ಔರಾದ್ | ಬಾವಿಯಲ್ಲಿ ಎರಡು ತಿಂಗಳ ಶಿಶುವಿನ ಶವ ಪತ್ತೆ: ತಾಯಿ ಸೇರಿ ನಾಲ್ವರ ಬಂಧನ
ಔರಾದ್ (ಬೀದರ್ ಜಿಲ್ಲೆ): ತಾಲ್ಲೂಕಿನ ವಡಗಾಂವ್ (ದೇ) ಗ್ರಾಮದ ಬಾವಿಯೊಂದರಲ್ಲಿ ಭಾನುವಾರ ಎರಡು ತಿಂಗಳ ಗಂಡು ಶಿಶುವಿನ ಶವ ಪತ್ತೆಯಾಗಿದ್ದು, ಈ ಸಂಬಂಧ ಮಗುವಿನ ತಾಯಿ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಮಗುವಿನ ತಂದೆ ಸಂಜಯ್ ನೀಡಿದ ದೂರಿನ ಮೇರೆಗೆ ತಾಯಿ ವಾಣಿಶ್ರೀ ಸಂಜಯ್ (32), ಸೋದರ ಮಾವ ಸಂತೋಷ್ ಮಸ್ಕಲೆ (35), ಅಜ್ಜ ಬಸಪ್ಪ ಮಸ್ಕಲೆ (70), ಅಜ್ಜಿ ರತ್ನಮ್ಮ ಬಸಪ್ಪ ಮಸ್ಕಲೆ (65) ಎಂಬುವರನ್ನು ಬಂಧಿಸಲಾಗಿದೆ.
ಮಗುವಿನ ತಂದೆ ಸಂಜಯ್ ಅವರು ಮಗು ಕಾಣೆಯಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ವಡಗಾಂವ್ ಗ್ರಾಮದ ಬಾವಿಯಲ್ಲಿ ಮಗುವಿನ ಶವ ಪತ್ತೆಯಾಗಿದೆ. ಈ ಸಂಬಂಧ ಮಗುವಿನ ತಾಯಿ ಹಾಗೂ ಅಜ್ಜ, ಅಜ್ಜಿಯನ್ನು ವಿಚಾರಣೆಗೊಳಪಡಿಸಿದಾಗ ಮಗುವನ್ನು ತಾವೇ ಬಾವಿಗೆ ಹಾಕಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವಡಗಾಂವ್ ಗ್ರಾಮದ ಬಸಪ್ಪ ಮಸ್ಕಲೆ ಅವರ ಪುತ್ರಿ ವಾಣಿಶ್ರೀಯನ್ನು ಮಹಾರಾಷ್ಟ್ರದ ದೇಗಲೂರು ತಾಲ್ಲೂಕಿನ ಕಾವಳಗಡ್ಡಾ ಗ್ರಾಮದ ಸಂಜಯ್ ಅವರು 2025ರಲ್ಲಿ ಮದುವೆಯಾಗಿದ್ದರು. ಹೆರಿಗೆಗಾಗಿ ತವರಿಗೆ ಬಂದ ವಾಣಿಶ್ರೀ ಅವರು ಕಳೆದ ತಿಂಗಳು ಜೂನ್ 11ರಂದು ಬೀದರ್‌ನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದರು. ಮಗುವನ್ನು ಬಾವಿಗೆ ತಳ್ಳಿ ಏಕೆ ಕೊಲೆ ಮಾಡಿದರು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.