡಿಸುತ್ತಿದೆ. ಉತ್ತಮ ಮುಂಗಾರು ನಿರೀಕ್ಷೆಯಲ್ಲಿ ಬಿತ್ತನೆ ಮಾಡಿದ್ದ ರೈತರು ನಿತ್ಯ ಮುಗಿಲು ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ತುಂಬದ ಕೆರೆಗಳು: ಮಳೆ ಕೊರತೆಯಿಂದ ಜಿಲ್ಲೆಯ ಬಹುತೇಕ ಕೆರೆಗಳ ಒಡಲು ಬರಿದಾಗಿದೆ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೊಳಪಡುವ ಜಿಲ್ಲೆಯ 64 ಕೆರೆಗಳ ಪೈಕಿ 63 ಕೆರೆಗಳು ಮಳೆಗಾಲದಲ್ಲೇ ತುಂಬದಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಸಾರುತ್ತಿದೆ.
ಚಾಮರಾಜನಗರ ತಾಲ್ಲೂಕಿನಲ್ಲಿರುವ 20 ಕೆರೆಗಳ ಪೈಕಿ ಒಂದೂ ಕೆರೆಯೂ ಭರ್ತಿಯಾಗಿಲ್ಲ. 11 ಕೆರೆಗಳಲ್ಲಿ ಶೇ 30ಕ್ಕಿಂತ ಕಡಿಮೆ, 2 ಕೆರೆಗಳಲ್ಲಿ ಶೇ 50ಕ್ಕಿಂತ ಕಡಿಮೆ ಹಾಗೂ 6 ಕೆರೆಗಳಲ್ಲಿ ಅರ್ಧಕ್ಕಿಂತ ಹೆಚ್ಚಿನ ಪ್ರಮಾಣದ ನೀರಿದೆ.
ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ 23 ಕೆರೆಗಳಲ್ಲಿ 12 ಕೆರೆಗಳು ಬರಿದಾಗಿವೆ. 8 ಕೆರೆಗಳಲ್ಲಿ ಶೇ 30ಕ್ಕಿಂತ ಕಡಿಮೆ, ತಲಾ ಒಂದು ಕೆರೆಗಳಲ್ಲಿ ಶೇ 50ಕ್ಕಿಂತ ಕಡಿಮೆ ನೀರಿದೆ.
ಯಳಂದೂರು ತಾಲ್ಲೂಕಿನಲ್ಲಿರುವ 6 ಕೆರೆಗಳಲ್ಲಿ 5 ಬರಿದಾಗಿದ್ದು 1 ಕೆರೆಯಲ್ಲಿ ಮಾತ್ರ ಶೇ 30ಕ್ಕಿಂತ ಕಡಿಮೆ ನೀರಿದೆ. ಕೊಳ್ಳೇಗಾಲ ತಾಲ್ಲೂಕಿನ 4 ಕೆರೆಗಳ ಪೈಕಿ 2 ಖಾಲಿ, ಎರಡು ಕೆರೆಗಳಲ್ಲಿ ಶೇ 50ಕ್ಕಿಂತ ಕಡಿಮೆ ನೀರಿದೆ. ಹನೂರು ತಾಲ್ಲೂಕಿನ 10 ಕೆರೆಗಳಲ್ಲಿ ಮೂರು ಸಂಪೂರ್ಣ ಖಾಲಿಯಾಗಿದ್ದು, 5ರಲ್ಲಿ ಶೇ 30ಕ್ಕಿಂತ ಕಡಿಮೆ, 2ರಲ್ಲಿ ಶೇ 50ಕ್ಕಿಂತ ಕಡಿಮೆ ನೀರು ಇದೆ.
