
ಎಲ್ಎಲ್ಸಿಯಲ್ಲಿ ಕೊನೆಗೂ ಹರಿಯಿತು ಭರ್ತಿ ನೀರು, ರೈತರ ಸಂಕಷ್ಟ ಪರಿಹಾರ
ಹೊಸಪೇಟೆ: ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಯಲ್ಲಿ (ಎಲ್ಎಲ್ಸಿ) ನೀರು ಹರಿಸಲು ಆಂಧ್ರ ಪ್ರದೇಶ ಸರ್ಕಾರ ಕೊನೆಗೂ ಬೇಡಿಕೆ ಪತ್ರ (ಇಂಡೆಂಟ್) ಕಳುಹಿಸಿದ್ದು, ಪೂರ್ಣ ಪ್ರಮಾಣದಲ್ಲಿ ಕಾಲುವೆಯಲ್ಲಿ ನೀರು ಹರಿಯುತ್ತಿದೆ. ರಾಜ್ಯದ ರೈತರ ಸಂಕಷ್ಟ ಸದ್ಯಕ್ಕೆ ಪರಿಹಾರವಾಗಿದೆ.
ತುಂಗಭದ್ರಾ ಜಲಾಶಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆಂಧ್ರದ ಅಸಹಕಾರದೊಂದಿಗೆ ಕೇವಲ ರಾಜ್ಯದ ಪಾಲಿನ 650 ಕ್ಯುಸೆಕ್ ನೀರು ಮಾತ್ರ ಎಲ್ಎಲ್ಸಿ ಕಾಲುವೆಯಲ್ಲಿ 10 ದಿನ ಹರಿದಿತ್ತು. ನೀರಿಗೆ ಒತ್ತಡ ಇಲ್ಲದೆ ತೂಬುಗಳಲ್ಲಿ ನೀರು ಉಪಕಾಲುವೆಗಳಿಗೆ ಹರಿಯದೆ ರಾಜ್ಯದ ರೈತರಿಗೆ ನೀರಿದ್ದೂ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಸಮಸ್ಯೆಗೆ ಪರಿಹಾರ ದೊರೆತಿರುವುದಕ್ಕೆ ರೈತರು ಸಮಾಧಾನಗೊಂಡಿದ್ದಾರೆ.
‘ಆಂಧ್ರದಿಂದ ನೀರಿಗಾಗಿ ಇಂಡೆಂಟ್ ಶನಿವಾರ ಸಂಜೆ ಬಂದಿದೆ, ತಕ್ಷಣ ಕಾಲುವೆಯಲ್ಲಿ ಭರ್ತಿ 1,800 ಕ್ಯುಸೆಕ್ನಷ್ಟು ನೀರು ಹರಿಸಲು ಆರಂಭಿಸಿದ್ದೇವೆ. ಭಾನವಾರ ಸಂಜೆಯೊಳಗೆ ಈ ನೀರು ಆಂಧ್ರ ಗಡಿಯತ್ತ ಸಾಗುವ ನಿರೀಕ್ಷೆ ಇದೆ’ ಎಂದು ತುಂಗಭದ್ರಾ ಮಂಡಳಿಯ ಅಧೀಕ್ಷಕ ಎಂಜಿನಿಯರ್ ನಾರಾಯಣ ನಾಯ್ಕ್ ‘ಪ್ರಜಾವಾಣಿ’ಗೆ ತಿಳಿಸಿದರು.
ಈ ಸ್ಥಿತಿಗೆ ಹವಾಮಾನ ತಜ್ಞರೂ ಕಾರಣ: ‘ಎಲ್ನಿನೊ ಎಂಬ ಭಯವನ್ನು ಹವಾಮಾನ ತಜ್ಞರು ಹುಟ್ಟುಹಾಕಿದ್ದರು. ಹೀಗಾಗಿ ಆಂಧ್ರ ಸರ್ಕಾರ ಕುಡಿಯಲು ನೀರು ಬೇಕು ಎಂಬ ಕಾರಣ ನೀಡಿ ಈ ಬಾರಿ ಎಲ್ಎಲ್ಸಿಯಲ್ಲಿ ನೀರು ಪಡೆಯದೆ ಇರಲು ನಿರ್ಧರಿಸಿತ್ತು. ಅಲ್ಲಿನ ರೈತರ ಒತ್ತಡ, ರಾಜ್ಯದ ಒತ್ತಡಕ್ಕೆ ಮಣಿದು ಇದೀಗ ನೀರು ಪಡೆಯಲು ಒಪ್ಪಿದೆ. ಇನ್ನು 90 ದಿನಗಳ ಕಾಲ ನಮಗೆ ಯಾವುದೇ ಸಮಸ್ಯೆ ಇಲ್ಲ’ ಎಂದು ತುಂಗಭದ್ರಾ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮ ಗೌಡ ಹೇಳಿದರು.
