‘ರಾಗಿ ಕಣಜ’ದಲ್ಲಿ ಒಣಗುತ್ತಿವೆ ಬೆಳೆ: ಬರಿದಾದ ‘ಬೆಂಗಳೂರಿನ ತರಕಾರಿ ಬುಟ್ಟಿ’

‘ರಾಗಿ ಕಣಜ’ದಲ್ಲಿ ಒಣಗುತ್ತಿವೆ ಬೆಳೆ: ಬರಿದಾದ ‘ಬೆಂಗಳೂರಿನ ತರಕಾರಿ ಬುಟ್ಟಿ’

‘ರಾಗಿ ಕಣಜ’ದಲ್ಲಿ ಒಣಗುತ್ತಿವೆ ಬೆಳೆ: ಬರಿದಾದ ‘ಬೆಂಗಳೂರಿನ ತರಕಾರಿ ಬುಟ್ಟಿ’

ಆನೇಕಲ್: ರಾಗಿ ಕಣಜ ಎಂದೇ ಖ್ಯಾತಿ ಪಡೆದಿರುವ ತಾಲ್ಲೂಕಿನಲ್ಲಿ ಮುಂಗಾರು ಮಳೆ ಶೇ 87ರಷ್ಟು ಕೊರತೆ ಆಗಿದ್ದು, ಸರ್ಕಾರವು ತಾಲ್ಲೂಕನ್ನ ಬರ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿದೆ.

ತಾಲ್ಲೂಕಿನಲ್ಲಿ ಕೃಷಿ ಭೂಮಿಯಲ್ಲಿ ಶೇ 60ರಿಂದ 70ರಷ್ಟು ರಾಗಿ ಬೆಳೆಯಲಾಗುತ್ತಿದೆ. ವಾಡಿಕೆಯಂತೆ ಮುಂಗಾರು ಮಳೆ ಸುರಿಯದೆ ಶೇ 50ರಷ್ಟು ಬೆಳೆಗೆ ಹಾನಿಯಾಗಿದೆ.

‘ಬೆಂಗಳೂರು ತರಕಾರಿ ಬುಟ್ಟಿ’ ಎಂದು ಹೆಸರಾಗಿರುವ ತಾಲ್ಲೂಕಿನಲ್ಲಿ ವಾಡಿಕೆ ಮಳೆಯಾಗದೆ ಹೂ, ಹಣ್ಣು ಮತ್ತು ತರಕಾರಿ ಬೆಳೆಯುವವರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಕೊಳವೆ ಬಾವಿಯಲ್ಲೂ ನೀರಿನ ಪ್ರಮಾಣ ಕಡಿಮೆಯಾಗಿ ತರಕಾರಿ ಮತ್ತು ಹೂ ಒಣಗಿ ಹೋಗಿ ಬೆಳೆಗಾರರಿಗೆ ನಷ್ಟ ಉಂಟಾಗಿದೆ.

ಶೇ 40-50 ರಷ್ಟು ತರಕಾರಿ ಉತ್ಪಾದನೆಯಲ್ಲಿ ಕುಸಿತ ಉಂಟಾಗಿದೆ. ತಾಲೂಕಿನಲ್ಲಿ ಬೆಳೆಯಲಾಗುವ ಹಣ್ಣು ಹೂವು ತರಕಾರಿಗಳನ್ನು ಬೆಂಗಳೂರಿನ ವಿವಿಧ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ಸೇವಂತಿ ಹೂವು ಹೊರ ರಾಜ್ಯಗಳಿಗೂ ರಫ್ತು ಆಗುತ್ತದೆ. ಆದರೆ ಮಳೆ ಅಭಾವದಿಂದ ರಾಗಿ ಕಣಜದಲ್ಲಿ ಬೆಳೆಗಳು ಒಣಗುತ್ತಿವೆ.