ಮಳೆ ಕೊರತೆ: ಜಿಲ್ಲೆಯಲ್ಲಿ ಉತ್ತಮ ಮಳೆ ಸುರಿಯುವ ಅವಧಿಯಾಗಿರುವ ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳಲ್ಲೇ ತೀವ್ರ ಮಳೆ ಕೊರತೆ ಉಂಟಾಗಿದೆ. ಜೂನ್‌ನಲ್ಲಿ ವಾಡಿಕೆ 5.8 ಸೆಂ.ಮೀಗೆ ಪ್ರತಿಯಾಗಿ 5 ಸೆಂ.ಮೀ ಬಿದ್ದಿದ್ದು ಶೇ 13ರಷ್ಟು ಕೊರತೆ, ಜುಲೈನಲ್ಲಿ 6.3 ಸೆಂ.ಮೀ ವಾಡಿಕೆಗೆ ಬದಲಾಗಿ 2 ಸೆಂ.ಮೀ, ಶೇ 69.2ರಷ್ಟು ಕೊರತೆ, ಆಗಸ್ಟ್ 4ರವರೆಗೆ 7.1 ಸೆಂ.ಮೀ ವಾಡಿಕೆಗೆ ಕೇವಲ 1.8 ಸೆಂ.ಮೀ, ಶೇ 81ರಷ್ಟು ಕೊರತೆ ಉಂಟಾಗಿದೆ. ಕಳೆದ ಮೂರು ವರ್ಷಗಳಲ್ಲಿ ಈ ವರ್ಷವೇ ಅತಿ ಕಡಿಮೆ ಮಳೆ ಬಿದ್ದಿದೆ.
ಬಿತ್ತನೆ ವಿವರ: ಚಾಮರಾಜನಗರ ತಾಲ್ಲೂಕಿನಲ್ಲಿ ಪೂರ್ವ ಮುಂಗಾರಿನಲ್ಲಿ 6,848 ಹೆಕ್ಟೇರ್ ಬಿತ್ತನೆ ಗುರಿಗೆ 3,757 ಹೆಕ್ಟೇರ್ ಬಿತ್ತನೆಯಾಗಿದ್ದು ಜೋಳ, ದ್ವಿದಳಧಾನ್ಯ, ಎಣ್ಣೆಕಾಳುಗಳ ಬಿತ್ತನೆಯಲ್ಲಿ ಶೇ 50ರಷ್ಟು ಇಳಿಕೆಯಾಗಿದೆ. ಮುಂಗಾರು ಅವಧಿಯಲ್ಲಿ 12,984 ಹೆಕ್ಟೇರ್ ಬಿತ್ತನೆಗೆ ಪ್ರತಿಯಾಗಿ 2,670 ಹೆಕ್ಟೇರ್ ಆಗಿದ್ದು ಮುಸುಕಿನ ಜೋಳ, ನೆಲಗಡಲೆ, ರಾಗಿ, ತೊಗರಿ ಬೆಳೆ ಕ್ಷೇತ್ರ ಕುಸಿತವಾಗಿದೆ.
ಗುಂಡ್ಲುಪೇಟೆ ತಾಲ್ಲೂಕು: ತಾಲ್ಲೂಕಿನಲ್ಲಿ ಪೂರ್ವ ಮುಂಗಾರಿನಲ್ಲಿ 30,180 ಹೆಕ್ಟೇರ್ ಗುರಿಗೆ 18,280 ಹೆಕ್ಟೇರ್ ಬಿತ್ತನೆಯಾಗಿದ್ದು ಸೂರ್ಯಕಾಂತಿ, ಜೋಳ, ದ್ವಿದಳ ಧಾನ್ಯ ಕ್ಷೇತ್ರ ಇಳಿಕೆಯಾಗಿದೆ. ಮುಂಗಾರು ಅವಧಿಯಲ್ಲಿ 5,684 ಹೆಕ್ಟೇರ್ ಗುರಿಗೆ 630 ಹೆಕ್ಟೇರ್ ನಾಟಿಯಾಗಿದೆ.