‘ಮಲೆನಾಡು ಭಾಗದಲ್ಲಿ ಮಳೆ ಸುರಿಯದೆ ಇದ್ದಿದ್ದರೆ ಯಾರಿಗೂ ನೀರು ಇಲ್ಲದೆ ಬೆಳೆ ಬೆಳೆಯುವುದು ಸಾಧ್ಯವೇ ಆಗುತ್ತಿರಲಿಲ್ಲ. ಅದೃಷ್ಟವಶಾತ್ ವಿಳಂಬವಾದರೂ ಮಳೆ ಸುರಿದ ಕಾರಣ 94 ಟಿಎಂಸಿ ಅಡಿಯಷ್ಟಾದರೂ ನೀರು ತುಂಬಿದೆ. ಇದನ್ನು ಎರಡೂ ರಾಜ್ಯಗಳು ಸೇರಿ ಸಮರ್ಥವಾಗಿ ಬಳಸಿಕೊಳ್ಳಬೇಕಿದೆ. ಆಂಧ್ರ 10 ದಿನ ವಿಳಂಬವಾಗಿ ನೀರು ಪಡೆಯಲು ಸಮ್ಮತಿ ಸೂಚಿಸಿದೆ. ಈ ಬಾರಿ ಎದುರಾದ ಪರಿಸ್ಥಿತಿ ಮುಂದೆ ಬರಬಾರದು ಎಂದಾದರೆ ಎರಡೂ ರಾಜ್ಯ ಸರ್ಕಾರಗಳು ಐಸಿಸಿ ಸಭೆಗಳನ್ನು ಒಟ್ಟೊಟ್ಟಿಗೇ ಕರೆದು ನೀರಿನ ಸಮರ್ಥ ಬಳಕೆಗೆ ಕ್ರಮ ಕೈಗೊಳ್ಳಬೇಕಿದೆ. ಈ ಬಾರಿಯ ವಿದ್ಯಮಾನ ಮುಂದೆ ನಮಗೆ ಪಾಠವಾಗಬೇಕು’ ಎಂದು ಅವರು ಹೇಳಿದರು.
ಅಂತರರಾಜ್ಯ ನೀರು ಹಂಚಿಕೆ ವಿಚಾರದಲ್ಲಿ ‘ಒಗ್ಗಟ್ಟಿನಲ್ಲಿ ಬಲ’ ಎಂಬ ಮಾತು ತುಂಗಭದ್ರಾ ಕಾಲುವೆಗಳಿಗೆ ಬಹಳಷ್ಟು ಸಮರ್ಪಕವಾಗಿ ಅನ್ವಯವಾಗುತ್ತದೆ. ಎಲ್ಎಲ್ಸಿಯಲ್ಲಿ ಎರಡೂ ರಾಜ್ಯಗಳಿಗೆ ಹಂಚಿಕೆಯಾಗುವ ರೀತಿಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಒಟ್ಟಾಗಿ (1,800 ಕ್ಯುಸೆಕ್) ನೀರು ಹರಿದರೆ ಮಾತ್ರ ರಾಜ್ಯದ ಉಪಕಾಲುವೆಗಳಿಗೆ ತೂಬುಗಳ ಮೂಲಕ ಹರಿಯುತ್ತದೆ, ಆಂಧ್ರದ ರೈತರಿಗೂ ನೀರು ಸಿಗುತ್ತದೆ. ಕಳೆದ ಹತ್ತು ದಿನಗಳಲ್ಲಿ ರಾಜ್ಯದ ಪಾಲಿನ 650 ಕ್ಯುಸೆಕ್ ನೀರು ಮಾತ್ರ ಕಾಲುವೆಯಲ್ಲಿ ಹರಿದಿತ್ತು. ಇದರಿಂದ ರಾಜ್ಯದ ರೈತರ ಹೊಲಗಳಿಗೆ ನೀರು ಹರಿಯದೆ ರೈತರು ನೀರಿದ್ದೂ ಅದರ ಬಳಕೆ ಸಾಧ್ಯವಾಗದೆ ಕೈಕೈ ಹೊಸಕಿಕೊಂಡಿದ್ದರು. ಇದು ಒಂದಿಷ್ಟು ಉದ್ವಿಗ್ನ ಪರಿಸ್ಥಿತಿಗೂ ಎಡೆಮಾಡಿಕೊಟ್ಟಿತ್ತು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260824-25-1420503966