ವರ್ಷದ ಆರಂಭದಿಂದಲೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿಯದೆ ಭೂಮಿಯಲ್ಲಿ ತೇವಾಂಶ ಕಡಿಮೆ ಆಯಿತು. ಏಪ್ರಿಲ್‌ನಿಂದ ಆಗಸ್ಟ್ ವರೆಗೆ ಬಿತ್ತನೆ ಮಾಡಿದ ಬೆಳೆಗಳು ಒಣಗಿ ನಾಶವಾಗಿವೆ.

ಪಾತಾಳಕ್ಕೆ ಕುಸಿದ ಅಂತರ್ಜಲ: ತಾಲೂಕಿನ ವಿವಿಧಡೆ ಅಂತರ್ಜಲ ಮಟ್ಟ ತೀವ್ರ ಕುಸಿದಿದೆ. 900-1,200 ಅಡಿ ಕೊಳವೆಬಾವಿ ಕೊರೆಯಿಸಿದರೂ ನೀರು ಸಿಗುತ್ತಿಲ್ಲ. ಕೊಳವೆಬಾವಿಯಿಂದ ನೀರು ತರಲು ರೈತರು ಅಂದಾಜು ₹4-6 ಲಕ್ಷ ಖರ್ಚು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಚಾಲ್ತಿಯಲ್ಲಿರುವ ಕೊಳವೆ ಬಾವಿಗಳಲ್ಲಿಯೂ ನೀರು ಪ್ರಮಾಣ ಕಡಿಮೆಯಾಗಿ ರೈತರ ಬೆಳೆ ಕಾಪಾಡಿಕೊಳ್ಳಲು ಹರಸಾಹಸ ಮಾಡುತ್ತಿದ್ದಾರೆ.

ಟ್ಯಾಂಕರ್ ಮೊರೆ: ತಾಲ್ಲೂಕಿನಲ್ಲಿ ಯಾವುದೇ ನದಿ ಮೂಲಗಳಿಲ್ಲ. ರೈತರು ಸಂಪೂರ್ಣವಾಗಿ ಕೊಳವೆಬಾವಿ ಆಶ್ರಿತ ಕೃಷಿ ಮಾಡುತ್ತಿದ್ದಾರೆ. ಸೇವಂತಿ ಸೇರಿದಂತೆ ವಿವಿಧ ತೋಟಗಾರಿಕೆ ಬೆಳೆ ಬೆಳೆದಿರುವ ರೈತರು ನೀರಿಗಾಗಿ ಟ್ಯಾಂಕರ್ ಮೊರೆ ಹೋಗಿದ್ದಾರೆ. ಪ್ರತಿ ಟ್ಯಾಂಕರ್‌ನ ಬೆಲೆ ₹600-800 ಇದ್ದು, ಲಾಭದಲ್ಲಿ ಶೇ 25-30 ರಷ್ಟು  ಹಣವನ್ನು ನೀರಿನ ಟ್ಯಾಂಕ್‌ಗಾಗಿಯೇ ಮೀಸಲಿಡಬೇಕಾಗಿದೆ.

ಹೆಚ್ಚಿದ ಬೆಳೆ ರೋಗ:  ಮಳೆ ಇಲ್ಲದೆ ಸೇವಂತಿ, ಬಟನ್‌ ರೋಸ್‌ ಸೇರಿದಂತೆ ತೋಟಗಾರಿಕೆ ಬೆಳೆಗಳು, ಟೊಮೊಟೊ, ಚಪ್ಪರ ಬದನೆಕಾಯಿ ಸೇರಿದಂತೆ ತರಕಾರಿ ಬೆಳೆಗಳಲ್ಲಿ ರೋಗ ಕಾಣಿಸಿಕೊಂಡಿದೆ. ವಿವಿಧ ಬಗೆಯ ಔಷಧಿ ಸಂಪಡಿಸಿದರೂ ಉಪಯೋಗಕ್ಕೆ ಬರುತ್ತಿಲ್ಲ. ಜೂನ್‌, ಜುಲೈ, ಆಗಸ್ಟ್‌ ತಿಂಗಳಿನಲ್ಲಿ ಉತ್ತಮ ಮಳೆಯಾಗಿದ್ದರೆ 1 ಎಕರೆ ಸೇವಂತಿ ಬೆಳೆದವರು ₹8-10 ಲಕ್ಷ ಲಾಭಗಳಿಸುತ್ತಿದ್ದರು ಎಂದು ಸಮಂದೂರು ಗ್ರಾಮದ ಪ್ರದೀಪ್‌ ‘ಪ್ರಜಾವಾಣಿ’ಗೆ ತಿಳಿಸಿದರು.‌

