
‘ವಿ-ನೆಕ್’ ಉಡುಗೆಯಲ್ಲಿ ಕೃತಿ ರಾಖಿ ಕಟ್ಟಿದ್ದ ಜಾಹೀರಾತು: ಮೌನ ಮುರಿದ ಜೀವ ಮಾಲೀಕ
ರಕ್ಷಾಬಂಧನದ ಪ್ರಯುಕ್ತ ಆಭರಣ ಕಂಪನಿಯಾದ ಜೀವ (GIVA) ಜಾಹೀರಾತು ಒಂದನ್ನು ನೀಡಿತ್ತು. ಈ ಜಾಹೀರಾತಿನಲ್ಲಿ ಬಾಲಿವುಡ್ ನಟಿ ಕೃತಿ ಸನೂನ್ ಅವರು ಧರಿಸಿದ್ದ ಬಟ್ಟೆಯು ವಿವಾದಕ್ಕೆ ಕಾರಣವಾಗಿತ್ತು. ಬಳಿಕ ಆಭರಣ ಕಂಪನಿಯು ಜಾಹೀರಾತನ್ನು ಹಿಂಪಡೆದಿತ್ತು.
ಇದೀಗ ಆಭರಣ ಕಂಪನಿಯ ಬ್ರ್ಯಾಂಡ್‌ನ ಸಂಸ್ಥಾಪಕ ಇಶೇಂದ್ರ ಅಗರ್ವಾಲ್ ಅವರು ಈ ಕುರಿತು ಪ್ರತಿಕ್ರಿಯಿಸಿದ್ದಾರೆ. ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ಒಂದನ್ನು ಹಂಚಿಕೊಂಡಿರುವ ಅವರು, ತಮ್ಮ ಸಿಬ್ಬಂದಿಯ ಸುರಕ್ಷತಾ ದೃಷ್ಟಿಯಿಂದಾಗಿ ಆ ಜಾಹೀರಾತನ್ನು ಹಿಂಪಡೆಯಲಾಗಿತ್ತು ಎಂಬುದನ್ನು ಬಹಿರಂಗ ಪಡಿಸಿದ್ದಾರೆ.
ಜಾಹೀರಾತು ವಿವಾದದ ಕುರಿತು ಸ್ಪಷ್ಟಣೆ ನೀಡಿರುವ ಅವರು, ‘ಎಲ್ಲರಿಗೂ ನಮಸ್ಕಾರ. ನಮ್ಮ ರಕ್ಷಾಬಂಧನದ ಜಾಹೀರಾತಿಗೆ ಸಂಬಂಧಿಸಿದ ಚರ್ಚೆಗಳನ್ನು ಗಮನಿಸಿದ್ದೇನೆ. ನಟಿ ಕೃತಿ ಸನೂನ್ ಅವರನ್ನು ಒಳಗೊಂಡಿರುವ ಈ ಜಾಹೀರಾತಿನ ಉದ್ದೇಶ ಕುಟುಂಬದಲ್ಲಿರುವ ಎಲ್ಲರೂ ಒಂದೇ ಎಂಬ ಭಾವನೆಯನ್ನು ಒಗ್ಗೂಡಿಸುವುದಾಗಿತ್ತು. ಈ ಉದ್ದೇಶದಲ್ಲಿ ಕೃತಿ ಹಾಗೂ ಕಂಪನಿಗೆ ಸಂಪೂರ್ಣ ನಂಬಿಕೆ ಇದೆ’ ಎಂದು ಬರೆದುಕೊಂಡಿದ್ದಾರೆ.
‘ಕೆಲ ಮಳಿಗೆಗಳಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯ ವಿರುದ್ಧ ಟೀಕೆಗಳು ಶುರುವಾದವು. ಅಂತಹ ಸಂದರ್ಭದಲ್ಲಿ ನೌಕರರ ಹಿತರಕ್ಷಣೆ ನಮ್ಮ ಮೊದಲ ಆದ್ಯತೆಯಾಗಿತ್ತು. ನಮ್ಮ ಕೆಲಸಗಾರರ ಅಸುರಕ್ಷತೆಯನ್ನು ನಾನು ಎಂದಿಗೂ ಕಡೆಗಣಿಸುವುದಿಲ್ಲ. ಹೀಗಾಗಿ ಅವರ ಹಿತರಕ್ಷಣೆಯ ದೃಷ್ಟಿಯಿಂದ ಜಾಹೀರಾತನ್ನು ಹಿಂಪಡೆದೆವು’ ಎಂದು ಬರೆದುಕೊಂಡಿದ್ದಾರೆ.
ಕೆಲ ದಿನಗಳ ಹಿಂದೆ ಬಾಲಿವುಡ್ ನಟಿ ಕೃತಿ ಸನೂನ್ ಅವರು ಆಭರಣದ ಜಾಹೀರಾತು ಒಂದರಲ್ಲಿ ಕಾಣಿಸಿಕೊಂಡಿದ್ದರು. ಆ ಜಾಹೀರಾತಿನಲ್ಲಿ ಸಹೋದರನಿಗೆ ರಾಖಿ ಕಟ್ಟುವ ಮೂಲಕ ರಕ್ಷಾಬಂಧನ ಹಬ್ಬವನ್ನು ಆಚರಣೆ ಮಾಡುತ್ತಾರೆ. ಆದರೆ, ಕೃತಿ ಸನೂನ್ ಅವರು 'ಡೀಪ್ ವಿ-ನೆಕ್' ಬ್ರೌಸ್ ಧರಿಸಿದ್ದರು. ರಕ್ಷಾಬಂಧನ ಹಬ್ಬವನ್ನು ಆಚರಣೆ ಮಾಡುವ ಸಂದರ್ಭದಲ್ಲಿ ಇಂತಹ ಬಟ್ಟೆಯನ್ನು ಧರಿಸುವುದು ಸೂಕ್ತವೇ ಎಂಬ ಚರ್ಚೆಗಳು ಏರ್ಪಟ್ಟಿದ್ದವು.
ಬಳಿಕ ಈ ವಿವಾದವು ರಾಜಕೀಯ ತಿರುವನ್ನೂ ಪಡೆದುಕೊಂಡಿತ್ತು. ರಾಹುಲ್ ಗಾಂಧಿ ಅವರು ನಟಿ ಕೃತಿ ಸನೂನ್ ಅವರ ಬೆನ್ನಿಗೆ ನಿಂತರು. ಅದರಂತೆ ನಟಿ ಹಾಗೂ ಸಂಸದೆ ಕಂಗನಾ ಅವರು ನಟಿಯನ್ನು ಟೀಕಿಸಿದ್ದರು. ಈ ಎಲ್ಲಾ ಬೆಳವಣಿಗೆಯ ಬಳಿಕ ಆಭರಣ ಕಂಪನಿಯು ಜಾಹೀರಾತನ್ನು ಹಿಂಪಡೆದಿತ್ತು.