ಕೊಳ್ಳೇಗಾಲ ತಾಲ್ಲೂಕು: ತಾಲ್ಲೂಕಿನಲ್ಲಿ ಮುಂಗಾರು ಪೂರ್ವದಲ್ಲಿ 725 ಹೆಕ್ಟೇರ್ ಬಿತ್ತನೆಗೆ ಬದಲಾಗಿ 145 ಹೆಕ್ಟೇರ್, ಮುಂಗಾರು ಅವಧಿಯಲ್ಲಿ 12,485 ಹೆಕ್ಟೇರ್ ಗುರಿಗೆ ಪ್ರತಿಯಾಗಿ 1,291 ಹೆಕ್ಟೇರ್ ನಾಟಿಯಾಗಿದ್ದು ಭತ್ತದ ನಾಟಿ ಕ್ಷೇತ್ರ ಇಳಿಕೆಯಾಗಿದೆ.
ಹನೂರು ತಾಲ್ಲೂಕು: ಮುಂಗಾರು ಪೂರ್ವದಲ್ಲಿ 1,115 ಹೆಕ್ಟೇರ್ ಗುರಿಗೆ ಕೇವಲ 75 ಹೆಕ್ಟೇರ್ ನಾಟಿಯಾಗಿದೆ. ಮುಂಗಾರು ಅವಧಿಯ 18,925 ಹೆಕ್ಟೇರ್ ಗುರಿಗೆ 1,835 ಹೆಕ್ಟೇರ್ ಬಿತ್ತನೆಯಾಗಿದ್ದು ಜೋಳ, ರಾಗಿ ಬೆಳೆ ಕ್ಷೇತ್ರ ಕುಸಿತವಾಗಿದೆ.
ಯಳಂದೂರು ತಾಲ್ಲೂಕು: ಮುಂಗಾರು ಪೂರ್ವ ಅವಧಿಯಲ್ಲಿ 600 ಹೆಕ್ಟೇರ್ ಬಿತ್ತನೆ ಗುರಿಗೆ 395 ಹೆಕ್ಟೇರ್ ನಾಟಿಯಾಗಿದೆ. ಮುಂಗಾರು ಅವಧಿಯಲ್ಲಿ 6,233 ಹೆಕ್ಟೇರ್ ಗುರಿಗೆ 2,105 ಹೆಕ್ಟೇರ್ ಮಾತ್ರ ಬಿತ್ತನೆಯಾಗಿದೆ.
ಜಿಲ್ಲೆಯಾದ್ಯಂತ ಬರ ಸಮೀಕ್ಷೆ
ಜಿಲ್ಲೆಯ ಬರ ಸಮೀಕ್ಷೆ ನಡೆಸಿ ನಾಲ್ಕು ದಿನಗಳಲ್ಲಿ ಕಂದಾಯ ಇಲಾಖೆಗೆ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದು, ಅದರಂತೆ ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೆ ಭೇಟಿ ನೀಡಿ ವಾಸ್ತವ ಸ್ಥಿತಿ ಅರಿಯಲಾಗುತ್ತಿದೆ. ರೈತರ ಜಮೀನುಗಳಿಗೆ ಭೇಟಿ ನೀಡಿ ನಾಶವಾಗಿರುವ ಬೆಳೆ ವೀಕ್ಷಣೆ ಮಾಡಿ ಅಹವಾಲುಗಳನ್ನು ಆಲಿಸಲಾಗುತ್ತಿದೆ ಎಂದು ಸಚಿವ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.
ಸರ್ಕಾರಕ್ಕೆ ಹಾನಿ ವರದಿ ಸಲ್ಲಿಕೆಯಾದ ಬಳಿಕ ಬರ ಪರಿಹಾರ ಕಾಮಗಾರಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ. ಸದ್ಯಕ್ಕೆ ಜಿಲ್ಲೆಯಲ್ಲಿ ಕುಡಿಯುವ ನೀರು ಹಾಗೂ ಮೇವಿನ ಕೊರತೆ ಆಗದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260808-37-475242523