ಹೊಸಕೋಟೆ: ಬರ ನಿರ್ವಹಣೆಗೆ ಸಿದ್ಧತೆ

ಹೊಸಕೋಟೆ: ಬರ ನಿರ್ವಹಣೆಗೆ ಸಿದ್ಧತೆ

ಹೊಸಕೋಟೆ: ಬರ ನಿರ್ವಹಣೆಗೆ ಸಿದ್ಧತೆ

ಹೊಸಕೋಟೆ: ರಾಜ್ಯ ಸರ್ಕಾರವು ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿದ್ದು, ಕೃಷಿ, ಪಶು ವೈದ್ಯಕೀಯ, ಕಂದಾಯ ಹಾಗೂ ಆಯಾ ಪಂಚಾಯಿತಿಗಳ ಮಟ್ಟದಲ್ಲಿ ಜಂಟಿಯಾಗಿ ಬರ ನಿರ್ವಹಿಸಲು ಸಿದ್ಧತೆ ಆರಂಭಿಸಲಾಗಿದೆ.

ಬರ ನಿರ್ವಹಣೆ ಹೇಗೆ ಕೈಗೊಳ್ಳಬೇಕೆಂಬ ಮಾನದಂಡಗಳ ಸ್ಪಷ್ಟಪಡಿಸದಿದ್ದರೂ ಈ ಹಿಂದಿನ ಬರ ಸಂದರ್ಭದಲ್ಲಿ ಮಾಡಿಕೊಂಡಿದ್ದ ವ್ಯವಸ್ಥೆಗಳ ಆಧಾರದ ಮೇಲೆ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ಕುಡಿಯುವ ನೀರು, ಮೇವು ಹಾಗೂ ರೈತರಿಗೆ ಪರಿಹಾರ ಕಲ್ಪಿಸಲು ಸಿದ್ಧತೆ ನಡೆದಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಪರಿಹಾರ ಹಣ ಬಿಡುಗಡೆಯಾದರೆ ಸುಮಾರು 9,451ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶಕ್ಕೆ ಬರ ಪರಿಹಾರ ನೀಡಲಾಗುವುದು ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ತಾಲ್ಲೂಕಿನಲ್ಲಿರುವ 293 ಗ್ರಾಮಗಳ ಪೈಕಿ 30 ಗ್ರಾಮಗಳನ್ನು ಬರ ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಇಲ್ಲಿ ಸುರಿದ ವಾರ್ಷಿಕ ಸರಾಸರಿ ಮಳೆಯಲ್ಲಿ ಕುಸಿತ, ಬೀಜ ಬಿತ್ತನೆ ಆಗದಿರುವುದು, ಜಾನುವಾರುಗಳಿಗೆ ಎದುರಾದ ಮೇವು ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ ಆಧರಿಸಿ ಬರ ಘೋಷಿಸಲಾಗಿದೆ.

ಈ ಬಾರಿ ಮಳೆಯಾಶ್ರಿತ ಮತ್ತು ನೀರಾವರಿ ಪ್ರದೇಶದಲ್ಲಿ ಒಟ್ಟು 11,725 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ ಮಳೆ ಕೊರತೆಯಿಂದ ಬಿತ್ತನೆ ಕುಂಠಿತವಾಗಿತ್ತು. ಕೆಲವೆಡೆ ಬಿತ್ತನೆಯಾದ ರಾಗಿ ಮೊಳಕೆಯೊಡೆದು ಒಣಗುತ್ತಿವೆ. ಹೀಗಾಗಿ ಶೀಘ್ರ ಬರ ಪರಿಹಾರ ವಿತರಣೆ ಆಗಬೇಕೆಂದು ರೈತರು ಒತ್ತಾಯಿಸಿದ್ದಾರೆ.