ತಾಲೂಕನ್ನು ಸರ್ಕಾರ ಬರಪೀಡಿತ ಪ್ರದೇಶವೆಂದು ಘೋಷಿಸಿದೆ. ರೈತರಿಗೆ ಆರ್ಥಿಕ ಸಂಕಷ್ಟ ಉಂಟಾಗಿರುವುದರಿಂದ ರಾಷ್ಟ್ರೀಕೃತ ಬ್ಯಾಂಕ್ ಮತ್ತು ಸಹಕಾರಿ ಬ್ಯಾಂಕ್ ಸೇರಿದಂತೆ ವಿವಿಧ ಬ್ಯಾಂಕುಗಳಲ್ಲಿನ ಕೃಷಿ ಸಾಲವನ್ನು ಮನ್ನಾ ಮಾಡಬೇಕು.

ಜಾನುವಾರುಗಳಿಗೆ ಮೇವು ಮೇವು ದೊರೆಯುತ್ತಿಲ್ಲ. ಹಾಗಾಗಿ ಸರ್ಕಾರಿ ಆನೇಕಲ್‌ ತಾಲ್ಲೂಕಿನಲ್ಲಿ ಮೇವು ಬ್ಯಾಂಕ್‌ ಸ್ಥಾಪಿಸಿ ರಾಸುಗಳಿಗೆ ಅನುಕೂಲ ಮಾಡಿಕೊಡಬೇಕು.

– ವೆಂಕಟೇಶ್ ಚಿಕ್ಕನಹಳ್ಳಿ ಗ್ರಾಮದ ರೈತ

ಬರಗಾಲದ ಹಿನ್ನೆಲೆಯಲ್ಲಿ ಕೃಷಿ ತೋಟಗಾರಿಕೆ ರೇಷ್ಮೆ ಇಲಾಖೆಗಳು ಜಂಟಿ ಸಮೀಕ್ಷೆ ನಡೆಸಿ ಬೆಳೆ ನಷ್ಟದ ಮಾಹಿತಿ ಹಾಗೂ ವೈಜ್ಞಾನಿಕ ಪರಿಹಾರ ವಿತರಣೆ ಬಗ್ಗೆ ಸರ್ಕಾರಕ್ಕೆ ವರದಿ ನೀಡಬೇಕು. ಪರಿಹಾರ ವಿತರಣೆ ಶೀಘ್ರವಾಗಿ ಆಗಬೇಕು.

ಮುಂಗಾರು ಕೈಕೊಟ್ಟಿದ್ದರಿಂದ ತರಕಾರಿ ಬೆಳೆ ಕುಸಿತದಿಂದ ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ಹೆಚ್ಚಾಗಿದೆ. ಮಳೆ ಇಲ್ಲದೆ ಹೂವು ಬೆಳೆಯುವುದು ಕಷ್ಟವಾಗಿದೆ. ನಾಲ್ಕು ಹೋಬಳಿಗಳಲ್ಲಿಯೂ ರೈತರು ಕಷ್ಟ ಮತ್ತು ನಷ್ಟದ ನಡುವೆ ಬೆಳೆ ಬೆಳೆಯುವಂತಾಗಿದೆ.

– ಗುರುಮೂರ್ತಿ ರೈತ ಸೋಲೂರು 

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