ತಾಲ್ಲೂಕಿನಲ್ಲಿ ಹೆಚ್ಚು ಮಳೆ ಬಿದ್ದ ಪ್ರದೇಶ ಗುರುತಿಸಿ ಮೇವಿಗಾಗಿ ಸುಮಾರು 25 ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬೆಳೆಯಲಾಗಿದೆ. ಮುಂದಿನ ದಿನಗಳಲ್ಲಿ ಇನ್ನು 10ರಿಂದ 15 ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬಿತ್ತನೆ ಮಾಡುವ ಗುರಿ ಹೊಂದಲಾಗಿದೆ. ಇದರಿಂದ ಸ್ವಲ್ಪಮಟ್ಟಿಗೆ ಮೇವಿನ ಸಮಸ್ಯೆ ಬಗೆಹರಿಯಲಿದೆ. ಸರ್ಕಾರದಿಂದ ಈಗಾಗಲೇ ಜೋಳ ಬಿತ್ತನೆ ಬೀಜ ಮತ್ತು ಮೇವಿಗಾಗಿ ₹25 ಕೋಟಿಗೆ ಟೆಂಡರ್ ಆಗಿದೆ. ಇದು ಜಿಲ್ಲಾ ಕೇಂದ್ರಗಳಿಗೆ ಬಿಡುಗಡೆಯಾದರೆ ಹೈನುಗಾರರು ನಿಟ್ಟುಸಿರು ಬಿಡಬಹುದು ಎನ್ನುತ್ತಾರೆ ಪಶು ವೈದ್ಯಕೀಯ ಇಲಾಖೆ ಅಧಿಕಾರಿಗಳು.

ತಾಲ್ಲೂಕಿನ ಪ್ರತಿ ಹಳ್ಳಿಯಲ್ಲೂ ಅಂತರ್ಜಲ ಮಟ್ಟ ಕುಸಿತ ಕಂಡಿದೆ. ಪ್ರತಿ 100 ಲೀಟರ್ ನೀರು ಅಂತರ್ಜಲ ಸೇರುತ್ತಿದ್ದರೆ, 160 ಲೀಟರ್ ನಷ್ಟು ನೀರು ಹೊರ ತೆಗೆಯಲಾಗುತ್ತಿದೆ ಎಂದು ಅಧಿಕಾರಿಗಳು ಸರ್ಕಾರಕ್ಕೆ ಸಲ್ಲಿಸಿದ ವರದಿ ಹೇಳುತ್ತಿದೆ. 585 ಹೆಚ್ಚು ಕೊಳವೆ ಬಾವಿಗಳು ಬತ್ತುವ ಆತಂಕ ಎದುರಾಗಿದೆ. 1,000ದಿಂದ 1,200 ಅಡಿಗಳವರೆಗೂ ಕೊರೆಸಿದರೂ ನೀರು ಸಿಗುತ್ತಿಲ್ಲ.

ಖಾಸಗಿ ಕೊಳವೆ: ಸದ್ಯಕ್ಕೆ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ 8 ಹಳ್ಳಿಗಳನ್ನು ಗುರುತಿಸಿ ಖಾಸಗಿ ಕೊಳವೆ ಬಾವಿಗಳಿಂದ ನೀರು ಪೂರೈಸಲಾಗುತ್ತಿದೆ. ಮುಂದಿನ 15 ದಿನಗಳಲ್ಲಿ ಸುಮಾರು 16 ಹಳ್ಳಿಗಳಲ್ಲಿ ಕೊಳವೆ ಬಾವಿಯಲ್ಲಿ ನೀರು ಸ್ಥಗಿತವಾಗಲಿದ್ದು, ನೀರು ಪೂರೈಕೆಗೆ ಅಗತ್ಯ ಸಿದ್ಧತೆ ಆರಂಭಿಸಲಾಗಿದೆ. ಶಾಸಕರು ತಮ್ಮ ವೈಯಕ್ತಿಕ ಹಣದಲ್ಲಿ ಕೊಳವೆ ಬಾವಿ ಕೊರೆಸಲು ಕೈಜೋಡಿಸಿದ್ದಾರೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮುನಿಯಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260830-15-1567334450

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